ಭಾನುವಾರ, ಮೇ 22, 2022
23 °C

ಚುರುಕುಗೊಂಡ ಮುಂಗಾರು

ಪ್ರಜಾವಾಣಿ ವಾರ್ತೆ/ ಸೋಮನಾಥ ಮುದ್ದಾ Updated:

ಅಕ್ಷರ ಗಾತ್ರ : | |

ಭಾಲ್ಕಿ: ತಾಲ್ಲೂಕಿನ ಎಲ್ಲೆಡೆ ಭಾನುವಾರ ಸಂಜೆ ಮುಂಗಾರು ಮಳೆ ಚುರುಕುಗೊಂಡಿದೆ. ಸುಮಾರು ಒಂದು ತಾಸಿಗೂ ಅಧಿಕ ಸಮಯದವರೆಗೆ ಜೋರಾದ ಮಳೆಯಾಗಿದೆ. ಆಕಾಶದೆಡೆಗೆ ನೋಡುತ್ತಾ ಕುಂತಿದ್ದ ಅನ್ನದಾತನ ಮೊಗದಲ್ಲಿ ಮಂದಹಾಸ ಮೂಡಿದೆ.ಮುಂಗಾರಿನ ಆಗಮನದಿಂದ ಕೃಷಿ ಚಟುವಟಿಕೆಗಳಲ್ಲಿನ ಲವಲವಿಕೆ ಹೆಚ್ಚಿದೆ. ಬೀಜ ವಿತರಣಾ ಕೇಂದ್ರಗಳಿಂದ ರೈತರು ಗೊಬ್ಬರ ಮತ್ತು ಬಿತ್ತನೆ ಬೀಜಗಳನ್ನು ಖರೀದಿಸುವ ಚಟುವಟಿಕೆಗಳು ಹೆಚ್ಚಿದೆ. ಕೃಷಿ ಉಪಕರಣಗಳ ಸಿದ್ಧತೆ ಮತ್ತು ಖರೀದಿ ಪ್ರಕ್ರೀಯೆಯಲ್ಲಿ ಉತ್ಸಾಹ ಮೂಡಿದೆ.ಎಲ್ಲೆಡೆ ದನಕರುಗಳಿಗೆ ಕುಡಿಯಲು ನೀರಿಲ್ಲದೇ ಪರದಾಡುವಂಥ ಸ್ಥಿತಿ ನಿರ್ಮಾಣವಾಗಿತ್ತು. ಭಾಲ್ಕಿ ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಕಾರಂಜಾ ನಾಲೆಗಳೂ ಸಹ ಬರಿದಾಗಿ ಕಳೆದ 5 ದಿನಗಳಿಂದ ದಾಡಗಿ ತೊರೆಯಲ್ಲಿ ನೀರೇ ಇರಲ್ಲಿಲ್ಲ. ಹಾಗಾಗಿ ಪಟ್ಟಣದ ನಳಗಳಲ್ಲಿ ನೀರು ಬಂದ್ ಆಗಿದೆ. ಈಗ ಚುರುಕುಗೊಂಡ ಮುಂಗಾರು ಮಳೆ ಬಿದ್ದ ಪರಿಣಾಮ ಎಲ್ಲೆಡೆ ಹಳ್ಳ ಕೊಳ್ಳಗಳಲ್ಲಿ ನೀರು ನಿಲ್ಲುವ ನಿರೀಕ್ಷೆ ಇದೆ.ರೋಹಿಣಿ ನಕ್ಷತ್ರದ ಅವಧಿಯಿಂದಲೂ (ಏ.27-ಮೇ10) ಮಳೆಗಾಗಿ ಕಾದಿದ್ದ ರೈತರಿಗೆ ಕೃತಿಕಾ (ಮೇ 11ರಿಂದ 24) ಬಂದರೂ ವರುಣನ ಕೃಪೆ ಆಗಿರಲಿಲ್ಲ. ಹಲವಾರು ಗುಡಿ ಗುಂಡಾರಗಳಲ್ಲಿ ಪೂಜೆ, ಪ್ರಾರ್ಥನೆಗಳು ನಡೆಯುತ್ತಿದ್ದವು. ಆಗ ಬಾರದಿದ್ದ ಮಳೆ ಈಗಲಾದರೂ ಬಂದಿದೆ. ಕೃಷಿಕರ ಮೊಗದಲ್ಲಿ ಸಂತಸದ ಕಳೆ ತಂದಿದೆ. ಸೋಮವಾರದಿಂದ ಎಲ್ಲೆಡೆ ಬಿತ್ತನೆ ಕೆಲಸಗಳು ಆರಂಭಗೊಳ್ಳುವ ನಿರೀಕ್ಷೆ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.