ಭಾನುವಾರ, ಮೇ 16, 2021
27 °C
ವ್ಯಕ್ತಿ

ಛಲದ ಶಿಖರ ಏರಿದ ಅರುಣಿಮಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಛಲದ ಶಿಖರ ಏರಿದ ಅರುಣಿಮಾ

ಕೇವಲ ಎರಡು ವರ್ಷಗಳ ಹಿಂದಿನ ಘಟನೆ. ಕ್ರೀಡಾಕೂಟವೊಂದರಲ್ಲಿ ಭಾಗವಹಿಸಲು ಆ ಯುವತಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದಳು. ಬೋಗಿಯಲ್ಲಿ ಒಬ್ಬಳೇ ಇದ್ದ ಆ ಯುವತಿಯ ಕತ್ತಿನಲ್ಲಿದ್ದ ಚಿನ್ನದ ಸರ ಅಪಹರಿಸಲು ಕಳ್ಳರು ಯತ್ನಿಸಿದ್ದರು. ಅದನ್ನು ಧೈರ್ಯದಿಂದಲೇ ಪ್ರತಿರೋಧ ತೋರಿದ್ದ ಆಕೆಯನ್ನು ಕಳ್ಳರು ವೇಗವಾಗಿ ಚಲಿಸುತ್ತಿದ್ದ ರೈಲಿನಿಂದ ಹೊರಕ್ಕೆ ತಳ್ಳಿದ್ದರು. ಆ ಯುವತಿ ಸತ್ತಳೆಂದೇ ಕಳ್ಳರು ಭಾವಿಸಿದ್ದರು.ಆದರೆ, ಧೈರ್ಯ-ಸಾಹಸದ ಪ್ರತೀಕವಾಗಿದ್ದ ಅವಳ ಬಳಿ ಸುಳಿಯಲು ಸಾವೂ ಕೂಡಾ ಹೆದರಿತ್ತೇನೋ! ಯಾವುದೋ ಹಳ್ಳಿಯೊಂದರ ರೈಲ್ವೆ ಹಳಿ ಪಕ್ಕದಲ್ಲಿ ರಕ್ತದ ಮಡುವಿನಲ್ಲಿ ಪ್ರಜ್ಞಾಹೀನಳಾಗಿ ಬಿದ್ದಿದ್ದ ಅವಳನ್ನು ಹಳ್ಳಿಯವರೇ ಆಸ್ಪತ್ರೆಗೆ ದಾಖಲಿಸಿದ್ದರು. ರೈಲಿನಿಂದ ತಳ್ಳಿದ್ದ ತೀವ್ರತೆಗೆ ಆಕೆಯ ಕಾಲು ಕೊಳೆತ್ತಿತ್ತು. ಹಾಗೇ ಬಿಟ್ಟರೇ ಇಡೀ ದೇಹವೇ ಕೊಳೆಯುವ ಅಪಾಯ. ವಿಧಿಯಿಲ್ಲದೇ ವೈದ್ಯರು ಅವಳ ಕಾಲೊಂದನ್ನು ಕತ್ತರಿಸಿ ಹಾಕಿದ್ದರು.ಒಂದು ಕಾಲು ಕಳೆದುಕೊಂಡ ಆಕೆಯ ಕ್ರೀಡಾಭವಿಷ್ಯಕ್ಕೆ ಕತ್ತಲು ಕವಿದಿತ್ತು. ವಾಲಿಬಾಲ್‌ನ ರಾಷ್ಟ್ರೀಯ ಕ್ರೀಡಾಪಟುವಾಗಿದ್ದ ಅವಳ ಕನಸುಗಳು ನುಚ್ಚುನೂರಾಗಿದ್ದವು. ಆದರೆ, ದೈಹಿಕವಾಗಿ ಅಂಗವಿಕಲೆಯಾಗಿದ್ದರೂ ಅವಳ ಮನಸ್ಸಿಗೆ ಯಾವುದೇ ವೈಕಲ್ಯ ಕಾಡಲಿಲ್ಲ. ಈ ಕಹಿ ಘಟನೆಯಿಂದ ಕ್ರೀಡಾಪಟುವಿಗೆ ಇರಬೇಕಾದ ಧೈರ್ಯ, ಸಾಹಸ ಮನೋಭಾವ ಅವಳಲ್ಲಿ ಮತ್ತಷ್ಟು ಬಲವಾಯಿತು.

