ಸೋಮವಾರ, ಮೇ 23, 2022
30 °C

ಚುನಾವಣೆ ಸಿದ್ಧತೆಗೆ ಬಿಜೆಪಿ ಸಮಿತಿ ರಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಲೋಕಸಭೆ ಚುನಾವಣೆ ಸಿದ್ಧತೆ ಆರಂಭಿಸಿರುವ ಬಿಜೆಪಿ ಸಾರ್ವಜನಿಕ ಸಮಾವೇಶ ಏರ್ಪಡಿಸುವುದೂ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಒಂದು ಡಜನ್ ಸಮಿತಿಗಳನ್ನು ರಚಿಸಲು ಗುರುವಾರ ತೀರ್ಮಾನಿಸಿದೆ. ಶುಕ್ರವಾರ ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆಯಿದೆ.ಬಿಜೆಪಿ ಸಂಸದೀಯ ಮಂಡಳಿ ಸಭೆ ಡಜನ್ ಸಮಿತಿಗಳನ್ನು ರಚಿಸಲು ನಿರ್ಧರಿಸಿತು. ಪ್ರಚಾರದ ನೇತೃತ್ವ ವಹಿಸಲಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಒಳಗೊಂಡಂತೆ ಸಂಸದೀಯ ಮಂಡಳಿ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿಗಳು ಮತ್ತು ಹಿರಿಯ ನಾಯಕರಿಗೆ ವಹಿಸಬೇಕಾದ ಜವಾಬ್ದಾರಿ ಕುರಿತು ಸಮಾಲೋಚಿಸಲಾಯಿತು.ರಾಜನಾಥ್ ಸಿಂಗ್ ಮತ್ತು ಮೋದಿ ಬುಧವಾರ ರಾತ್ರಿ ವಿವಿಧ ಸಮಿತಿಗಳ ರಚನೆ ಕುರಿತು ಚರ್ಚಿಸಿದರು. ವಿವಿಧ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರ ಪಟ್ಟಿ ಸಿದ್ಧಪಡಿಸುವ ಹೊಣೆಗಾರಿಕೆಯನ್ನು ಸಂಸದೀಯ ಮಂಡಳಿ ಇವರಿಬ್ಬರಿಗೆ ಬಿಟ್ಟಿತ್ತು. ಆದರೆ, ಪಟ್ಟಿಯನ್ನು ಅಂತಿಮಗೊಳಿಸುವ ಮುನ್ನ ಸಂಸದೀಯ ಮಂಡಳಿ ಅಭಿಪ್ರಾಯಕ್ಕೆ ಮನ್ನಣೆ ಇರಬೇಕೆಂದು ಸೂಚಿಸಿತ್ತು.ರಾಜನಾಥ್‌ಸಿಂಗ್ ಮತ್ತು ಮೋದಿ, ಸಮಿತಿ ರಚನೆ ಕುರಿತು ಬುಧವಾರ ರಾತ್ರಿಯೇ ಚರ್ಚಿಸಿದರು. ಸಮಿತಿಗಳು ರ‌್ಯಾಲಿ ಸಂಘಟನೆ, ಪ್ರಣಾಳಿಕೆ ಸಿದ್ಧತೆ, ಪ್ರಚಾರ ಸಾಹಿತ್ಯ, ಜಾಹೀರಾತು, ಮಾಧ್ಯಮಗಳ ನಿರ್ವಹಣೆ, ಯುವಕರು- ಮಹಿಳೆಯರು ಒಳಗೊಂಡಂತೆ ವಿವಿಧ ವಯೋಮಾನದ ಹಾಗೂ ವಿವಿಧ ಕ್ಷೇತ್ರಗಳ ಜನರನ್ನು ತಲುಪುವ ಜವಾಬ್ದಾರಿ ಹೊರಲಿವೆ.ರಾಜಸ್ತಾನ, ಮಧ್ಯಪ್ರದೇಶ, ಛತ್ತೀಸ್‌ಗಡ ಹಾಗೂ ದೆಹಲಿ ವಿಧಾನಸಭೆ ಚುನಾವಣೆ ಉಸ್ತುವಾರಿಗಳು ಹಾಗೂ ಪ್ರಚಾರದ ಮುಖ್ಯಸ್ಥರ ಹೆಸರನ್ನು ಪ್ರಕಟ ಮಾಡುವ ಸಂಭವವಿದೆ. ಚುನಾವಣೆ ಸಂಬಂಧಿತ ಕೆಲಸ ಕಾರ್ಯಗಳಲ್ಲಿ ಎಲ್ಲ ನಾಯಕರನ್ನು ಒಳಗೊಳ್ಳಬೇಕು.ಯಾವುದೇ ಒಬ್ಬ ವ್ಯಕ್ತಿಯನ್ನು ಬಿಂಬಿಸಬಾರದು. ಅಡ್ವಾಣಿ ಮತ್ತಿತರ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಬೇಕು ಎಂದು ಆರ್‌ಎಸ್‌ಎಸ್ ಮುಖಂಡರು ರಾಜನಾಥ್‌ಸಿಂಗ್ ಅವರಿಗೆ ಕಿವಿ ಮಾತು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಎಲ್ಲರಿಗೂ ಹೊಣೆಗಾರಿಕೆ ನಿಗದಿ ಮಾಡಲಾಗುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.ಮೋದಿ ಅವರಿಗೆ ಪ್ರಚಾರ ಸಮಿತಿ ನೇತೃತ್ವ ವಹಿಸಿದ್ದನ್ನು ಅಡ್ವಾಣಿ ಈಚೆಗೆ ವಿರೋಧಿಸಿದ್ದರು. ಅನಂತರ ಆರ್‌ಎಸ್‌ಎಸ್ ಮುಖಂಡ ಮೋಹನ್ ಭಾಗವತ್ ಅಡ್ವಾಣಿ ಅವರನ್ನು ಮನವೊಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.