ಭಾನುವಾರ, ಜೂನ್ 20, 2021
23 °C

ಜಟಕಾ ಬಂಡಿಯಲ್ಲಿ ಯಾರ್ ಕೂರ‌್ತಾರೆ ಸ್ವಾಮಿ...

ಉದಯ ಯು. Updated:

ಅಕ್ಷರ ಗಾತ್ರ : | |

ಹಾಸನ: ವೈಭವದ ದಿನಗಳು ಮುಗಿದು ದಶಕಗಳೇ ಸಂದಿವೆ. ಈಗ ಮುಂಜಾನೆಯಿಂದ ಸಂಜೆವರೆಗೆ ಕಾಯುವುದು. ಸರಕು ಸಾಗಾಣಿಕೆಗೆ ಯಾರಾದರೂ ಕರೆದರೆ ಹೋಗಿ ಅಷ್ಟೋ ಇಷ್ಟೋ ಸಂಪಾದಿಸಿ ಜೀವನ ಸಾಗಿಸುವುದು ಅಷ್ಟೇ. ಇದು ಹಾಸನದಲ್ಲಿ ವರ್ಷಗಳಿಂದ ಜಟಕಾ ಬಂಡಿ ಓಡಿಸುತ್ತಿರುವ ಕುಟುಂಬದವರ ಸ್ಥಿತಿ. ಹೇಮಾವತಿ ಪ್ರತಿಮೆಯ ಮುಂಭಾಗ, ಹಳೆಯ ಬಸ್ ನಿಲ್ದಾಣದ ಪಕ್ಕದಲ್ಲಿರುವ ಜಟಕಾ ಬಂಡಿ ಸ್ಟ್ಯಾಂಡ್ ಅನ್ನು ಯಾರೂ ಅಷ್ಟು ಗಂಭೀರವಾಗಿ ಗಮನಿಸಿರ ಲಾರರು. ಯಾಕೆಂದರೆ ಜನಸಾಮಾನ್ಯರ ಓಡಾಟಕ್ಕೆ ಈಗ ಸಾಕಷ್ಟು ಬಸ್ಸುಗಳಿವೆ. ಅತಿ ತುರ್ತು ಸಂದರ್ಭ ಬಂದರೆ ಆಟೋ ರಿಕ್ಷಾಗಳಿವೆ. ಜಟಕಾ ಬಂಡಿ ಈಗ ಜನರ ಓಡಾಟದ ಸಾಧನವಾಗಿ ಉಳಿದಿಲ್ಲ. ಹಾಗೆಂದು ನಗರದಲ್ಲಿ ಜಟಕಾ ಬಂಡಿಗಳಿಗೆ ಬೇಡಿಕೆ ಇಲ್ಲ ಎಂದಲ್ಲ. ಹಿಂದೆ ಜನರ ಓಡಾಟಕ್ಕೆ ಬಳಸುತ್ತಿದ್ದ ಜಟಕಾ ಬಂಡಿಗಳು ಈಗ ಗುಜರಿ ಸಾಮಾನು, ಕಬ್ಬಿಣ ಅಥವಾ ಇನ್ಯಾವುದೋ ಸಾಮಾನು ಸರಂಜಾಮು ಸಾಗಾಟಕ್ಕೆ ಸೀಮಿತವಾಗಿದೆ ಅಷ್ಟೇ. ಹಳೆಯ ಬಸ್ ನಿಲ್ದಾಣದ ಪಕ್ಕದಲ್ಲೇ ಹಿಂದೆ ಇನ್ನೂರಕ್ಕೂ ಹೆಚ್ಚು ಜಟಕಾ ಬಂಡಿಗಳು ಸಾಲುಗಟ್ಟಿ ನಿಂತಿರುತ್ತಿದ್ದವು ಎಂದು 50ವರ್ಷಗಳಿಂದ ಹಾಸನದಲ್ಲಿ ಟಾಂಗಾ ಓಡಿಸುತ್ತಿರುವ ಬಷೀರ್ ಅಹಮದ್ ಸ್ಮರಿಸುತ್ತಾರೆ. ಅಂದು ದಿನಕ್ಕೆ 20ರೂಪಾಯಿ ಬಾಡಿಗೆ ಬಂದರೆ ಜೀವನ ನಡೆಸಬಹುದಾಗಿತ್ತು. ಇಂದು 200 ರೂಪಾಯಿ ಇದ್ದರೂ ಸಾಕಾಗುತ್ತಿಲ್ಲ. ಹಾಗೋ ಹೀಗೋ ಒಂದಿಷ್ಟು ಕಮಾಯಿ ಆಗುತ್ತಿದೆ. ಜೀವನ ಸಾಗುತ್ತಿದೆ. ಮುಂದೇನು ಎಂಬುದು ಗೊತ್ತಿಲ್ಲ ಅಂತಾರೆ. ಸಾಮಾನು ಸರಂಜಾಮು ಸಾಗಾಟಕ್ಕೂ ಆಟೋಗಳು ಬಂದಿವೆ. ಅದು ಸ್ವಲ್ಪ ದುಬಾರಿಯಾಗುತ್ತದೆ ಎಂಬ ಕಾರಣಕ್ಕೆ ಕೆಲವರು ಜಟಕಾ ಗಾಡಿಗಳಲ್ಲಿ ಕಬ್ಬಿಣ ಮತ್ತಿತರ ವಸ್ತುಗಳನ್ನು ಸಾಗಿಸುತ್ತಾರೆ. ಇದರಲ್ಲಿ ವ್ಯಾಪಾರಿಗಳು ಇನ್ನೊಂದು ಲಾಭವನ್ನೂ ಕಾಣುತ್ತಾರೆ. ಆಟೋ ಚಾಲಕರು