ಹಾಗಾಗಿ, ಕಾಲಿದ್ದವರೂ ಭಯಪಡುವ ಸಾಹಸವೊಂದನ್ನು ಆಕೆ ಮಾಡಿದಳು. ಜಗತ್ತಿನ ಅತಿ ಎತ್ತರದ ಮೌಂಟ್ ಎವರೆಸ್ಟ್ ಪರ್ವತವನ್ನು ಕೃತಕ ಕಾಲಿನಿಂದಲೇ ಹತ್ತಿ ಅಂಗವಿಕಲರ ಪಾಲಿನ `ಆಶಾಕಿರಣ'ವಾದಳು. ಆ ಮೂಲಕ ಹೊಸ ಇತಿಹಾಸವನ್ನೇ ಬರೆದಳು. ಆ ಯುವತಿಯೇ ಉತ್ತರ ಪ್ರದೇಶದ ಅರುಣಿಮಾ ಸಿನ್ಹಾ.ಕಾಲು ಊನವಾಗಿದ್ದರೂ ಮೌಂಟ್ ಎವರೆಸ್ಟ್ ಪರ್ವತ ಏರುವ ಕನಸು ಹೊತ್ತಿದ್ದ ಅರುಣಿಮಾ 2012ರ ಮಾರ್ಚ್ 3ರಿಂದ ಉತ್ತರಕಾಶಿಯ ಟಾಟಾ ಸ್ಟೀಲ್ ಅಡ್ವೆಂಚರ್ ಫೌಂಡೇಷನ್-ರನ್ ಟ್ರೈನಿಂಗ್ ಕ್ಯಾಂಪ್‌ನಲ್ಲಿ ತರಬೇತಿ ಪಡೆದರು. ಕ್ಯಾನ್ಸರ್ ಅನ್ನು ಗೆದ್ದಿದ್ದ ಖ್ಯಾತ ಕ್ರಿಕೆಟಿಗ ಯುವರಾಜ್ ಸಿಂಗ್ ಅವರನ್ನು ಮನಸ್ಸಿನಲ್ಲೇ ಮಾದರಿಯಾಗಿಟ್ಟುಕೊಂಡು ಪುಟ್ಟ ಮಗು ಅಂಬೆಗಾಲಿಡುವಂತೆ ಪುಟ್ಟಪುಟ್ಟ ಹೆಜ್ಜೆಗಳ ಮೂಲಕವೇ ಮೌಂಟ್ ಎವರೆಸ್ಟ್ ಪರ್ವತ ಏರುವ ಛಲ, ಧೈರ್ಯ ತುಂಬಿಕೊಂಡವರು ಅವರು.

ಕೃತಕ ಕಾಲಿನ ಗಟ್ಟಿಗಿತ್ತಿ ಅರುಣಿಮಾ ಅಂದುಕೊಂಡಿದ್ದನ್ನು ಸಾಧಿಸಿಯೇ ತೀರಿದರು. ಅವರ ಈ ಸಾಧನೆ ಹಾಲಿವುಡ್‌ನ ಸಿನಿಮಾ ನಿರ್ಮಾಪಕರಿಗೂ ಸ್ಫೂರ್ತಿಯಾಯಿತು. ಪದೇಪದೇ ಅರುಣಿಮಾ ಅವರನ್ನು ಸಂಪರ್ಕಿಸಿದ ಆ ನಿರ್ಮಾಪಕ ಇದೀಗ ಅರುಣಿಮಾ ಜೀವನದ ಏಳು-ಬೀಳುಗಳನ್ನು ಸಿನಿಮಾವಾಗಿ ರೂಪಿಸುವಲ್ಲಿ ತನ್ಮಯ.ಮೌಂಟ್ ಎವರೆಸ್ಟ್ ಏರಿದ ಬಳಿಕ ಉತ್ತರಪ್ರದೇಶದ ಲಖನೌನಿಂದ ಸುಮಾರು 200ಕಿ.ಮೀ. ದೂರದ ತವರೂರು ಅಂಬೇಡ್ಕರ್ ನಗರಕ್ಕೆ ಆಗಮಿಸಿದ್ದ ಅರುಣಿಮಾ ಅವರಿಗೆ ವಿವಿಧ ಸಂಘ-ಸಂಸ್ಥೆಗಳಿಂದ ಭವ್ಯ ಸ್ವಾಗತ ದೊರೆಯಿತು. ಕಾಲಿಲ್ಲದಿದ್ದರೂ ತಮ್ಮೂರ ಪುತ್ರಿ ಜಗತ್ತಿನ ಅತಿ ದೊಡ್ಡ ಪರ್ವತ ಏರಿದ ಹೆಮ್ಮೆ ಅಲ್ಲಿನ ಜನರಿಗೆ.ವಿಶ್ವದ ಅತಿದೊಡ್ಡ ಪರ್ವತ ಮೌಂಟ್ ಎವರೆಸ್ಟ್ ಏರುತ್ತೀರಿ ಎಂಬ ಭರವಸೆ ನಿಮಗಿತ್ತೇ?

