ಶುಕ್ರವಾರ, ಅಕ್ಟೋಬರ್ 2, 2020
24 °C

ಚೆಸ್ ಚೆಲುವೆಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆಸ್ ಚೆಲುವೆಯರು

ಅದೊಂದು ಚೆಸ್ ಅಂಕಣ. ಕಪ್ಪುಬಿಳುಪಿನ ಕಾಯಿಗಳ ರೀತಿ ರೂಪದರ್ಶಿಯರು ಹೆಜ್ಜೆ ಇಡುತ್ತ್ದ್ದಿದರೆ `ರಾಜ~ ಹಾಗೂ `ರಾಣಿ~ ಗಾಂಭೀರ್ಯದಿಂದ ನಡೆದಂತೆ ಭಾಸವಾಗುತ್ತಿತ್ತು.

 

ಕಣ್ಣಿನ ಸುತ್ತ ಕಪ್ಪು ಕಾಡಿಗೆ ಬಳಿದುಕೊಂಡಿದ್ದ ಆ ಸುಂದರಿಯರ ಮುಖಕ್ಕಿಂತ ಅವರ ಕೇಶವಿನ್ಯಾಸವೇ ಎದ್ದು ಕಾಣುತ್ತಿತ್ತು. ರ‌್ಯಾಂಪನ್ನು ಚದುರಂಗದ ಅಂಕಣದಂತೆ ವಿನ್ಯಾಸಗೊಳಿಸಿದ ಪರಿ ವಿಶೇಷ ಆಕರ್ಷಣೆಯಾಗಿತ್ತು.



ಬ್ಲೆಂಡರ್ಸ್ ಫ್ರೈಡ್ ಆಯೋಜಿಸಿದ್ದ `ಬೆಂಗಳೂರು ಫ್ಯಾಷನ್ ವೀಕ್ ವಿಂಟರ್ ಫೆಸ್ಟಿವಲ್~ನ 7ನೇ ಆವೃತ್ತಿಯಲ್ಲಿ ಸಾಯಿ ಸುಮನ್ ಖನ್ನಾ ವಿನ್ಯಾಸಗೊಳಿಸಿದ ವಸ್ತ್ರಗಳನ್ನು ಧರಿಸಿದ ರೂಪದರ್ಶಿಯರ ವಯ್ಯಾರ ಇಮ್ಮಡಿಯಾಗಿತ್ತು. ಕೆಂಪು ಉಡುಗೆ ತೊಟ್ಟು ಕೊನೆಯಲ್ಲಿ ಬಂದ ನಟಿ, ರೂಪದರ್ಶಿ ನಿಶಾ ಕೊಠಾರಿ ಫ್ಯಾಷನ್‌ಪ್ರಿಯರ ಕಣ್ಣಿಗೆ ಹಬ್ಬ ಉಂಟುಮಾಡಿದರು.



ಸಾಯಿ ಸುಮನ್ ಖನ್ನಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ ವಿನ್ಯಾಸಕಿ. ಇವರು `ಚೆಸ್- ದಿ ಗೇಮ್ ಆಫ್ ಲವ್~ ಎಂಬ ಥೀಮ್ ಇಟ್ಟುಕೊಂಡು ವಸ್ತ್ರವಿನ್ಯಾಸ ಮಾಡಿದ್ದರು. ಕೌಟುಂಬಿಕ ಮೌಲ್ಯಗಳನ್ನು ಇಷ್ಟಪಡುವ ಸಾಯಿ ಸುಮನ್ ಲಂಡನ್ ಮೂಲದ ವಿನ್ಯಾಸಕ ಅಲೆಗ್ಸಾಂಡರ್ ಮ್ಯಾಕ್‌ವಿನ್ ತಮ್ಮ ರೋಲ್ ಮಾಡೆಲ್ ಎಂದು ಹೇಳಿಕೊಳ್ಳುತ್ತಾರೆ.



ಚೆಸ್ ಆಟದಿಂದ ಸ್ಫೂರ್ತಿಗೊಂಡ ಸುಮನ್ ವಸ್ತ್ರ ವಿನ್ಯಾಸದಲ್ಲೂ ಅದರ ಛಾಪು ಮೂಡಿಸಿದ್ದಾರೆ. ಇವರ ವಿನ್ಯಾಸದಲ್ಲಿ ಆಧುನಿಕ ಹಾಗೂ ನವ್ಯದ ಸ್ಪರ್ಶ ಜೊತೆಗೆ ಭಾರತ ಹಾಗೂ ಪಾಶ್ಚಾತ್ಯ ದೇಶಗಳ ನೋಟಕ್ಕೆ ಸ್ವಲ್ಪ ಕೆಂಪು ಬಣ್ಣವನ್ನು ಸೇರಿಸಿದ್ದಾರೆ. ಇವರ ವಿನ್ಯಾಸದ ಕಪ್ಪು ಬಿಳುಪಿನ ವಸ್ತ್ರಗಳಲ್ಲಿ ಕೆಂಪು ಹಾಗೂ ತಿಳಿ ನೀಲಿ ಬಣ್ಣದ ವಿನ್ಯಾಸ ಗಾಢವಾಗಿವೆ.



