ಬುಧವಾರ, ಏಪ್ರಿಲ್ 14, 2021
31 °C

ಚುನಾವಣಾ ವೆಚ್ಚ ನೀಡದವರ ಅನರ್ಹತೆ

ಪ್ರಜಾವಾಣಿ ವಾರ್ತೆ/ಎ.ಎಂ.ಸುರೇಶ Updated:

ಅಕ್ಷರ ಗಾತ್ರ : | |

ಬೆಂಗಳೂರು: ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಮಾಡಿರುವ ವೆಚ್ಚದ ವಿವರಗಳನ್ನು ನೀಡದ 2,690 ಅಭ್ಯರ್ಥಿಗಳನ್ನು ಚುನಾವಣೆಗೆ ಸ್ಪರ್ಧಿಸುವುದರಿಂದ ಆರು ವರ್ಷಗಳ ಕಾಲ ಅನರ್ಹಗೊಳಿಸಿ ರಾಜ್ಯ ಚುನಾವಣಾ ಆಯೋಗ ಈಚೆಗೆ ಆದೇಶ ಹೊರಡಿಸಿದೆ.



2010ರಲ್ಲಿ ನಡೆದ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಒಟ್ಟು 16,485 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಪೈಕಿ ವೆಚ್ಚದ ವಿವರಗಳನ್ನು ನೀಡದ 4,938 ಮಂದಿಗೆ ಆಯೋಗವು ಕಾರಣ ಕೇಳಿ  ನೋಟಿಸ್ ಜಾರಿ ಮಾಡಿತ್ತು.ನೋಟಿಸ್ ಪಡೆದ ಬಳಿಕವೂ ಅದಕ್ಕೆ ಉತ್ತರ ನೀಡದ ಅಥವಾ ನೀಡಿರುವ ಉತ್ತರ ಸಮರ್ಪಕವಾಗಿಲ್ಲದ ಪ್ರಕರಣಗಳನ್ನು ಗುರುತಿಸಿ 2,690 ಅಭ್ಯರ್ಥಿಗಳನ್ನು ಅನರ್ಹಗೊಳಿಸಲಾಗಿದೆ.



ಕರ್ನಾಟಕ ಪಂಚಾಯತ್‌ರಾಜ್ ಕಾಯ್ದೆ-1993ರ ಪ್ರಕಾರ ಚುನಾವಣೆಯಲ್ಲಿ ಸ್ಪರ್ಧಿಸಿದ ಪ್ರತಿಯೊಬ್ಬ ಅಭ್ಯರ್ಥಿಯೂ ಚುನಾವಣೆ ಮುಗಿದ 30 ದಿನಗಳ ಒಳಗೆ ಸಂಬಂಧಪಟ್ಟ ಚುನಾವಣಾಧಿಕಾರಿಗೆ, ಚುನಾವಣಾ ವೆಚ್ಚದ ವಿವರಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಇದನ್ನು ಪಾಲಿಸದ ಅಭ್ಯರ್ಥಿಗಳನ್ನು ಅನರ್ಹಗೊಳಿಸಲಾಗಿದೆ ಎಂದು ಆಯೋಗದ ಕಾರ್ಯದರ್ಶಿ ಡಿ.ಕೆ.ರವೀಂದ್ರನಾಥ್ `ಪ್ರಜಾವಾಣಿ~ಗೆ ತಿಳಿಸಿದರು.



ಅನರ್ಹಗೊಂಡಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಹಾಲಿ ಸದಸ್ಯರೂ ಕೆಲವರಿದ್ದಾರೆ. ಅವರ ಸಂಖ್ಯೆ ಎಷ್ಟು ಎಂಬುದು ನಿಖರವಾಗಿ ಗೊತ್ತಾಗಿಲ್ಲ. ಕೆಲವರು ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದಾರೆ. ಹೀಗಾಗಿ ಅನರ್ಹಗೊಂಡಿರುವ ಸದಸ್ಯರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಉಪಚುನಾವಣೆ ನಡೆಸುವ ಸಂದರ್ಭ ಸದ್ಯಕ್ಕೆ ಒದಗಿಬಂದಿಲ್ಲ ಎಂದು  ಹೇಳಿದ್ದಾರೆ.



ಪಂಚಾಯತ್‌ರಾಜ್ ಕಾಯ್ದೆ ಪ್ರಕಾರ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಗರಿಷ್ಠ ಒಂದು ಲಕ್ಷ ರೂಪಾಯಿವರೆಗೆ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು 50 ಸಾವಿರ ರೂಪಾಯಿವರೆಗೆ ವೆಚ್ಚ ಮಾಡಲು ಅವಕಾಶವಿದೆ. ಚುನಾವಣೆಗೆ ಮಾಡುವ ವೆಚ್ಚದ ಲೆಕ್ಕಪತ್ರಗಳನ್ನು ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ತಾವಾಗಿಯೇ ಅಥವಾ ತಮ್ಮ ಏಜೆಂಟರ ಮೂಲಕ ಚುನಾವಣಾಧಿಕಾರಿಗೆ ಸಲ್ಲಿಸಬೇಕಾಗುತ್ತದೆ.