-ಒಂದು ಕಾಲು ಕಳೆದುಕೊಂಡಾಗ ನನಗೆ ತುಂಬಾ ದುಃಖವಾಗಿತ್ತು. ಆದರೆ, ನಾನು ಧೃತಿಗೆಡಲಿಲ್ಲ. ನನ್ನ ಸ್ಥಿತಿ ನೋಡಿ ಕುಟುಂಬದವರು ಅನುಕಂಪ ತೋರಿಸುತ್ತ್ದ್ದಿದರು. ಆದರೆ, ನನಗೆ ಅನುಕಂಪ ಬೇಕಿರಲಿಲ್ಲ. ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಮೌಂಟ್ ಎವರೆಸ್ಟ್ ಪರ್ವತಾರೋಹಣದ ಒಂದು ಲೇಖನ ನನ್ನ ಗಮನ ಸೆಳೆಯಿತು. ಆಗಲೇ ನಾನು ನಿಶ್ಚಯಿಸಿದೆ, ಹೇಗಾದರೂ ಮಾಡಿ ಆ ಪರ್ವತ ಏರಲೇಬೇಕೆಂದು.

ಪರ್ವತ ಏರುವ ಮೂಲಕ ಜಗತ್ತಿನ ಯಶಸ್ವಿ ವ್ಯಕ್ತಿ ನಾನಾಗಬೇಕೆಂಬ ಕನಸು ನನ್ನಲ್ಲಿ ಮೊಳಕೆಯೊಡೆಯಿತು. ಕೂಡಲೇ ಮೌಂಟ್ ಎವರೆಸ್ಟ್ ಏರಿದ್ದ ಭಾರತದ ಮೊದಲ ಮಹಿಳಾ ಪರ್ವತಾರೋಹಿ ಬಚೇಂದ್ರಿ ಪಾಲ್ ಅವರನ್ನು ಸಂಪರ್ಕಿಸಿದೆ. ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆದಮೇಲೆ ತಮ್ಮನ್ನು ಕಾಣುವಂತೆ ಪಾಲ್ ನನಗೆ ಹೇಳಿದರು. ಆಗ ನಾನು ಕಂಡ ಕನಸು ಖಂಡಿತ ನನಸಾಗುತ್ತದೆ ಎಂಬ ಭರವಸೆ ನನಗೆ ಮೂಡತೊಡಗಿತು.ತರಬೇತಿ ಸಮಯದಲ್ಲಿ ನೀವು ಬಹಳಷ್ಟು ಕಠಿಣದ ಹಾದಿ ಸವೆಸಿರಬೇಕಲ್ಲ?

- ಹೌದು. 2012ರ ಮಾರ್ಚ್‌ನಲ್ಲಿ ಬಚೇಂದ್ರಿ ಪಾಲ್ ಅವರ ಮಾರ್ಗದರ್ಶನದಲ್ಲಿ ನನ್ನ ತರಬೇತಿ ಶುರುವಾಯಿತು. ಆಗ ನಾನು ತುಂಬಾ ಕಷ್ಟ ಅನುಭವಿಸಬೇಕಾಯಿತು. ಜತೆಯಲ್ಲಿದ್ದ ಇತರರು ನನಗಿಂತ ಬೇಗ ಪರ್ವತ ಏರುತ್ತಿದ್ದರು. ಆದರೆ, ನಾನು ಮಾತ್ರ ಕೊನೆಯಲ್ಲಿರುತ್ತಿದ್ದೆ. ಆದರೆ, ಸತತ ಪ್ರೋತ್ಸಾಹ ಮತ್ತು ಕಠಿಣ ಶ್ರಮದಿಂದ ನಾನೂ ಕೂಡಾ ಇತರರಂತೆ ಶೀಘ್ರವಾಗಿ ಪರ್ವತ ಏರಲು ಕಲಿತೆ.

