ಮಂಗಳವಾರ, ಜೂನ್ 22, 2021
27 °C

ಚೈತ್ರನ ಚಿತ್ರ ಮೂಡುವಾಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಿಯ ಚೈತ್ರ,

ಇನ್ನೇನು ವಿಮಾನಕ್ಕೆ ಹತ್ತಬೇಕು ಅನ್ನುವಷ್ಟರಲ್ಲಿ ಅಪರೂಪದ ಗೆಳತಿ ದೂರವಾಣಿ ಕರೆ ಮಾಡಿದಂತೆ, ನೀನು ಲೋಕಸಂಚಾರಕ್ಕೆ ಹೊರಡಲು ಅಂತಿಮ ಸಿದ್ಧತೆ ನಡೆಸುತ್ತಿರುವ ಈ ಹೊತ್ತಿನಲ್ಲಿ ನಿನ್ನೊಂದಿಗೆ ಮಾತಿಗಿಳಿದಿದ್ದೇನೆ. ನಿನಗೆ ಗೊತ್ತೇ ಇದೆ, ನಾನು ನಿನ್ನ ಆರಾಧಕಿ. ಕೈತೋಟದಲ್ಲಿ ಇಷ್ಟಗಲ ಜಾಗ ಮಿಕ್ಕಿದರೂ ಅಲ್ಲೊಂದು ಟೊಮೆಟೊ ಸಸಿ ನೆಡುವ ಅಮ್ಮ ಮಾಗಿಯ ಚಳಿಯಲ್ಲೂ, ಫಾಲ್ಗುಣದ ಬಿಸಿಲಿಗೂ ಕ್ಯಾರೇ ಅನ್ನದೆ ಬೆನ್ನು ಬಗ್ಗಿಸಿ ಕೆಲಸ ಮಾಡುತ್ತಾರೆ.ಮನಮೆಚ್ಚುವ ಕೆಲಸಕ್ಕೆ ಹೊತ್ತುಗೊತ್ತಿನ ಹಂಗಿಲ್ಲವಲ್ಲ. ಅವರ ದಿನಚರಿಯೂ ಹಾಗೆಯೇ. ಮಧ್ಯಾಹ್ನದ ಸಾರಿಗೆ ನಾಲ್ಕು ಟೊಮೆಟೊ ಸಿಕ್ಕೀತು ಅನ್ನೋದು ಅವರ ಕಾಳಜಿಯಲ್ಲ, ಎಲ್ಲಿ ನೋಡಿದರೂ ಹಸಿರು, ಹೂವು ಇರಬೇಕು ಅಷ್ಟೇ. ನನಗೂ ಹಾಗೇ. ಈ ಕಾಂಕ್ರೀಟ್ ಕಾಡಿನ ಮನೆಯಲ್ಲಿ ಪಾರ್ಕಿಂಗ್ ಜಾಗದಲ್ಲಿ ದಕ್ಕಿದ ಒಂದು ಅಡಿ ಜಾಗದಲ್ಲಿ ಎರಡು ಮೂರು ಪಾಟ್ ಇಟ್ಟುಕೊಂಡು ಅದೇನೇನೊ ಸಸಿ ನೆಟ್ಟು, ಅದು ಹಸಿರು ಮುಕ್ಕಳಿಸುವುದನ್ನೇ ನೋಡುತ್ತೇನೆ. ಬೆಳೆಯುತ್ತಿರುವ ಮಗು, ತುಳಸಿಗಿಡ ಎಲ್ಲಿದೆ ಹೇಳು ಎಂದರೆ ಪುಟ್ಟ ತೋರ್ಬೆರಳಲ್ಲಿ ತೋರಿಸಿದಾಗ ಬ್ರಹ್ಮಾನಂದ. ಗಿಡ ನೆಡುವಾಗ ಕೈ ಕೆಸರು. ಈಗ ಕಂದನ ಬಾಯಲ್ಲಿ ಮೊಸರು!