ಗುರುವಾರ , ಮೇ 26, 2022
31 °C

ಜನಪದ ಜೀವನ ಗೋಷ್ಠಿಯ ಮೋಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವಕಲ್ಯಾಣ: ಬೆಳಿಗ್ಗೆ ಸೂರ್ಯ ಮೂಡುವ ಸಂದರ್ಭದಲ್ಲಿ ಎಂದಿಲ್ಲದಂತೆ ಬಾನಲ್ಲಿ ಕಪ್ಪು ಮೋಡ ಆವರಿಸಿ ತಂಗಾಳಿ ಬೀಸುತ್ತಿತ್ತು. ಚಳಿ ಆಗುತ್ತಿದ್ದರಿಂದ ಜನರು ತಲೆಗೆ ಮಪಲರ್ ಕಟ್ಟಿಕೊಂಡು, ಶಾಲು ಹೊದ್ದುಕೊಂಡು ಶಿಸ್ತಿನಿಂದ ಕುಳಿತಿದ್ದರು. ಅತಿಥಿಗಳು ಬೀಸುವ ಪದ, ಹಂತಿ ಹಾಡು, ಒಗಟು, ಜೋಗುಳ, ತ್ರಿಪದಿ, ಚುಟುಕು ಹೇಳಿ ನಕ್ಕು ನಗಿಸಿ ಮೈ ಚಳಿ ಹೋಗುವಂತೆ ಮಾಡಿದರು.

ವಿಜಾಪುರ ಜ್ಞಾನ ಯೋಗಾಶ್ರಮದ  ಸಿದ್ಧೇಶ್ವರ ಸ್ವಾಮಿಯವರ ಪ್ರವಚನದ ಅಂಗವಾಗಿ ಇಲ್ಲಿನ ಅಕ್ಕಮಹಾದೇವಿ ಕಾಲೇಜು ಮೈದಾನದಲ್ಲಿ ಸೋಮವಾರ ಹಮ್ಮಿಕೊಂಡ ‘ಜನಪದ ಜೀವನ’ ವಿಚಾರಗೋಷ್ಠಿಯಲ್ಲಿ ಕಂಡು ಬಂದ ದೃಶ್ಯ ಇದು.ಗಂಡ ಮತ್ತು ಹೆಂಡತಿಯ ಹೆಸರು ಹೇಳುವ ಪರಿ, ಹಿಂದಿನ ಮತ್ತು ಇಂದಿನ ಕಾಲದ ಜೀವನ ಪದ್ಧತಿಯಲ್ಲಾದ ಬದಲಾವಣೆ ಬಗ್ಗೆ ನಗೆ ಚಟಾಕಿ ಹಾರಿಸಿದ್ದರಿಂದ ಪ್ರೇಕ್ಷಕರು ಬಿದ್ದು ಬಿದ್ದು ನಕ್ಕರು. ವಿಶೇಷ ಉಪನ್ಯಾಸ ನೀಡಿದ ವಿಜಾಪುರದ ಪ್ರೊ.ಎಂ.ಎನ್.ವಾಲಿ ಮಾತನಾಡಿ ಜಾನಪದ ಹಾಡಿನ ಮೂಲಕ ಗ್ರಾಮಸ್ಥರು ಸಂಸ್ಕೃತಿಯನ್ನು ಜೀವಂತವಾಗಿಟ್ಟಿದ್ದಾರೆ. ಕೆಲಸ ಮಾಡುವವರಲ್ಲಿನ ಆಯಾಸ ಹೋಗಲಾಡಿಸಿ ಹಿಗ್ಗು, ಉತ್ಸಾಹ ಮೂಡಿಸಲು ಪದ ಹಾಡುತ್ತಿದ್ದರು ಎಂದರು.ಸೊನ್ನ ದಾಸೋಹ ಮಠದ ಶಿವಾನಂದ ಸ್ವಾಮಿ ಮಾತನಾಡಿ ಜನಪದರು ಬೆಳಿಗ್ಗೆಯೇ ಎಲ್ಲ ಕೆಲಸಗಳನ್ನು ಮಾಡುತ್ತಿದ್ದರು. ಇದು ಬ್ರಾಹ್ಮಿ ಮೂಹೂರ್ತ ಆಗಿರುತ್ತದೆ. ಈ ಸಮಯದಲ್ಲಿ ಸರಸ್ವತಿ ಮತ್ತು ಲಕ್ಷ್ಮಿ ಒಲಿಯುತ್ತಾಳೆ ಎಂಬ ಭಾವನೆ ಜನರಲ್ಲಿತ್ತು ಎಂದು ಹೇಳಿದರು. ಮುಚಳಂಬ ಪ್ರಣವಾನಂದ ಸ್ವಾಮಿ ಮಾತನಾಡಿ ಹಾಡುಗಳ ಮೂಲಕ ಗ್ರಾಮೀಣ ಜನರು ಅದ್ಭುತ ಸಂದೇಶ ಕೊಟ್ಟಿದ್ದಾರೆ. ತಪ್ಪು ದಾರಿಗೆ ಹೋಗದಂತೆ ಎಚ್ಚರಿಸಿದ್ದಾರೆ ಎಂದರು.ಸಿದ್ಧೇಶ್ವರ ಸ್ವಾಮಿ ನೇತೃತ್ವ ವಹಿಸಿದ್ದರು. ತಿಕೋಟಾ ಚನ್ನಮಲ್ಲಿಕಾರ್ಜುನ ಸ್ವಾಮಿ ಮಾತನಾಡಿದರು. ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಅನಿಲಕುಮಾರ ರಗಟೆ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ರಾಜಕುಮಾರ ನಿಡೋದೆ ಜಾನಪದಗೀತೆ ಹಾಡಿದರು. ಮುಚಳಂಬ ಪರಮಾನಂದ ಸ್ವಾಮಿ ಸ್ವಾಗತಿಸಿದರು.

ವಿಶ್ವನಾಥ ಮುಕ್ತಾ ನಿರೂಪಿಸಿದರು. ಭೀಮಾಶಂಕರ ಬಿರಾದಾರ ವಂದಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.