ಛಲ ಬಿಡದ ಚಲಪತಿ: ಕೈ ಹಿಡಿದ ಹಾಗಲಕಾಯಿ

ಗುರುವಾರ , ಮೇ 23, 2019
30 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಛಲ ಬಿಡದ ಚಲಪತಿ: ಕೈ ಹಿಡಿದ ಹಾಗಲಕಾಯಿ

Published:
Updated:

ಕೋಲಾರ: ಕೊಳವೆಬಾವಿಯಲ್ಲಿ ಬತ್ತುತ್ತಿರುವ ನೀರು ತಾಲ್ಲೂಕಿನ ಹಲವು ರೈತರಲ್ಲಿ ದುಗುಡ, ನಿರುತ್ಸಾಹ ಮೂಡಿಸುತ್ತಿದೆ. ಕೊಳವೆಬಾವಿ ಆಶ್ರಯಿಸಿರುವ ರೈತರು, ಮಳೆಯಾಶ್ರಯದಲ್ಲಿ ಬೇಸಾಯ ಮಾಡುವವರಂತೆಯೇ ಅನಿಶ್ಚಿತತೆ ಎದುರಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಕೆಲವು ರೈತರು ಮಾತ್ರ ಪರ್ಯಾಯ ದಾರಿ ಕಂಡುಕೊಂಡು, ಲಾಭದ ದಾರಿಯಲ್ಲಿ ನಡೆದಿದ್ದಾರೆ.ಅಂಥ ರೈತರೊಬ್ಬರು ತಾಲ್ಲೂಕಿನ ಕೋಟಿಗಾನಹಳ್ಳಿಯಲ್ಲಿದ್ದಾರೆ. ಹಳ್ಳಿಯ ಕೆರೆ ಅಚ್ಚುಕಟ್ಟು ಪ್ರದೇಶದ ತಮ್ಮ ಜಮೀನಿನ 20 ಗುಂಟೆ ಜಾಗದಲ್ಲಿ ರೈತ ಚಲಪತಿ ಹಾಗಲಕಾಯಿಯನ್ನು ಎರಡು ವರ್ಷದಿಂದ ಬೆಳೆಯುತ್ತಿದ್ದಾರೆ. ಸ್ವತಃ ಅವರೇ ಚೆನ್ನೈಗೆ ಅದನ್ನು ಮಾರುತ್ತಾರೆ. ಈ ಅವಧಿಯಲ್ಲಿ ಅವರ ಬಳಿ ನಷ್ಟದ ಮಾತು ಸುಳಿದಿಲ್ಲ ಎಂಬುದು ವಿಶೇಷ.ತೋಟಗಾರಿಕೆ ಬೆಳೆಗಳಿಗೆ ಹೆಚ್ಚು ನೀರು ಬೇಕು ಎಂಬುದು ಸಾಮಾನ್ಯ ನಂಬಿಕೆ. ಆದರೆ ಕಡಿವೆು ನೀರು ಬಳಸಿ ಹಾಗಲಕಾಯಿ ಬೆಳೆಯಬಹುದು ಎಂಬುದು ಅವರು ಕಂಡುಕೊಂಡು ಮಾರ್ಗ.ಚಲಪತಿ ಹೊಲದಲ್ಲಿ ಒಂದು ಕೊಳವೆಬಾವಿ ಇದೆ. ವರ್ಷದಿಂದ ವರ್ಷಕ್ಕೆ ಅದರಲ್ಲಿನ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವುದನ್ನು ಮನಗಂಡ ಅವರು ಚಿಂತಾಕ್ರಾಂತರಾಗಿದ್ದರು. ಟೊಮೆಟೊ ಸೇರಿದಂತೆ ಯಾವುದೇ ತೋಟಗಾರಿಕೆ ಬೆಳೆಗೂ ನಿರಂತರ ನೀರು ಅನಿವಾರ್ಯ. ಆದರೆ ಅವರ ಜಮೀನಿನ ಕೊಳವೆಬಾವಿಯಲ್ಲಿ ನೀರು ಕಡಿಮೆ ಇತ್ತು. ಹೀಗಾಗಿ ಅವರು ಪರ್ಯಾಯ ಮಾರ್ಗ ಹುಡುಕತೊಡಗಿದಾಗ ಕಂಡಿದ್ದು ಹಾಗಲಕಾಯಿ ಬೇಸಾಯ.