ಸೋಮವಾರ, ಮೇ 23, 2022
24 °C

ಜನಗಣತಿಗೆ ಸಹಕರಿಸಲು ಜಿಲ್ಲಾಡಳಿತ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಫೆ.9ರಂದು ಶುರುವಾಗಲಿರುವ ಎರಡನೇ ಹಂತದ ಜನಗಣತಿಗೆ ಸಾರ್ವಜನಿಕರು ಸಹರಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ಬಾಬಣ್ಣ ಮನವಿ ಮಾಡಿದ್ದಾರೆ.ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಗಣತಿ ಕುರಿತು ಮಾಹಿತಿ ನೀಡಿದ ಅವರು, 9ರಿಂದ 27ರವರೆಗೆ ಜನಗಣತಿ ನಡೆಯಲಿದ. ಫೆ.28ರಂದು  ರಾತ್ರಿ ವಸತಿ ರಹಿತ ಅಲೆಮಾರಿ ಜನಾಂಗದವರ ಗಣತಿ ಹಾಗೂ ಮಾ.1ರಿಂದ 5ರವರೆಗೆ ಜನನ ಮತ್ತು ಮರಣಗಳ ಮಾಹಿತಿ ಸಂಗ್ರಹಣೆ ಕುರಿತಂತೆ ಪುನರ್ ಪರಿಶೀಲನೆ ಕಾರ್ಯ ನಡೆಯಲಿದೆ. ಗಣತಿದಾರರು ಮನೆ ಬಾಗಿಲಿಗೆ ಬಂದಾಗ ಮುಕ್ತ ಮಾಹಿತಿ ನೀಡುವ ಮೂಲಕ ಜನಗಣತಿಗೆ ಸಹಕರಿಸಬೇಕು ಎಂದರು.ಪ್ರಸಕ್ತ ಜನಗಣತಿಯಲ್ಲಿ ಅಂಗವಿಕಲರು ಹಾಗೂ ಮಹಿಳೆಯರ ಗಣತಿಗೆ ಆದ್ಯತೆ ನೀಡಲಾಗಿದೆ. ಅಂಗವಿಕಲರ ಹಾಗೂ ಮಹಿಳೆಯರ ಕ್ಷೇಮಾಭಿವೃದ್ಧಿ ಯೋಜನೆಗಳನ್ನು ರೂಪಿಸುವಲ್ಲಿ ಈ ಗಣತಿ ಪ್ರಮುಖ ಪಾತ್ರ ವಹಿಸಲಿದೆ. ಜಿಲ್ಲೆಯಲ್ಲಿ 16 ಜನಗಣತಿ ಚಾರ್ಜ್‌ಗಳಿದ್ದು, ಒಟ್ಟು 3664 ಜನಗಣತಿ ಬ್ಲಾಕ್‌ಗಳನ್ನು ವಿಂಗಡಿಸಲಾಗಿದೆ.  2503 ಗಣತಿದಾರರು ಹಾಗೂ 407 ಮೇಲ್ವಿಚಾರಕರನ್ನು ಈಗಾಗಲೇ ನೇಮಿಸಿ ತರಬೇತಿ ನೀಡಲಾಗಿದೆ ಎಂದರು.ಜನಗಣತಿ ಕಾರ್ಯದ ನಿಯಮಿತ ಪರಿಶೀಲನೆ ಮಾಡಿ ಯಶಸ್ವಿ ಗೊಳಿಸುವ ನಿಟ್ಟಿನಲ್ಲಿ ಗಣತಿದಾರರು ಮತ್ತು ಮೇಲ್ವಿಚಾರಕರ ಪರಿಶೀಲನೆಗಾಗಿ ತಾಲ್ಲೂಕುವಾರು, ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಮತ್ತು ಹೋಬಳಿವಾರು ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ ಎಂದರು.9ರಂದು ಜಿಲ್ಲೆಯ ಎಲ್ಲಾ ಜನಗಣತಿ ಚಾರ್ಜ್ ಕಚೇರಿಗಳ ಆಯಾ ಬ್ಲಾಕ್‌ಗಳಲ್ಲಿ ಗಣ್ಯಾತಿಗಣ್ಯರು/ಪ್ರಮುಖರು/ಮುಖಂಡರ ಮನೆಯವರ ಗಣತಿ ಮಾಡುವ ಮೂಲಕ ಜನಗಣತಿ ಶುರು ಮಾಡಲಾಗುವುದು ಎಂದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಪಂಚಾಯತ್ ರಾಜ್ ಹಾಗೂ ಶಿಕ್ಷಣ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿರುವ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ಜನಗಣತಿ ಬ್ಲಾಕ್‌ಗಳಲ್ಲಿ ಗಣತಿದಾರರಿಗೆ ಮತ್ತು ಮೇಲ್ವಿಚಾರಕರಿಗೆ ಸೂಕ್ತ ಸಹಕಾರ ನೀಡಿ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಲು ಸಹಕರಿಸಬೇಕು ಎಂದು ಸರ್ಕಾರವು ಈಗಾಗಲೇ ಸುತ್ತೋಲೆ ಹೊರಡಿಸಿದೆ ಎಂದರು.ಅರ್ಧ ದಿನ ರಜೆ: ಗಣತಿ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿಗೆ  ಫೆ7ರಿಂದ ಮಾ.8ರವರೆಗೆ ಶೈಕ್ಷಣಿಕ ಚಟುವಟಿಕೆಗಳಿಗೆ ಧಕ್ಕೆಯಾಗದಂತೆ ಅನುಕೂಲವಾಗುವ ರೀತಿಯಲ್ಲಿ ಅರ್ಧ ದಿನ ಶಾಲೆ ಬಿಟ್ಟು ಗಣತಿ ಕಾರ್ಯ ನಿರ್ವಹಿಸಲು ಅರ್ಧ ದಿನ ರಜೆ ಮಂಜೂರು ಮಾಡಿ ಆದೇಶಿಸಲಾಗಿದೆ ಎಂದು ತಿಳಿಸಿದರು.ಜಿಲ್ಲೆಯ ಜಿ.ಪಂ. ಅಧ್ಯಕ್ಷರು, ನಗರಸಭಾ ಅಧ್ಯಕ್ಷರು, ತಾ.ಪಂ. ಅಧ್ಯಕ್ಷರು ಹಾಗೂ ಗ್ರಾ.ಪಂ. ಅಧ್ಯಕ್ಷರಿಗೆ ಜನಗಣತಿ ಕಾರ್ಯದಲ್ಲಿ ಸಂಪೂರ್ಣ ಸಹಕಾರ ಕೋರಿ ಅರೆ ಸರ್ಕಾರಿ ಪತ್ರವನ್ನು ಜಿಲ್ಲಾಡಳಿತದಿಂದ ಬರೆಯಲಾಗಿದೆ.  ಜಿಲ್ಲೆಯ ಸ್ವಯಂ ಸೇವಾ ಸಂಸ್ಥೆಗಳು ಸ್ಥಳೀಯ ಮುಖಂಡರು ಈ ಕಾರ್ಯಕ್ರಮಕ್ಕೆ ಸೂಕ್ತ ಸಹಕಾರ ನೀಡಬೇಕು ಎಂದು ಕೋರಿದರು. ಜನಗಣತಿ ಚಾರ್ಜ್ ಕಚೇರಿಗಳಲ್ಲಿ ಸಹಾಯವಾಣಿ ಸ್ಥಾಪಿಸಲಾಗಿದೆ. ಗಣತಿ ಸಂಬಂಧಿತ ಕುಂದುಕೊರತೆಗಳ ವಿವರಣೆಗಾಗಿ ಸಹಾಯವಾಣಿಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಶಾಂತಪ್ಪ ಉಪಸ್ಥಿತರಿದ್ದರು.ಸಹಾಯವಾಣಿ ಸಂಪರ್ಕಿಸಿ

