ಮಂಗಳವಾರ, ಮೇ 18, 2021
30 °C
ಮಡ್ಡಿಕೆರೆ ಮೂಲಸೌಕರ್ಯ ಕೊರತೆ

ಚುನಾವಣೆ ಬಹಿಷ್ಕಾರಕ್ಕೆ ಗ್ರಾಮಸ್ಥರ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂಡಿಗೆರೆ: ತಾಲ್ಲೂಕಿನ ಊರುಬಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಡ್ಡಿಕೆರೆ ಗ್ರಾಮಕ್ಕೆ ಸೂಕ್ತ ಮೂಲ ಸೌಲಭ್ಯಗಳನ್ನು ಒದಗಿಸುವಲ್ಲಿ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿ, ಈ ಬಾರಿಯ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಗ್ರಾಮಸ್ಥರು ನಿರ್ಧರಿಸಿದ್ದಾರೆ.ಮೂಡಿಗೆರೆ – ಹೊಸಕೆರೆ ಮಾರ್ಗದ ಹಳೆಕೆರೆ ತಿರುವಿನಿಂದ 3 ಕಿ.ಮೀ. ದೂರದಲ್ಲಿರುವ ಗ್ರಾಮವು ಸುಮಾರು 70 ಮನೆಗಳಿಂದ ಕೂಡಿದ್ದು, ಹತ್ತು ಪರಿಶಿಷ್ಟ ಕುಟುಂಬಗಳು ವಾಸ ಮಾಡುತ್ತಿವೆ. ಗ್ರಾಮಕ್ಕೆ ತೆರಳಲು ರಸ್ತೆ ಸೌಲಭ್ಯವಿಲ್ಲ, ಪರಿ­ಶಿಷ್ಟರ ಕಾಲೊನಿಗೆ ಕುಡಿಯುವ ನೀರಿಲ್ಲ, ಗ್ರಾಮಕ್ಕೆ ಅಗತ್ಯ­ವಾದ ಸೇತುವೆ ನಿರ್ಮಾಣವಾಗಿಲ್ಲ ಎಂಬ ಸಮಸ್ಯೆಗಳನ್ನು ಮುಂದೊಡ್ಡಿ ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.ಮಡ್ಡಿಕೆರೆ ಗ್ರಾಮಸ್ಥರ ಜಮೀನುಗಳು ಕಣಚೂರು ಭಾಗಕ್ಕೆ ಸೇರಿದ್ದು, ಗ್ರಾಮದಿಂದ ಕೂಗಳತೆ ದೂರದಲ್ಲಿದ್ದು, ಗ್ರಾಮದಲ್ಲಿ ಹರಿಯುವ ಗೌರಿಹೊಳೆಯು ಜಮೀನನ್ನು ವಿಭಾಗಿಸಿದ್ದು, ಬೇಸಿಗೆಯಲ್ಲಿ ಮರದ ತುಂಡಿನ ಮೇಲೆ ಹೊಳೆಯನ್ನು ದಾಟಿ ಉಳುಮೆ ಮಾಡಲಾಗುತ್ತಿದ್ದು, ಮಳೆಗಾಲದಲ್ಲಿ ಜಮೀನಿಗೆ ಸುಮಾರು 17 ಕಿ.ಮೀ. ಬಳಸು ಮಾರ್ಗದಲ್ಲಿ ಸಾಗಬೇಕಾಗಿದ್ದು, ಬೇಸಾಯವನ್ನೇ ಕೈ ಬಿಡಲಾಗುತ್ತಿದೆ. ಹಲವಾರು ಬಾರಿ ಗ್ರಾಮಕ್ಕೆ ಸೇತುವೆ ನಿರ್ಮಿಸುವಂತೆ ಒತ್ತಾಯ ಮಾಡಲಾಗಿದ್ದರೂ ಇದುವರೆಗೂ ಕ್ರಮ ತೆಗೆದುಕೊಂಡಿಲ್ಲ.ಇನ್ನು ಪರಿಶಿಷ್ಟ ಕುಟುಂಬಗಳಿಗೆ ಕುಡಿಯುವ ನೀರಿಗಾಗಿ ಬಾವಿಯನ್ನು ತೆರೆಯಲಾಗಿದ್ದು, ವಿದ್ಯುತ್‌ ಸಂಪರ್ಕಕ್ಕಾಗಿ ಕಳೆದ ಒಂದು ವರ್ಷದ ಹಿಂದೆ ವಿದ್ಯುತ್‌ ಉಪಕರಣಗಳನ್ನು ಗ್ರಾಮಕ್ಕೆ ತರಲಾಗಿದ್ದು, ಇದುವರೆಗೂ ಕಾಮಗಾರಿಯನ್ನು ಕೈಗೆತ್ತಿಕೊಂಡಿಲ್ಲ, ಗ್ರಾಮಕ್ಕೆ ಸರಿಯಾದ ರಸ್ತೆ ಸೌಲಭ್ಯವಿಲ್ಲದಿರುವುದರಿಂದ ಸಾರಿಗೆ ವ್ಯವಸ್ಥೆಯಿಲ್ಲದೇ, ಹಳೆಕೆರೆವರೆಗೂ ನಡೆದೇ ಸಾಗಬೇಕಾದ ಪರಿಸ್ಥಿತಿಯಿದೆ. ಗ್ರಾಮದಲ್ಲಿ ಇದ್ದ ಶಾಲೆಯನ್ನು ಮುಚ್ಚಲಾಗಿದ್ದು, ಗ್ರಾಮದಲ್ಲಿರುವ ಸುಮಾರು ಹತ್ತಕ್ಕೂ ಹೆಚ್ಚು ಪ್ರಾಥಮಿಕ ಶಾಲಾ ಮಕ್ಕಳು ಹಳೆಕೆರೆ ಗ್ರಾಮದ ಶಾಲೆಯನ್ನು ಆಶ್ರಯಿಸುವಂತಾಗಿದೆ.