ಹಾಗಲಕಾಯಿ ಬಿತ್ತನೆಗೆ ಮುಂದಾದಾಗ ಕೆಲವು ಸ್ನೇಹಿತ ರೈತರು, ನೆರೆಹೊರೆಯವರು ಅಚ್ಚರಿಪಟ್ಟರು. ಅಲ್ಲದೆ, ಅದರಿಂದ ಲಾಭವಿದೆಯೇ ಎಂದೂ ಪ್ರಶ್ನಿಸಿ ಚಲಪತಿಯ ಉತ್ಸಾಹವನ್ನು ಜಗ್ಗಿದ್ದರು. ಆದರೆ ಚಲಪತಿ ಹಾಗಲಕಾಯಿ ಬೀಜ ಬಿತ್ತನೆಯನ್ನೆ ಮಾಡಿದರು. ತಾಲ್ಲೂಕಿನಲ್ಲಿ ಕೆಲವೆ ರೈತರು ಹಾಗಲಕಾಯಿ ಬೆಳೆಯುತ್ತಿದ್ದಾರೆ ಎಂಬುದು ಗಮನಾರ್ಹ ಸಂಗತಿ.`ಹಾಗಲಕಾಯಿ ಕಡಿಮೆ ನೀರು ಬಯಸುವುದಷ್ಟೆ ಅಲ್ಲದೆ, ಬೆಲೆಯಲ್ಲಿ ಹೆಚ್ಚಿನ ಏರು-ಪೇರು ಆಗಲ್ಲ. ಯಾವುದೇ ರೋಗಕ್ಕೂ ಬಗ್ಗುವುದಿಲ್ಲ. ಹೀಗಾಗಿ ಬೆಳೆ ನಷ್ಟವಾಗುವ ಭೀತಿಯೂ ಇಲ್ಲ ಎಂಬುದು ನಂತರ ಗೊತ್ತಾಯಿತು. ಹೀಗಾಗಿ ಅದನ್ನೆ ಬೆಳೆಯುತ್ತಿದ್ದೇನೆ~ ಎಂದು ಅವರು `ಪ್ರಜಾವಾಣಿ~ಗೆ ತಿಳಿಸಿದರು.`ಸ್ಥಳೀಯ ಮಾರುಕಟ್ಟೆಗೆ ಒಯ್ಯುವುದಿಲ್ಲ. ಬದಲಿಗೆ ದೂರದ ಚೆನ್ನೈಗೆ, ಬೆಂಗಳೂರಿನ ಕೆ.ಆರ್.ಪುರಂಗೆ ನಾನೇ ರವಾನಿಸುತ್ತೇನೆ. ರವಾನಿಸಿದ ನಂತರದ ವಾರದಲ್ಲಿ ಅಲ್ಲಿಗೆ ತೆರಳಿ ವ್ಯವಹಾರ ಪೂರ್ಣಗೊಳಿಸಿ ಬರುತ್ತೇನೆ. ಭಾಷೆಯೇನೂ ತೊಡಕಾಗಿಲ್ಲ. ಸಲೀಸಾಗಿ ವ್ಯವಹರಿಸುತ್ತಿದ್ದೇನೆ~ ಎನ್ನುತ್ತಾರೆ ಅವರು.`ಬಿತ್ತನೆ ಮಾಡಿದ 2 ತಿಂಗಳ ಬಳಿಕ ಕಾಯಿ ಬಿಡಲಾರಂಭಿಸುತ್ತವೆ. ನಂತರ 3 ತಿಂಗಳ ಕಾಲ ಪ್ರತಿ ವಾರವೂ ಕಾಯಿ ಕಿತ್ತು ಮಾರಬಹುದು. ಒಮ್ಮೆ 400-500 ಕೆಜಿ ಕಾಯಿ ದೊರಕುತ್ತವೆ. ಕೆಜಿಗೆ ಕಡಿಮೆ ಎಂದರೆ 7-8 ರೂಪಾಯಿ, ಹೆಚ್ಚೆಂದರೆ 10-12 ರೂಪಾಯಿ ದೊರಕುತ್ತದೆ. ಹೆಚ್ಚು ಲಾಭವಿಲ್ಲದಿದ್ದರೂ, ನಷ್ಟವಿಲ್ಲ ಎಂಬುದು ಅವರ ಸ್ಪಷ್ಟ ನುಡಿ. 20 ಗುಂಟೆಯಲ್ಲಿ ಹಾಗಲಕಾಯಿ ಬೆಳೆಸಲು ರೂ. 3ರಿಂದ 5 ಸಾವಿರ ಖರ್ಚಾಗಿದೆ.  ಆ ಅಸಲಿಗೆ ಯಾವುದೇ ಮೋಸವಾಗಿಲ್ಲ.`ಕಾಯಿಗೆ ಯಾವುದೇ ರೋಗ ಬರದಿದ್ದರೂ, ಎಲೆಗಳಿಗೆ ಹರಿಶಿನ ಬಣ್ಣದ ರೋಗ ಬರುತ್ತದೆ. ಅದು ಸುಲಭವಾಗಿ ನಿವಾರಣೆಯಾಗುವುದಿಲ್ಲ. ನಿರಂತರವಾಗಿ ಔಷಧಿ ಬಳಸುತ್ತಿರಬೇಕು. ಅದೊಂದು ಸಮಸ್ಯೆ ಹೊರತುಪಡಿಸಿದರೆ, ಕಡಿಮೆ ನೀರು, ಕಡಿಮೆ ಖರ್ಚಿನಲ್ಲಿ ಸುಲಭವಾಗಿ ಹಾಗಲಕಾಯಿ ಬೆಳೆಯುತ್ತಿದ್ದೇನೆ. ಸದ್ಯಕ್ಕಂತೂ ಅದನ್ನು ಬಿಡುವ ಮಾತಿಲ್ಲ. ಚಪ್ಪರದ ಕೆಳಗೆ ನೇತಾಡುವ ಕಾಯಿ ನೋಡುವುದೇ ಖುಷಿ~ ಎಂದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry