ಭಾನುವಾರ, ಏಪ್ರಿಲ್ 11, 2021
29 °C

ಚೂಸಿ ಚೆನ್ನಮ್ಮ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಮಾಜಿಕ ಕತೆಗಳ ಮಧ್ಯೆ ಪೌರಾಣಿಕ, ಐತಿಹಾಸಿಕ ಕತೆಗಳನ್ನಿಟ್ಟಾಗ ಅದಕ್ಕೆ ದೊರೆಯುವ ಮಹತ್ವವೇ ಬೇರೆ. ಸುವರ್ಣ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಸರಿಯಾಗಿ ರಾತ್ರಿ ಎಂಟೂವರೆಗೆ `ಕೆಳದಿ ಚೆನ್ನಮ್ಮ~ ಮೂಡಿ ಬರುತ್ತಾಳೆ. ಹದಿನೇಳನೇ ಶತಮಾನದ ಮಲೆನಾಡಿನ ರಾಣಿಯ ಕತೆ ಅದು.ಟಿ.ಎಸ್.ನಾಗಾಭರಣ ನಿರ್ದೇಶನದ ಈ ಧಾರಾವಾಹಿಯಲ್ಲಿ ಚೆನ್ನಮ್ಮನಾಗಿ ಕಾಣಿಸಿಕೊಳ್ಳುತ್ತಿರುವುದು ಕರಾವಳಿ ಬೆಡಗಿ ಸಂಗೀತಾ ಶೆಟ್ಟಿ.ನಾಗಾಭರಣ ಕಚೇರಿಯಿಂದ ಧಾರಾವಾಹಿಯ ಆಡಿಷನ್ ಕುರಿತ ಪ್ರಸ್ತಾಪ ಬಂತು. ಆಗಲೂ ಸಂಗೀತಾ ಅವರಿಗೆ ಚೆನ್ನಮ್ಮನ ಪಾತ್ರಕ್ಕೆ ಆಯ್ಕೆಯಾಗುವ ನಂಬಿಕೆ ಇರಲಿಲ್ಲ. ಅಷ್ಟು ದೊಡ್ಡ ಪಾತ್ರಕ್ಕೆ ಅನುಭವಿಯೊಬ್ಬರು ಆಯ್ಕೆಯಾಗಬಹುದು ಎಂದೇ ಭಾವಿಸಿದ್ದರು.

 

ಆದರೆ ಹೊಸಬರಿಗೆ ಅವಕಾಶ ಕೊಡುವ ಮನಸ್ಸು ನಾಗಾಭರಣರಿಗೆ. ಸಂಗೀತಾ ಪಾಲಿಗೆ ಇದು ವರದಾನವಾಯಿತು. ಬೇರೆ ಪಾತ್ರ ನಿರೀಕ್ಷಿಸಿದ್ದ ಅವರಿಗೆ `ರಾಣಿ ಪಟ್ಟ~ವೇ ಒಲಿಯಿತು. ಇದು ಮಾಮೂಲಿ ಅಭಿನಯವಂತೂ ಅಲ್ಲವೇ ಅಲ್ಲ ಎಂಬುದು ಮೊದಲ ದಿನವೇ ತಿಳಿಯಿತು.ನಾಗಭರಣರು ಕುದುರೆ ಸವಾರಿ, ಕತ್ತಿ ವರಸೆ ಕಲಿಯಬೇಕು ಎಂದು ಬೋಧಿಸಿದ್ದರು. ಅದರಂತೆ  ಬೆಂಗಳೂರಿನ ಅರಮನೆ ಮೈದಾನದಲ್ಲಿ ಎರಡು ದಿನ ಕುದುರೆ ಸವಾರಿಯ ತಾಲೀಮು ನಡೆಯಿತು. ಮೊದಲ ದಿನದ ಚಿತ್ರೀಕರಣದ ವೇಳೆ ಕುದುರೆ ಮೇಲಿನಿಂದ ಬಿದ್ದದ್ದೂ ಆಯಿತು. ಈಗ ಸಂಗೀತಾ ಸವಾರಿ ಪ್ರವೀಣೆಯಾಗಿದ್ದಾರೆ.ಚೆನ್ನಮ್ಮನದು ಸಾಮಾನ್ಯ ಹೆಣ್ಣುಮಗಳೊಬ್ಬಳು ಅಸಾಮಾನ್ಯಳಾಗಿ ಹೊರಹೊಮ್ಮಿದ ಕತೆ ಎಂದು ಬಣ್ಣಿಸುತ್ತಾರೆ ಸಂಗೀತಾ. ತನ್ನ ಧೈರ್ಯ ಸಾಹಸದ ಮೂಲಕ ದೊರೆ ಸೋಮಶೇಖರ ನಾಯಕನ ಮನ ಗೆಲ್ಲುತ್ತಾಳೆ ಆಕೆ.