ದೇಶ ಮತ್ತು ಕಾಲವನ್ನು ಯಾವುದೇ ಕೋನದಿಂದ ಅವಲೋಕಿಸಿದರೂ ಪ್ರಕ್ಷುಬ್ಧತೆಯೇ ತಾಂಡವವಾಡುತ್ತಿರುವಾಗ ಮನದ ಬನದೊಳಗೆ ಚೈತನ್ಯದ ಚಿಲುಮೆಯೆಬ್ಬಿಸಲು ನೀನೇ ಬರಬೇಕು. ಇದು ಆಗ್ರಹ ಅಥವಾ ನನ್ನ ಜೀವಪರ ನಿಲುವು. ಕ್ಯಾಲೆಂಡರ್ ವರ್ಷ ಶುರುವಾಗಿ ತಿಂಗಳು ಎರಡು ದಾಟಿದರೂ ಹೊಸ ವರ್ಷ ಚಾಂದ್ರಮಾನ ಯುಗಾದಿಯಿಂದಲೇ ಆರಂಭವಾಗೋದು ಅಂತ ಅಜ್ಜಿ, ಪಪ್ಪ, ಅಮ್ಮ ನಂಬಿದ್ದಾರೆ.ನನಗನಿಸುತ್ತದೆ ಅವರು ಕಾತರಿಸುತ್ತಿರುವುದು ಹೊಸ ವರ್ಷ ಅಥವಾ ಮೊದಲ ಹಬ್ಬಕ್ಕಾಗಿ ಅಲ್ಲ; ಬರಿಯ ನಿನ್ನ ಬರುವಿಕೆಗಾಗಿ. ನಮ್ಮಂತೆ, ನಿನ್ನ ಪ್ರತೀಕ್ಷೆಯಲ್ಲಿರುವವರ ಸಂಖ್ಯೆ ಕೋಟಿ ದಾಟುತ್ತದೆ ಎಂಬ ಸತ್ಯ ನನಗೆ ಕೋಡು ಮೂಡಿಸಿರಬಹುದು.ನಿಜ, ಯುಗಾದಿಯನ್ನು ಬಗಲಲ್ಲಿಟ್ಟುಕೊಂಡೇ ನೀನು ಚಿತ್ತೈಸಬೇಕು. ಅದು ಪ್ರಕೃತಿ ನಿಯಮ. ಅರ್ಥಾತ್ ಚಾಂದ್ರಮಾನ ಯುಗಾದಿಯಂದೇ ಚೈತ್ರ ಮಾಸಾರಂಭ. ಆದರೆ ನಿನ್ನ ಸಂಗಾತಿ, ಅದೇ ಆ ಪರಮ ತುಂಟ ವಸಂತ ಇದ್ದಾನಲ್ಲ; ಅವನು ಆಗಲೇ ಜಗದಗಲಕ್ಕೂ ತನ್ನ ಮಾಯಾಜಾಲ ಬೀಸಿಬಿಟ್ಟಿದ್ದಾನೆ. ಲೌಕಿಕದ ಗೊಡವೆ ಬೇಡ ಎಂದು ಬೆನ್ನುಹಾಕಿ ಅಲೌಕಿಕದ ಧ್ಯಾನನಿರತ ಸಂತರೂ ಅವನ ಮಾಯೆಯಿಂದ ಇತ್ತ ಕತ್ತು ನಿರುಕಿಸುತ್ತಾರಂತೆ.ಅವನಿಗೆ ನಿನ್ನ ಸಾಥ್! ಭಾಪ್‌ರೆ! ಬದುಕಿನ ಪ್ರಕ್ಷುಬ್ಧತೆಗೆ ನೀನೆರಚುವ ಉಲ್ಲಾಸದ ಸಿಂಚನವಿದೆಯಲ್ಲ; ಅದಕ್ಕೆ ಯಾವುದು ಸಮ? ನಿನ್ನ ಆಗಮನದ ಸೂಚನೆಯಲ್ಲೇ ಜಗದ ಅಷ್ಟೂ ಸಂಭ್ರಮ ಮನೆ ಮಾಡಿರುತ್ತಲ್ಲ? ನಾ ಹೇಳಲಾ? ನಿನಗೆ ಇಷ್ಟೊಂದು ರಮ್ಯತೆ ತುಂಬಿದೋನು ವಸಂತ ಅಲ್ವೇ? ನೀವಿಬ್ಬರೂ ಪ್ರತಿವರ್ಷವೂ ಆಡುವ ಆಟ ಯಾರು ಅರಿತಿಲ್ಲ ಹೇಳು? ಆದರೂ ಒಂದು ಗುಮಾನಿ ನನಗೆ...