ಫ್ಯಾಬ್ರಿಕ್ ಕೆಲಸ ಎದ್ದು ಕಾಣುತ್ತದೆ. ಪ್ರತಿ ಪ್ರದರ್ಶನದ ನಂತರ ಹೇಗೆ ಬದಲಾಗಬೇಕು, ಹೊಸತನ ಏನಿದೆ ಎಂಬುದರ ಬಗ್ಗೆ ಚಿಂತಿಸುವುದಾಗಿ ಅವರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಾರೆ.



ನಂತರ ನಡೆದ ಫ್ಯಾಷನ್ ಶೋನಲ್ಲಿ ರಿಯಾಜ್ ಗಾಂಜಿ ಅವರ ವಿನ್ಯಾಸದ ವಸ್ತ್ರಗಳನ್ನು ಧರಿಸಿದ ರೂಪದರ್ಶಿಯರು ಗಮನ ಸೆಳೆದರು. ರ‌್ಯಾಂಪ್ ಮೇಲೆ ಬಂದ ರೂಪದರ್ಶಿಯೊಬ್ಬಳು ಯಾರನ್ನೋ ಹುಡುಕುವಂತೆ ಅತ್ತಿತ್ತ ಕಣ್ಣಾಡಿಸುತ್ತ ಥಳಕು ಬಳುಕಿನಿಂದ ನಡೆಯುತ್ತ ಪ್ರೇಕ್ಷಕರ ನಡುವೆ ಕುಳಿತಿದ್ದ ರೂಪದರ್ಶಿಯೊಬ್ಬನನ್ನು ಜೊತೆಯಲ್ಲಿ ಕರೆದುಕೊಂಡು ಬಂದು ಪೋಸ್ ನೀಡಿದ್ದು ಆಕರ್ಷಕವಾಗಿತ್ತು. ಪೇಟ ಧರಿಸಿದ್ದ ರೂಪದರ್ಶಿಯರು ರಾಜರ ಉಡುಗೆಯಲ್ಲಿ ಮೆಲ್ಲಮೆಲ್ಲನೆ ರ‌್ಯಾಂಪ್‌ಮೇಲೆ ಕ್ಯಾಟ್‌ವಾಕ್ ಮಾಡಿದರು.



ತುಂಬು ತೋಳಿನ ರವಿಕೆ ತೊಟ್ಟಿದ್ದ ರೂಪದರ್ಶಿಯರು ಮದುವಣಗಿತ್ತಿಯರಂತೆ ಸೀರೆಯುಟ್ಟು ಗಮನ ಸೆಳೆದರು. ಅಂದಹಾಗೆ ರಿಯಾಜ್ ಅವರ `ಟ್ರೂತ್~ ಹೆಸರಿನ ಸಂಗ್ರಹ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವಂತಿತ್ತು.



ಕೊನೆಗೆ ಬಂದ ನಟಿ ಯುವಿಕಾ ಚೌಧರಿ ಅವರ ಕೇಶವಿನ್ಯಾಸ ಕಿರೀಟದಂತೆ ಕಾಣುತ್ತಿತ್ತು. ಸಂಪೂರ್ಣ ಕುಸುರಿಯಿಂದ ಸಿಂಗರಗೊಳಿಸಿದ್ದ ಘಾಗ್ರಾ ಚೋಲಿ ತೊಟ್ಟ ಚೌಧರಿ ಮಹಾರಾಣಿಯಂತೆ ಕಾಣುತ್ತಿದ್ದರು. ಆಗ ಛಾಯಾಚಿತ್ರಗ್ರಾಹಕರ ಕ್ಯಾಮೆರಾ ಕಣ್ಣುಗಳು ಬಿಡುವಿಲ್ಲದೆ ಅವರ ಮೇಲೆ ಬೆಳಕು ಚೆಲ್ಲತೊಡಗಿದವು.



ಖ್ಯಾತ ಡಿಸೈನರ್‌ಗಳಾದ ಸಿದ್ಧಾರ್ಥ ಶಂಕರ ಸುಮುಖ್, ನಿಯತಿ ಅಮ್ಲಾನಿ ಮತ್ತು ಸ್ವಾತಿ ಅಗರ್‌ವಾಲ್, ಶಿಲ್ಪಾ ಸಿಂಗ್, ಶಿವಾನಿ ಮತ್ತು ಜಾಯ್, ನೂಪುರ್ ಅರೋರಾ ಅವರ ವಿಶೇಷ ವಿನ್ಯಾಸದ ವಸ್ತ್ರಗಳನ್ನು ರೂಪದರ್ಶಿಗಳು ತೊಟ್ಟು ರ‌್ಯಾಂಪ್ ಮೇಲೇರಿ ಫ್ಯಾಷನ್ ವೀಕ್‌ಗೆ ರಂಗು ತುಂಬಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.