ಗುರುವಾರ , ಜೂನ್ 24, 2021
29 °C

ಜನಪ್ರಿಯವಾಗುತ್ತಿದೆ ಯೋಗ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈಕೆ ಕೆಲ್ಸಿಯಾ ಬಂಗೋರಾ. ವಯಸ್ಸು 23. ಅಮೆರಿಕದ ನ್ಯೂಯಾರ್ಕ್‌ನ 2011ನೇ ವರ್ಷದ ಯೋಗಾಸನ ಸ್ಪರ್ಧೆ ಚಾಂಪಿಯನ್. ಸಾಮಾನ್ಯವಾಗಿ ಯಾರಾದರೂ ಸಿಕ್ಕಾಗ ಈಕೆಗೆ ಎದುರಾಗುವ ಮೊದಲ ಪ್ರಶ್ನೆಯೆಂದರೆ `ಯೋಗ ಚಾಂಪಿಯನ್? ಏನದು?~ ಎಂದು. `ಹೌದು. ಅದು ಒಂದು ರೀತಿಯಲ್ಲಿ ನೃತ್ಯ ಅಥವಾ ಕ್ರೀಡೆಯ ಜಿಮ್ನಾಸ್ಟಿಕ್ ಭಂಗಿಯನ್ನು ಸ್ವಲ್ಪ ಹೋಲುತ್ತದೆ~ ಎಂಬುದು ಈಕೆಯ ಉತ್ತರ.`ಓ ಹಾಗಿದ್ದರೆ ನೀನು ನಿನ್ನ ಕಾಲನ್ನು ತಲೆಗೆ ಮುಟ್ಟಿಸಬಲ್ಲೆಯಾ?~ ಎಂಬ ಪ್ರಶ್ನೆ ಬರುತ್ತದೆ. `ಹೌದು. ಖಂಡಿತವಾಗಿ~ ಎಂದು ಆಕೆ ಉತ್ತರಿಸಿದರೂ ಈ ಆಸನವನ್ನು ಪ್ರದರ್ಶಿಸಲು ಹೋಗುವುದಿಲ್ಲ. `ಹಾಗೆ ಕೇಳಿದವರಿಗೆಲ್ಲ ಪ್ರದರ್ಶಿಸುವುದು ನನಗೆ ಇಷ್ಟವಿಲ್ಲ. ಅಲ್ಲದೆ ನನ್ನ ಎಷ್ಟೋ ವಿದ್ಯಾರ್ಥಿಗಳಿಗೆ ನಾನು ಯೋಗ ಸ್ಪರ್ಧೆ ವಿಜೇತೆ ಎಂಬುದೂ ಗೊತ್ತಿಲ್ಲ~ ಎಂಬುದು ಈಕೆಯ ವಿವರಣೆ.ಅಷ್ಟಕ್ಕೂ ಈಕೆ ಸ್ಪರ್ಧೆಯಲ್ಲಿ ಗೆದ್ದದ್ದು ಈಚೆಗೆ ಒಂದು ಶುಕ್ರವಾರದಿಂದ ಭಾನುವಾರ ತನಕ ಮ್ಯಾನ್‌ಹಟನ್‌ನ ಹಡ್ಸನ್ ಸಭಾಂಗಣದಲ್ಲಿ `ಯುಎಸ್‌ಎ ಯೋಗ ಫೆಡರೇಷನ್~ ನಡೆಸಿದ 9ನೇ ನ್ಯೂಯಾರ್ಕ್ ಪ್ರಾದೇಶಿಕ ಮತ್ತು ರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್‌ನಲ್ಲಿ.ಅಲ್ಲಿ ಐವರು ತೀರ್ಪುಗಾರರ ಎದುರು ಸ್ಪರ್ಧಿಗಳು ಯೋಗದ ಐದು ನಿರ್ದಿಷ್ಟ ಆಸನಗಳನ್ನು ಮತ್ತು ತಮ್ಮಿಷ್ಟದ ಎರಡು ಆಸನಗಳನ್ನು ಪ್ರದರ್ಶಿಸಬೇಕಿತ್ತು. 11 ರಿಂದ 17 ವರ್ಷದ ವಿಭಾಗದಲ್ಲಿ ಮಾತ್ರ 6 ಆಸನ ಪ್ರದರ್ಶಿಸುವ ಸ್ಪರ್ಧೆಯಿತ್ತು. ಪುರುಷ, ಮಹಿಳೆ ಮತ್ತು ಯುವ ವಿಭಾಗದಲ್ಲಿ ಮೊದಲ ಎರಡು ಸ್ಥಾನ ಗಳಿಸಿದವರಿಗೆ ಜೂನ್‌ನಲ್ಲಿ ಲಾಸ್ ಏಂಜೆಲ್ಸ್‌ನಲ್ಲಿ ನಡೆಯುವ ಅಂತರರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸುವ ಅರ್ಹತೆ ದೊರೆತಿದೆ. ಅಲ್ಲಿ ಗೆದ್ದರೆ ಪ್ರತಿಷ್ಠಿತ ವಿಷ್ಣುಚರಣ ಘೋಷ್ ಪದಕ ತಮ್ಮದಾಗಿಸಿಕೊಳ್ಳಬಹುದು.