ಗಣಿಯ ದೂಳು ಮೆತ್ತಿಕೊಂಡು ಮುರುಟಿದ ಗಿಡಮರಗಳಿಗೂ, ನೀರಿನ ಪಸೆಯೂ ನಿಲ್ಲಲಾರದ ಬರಡು ನೆಲದಲ್ಲಿ ಚಿಗಿತುಕೊಂಡು ಸವಾಲಿನ ನಗೆಸೂಸುವ ಪಾಪಾಸ್‌ಕಳ್ಳಿಗೂ ನೀವು ಅದು ಹೇಗೆ ಬಾಳಿನಾಸೆ ತುಂಬಿಸುತ್ತೀರಿ? ಇಬ್ಬರೂ ಜೋಡಿ ಹಯಗಳಾಗಿ ಬಾಳರಥ ಮುನ್ನಡೆಸಲು ಆಸರೆಯಾಗುತ್ತೀರಿ?ಇಲ್ಲಿ ಕೇಳು, ನಿನ್ನ ಪಟ್ಟಾಭಿಷೇಕಕ್ಕೆ ಸಕಲ ಜೀವಸಂಕುಲ ಎಷ್ಟೊಂದು ಚೈತನ್ಯಶೀಲವಾಗಿ ಕಾಯುತ್ತಿದೆ. ನಮ್ಮ ಆಜುಬಾಜೂ ಅಡ್ಡಾಡುವ ಕಾಯಕಯೋಗಿಗಳನ್ನಾಗಲಿ, ಕೆಲಸವಿಲ್ಲದಿದ್ದರೂ ಸದಾ ನಾಯೋಟದಲ್ಲಿ ಓಡಾಡುವ ಮಂದಿಯನ್ನಾಗಲಿ, ಜಡ್ಡು ಮೈವೆತ್ತಂತೆ ಕೂತಿರುವ ಉದಾಸೀನಮೂರ್ತಿಗಳನ್ನಾಗಲಿ, ಹತ್ತು ತಿಂಗಳಿಗೆ ಹತ್ತನೇ ಹೆಜ್ಜೆಯೆತ್ತಿಯಿಡುವ ಮಡಿಲ ಕಂದನನ್ನಾಗಲಿ, ಕಳೆದ ಚೈತ್ರದಲ್ಲಿ ಮದುವೆ ನಿಕ್ಕಿ ಮಾಡಿ ವಿದೇಶದ ವಿಮಾನ ಏರಿದ ಸಂಗಾತಿ ಈ ಚೈತ್ರಕ್ಕೆ ಆ ನೆಲದ ಹಸಿರುಕಾರ್ಡು ಪಡೆದು ಬಂದ ಖುಷಿಯಿಂದ ಮದುವೆ ಕಾರ್ಡು ಹಂಚುತ್ತಿರುವ ಗುಲಾಬಿಗೆನ್ನೆಯ ಮದುವಣಗಿತ್ತಿಯಲ್ಲಾಗಲಿ... ಎಲ್ಲೆಲ್ಲೂ ಜೀವಪರ ಪ್ರತೀಕ್ಷೆ!ವಸಂತ ಮಾಸದಲ್ಲಿ ಬರಡು ಮರಗಳೂ ಚಿಗಿತುಕೊಳ್ಳುವ ಚಂದ ನೋಡುವುದೇ ಹಬ್ಬ. ಕಳೆ, ಕೊಳೆಯನ್ನೆಲ್ಲ ತೊಡೆದುಹಾಕಿ ರಂಗವಲ್ಲಿಯ ಚಿತ್ತಾರ ಬಿಡಿಸಿ ಹಬ್ಬ ಮಾಡುವ ಗೃಹಿಣಿಯಂತೆ, ಹಣ್ಣೆಲೆಗಳನ್ನು, ಒಣಗಿದೆಲೆಗಳನ್ನು ಕೊಡವಿಕೊಂಡು ಚಿಗುರೆಲೆ, ಹೂಗಳಿಂದ ಸಿಂಗಾರಗೊಂಡ ಮರಗಿಡಗಳದ್ದೆ ಕಾರುಬಾರು.ನಿನ್ನಮ್ಮ ಪ್ರಕೃತಿಯದು ಎಂಥಾ ತಲೆ ಅಲ್ವಾ? ಕಲರ್ ಕಾಂಬಿನೇಷನ್, ಕಾಂಟ್ರಾಸ್ಟ್ ಎಂದು ಕಲಾತ್ಮಕವಾಗಿ ಮಾತನಾಡುವ ಕುಂಚ ಕಲಾವಿದರಿಗೆ ಮೊದಲ ಗುರು ನಿನ್ನಮ್ಮನೇ ತಾನೆ? ವಸಂತ ಮಾಸದಲ್ಲೇ ಯಾಕೆ ಮಾವಿನಮರ ಚಿಗುರಬೇಕು, ಚೆರಿ ಹೂವು ಅರಳಬೇಕು?  ಬಾಳಲಾರದೆ ಅಸುನೀಗಿದ ಕಂದನಂತೆ ಮುರಿದುಬೀಳುವ ಮಿಡಿಗಾಯಿಗಳು, ಮುಡಿಯೇರದೆ ಗುಡಿ ಸೇರದೆ ಧರಾಶಾಯಿಯಾಗುವ ಪುಷ್ಪಗಂಧಿಯರು... ಪ್ರಕೃತಿ ಚಿತ್ರಿಸುವ ಕೊಲಾಜ್‌ನಲ್ಲಿ ಒಂದೊಂದು ನೋಟದಲ್ಲೂ ಒಂದೊಂದು ಪ್ರತಿಮೆಗಳಾಗಿ ಕಾಡುತ್ತವೆ.ನಗರಾಭಿವೃದ್ಧಿ ಅಥವಾ ಆಧುನಿಕತೆಯ ಪ್ರತೀಕಗಳಾದ ಮೇಲ್ಸೇತುವೆಗಳ ಮೇಲಿಂದ ಒಮ್ಮೆ ನಗರವನ್ನು ಅವಲೋಕಿಸು. ಹಳದಿ ಹೂ ದುಪಟ್ಟಾ ಹೊದ್ದ, ತಿಳಿನೇರಳೆ ಸೆರಗಿನೆಡೆಯಿಂದ ಮೋಹಕ ನಗೆಸೂಸುವ ಅಲ್ಲೊಬ್ಬ ಇಲ್ಲೊಬ್ಬ ಪುಷ್ಪಕನ್ಯೆಯರು... ಅದರಾಚೆ....ಉಟ್ಟ ಸೀರೆಯ ದಪ್ಪಗಂಜಿಯಲ್ಲದ್ದಿ ಬಿಸಿಲಲ್ಲಿ ಆರಲು ಹಾಕಿದ ಹೂವಮ್ಮ ಯಾರೊ? ಇಳಿಸಂಜೆಯಾದರೂ ಸೀರೆ ಆರಲೇ ಇಲ್ಲವೇನೊ? ದಿನ ದಿನವೂ ಒಗೆದು, ಆರಿಸುವ, ಹೊಸದನ್ನು ತೊಟ್ಟುಕೊಳ್ಳುವ ವೃಕ್ಷಕನ್ಯೆಯ ನಿಯತ್ತಿಗೆ ನಮೋ ನಮಃ...ಚೈತ್ರ-ವಸಂತರ ಜುಗಲ್‌ಬಂದಿಗೆ ನಮ್ಮಂತಹ ಯಕಃಶ್ಚಿತ್ ಮಾನವರು ಮನಸೋಲುವುದು ಹಾಗಿರಲಿ. ನಿಮ್ಮ ಅಂದಚಂದವನ್ನು ಶಬ್ದಸಾಗರದಲ್ಲದ್ದಿ ಕಾವ್ಯಲೋಕವನ್ನು ಶ್ರೀಮಂತಗೊಳಿಸಿದ ಕವಿಗಳ ಕೈಗಳೇ ಸೋತುಹೋಗಿವೆಯಂತೆ.ಯುಗಾದಿಯ ಸಂಭ್ರಮೋಲ್ಲಾಸವನ್ನೇ ಒಂದು ಬಗೆಯಾಗಿ, ಚೈತ್ರದ ಹುಣ್ಣಿಮೆನ್ನೇ ಇನ್ನೊಂದು ಬಗೆಯಾಗಿ ಅವರು ಕಾವ್ಯಪ್ರತಿಮೆಯಾಗಿಸಿದ್ದಾರೆ ನೋಡು. ಚೈತ್ರವೆಂದರೆ ಶೃಂಗಾರಕಾವ್ಯ, ಚೈತ್ರವೆಂದರೆ ಮಧುರಗಾನ, ಭಾವ-ಬಣ್ಣಗಳ ಚಿತ್ತಾರ...

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.