ಆಸ್ಪತ್ರೆ, ಪಶುಆಸ್ಪತ್ರೆ ಮುಂತಾದ ಸೌಲಭ್ಯಗಳಿಲ್ಲದೇ ಆರೋಗ್ಯ ಸೇವೆಯಿಂದ ವಂಚಿತವಾಗಿದ್ದು, ಸಮಸ್ಯೆಯನ್ನು ಬಗೆಹರಿಸುವಂತೆ ಕಳೆದ ಎರಡು ತಿಂಗಳ ಹಿಂದೆ ಗ್ರಾಮಸ್ಥರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಕೋರಿದ್ದರೂ ಇದುವರೆಗೂ ಯಾವುದೇ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿಲ್ಲ. ಅಲ್ಲದೇ ಜನಪ್ರತಿನಿಧಿಗಳನ್ನು ಸಮಸ್ಯೆ ಪರಿಹಾರಕ್ಕೆ ಕೋರಿದರೂ, ನಮಗೆ ನೀವು ಮತ ಹಾಕಿಲ್ಲ ಎಂಬ ಉತ್ತರ ನೀಡುತ್ತಾರೆ ಇದೆಲ್ಲದರಿಂದ ಬೇಸತ್ತಿರುವ ಗ್ರಾಮಸ್ಥರು ಈ ಬಾರಿಯ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ ಎಂದು ಗ್ರಾಮಸ್ಥ ಎಂ.ಎಸ್‌. ನಾಗೇಶ್‌ ಸ್ಥಳಕ್ಕೆ ಭೇಟಿ ನೀಡಿದ್ದ ಪ್ರಜಾವಾಣಿಗೆ ತಿಳಿಸಿದರು.ಗ್ರಾಮಸ್ಥ ಭರತ್‌ ಮಾತನಾಡಿ ರಸ್ತೆ ದುರಸ್ತಿಗಾಗಿ ಕಳೆದ ಸಾಲಿನಲ್ಲಿ ಗ್ರಾಮಕ್ಕೆ ಹತ್ತು ಲಕ್ಷ ಹಣ ಮಂಜೂರಾಗಿದ್ದು, ರಾಜಕೀಯ ಕುತಂತ್ರದಿಂದ ಹಣವನ್ನು ವಾಪಾಸು ಕಳುಹಿಸಿ, ಗ್ರಾಮವನ್ನು ಸೌಲಭ್ಯದಿಂದ ವಂಚಿಸಿದ್ದಾರೆ, ಗ್ರಾಮದಲ್ಲಿ ಎಲ್ಲರಿಗೂ ಜಮೀನಿದ್ದರೂ, ಮಳೆಗಾಲದಲ್ಲಿ ಹಳ್ಳ ತುಂಬಿ ಹರಿಯುವುದರಿಂದ ಸೇತುವೆಯಿಲ್ಲದೇ ಉಳುಮೆಯನ್ನೇ ಕೈ ಬಿಡಲಾಗಿದೆ.

ಇತ್ತೀಚಿನ ದಿನಗಳವರೆಗೂ ಗ್ರಾಮಸ್ಥರೇ ದೋಣಿ ಮಾಡಿ ನದಿದಾಟುವ ಕೆಲಸ ಮಾಡುತ್ತಿದ್ದು, ಕಳೆದ ಮೂರು ವರ್ಷಗಳ ಹಿಂದೆ ಸಂಭವಿಸಿದ ದುರಂತದ ನಂತರ ದೋಣಿ ವ್ಯವಸ್ಥೆಯನ್ನು ಕೈ ಬಿಡಲಾಯಿತು. ಗ್ರಾಮಕ್ಕೆ ಮೂಲ ಸೌಲಭ್ಯಗಳನ್ನು ಕೊಡುವವರೆಗೂ ಮುಂದಿನ ಯಾವುದೇ ಚುನಾವಣೆಗೆ ಮತಹಾಕುವುದಿಲ್ಲ ಎಂದರು. ಈ ವೇಳೆ ಗ್ರಾಮಸ್ಥರಾದ ಮಂಜುನಾಥ, ಕೃಷ್ಣೇಗೌಡ, ಗುರಪ್ಪಗೌಡ, ಮೋಹನ, ಲಕ್ಷ್ಮಣಗೌಡ, ಪುಷ್ಪ, ಸುಶೀಲಾ, ಶೋಭಾ, ಕಮಲ, ಕಠಾಣಿ, ಕುಸುಮ ಮುಂತಾದವರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.