ಬುಧವಾರ, ಮೇ 12, 2021
18 °C

ಜಂಬೂ ವನ್ಯಜೀವಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಯೋಗೇಶ್ವರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ನಾಗರಹೊಳೆಯ ದೊಡ್ಡಬೈರನಕುಪ್ಪೆ ಕಾಡಿನಲ್ಲಿ ಮಳೆಗಾಲದ ಒಂದು ರಾತ್ರಿ ಸುಮಾರು ಒಂಬತ್ತು ಗಂಟೆಗೆ ಜಿಟಿ ಜಿಟಿ ಮಳೆ ಸುರಿಯುತ್ತಿತ್ತು. ಆ ಸಂದರ್ಭದಲ್ಲಿ ಅಕ್ರಮ ಮರ ಸಾಗಣೆ ಮಾಡುತ್ತಿದ್ದ ಗುಂಪೊಂದು ಕಾಡನ್ನು ಹೊಕ್ಕಿತ್ತು. ಮಳೆಯ ನಡುವೆಯೇ ಹೆಜ್ಜೆ ಗುರುತನ್ನು ಆಧಾರವಾಗಿಟ್ಟುಕೊಂಡು ಕಳ್ಳರನ್ನು ಹುಡುಕಲಾಯಿತು.

 