ಆದರೆ, ಬಹುತೇಕ ಅಭ್ಯರ್ಥಿಗಳು ಚುನಾವಣಾ ವೆಚ್ಚದ ಮಾಹಿತಿ ನೀಡುವುದಿಲ್ಲ. ಅಂತಹ ಸಂದರ್ಭದಲ್ಲಿ `ನಿಮ್ಮ ವಿರುದ್ಧ ಏಕೆ ಕ್ರಮ ಕೈಗೊಳ್ಳಬಾರದು ಎಂದು ಕಾರಣ ಕೇಳುವ ನೋಟಿಸ್ ಅನ್ನು ತಹಶೀಲ್ದಾರ್ ಮೂಲಕ ಅಭ್ಯರ್ಥಿಗಳಿಗೆ ಜಾರಿ ಮಾಡಲಾಗುತ್ತದೆ. ನೋಟಿಸ್ ತಲುಪಿದ 15 ದಿನಗಳ ಒಳಗೆ ಅಭ್ಯರ್ಥಿಯು ಉತ್ತರ ನೀಡಬೇಕಾಗುತ್ತದೆ~ ಎಂದು ಅವರು ತಿಳಿಸಿದರು.



ಅಭ್ಯರ್ಥಿಯು ಉತ್ತರ ನೀಡಲು ವಿಫಲರಾದರೆ ಅಥವಾ ನೀಡಿರುವ ಉತ್ತರ ಸಮರ್ಪಕವಾಗಿಲ್ಲದಿದ್ದರೆ, ಅಂತಹ ಅಭ್ಯರ್ಥಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಆಯೋಗಕ್ಕೆ ಶಿಫಾರಸು ಮಾಡುತ್ತಾರೆ. ಅದನ್ನು ಆಧರಿಸಿ ಪಂಚಾಯತ್‌ರಾಜ್ ಕಾಯ್ದೆಯ ಸೆಕ್ಷನ್ 308 -ಸಿ ಪ್ರಕಾರ ಆರು ವರ್ಷಗಳ ಕಾಲ ಅನರ್ಹಗೊಳಿಸಲಾಗುತ್ತದೆ ಎಂದು ಹೇಳಿದರು.



ಇದೇ ಕಾಯ್ದೆಯ ಸೆಕ್ಷನ್ 128ರ ಪ್ರಕಾರ, ಸೆಕ್ಷನ್ `308-ಸಿ~ಗೆ ಅನುಗುಣವಾಗಿ ರಾಜ್ಯ ಚುನಾವಣಾ ಆಯೋಗ ಹೊರಡಿಸುವ ಆದೇಶ ಮೂರು ವರ್ಷದ ನಂತರ ತನ್ನ ಮಹತ್ವ ಕಳೆದುಕೊಳ್ಳುತ್ತದೆ. ಹೀಗಾಗಿ  ಆರು ವರ್ಷದ ಅನರ್ಹತೆ ಆದೇಶಕ್ಕೆ ಮೇಲ್ನೋಟಕ್ಕೆ ಹೆಚ್ಚಿನ ಕಿಮ್ಮತ್ತು ಇಲ್ಲ ಅನಿಸುತ್ತದೆ. ಆದರೆ ಚುನಾವಣೆ ನಡೆದ ಎಷ್ಟು ವರ್ಷದ ನಂತರ ಆಯೋಗವು ಅನರ್ಹತೆ ಆದೇಶ ಹೊರಡಿಸುತ್ತದೆ ಎಂಬುದರ ಮೇಲೆ ಅವರ ಭವಿಷ್ಯ ಅವಲಂಬಿಸಿರುತ್ತದೆ.



2010ರ ಚುನಾವಣೆಯ ವೆಚ್ಚದ ವಿವರಗಳನ್ನು ನೀಡದ ಅಭ್ಯರ್ಥಿಗಳನ್ನು ಕಳೆದ ಸೆಪ್ಟೆಂಬರ್, ಅಕ್ಟೋಬರ್‌ನಲ್ಲಿ ಅನರ್ಹಗೊಳಿಸಲಾಗಿದೆ. ಅನರ್ಹತೆ ಆದೇಶ ಹೊರ ಬಿದ್ದ ದಿನಾಂಕವನ್ನು ಗಣನೆಗೆ ತೆಗೆದುಕೊಳ್ಳುವುದರಿಂದ ಮುಂದಿನ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಸಿಗುವ ಬಗ್ಗೆ ಖಚಿತವಾಗಿ ಹೇಳಲು ಆಗುವುದಿಲ್ಲ. ಯಾವಾಗ ಚುನಾವಣೆ ನಡೆಯುತ್ತದೆ ಎಂಬುದರ ಮೇಲೆ ಇದು ಅವಲಂಬಿಸಿರುತ್ತದೆ. ನಡುವೆ ಉಪಚುನಾವಣೆ ನಡೆದರೆ ಸ್ಪರ್ಧಿಸಲು ಅವಕಾಶ ಇರುವುದಿಲ್ಲ ಎಂದು ತಿಳಿಸಿದರು.



ಬೆಂಗಳೂರು ನಗರ ಮತ್ತು ಗ್ರಾಮಾಂತರ, ಹಾಸನ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ ಜಿಲ್ಲೆಯಲ್ಲಿ ಕಣದಲ್ಲಿದ್ದ ಎಲ್ಲ ಅಭ್ಯರ್ಥಿಗಳು ವೆಚ್ಚದ ಮಾಹಿತಿ ನೀಡಿದ್ದಾರೆ. ಉಳಿದ ಎಲ್ಲ ಜಿಲ್ಲೆಗಳಲ್ಲೂ ಲೆಕ್ಕ ನೀಡದ ಅಭ್ಯರ್ಥಿಗಳು ಇದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆಯನ್ನು ಹೊರತುಪಡಿಸಿ ಉಳಿದೆಲ್ಲ ಚುನಾವಣೆಗಳಲ್ಲೂ ವೆಚ್ಚದ ಮಾಹಿತಿ ನೀಡುವುದು ಕಡ್ಡಾಯ ಎಂದು ಅವರು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.