ಅಷ್ಟೇ ಅಲ್ಲ, ಕೆಲವೊಮ್ಮೆ ಅವರಿಗಿಂತ ಮೊದಲೇ ನಾನು ಪರ್ವತ ಏರುವ ಗುರಿ ಮುಟ್ಟುತ್ತಿದ್ದೆ. ಕಾಲಿನಲ್ಲಿ ರಕ್ತ ಬರುತ್ತ್ದ್ದಿದರೂ ಅದನ್ನು ಗಮನಿಸದೇ ನನ್ನ ತರಬೇತಿ ಮುಗಿಸಿದೆ. ಬಚೇಂದ್ರಿ ಪಾಲ್ ಅವರ ಸತತ ಪ್ರೋತ್ಸಾಹ, ಮಾರ್ಗದರ್ಶನದಿಂದಾಗಿ ಯಶಸ್ವಿಯಾಗಿ ತರಬೇತಿ ಮುಗಿಸಿದೆ.ನಿಮ್ಮ ಕನಸನ್ನು ಹೇಗೆ ನನಸು ಮಾಡಿಕೊಂಡಿರಿ?

-ಆರಂಭದಲ್ಲಿ ನನ್ನ ಕನಸು ನನಸಾಗುವ ಬಗ್ಗೆ ಖಾತ್ರಿಯಿರಲಿಲ್ಲ. ಆದರೆ, ತರಬೇತಿ ಪಡೆಯುತ್ತಾ ಪಡೆಯುತ್ತಾ ನನ್ನಲ್ಲಿ ನಿಧಾನವಾಗಿಆತ್ಮವಿಶ್ವಾಸ ಮೂಡತೊಡಗಿತು. ಮಾರ್ಚ್ 31ರಿಂದ 52ದಿನಗಳ ಕಾಲದ ನನ್ನ ಪರ್ವತಾರೋಹಣದ ಹಾದಿ ಆರಂಭವಾಯಿತು. ಈ ಪಯಣದ ಹಾದಿ ಕಠಿಣ ಸವಾಲು ಮತ್ತು ರೋಚಕತೆಯಿಂದ ಕೂಡಿತ್ತು. `ಡೆತ್ ಜೋನ್' ಎಂಬ ಸ್ಥಳದಲ್ಲಿ ನನಗೆ ಅತ್ಯಂತ ಕಠಿಣವಾದ ಸನ್ನಿವೇಶ ಎದುರಾಯಿತು.

