ಸೋಮವಾರ, ಜನವರಿ 27, 2020
15 °C

ಚೆನ್ನೈ ಓಪನ್ ಟೆನಿಸ್: ಮಾಲಿಸ್‌ಗೆ ಆಘಾತ ನೀಡಿದ ಗೊಫಿನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ವೈಲ್ಡ್ ಕಾರ್ಡ್ ಪ್ರವೇಶ ಪಡೆದಿದ್ದ ಬೆಲ್ಜಿಯಂನ ಡೇವಿಡ್ ಗೊಫಿನ್ ಇಲ್ಲಿ ನಡೆಯುತ್ತಿರುವ ಚೆನ್ನೈ ಓಪನ್ ಟೆನಿಸ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಅಚ್ಚರಿಯ ಫಲಿತಾಂಶಕ್ಕೆ ಕಾರಣರಾಗಿದ್ದಾರೆ. ಏಕೆಂದರೆ ಮಂಗಳವಾರ ಅವರು ಆಘಾತ ನೀಡಿದ್ದು ತಮ್ಮದೇ ದೇಶದ ಕ್ಸೇವಿಯರ್ ಮಾಲಿಸ್ ಅವರಿಗೆ.ನುಂಗುಬಾಕ್ಕಂ ಕ್ರೀಡಾಂಗಣದಲ್ಲಿ ಗೊಫಿನ್ 4-6, 6-2, 6-3ರಲ್ಲಿ ಏಳನೇ ಶ್ರೇಯಾಂಕದ ಆಟಗಾರ ಹಾಗೂ ಕಳೆದ ಬಾರಿಯ ರನ್ನರ್ ಅಪ್  ಕ್ಸೇವಿಯರ್ ಅವರನ್ನು ಸೋಲಿಸಿದರು.ಒಂದು ಗಂಟೆ 53 ನಿಮಿಷ ನಡೆದ ಈ ಪಂದ್ಯ ಆರಂಭದಿಂದಲೇ ಕುತೂಹಲ ಕೆರಳಿಸಿತ್ತು. ಆದರೆ 49ನೇ ರ‌್ಯಾಂಕ್‌ನ ಕ್ಸೇವಿಯರ್ ಅವರ ಹಾದಿಗೆ ಡೇವಿಡ್ ಮುಳ್ಳಾಗಿ ಪರಿಣಮಿಸಿದರು. ಕಷ್ಟಪಟ್ಟು ಮೊದಲ ಸೆಟ್ ಗೆದ್ದಿದ್ದು ಉಪಯೋಗಕ್ಕೆ ಬರಲಿಲ್ಲ. 5.4 ಅಡಿ ಎತ್ತರದ ಡೇವಿಡ್ ಆರು ಎತ್ತರದ ಆಟಗಾರ ಕ್ಸೇವಿಯರ್ ಅವರನ್ನು ಕಾಡಿದ ಪರಿ ಅಷ್ಟಿಷ್ಟಲ್ಲ.ಎರಡು ಹಾಗೂ ಮೂರನೇ ಸೆಟ್ ಗೆದ್ದ 174ನೇ ರ‌್ಯಾಂಕ್‌ನ ಗೊಫಿನ್ ಎರಡನೇ ಸುತ್ತು ಪ್ರವೇಶಿಸಿದರು. 2007ರಲ್ಲಿ ಇಲ್ಲಿ ಚಾಂಪಿಯನ್ ಆಗಿದ್ದ ಮಾಲಿಸ್ ಈ ಬಾರಿ ನಿರಾಸೆ ಅನುಭವಿಸಿದರು.ಇದಕ್ಕೂ ಮುನ್ನ ನಡೆದ ಪಂದ್ಯದಲ್ಲಿ ಜಪಾನ್ ಯೂಚಿ ಸುಗಿತಾ ಕೂಡ ಅಚ್ಚರಿ ಫಲಿತಾಂಶಕ್ಕೆ ಕಾರಣರಾಗಿದ್ದರು. ಅರ್ಹತಾ ಸುತ್ತಿನಲ್ಲಿ ಆಡಿದ ಪ್ರಧಾನ ಹಂತದಲ್ಲಿ ಸ್ಥಾನ ಗಿಟ್ಟಿಸಿದ್ದ ಅವರು ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ 6-3, 6-4ರಲ್ಲಿ ಬೆಲ್ಜಿಯಂನ ಆಲಿವರ್ ರೋಚಸ್ ಎದುರು ಗೆಲುವು ಸಾಧಿಸಿದ್ದರು. ರೊಮೇನಿಯಾದ ವಿಕ್ಟರ್ ಹಾನ್ಸೆಕು 6-3, 6-4ರಲ್ಲಿ ಅಮೆರಿಕದ ಸ್ಯಾಮ್ ಕ್ವಾರಿ ಅವರನ್ನು ಪರಾಭವಗೊಳಿಸಿದರು. ಈಕ್ವೇಡರ್‌ನ ರೋಜರ್ ವಾಸೆಲಿನ್ 6-4, 6-3ರಲ್ಲಿ ಫ್ರಾನ್ಸ್‌ನ ಎರಿಕ್ ಪ್ರೊಡೊನ್ ಅವರನ್ನು ಮಣಿಸಿದರು.ವಿಕ್ಟರ್ ಹಾನ್ಸೆಕು ಅರ್ಹತಾ ಸುತ್ತಿನ ಕೊನೆಯ ಪಂದ್ಯದಲ್ಲಿ ಸೋಲು ಕಂಡಿದ್ದರು. ಆದರೆ ಭಾರತದ ಆಟಗಾರ ಸೋಮ್‌ದೇವ್ ದೇವ್‌ವರ್ಮನ್ ಗಾಯದಿಂದ ಹಿಂದೆ ಸರಿದ ಕಾರಣ ಅವರು ಅವಕಾಶ ಪಡೆದಿದ್ದರು.

ಎರಡನೇ ಸುತ್ತಿನಲ್ಲಿ ವಾಸೆಲಿನ್ ಹಾಲಿ ಚಾಂಪಿಯನ್ ಸ್ಟಾನ್ಲಿಸ್ಲಾಸ್ ವಾವ್ರಿಂಕಾ ಸವಾಲು ಎದುರಿಸಬೇಕಾಗಿದೆ.ತೈಪಿಯ ಯೆನ್ ಸುನ್ ಲು 6-3, 6-3ರಲ್ಲಿ ಹಾಲೆಂಡ್‌ನ ಥಿಮೊ ಡಿ ಬೆಕ್ಕರ್ ಎದುರು ಗೆಲುವು ಸಾಧಿಸಿದರು. ಮತ್ತೊಂದು ಪಂದ್ಯದಲ್ಲಿ ಜರ್ಮನ್‌ನ ಆ್ಯಂಡ್ರಿಯಾಸ್ ಬೆಕ್ 6-3, 7-6ರಲ್ಲಿ ಕೆನಡಾದ ವಾಸೆಕ್ ಪಾಸ್ಪಿಸಿಲ್ ಎದುರು ಗೆದ್ದು ಎರಡನೇ ಸುತ್ತು ತಲುಪಿದರು.

 

ಪ್ರತಿಕ್ರಿಯಿಸಿ (+)