 

ಪಟ್ಟದಿಂದ ಅವಳನ್ನು ದೂರವಿಡಲು ಹುನ್ನಾರ ನಡೆಯುತ್ತದೆ. ಕೊಲೆಯ ಸಂಚು ನಡೆಯುತ್ತದೆ. ಬದುಕಿದ್ದು ಸತ್ತಂತಿರುವ ಅರಸನೊಂದಿಗೆ ಅವಳು ಬಾಳ್ವೆ ನಡೆಸುತ್ತಾಳೆ. ಮಗಳಾಗಿ, ಹೆಂಡತಿಯಾಗಿ ರಾಜ್ಯವೊಂದಕ್ಕೆ ಒಡತಿಯಾಗಿ ವೈವಿಧ್ಯಮಯ ಆಯಾಮಗಳನ್ನು ಪಾತ್ರ ಹೊಂದಿದೆ ಎನ್ನುತ್ತಾರೆ ಅವರು.ಅಂದಹಾಗೆ ಸಂಗೀತಾ ಬಣ್ಣದ ಲೋಕಕ್ಕೆ ಕಾಲಿಟ್ಟದ್ದು ಧಾರಾವಾಹಿಯ ಮೂಲಕವಲ್ಲ, ಚಿತ್ರರಂಗದ ಮುಖೇನ. ತುಳುವಿನ `ಬಿರ್ಸೆ~ ಅವರು ನಾಯಕಿಯಾಗಿ ಅಭಿನಯಿಸಿದ ಮೊದಲ ಚಿತ್ರ. ನಂತರ `ರಾಮಸೇತು~ ಕನ್ನಡ ಚಿತ್ರದಲ್ಲಿ ನಾಯಕಿ. `ಜಾಲಿಡೇಸ್~, `ಪ್ರತಿಕ್ಷಣ~ ಹಾಗೂ ಲಂಬಾಣಿ ಭಾಷೆಯ `ಸೋನಾ~ ಹೀಗೆ ಸಾಲು ಸಾಲು ಚಿತ್ರಗಳು ಬಂದು ಹೋದವು. `ಜಾಲಿಡೇಸ್~ ಹೊರತುಪಡಿಸಿದರೆ ಎಲ್ಲಾ ಚಿತ್ರಗಳಲ್ಲೂ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಆದರೂ ಟೇಕಾಫ್ ಆಗುವುದು ಕಷ್ಟದ ಕೆಲಸವಾಯಿತು. ಅಷ್ಟಿಷ್ಟು ಹೆಸರು ತಂದುಕೊಟ್ಟದ್ದು `ಸೋನಾ~ ಮಾತ್ರ.ಪಾತ್ರಗಳ ಆಯ್ಕೆಯಲ್ಲಿ ಗಮನ ಹರಿಸದಿದ್ದುದು ಇದಕ್ಕೆ ಕಾರಣವಂತೆ. ಈಗ ಬಂದ ಪಾತ್ರಗಳನ್ನೆಲ್ಲಾ ಒಪ್ಪುವುದಕ್ಕಿಂತ `ಚೂಸಿ~ ಆಗುವುದು ಮೇಲು ಅನ್ನಿಸಿದೆ ಅವರಿಗೆ. ದೊಡ್ಡ ಬ್ಯಾನರ್‌ನ ಚಿತ್ರಗಳು ಅಥವಾ ಉತ್ತಮ ನಾಯಕರು ಜತೆ ಅಭಿನಯಿಸಬೇಕು ಎಂಬ ಆಸೆ ಅವರದು. ಧಾರಾವಾಹಿಯತ್ತ ಅವರು ಮುಖ ಮಾಡಿದ್ದು `ಪ್ಯಾಟೆ ಹುಡ್ಗೀರ ಹಳ್ಳಿ ಲೈಫು~ ರಿಯಾಲಿಟಿ ಕಾರ್ಯಕ್ರಮದ ಮೂಲಕ. ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದರೂ ಸಂಗೀತಾರನ್ನು ಜನ ಗುರುತಿಸಿದ್ದು ಈ ಕಾರ್ಯಕ್ರಮದ ಮುಖಾಂತರ. ಆಮೇಲೆ `ಕೃಷ್ಣ ರುಕ್ಮಿಣಿ~ ಧಾರಾವಾಹಿ ಅವರ ಕೈ ಹಿಡಿಯಿತು. ಜನ್ಮಾಂತರದ ಪ್ರೇಮದ ಎಳೆ ಹೊಂದಿದ್ದ ಧಾರಾವಾಹಿ ಅದು. ಸತ್ಯಭಾಮಾ ಪಾತ್ರದ ಮೂಲಕ ನಾಡಿನ ಮನೆಮನಗಳ ಗಮನ ಸೆಳೆದರು.ಮರಳಿ ಸಿನಿಮಾಗೆ ಅವಕಾಶ ದೊರೆತರೆ ಎಂಬ ಪ್ರಶ್ನೆಗೆ ಸದ್ಯಕ್ಕೆ `ಕೆಳದಿ~ಯೇ ನನ್ನ ಧ್ಯಾನ ಎನ್ನುತ್ತಾರೆ ಆಕೆ. ಹಿರಿತೆರೆಗಿಂತಲೂ ಕಿರುತೆರೆಯಲ್ಲಿ ಬೆಲೆಯಿದೆ ಎಂಬುದು ಅವರು ಕಂಡುಕೊಂಡಿರುವ ಅನುಭವ. ಅವರ ಪ್ರಕಾರ ಹಿರಿತೆರೆಯಿಂದ ಕಿರುತೆರೆಗೆ ಕಾಲಿಡುವುದು ಹಿಂಬಡ್ತಿಯಲ್ಲ. ಇದೇ ಬೇರೆ ಮಾಧ್ಯಮ ಅದೇ ಬೇರೆ ಮಾಧ್ಯಮ ಎಂಬ ವ್ಯಾಖ್ಯಾನ ಅವರದ್ದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.