ಪ್ರತಿ ಹೆಜ್ಜೆಯೂ ಸವಾಲಿನಿಂದ ಕೂಡಿತ್ತು. ಸ್ವಲ್ಪ ಹೆಜ್ಜೆ ತಪ್ಪಿದರೂ ಸೀದಾ ಸಾವಿನ ಮನೆಯ ಕದ ತಟ್ಟಬೇಕಿತ್ತು. ಈ ಎಲ್ಲಾ ಸವಾಲುಗಳನ್ನು ಎದುರಿಸುತ್ತಲೇ ಪರ್ವತಾರೋಹಣ ಮಾಡುವಾಗ, ಹೆಜ್ಜೆ ತಪ್ಪಿದವರ ಶವಗಳು ಹಿಮದಲ್ಲಿ ಹೆಪ್ಪುಗಟ್ಟಿದ್ದು ಕೂಡಾ ಕಾಣುತ್ತಿತ್ತು. ಕೆಲ ಸಂದರ್ಭಗಳಲ್ಲಂತೂ ಹಗ್ಗದ ಸಹಾಯದಿಂದಲೇ ಗಂಟೆಗಟ್ಟಲೇ ಪರ್ವತ ಏರುವ ಸಾಹಸವನ್ನೂ ಮಾಡಿದೆ. ಹಾಗೇ ಏರುತ್ತಲೇ ಮೌಂಟ್ ಎವರೆಸ್ಟ್‌ನ ದಕ್ಷಿಣ ತುದಿ ಗೋಚರಿಸತೊಡಗಿತ್ತು.ಆದರೆ ಅದೇ ಸಮಯದಲ್ಲಿ ನನ್ನ ಆರೋಗ್ಯ ತುಸು ಹದಗೆಡತೊಡಗಿತ್ತು. ಅಲ್ಲದೇ, ಆಮ್ಲಜನಕದ ಸಿಲಿಂಡರ್ ಕೂಡಾ ಖಾಲಿಯಾಗತೊಡಗಿತ್ತು. ಜತೆಗಿದ್ದ ಇತರ ಪರ್ವತಾರೋಹಿಗಳು ರಕ್ಷಣಾ ತಂಡಕ್ಕೆ ಕರೆ ಮಾಡಿ, ಹಿಂದಿರುಗಲು ಸಲಹೆ ಕೂಡಾ ಕೊಟ್ಟರು. ಆದರೆ ಸತತ 1,055 ಗಂಟೆಗಳ ನನ್ನ ಶ್ರಮ ಕೊನೆಗೂ ಫಲ ನೀಡಿತ್ತು. ಅಂದು ಮೇ 21. ನಾನು ಜಗತ್ತಿನ ಅತ್ಯಂತ ಎತ್ತರದ ಹಿಮಾಲಯ ಪರ್ವತ ಮೌಂಟ್ ಎವರೆಸ್ಟ್‌ನ ದಕ್ಷಿಣ ತುದಿಯಲ್ಲಿ ನಿಂತಿದ್ದೆ. ನನ್ನ ಕನಸು ನನಸಾಗಿತ್ತು. ನಾನು ಅಂದುಕೊಂಡಿದ್ದನ್ನು ಸಾಧಿಸಿದ ತೃಪ್ತಿ, ಹೆಮ್ಮೆ ನನ್ನದಾಗಿತ್ತು.ಮೌಂಟ್ ಎವರೆಸ್ಟ್‌ನ ತುದಿ ತಲುಪಿದ ಆ ಕ್ಷಣ ಹೇಗಿತ್ತು?

-ಆರಂಭದಲ್ಲಿ ಮೌಂಟ್ ಎವರೆಸ್ಟ್‌ನ ತುದಿ ತಲುಪಿದಾಗ ನನಗೆ ನಂಬಿಕೆಯೇ ಬರಲಿಲ್ಲ. ನಂತರ ನಿಧಾನವಾಗಿ ವಾಸ್ತವಕ್ಕೆ ಬಂದೆ. ಅಲ್ಲಿ ಭಾರತದ ರಾಷ್ಟ್ರಧ್ವಜ ಹಾರಿಸಿದ ಆ ಕ್ಷಣ ಅತ್ಯಂತ ಹೆಮ್ಮೆ ಅನಿಸಿತು.ನೀವು ಉತ್ತರ ಪ್ರದೇಶದ ಒಂದು ಸಾಧಾರಣ ಹಾಗೂ ಸಂಪ್ರದಾಯಸ್ಥ ಕುಟುಂಬದಿಂದ ಬಂದವರು. ಅದನ್ನೆಲ್ಲಾ ಹೇಗೆ ಮೀರಿದಿರಿ?

- ನಮ್ಮ ಸಮಾಜ ಮಹಿಳೆಗೆ ಸ್ವಾತಂತ್ರ್ಯ ನೀಡಲು ಇನ್ನೂ ಸಿದ್ಧವಿಲ್ಲ. ಬಾಲ್ಯದಲ್ಲೇ ನನಗಿದು ಅನುಭವಕ್ಕೆ ಬಂತು. ನಾನು ಹಾಕಿ ಸ್ಟಿಕ್ ಹಿಡಿದು ಅಭ್ಯಾಸಕ್ಕಾಗಿ ಮೈದಾನಕ್ಕೆ ಹೋಗುತ್ತಿದ್ದಾಗ ಜನರು ನನ್ನನ್ನು ವಿಚಿತ್ರವಾಗಿ ನೋಡಿ ನಗುತ್ತಿದ್ದರು.