ಜಿಲ್ಲಾಧಿಕಾರಿಗಳ ಕಾರ್ಯಾಲಯ 08152-222368,

ತಹಶೀಲ್ದಾರ್ ಕಾರ್ಯಾಲಯ, ಕೋಲಾರ 08152-222056,

ತಹಶೀಲ್ದಾರ್ ಕಾರ್ಯಾಲಯ ಬಂಗಾರಪೇಟೆ 08153-255263,

ತಹಶೀಲ್ದಾರ್ ಮಾಲೂರು 08151-232699,

ತಹಶೀಲ್ದಾರ್ ಮುಳಬಾಗಲು 08159-242049,

ತಹಶೀಲ್ದಾರ್ ಶ್ರೀನಿವಾಸಪುರ 08157-246222 

ನಗರಸಭೆ, ಕೋಲಾರ 08152-220001,

ನಗರಸಭೆ ಕೆಜಿಎಫ್ 08153-260252,

ಪುರಸಭೆ ಕಾರ್ಯಾಲಯ  ಬಂಗಾರಪೇಟೆ 08153-253222,

ಪುರಸಭೆ ಮಾಲೂರು 08151-232840,

ಪುರಸಭೆ ಮುಳಬಾಗಲು 08159-243844,

ಪುರಸಭೆ ಶ್ರೀನಿವಾಸಪುರ 08157-245160

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.