ಕಬ್ಬಿಣವನ್ನು ಎತ್ತಿ ಲೋಡ್ ಮಾಡುವುದಿಲ್ಲ. ನಾವಾದರೆ ಆ ಕೆಲಸ ವನ್ನೂ ಮಾಡುತ್ತೇವೆ. ಇದರಿಂದಾಗಿ ಜಟಕಾ ಬಂಡಿ ಗಳಿಗೆ ಈಗಲೂ ಸ್ವಲ್ಪ ಬೇಡಿಕೆ ಉಳಿದು ಕೊಂಡಿದೆ ಎಂದು ನಿಸಾರ್ ಅಹಮದ್ ನುಡಿಯುತ್ತಾರೆ. ಜಟಕಾ ಓಡಿಸುವುದರಿಂದಲೇ ಜೀವನ ಸಾಗುವುದಿಲ್ಲ ಎಂಬ ಕಾರಣಕ್ಕೆ ನಿಸಾರ್ ಅಹಮದ್ ಇದೇ ಸ್ಟ್ಯಾಂಡ್‌ನಲ್ಲಿ ಗಾಡಿಗಳ ರಿಪೇರಿ ಕೆಲಸವನ್ನೂ ಮಾಡುತ್ತಾರೆ. ಹಿಂದೆ ಇನ್ನೂರು ಜಟಕಾ ಗಾಡಿಗಳಿದ್ದವು. ಈಗ ಅವು 80ರ ಆಸುಪಾಸಿನಲ್ಲಿದೆ. ಎಲ್ಲವೂ ಜಟಕಾ ಗಾಡಿ ಸ್ಟ್ಯಾಂಡ್‌ಗೆ ಬರುವುದಿಲ್ಲ. ಹಿಂದೆ ಜಟಕಾ ಬಂಡಿಗಳು ನಿಂತಿರುತ್ತಿದ್ದ ಜಾಗವನ್ನು ಒಂದೊಂದಾಗಿಯೇ ಆಟೋಗಳು ಆಕ್ರಮಿಸಿ ಕೊಂಡಾಗ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಯವರೇ ಬಸ್‌ನಿಲ್ದಾಣದ ಪಕ್ಕದಲ್ಲಿ (ಹೇಮಾವತಿ ಪ್ರತಿಮೆ ಮುಂದೆ) ಜಟಕಾ ಗಾಡಿ ಸ್ಟ್ಯಾಂಡ್‌ಗೆ ಜಾಗ ನೀಡಿದ್ದರು. ಬಳಿಕ ಸ್ಥಳಿಯ ಜನಪ್ರತಿನಿಧಿಗಳು ಅದಕ್ಕೆ ಸೂರು ಒದಗಿಸಿದರು. ಅದನ್ನು ಬಿಟ್ಟರೆ ನಮ್ಮತ್ತ ಯಾರೂ ಗಮನಕೊಟ್ಟಿಲ್ಲ. ಕುದುರೆಗಳಿಗೆ ನೀರು ಕುಡಿಸಲು ಒಂದು ಟ್ಯಾಂಕ್ ಹಾಗೂ ನಳ್ಳಿಯ ವ್ಯವಸ್ಥೆ ಮಾಡಿದ್ದರು. ಆದರೆ ನೀರಿನ ಸಂಪರ್ಕ ಕಡಿತ ಮಾಡಿ ವರ್ಷಗಳೇ ಸಂದಿವೆ. ನೀರು ಕುಡಿಸಬೇಕು ಎಂದಾಗ ಮಹಾರಾಜಾ ಪಾರ್ಕ್ ಒಳಗಿಂತ ತಂದು ಕುಡಿಸು ತ್ತೇವೆಂದು ಜಟಕಾ ಗಾಡಿಯವರು ನುಡಿಯುತ್ತಾರೆ.  ಮೈಸೂರಿನಲ್ಲಿ ಈಗಲೂ ಅಲ್ಲೊಂದು ಇಲ್ಲೊಂದು ಜಟಕಾ ಬಂಡಿ ಓಡುತ್ತಿವೆ. ಇಲ್ಲೂ ಅಂಥ ಪ್ರಯುತ್ನ ಮಾಡಬಹುದಲ್ಲ ಎಂದು ಕೇಳಿದರೆ ನಗುತ್ತಲೇ `ಈಗ ಜಟಕಾ ಗಾಡಿಯಲ್ಲಿ ಯಾರು ಬರುತ್ತಾರೆ ಸ್ವಾಮಿ ? ಅಂತ ಮರು ಪ್ರಶ್ನೆ ಹಾಕುತ್ತಾರೆ. ಆದರೆ ಈಗಲೂ ಈ ವೃತ್ತಿಯನ್ನೇ ನಂಬಿರುವ ಅನೇಕ ಮಂದಿ ಹಾಸನ ದಲ್ಲಿದ್ದಾರೆ. ದಿನಕ್ಕೆ 150 ರಿಂದ 200 ರೂಪಾಯಿ ದುಡಿಮೆಯಾಗುತ್ತದೆ. ಅದರಲ್ಲಿ ನೂರು ರೂಪಾಯಿ ಕುದುರೆ ಸಾಕಲು ಬೇಕು. ಉಳಿದ ಐವತ್ತೋ ನೂರೋ ರೂಪಾಯಿಯನ್ನು ನೆಚ್ಚಿಕೊಂಡು ಬದುಕುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.