ನಾನು ಟ್ರ್ಯಾಕ್‌ಸೂಟ್ ಹಾಕಿಕೊಂಡು ಹೋಗುತ್ತಿರುವಾಗಲೂ ನನ್ನನ್ನು ಅಪಹಾಸ್ಯ ಮಾಡುತ್ತಿದ್ದರು. ಚಿಕ್ಕ ವಯಸ್ಸಿನಲ್ಲೇ ನನಗೆ ಮದುವೆಯನ್ನೂ ಮಾಡಿದರು. ಅದು ಕೇವಲ 20ದಿನಕ್ಕೇ ಮುರಿದು ಬಿತ್ತು. ಆದರೆ ನನ್ನ ಸಾಧನೆ, ದೃಢನಿಲುವಿನ ಹಿಂದೆ ಕುಟುಂಬದ ಬೆಂಬಲವಿತ್ತು. ಹಾಗಾಗಿ, ಸವಾಲು ಮೀರಿ ಸಾಧನೆ ಮಾಡಲು ಸಾಧ್ಯವಾಯಿತು.ಉತ್ತರಪ್ರದೇಶದ ಪೊಲೀಸರ ವರ್ತನೆ ನಿಮ್ಮನ್ನು ವಿಚಲಿತಗೊಳಿಸಿತೆ?

-ಹೌದು. ರೈಲಿನಲ್ಲಿ ದರೋಡೆಗೆ ಯತ್ನಿಸಿದವರ ವಿರುದ್ಧ ನಾನು ಪ್ರತಿರೋಧ ತೋರಿದ್ದನ್ನು ಪೊಲೀಸರು ನಂಬಲಿಲ್ಲ. ಅಷ್ಟೇ ಅಲ್ಲ, ಆ ಅಪರಾಧಿಗಳನ್ನು ಪತ್ತೆ ಹಚ್ಚುವ ಬದಲು, ನನ್ನನ್ನು ರಕ್ಷಿಸಿದ ಗ್ರಾಮಸ್ಥರ ವಿರುದ್ಧವೇ ಪ್ರಕರಣ ದಾಖಲಿಸಿ, ಅವರಿಗೆ ಮಾನಸಿಕ ಹಿಂಸೆ ನೀಡಿದರು. ನನ್ನ ಪ್ರತಿ ಹೇಳಿಕೆಯಲ್ಲೂ ಪೊಲೀಸರು ತಪ್ಪನ್ನೇ ಹುಡುಕುತ್ತಿದ್ದಾರೆ.ಯುವಜನರಿಗೆ ನಿಮ್ಮ ಸಂದೇಶವೇನು?

- ಹೆಣ್ಣಾಗಲೀ, ಗಂಡಾಗಲೀ ಪ್ರತಿಯೊಬ್ಬರಿಗೂ ತಮ್ಮದೇ ಆದ ಕನಸುಗಳಿರುತ್ತವೆ ಎಂಬ ನಂಬಿಕೆ ನನ್ನದು. ಕಠಿಣ ಶ್ರಮ ವಹಿಸಿದಲ್ಲಿ ಆ ಕನಸನ್ನು ನನಸು ಮಾಡಿಕೊಳ್ಳಲು ಸಾಧ್ಯ. ಮುಖ್ಯವಾಗಿ ನಾನು ಹೆಣ್ಣುಮಕ್ಕಳಿಗೆ ಹೇಳುವುದಿಷ್ಟೇ. ನಿಮ್ಮದಲ್ಲದ ತಪ್ಪಿಗೆ ನೀವು ಬಲಿಯಾಗಬೇಡಿ. ನಾನೊಮ್ಮೆ  ಕ್ರೀಡಾಭ್ಯಾಸ ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದೆ.

ಆಗ ದಾರಿಯಲ್ಲಿ ಒಬ್ಬ ಯುವಕ ನನಗೆ ಅಶ್ಲೀಲವಾಗಿ ಮಾತನಾಡಿದ. ತಕ್ಷಣವೇ ನಾನು ಅವನಿಗೆ ಅಲ್ಲೇ ಬಿದ್ದಿದ್ದ ಸಣ್ಣ ಕಲ್ಲಿನಿಂದ ಹೊಡೆದೆ ಅಷ್ಟೇ. ಅವನು ಮತ್ತೆಂದೂ ನನಗೆ ಆ ರೀತಿ ಮಾತನಾಡುವ ಧೈರ್ಯ ತೋರಲಿಲ್ಲ.

-ಸಂಜಯ್ ಪಾಂಡೆ .

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.