ಕಳ್ಳರಲ್ಲಿ ಶಸ್ತ್ರಗಳಿದ್ದವು. ಸಾವು ಕಣ್ಮುಂದೆ ಇದ್ದರೂ ಕೊನೆಗೂ ಕಳ್ಳರನ್ನು ಹಿಡಿದಿದ್ದೂ ರೋಚಕ ಅನುಭವ~ ಎಂದು ಕೊಳ್ಳೇಗಾಲ ವಲಯ ಅರಣ್ಯಾಧಿಕಾರಿ ಸಿ.ಸದಾಶಿವಂ ಹೇಳಿದರು.ಕುಂಬ್ಳೆ ಪ್ರತಿಷ್ಠಾನವು ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಜಂಬೂ ವನ್ಯಜೀವಿ ಪ್ರಶಸ್ತಿಯ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಅನುಭವ ಹಂಚಿಕೊಂಡರು.`ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸರ್ಕಾರಿ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಂಡು ವನ್ಯಜೀವಿ ಮತ್ತು ಅರಣ್ಯ ಸಂರಕ್ಷಣೆಯ ಕರ್ತವ್ಯದಲ್ಲಿ ಶ್ರದ್ಧೆಯಿಂದ ತೊಡಗಿಸಿಕೊಳ್ಳುವ ಮೂಲಕ ಆತ್ಮತೃಪ್ತಿ ಪಡೆದಿದ್ದೇನೆ~ ಎಂದು ಸಂತಸ ವ್ಯಕ್ತಪಡಿಸಿದರು.ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅರಣ್ಯ ಸಚಿವ ಸಿ.ಪಿ.ಯೋಗೇಶ್ವ, `ವನ್ಯಜೀವಿ ಮತ್ತು ಅರಣ್ಯ ಸಂರಕ್ಷಕರ ಸಾಧನೆಯನ್ನು ಗುರುತಿಸಿ ಕುಂಬ್ಳೆ ಪ್ರತಿಷ್ಠಾನವು ನೀಡುವ ಜಂಬೂ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಮುಂದಿನ ವರ್ಷದಿಂದ ರಾಜ್ಯ ಅರಣ್ಯ ಇಲಾಖೆ ಸಹಯೋಗ ನೀಡಲಿದೆ~ ಎಂದರು.`ಸರ್ಕಾರ ಮಾಡಬೇಕಿರುವ ಕೆಲಸವನ್ನು ಕುಂಬ್ಳೆ ಪ್ರತಿಷ್ಠಾನವು ಮಾಡುತ್ತಿರುವುದು ಸಂತಸ ತಂದಿದೆ. ರಾಜ್ಯದಲ್ಲಿ ಪಶ್ಚಿಮ ಘಟ್ಟ ಸೇರಿದಂತೆ ಬಹು ಸೂಕ್ಷ್ಮ ಅರಣ್ಯ ಪ್ರದೇಶಗಳಿದ್ದು, ಒಟ್ಟು 300 ಹುಲಿಗಳು, 6,000ಕ್ಕೂ ಹೆಚ್ಚು ಆನೆಗಳಿವೆ. ವನ್ಯಜೀವಿ ಮತ್ತು ಅರಣ್ಯಸಂರಕ್ಷಣೆಯಂತಹ ಕಾರ್ಯದಲ್ಲಿ ಅರಣ್ಯ ಇಲಾಖೆ ದುಡಿಯುತ್ತಿದೆ~ ಎಂದರು.ಪ್ರತಿಷ್ಠಾನ ಸಂಸ್ಥಾಪಕ ಅನಿಲ್ ಕುಂಬ್ಳೆ, `ವನ್ಯಜೀವಿ ಪಾಲಕರ ಸಮಸ್ಯೆಗಳಿಗೆ ಸ್ಪಂದಿಸಲು ಮತ್ತು ಅವರ ಕಾರ್ಯವೈಖರಿ ಪ್ರೋತ್ಸಾಹಿಸಲು ಪ್ರತಿಷ್ಠಾನವು ಬದ್ಧವಾಗಿದೆ. ಸೇವೆಯಲ್ಲಿರುವಾಗಲೇ ಮರಣ ಹೊಂದಿದ ವನ್ಯಪಾಲಕರ ಕುಟುಂಬಕ್ಕೆ ಒಂದು ಲಕ್ಷರೂಪಾಯಿ ಧನ ಸಹಾಯ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ~ ಎಂದು ಹೇಳಿದರು.ಕುಳವಿ ವಲಯದ ಅರಣ್ಯ ರಕ್ಷಕ ಚಂದ್ರಕಾಂತ್ ಆರ್.ನಾಯಕ್, ಆಲೂರಿನ ಅರಣ್ಯ ಇಲಾಖೆಯ ದಿನಗೂಲಿ ನೌಕರ ಎಚ್.ಎಚ್.ವೆಂಕಟೇಶ್, ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ವಲಯ ಅರಣ್ಯಾಧಿಕಾರಿಗಳಾದ ಸಂಗಮೇಶ್ ಎನ್.ಪ್ರಭಾಕರ್, ಜಿ.ಆರ್.ಶಶಿಧರ್, ನಗರ ಇ-ಆಡಳಿತ ಇಲಾಖೆಯ ನಿರ್ದೇಶಕ ಬಿಸ್ವಜಿತ್ ಮಿಶ್ರಾ (ಅತ್ಯುತ್ತಮ ನಾಗರಿಕ ಸೇವಾ ಪ್ರತಿನಿಧಿ), ಅರಣ್ಯ ವನ್ಯಜೀವಿ ಟ್ರಸ್ಟ್ (ವನ್ಯಜೀವಿ ನಾಯಕತ್ವ), ಪರಿಸರ ಸಂರಕ್ಷಣಾ ಪ್ರತಿಷ್ಠಾನದ ನಿರ್ದೇಶಕ ಡಾ.ಎಂ.ಡಿ.ಮಧುಸೂದನ್ (ಅನ್ವಯಿಕ ಅರಣ್ಯ ವಿಜ್ಞಾನಿ), ಬಿ.ಎಸ್. ಕೃಪಾಕರ ಮತ್ತು ಸೇನಾನಿ (ಜಂಬೂ), ಡಾ.ಉಲ್ಲಾಸ್ ಕಾರಂತ (ಜೀವಮಾನ ಸಾಧನೆ) ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎಲ್ಲಾ ಪ್ರಶಸ್ತಿಯು ಸ್ಮರಣಿಕೆ ಮತ್ತು ಒಂದು ಲಕ್ಷ ರೂಪಾಯಿಯನ್ನು ಒಳಗೊಂಡಿದೆ.ಬಯೋಕಾನ್ ಸಂಸ್ಥೆಯ ಅಧ್ಯಕ್ಷೆ ಕಿರಣ್ ಮಜುಂದಾರ್ ಷಾ, ಪ್ರಧಾನ ಮುಖ್ಯ ಅರಣ್ಯಸಂರಕ್ಷಣಾಧಿಕಾರಿಗಳಾದ ಎ.ಕೆ.ವರ್ಮ, ಬಿ.ಕೆ.ಸಿಂಗ್, ಚೇತನಾ ಕುಂಬ್ಳೆ ಇತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.