ಸಂಸ್ಕೃತದಲ್ಲಿ ಯೋಗ ಎಂದರೆ `ಜೋಡಿಸುವುದು, ಬೆಸೆಯುವುದು~. ದೇಹ ಮತ್ತು ಮನಸ್ಸು, ಉಸಿರಾಟ ಮತ್ತು ಚಲನೆ, ಒಳಗೆ ಮತ್ತು ಹೊರಗೆ ಹೀಗೆ. ಸಹಸ್ರಾರು ವರ್ಷಗಳ ಹಿಂದೆ ಯೋಗ ಸೂತ್ರ ರಚಿಸಿದ ಪತಂಜಲಿಯ ಪ್ರಕಾರ, ಮನೋ ವಿಕಾರಗಳನ್ನು ನಿಯಂತ್ರಿಸಿ ದೇಹಸ್ವಾಸ್ಥ್ಯ ರಕ್ಷಿಸುವ ಕೆಲಸವನ್ನು ಯೋಗ ಮಾಡುತ್ತದೆ. ಕಾಲಾಂತರದಲ್ಲಿ ಯೋಗದಲ್ಲಿ ಅನೇಕ ಉಪಶಾಖೆಗಳು ಬೆಳೆದುಬಂದವು. 15ನೇ ಶತಮಾನದಲ್ಲಿ ಪ್ರಚಲಿತಕ್ಕೆ ಬಂದ `ಹಠಯೋಗ~ ದೈಹಿಕ ಕಸರತ್ತುಗಳನ್ನು ಕೇಂದ್ರೀಕರಿಸಿದೆ. ಬಹುತೇಕ ಅಮೆರಿಕನ್ನರಿಗೆ ಪರಿಚಿತವಾಗಿದ್ದು ಇದು.ಕೆಲ ಸ್ಪರ್ಧಿಗಳು ಯೋಗದ ದೈಹಿಕ ಆಸನಗಳನ್ನು `ಸಂಚಾರಿ ಧ್ಯಾನ~ ಎಂದು ವ್ಯಾಖ್ಯಾನಿಸುತ್ತಾರೆ. ತಮ್ಮ ತರಬೇತಿ, ಸಾಮರ್ಥ್ಯವನ್ನು ಇದು ಸಾಣೆ ಹಿಡಿಯುತ್ತದೆ ಎಂದು ಭಾವಿಸುತ್ತಾರೆ. `ಇಂಥ ಆಸನಗಳ ಮೂಲಕ ನಾನು ಸಂಯಮ, ಮನೋ ನಿಗ್ರಹ ಕಲಿತೆ~ ಎನ್ನುತ್ತಾರೆ ಬಂಗೋರಾ. ಆದರೆ ತೀರ್ಪುಗಾರರ ಎದುರು ಪ್ರದರ್ಶಿಸುವ ಯೋಗಾಸನ ಮನಸ್ಸಿಗೆ ಆನಂದ, ಸಮಾಧಾನ ತಂದು ಕೊಡುತ್ತದೆ ಎನ್ನುವುದೇ ಒಂದು ಸೋಜಿಗ.

ಕಳೆದ ಸಲದ ಸ್ಪರ್ಧೆಯಲ್ಲಿ ತನ್ನ ಪ್ರದರ್ಶನ ತೃಪ್ತಿಕರವಾಗಿಲ್ಲ, ತಾನು ಗೆಲ್ಲುವುದಿಲ್ಲ ಎಂದು ಬಂಗೋರಾ ಅತ್ತಿದ್ದರಂತೆ. ಆದರೆ ಕೊನೆಗೆ ಗೆದ್ದದ್ದು ಅವರೇ. `ವೇದಿಕೆ ಮೇಲೆ ಪ್ರದರ್ಶನ ನೀಡುವ ಪ್ರತಿಯೊಬ್ಬರಿಗೂ ಅಳುಕು ಇದ್ದೇ ಇರುತ್ತದೆ~ ಎಂದು ಆಕೆ ಹುಸಿನಗು ಬೀರುತ್ತ ಹೇಳುತ್ತಾರೆ. ಆಕೆ ಪ್ರದರ್ಶಿಸಿದ ದೇಹ ಬಳುಕಾಟದ ಯೋಗ (ವಿಶ್ವದೆಲ್ಲೆಡೆಯ ಜಿಮ್ನಾಸ್ಟಿಕ್ ಕ್ರೀಡಾಪಟುಗಳ ಪ್ರದರ್ಶನವನ್ನು ಇದು ಹೋಲುತ್ತದೆ) ವೀಕ್ಷಕರನ್ನು ಮಂತ್ರಮುಗ್ಧಗೊಳಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಇದು ಹೇಗೆ ಸಾಧ್ಯ ಎಂಬ ಅಚ್ಚರಿ ಮೂಡಿಸುತ್ತದೆ.ಆದರೆ ಇಂಥ ಸ್ಪರ್ಧೆಗಳನ್ನು ಮೆಚ್ಚದೇ ಇರುವವರೂ ಇದ್ದಾರೆ. `ಸ್ಪರ್ಧಾ ಮನೋಭಾವದ ಹಸಿವನ್ನು ಹಿಂಗಿಸಲು ಜಗತ್ತಿನಲ್ಲಿ ಬೇರೆ ಏನೂ ಇಲ್ಲವೇನು? ಅದಕ್ಕೆ ಯೋಗವೇ ಬೇಕಾ?~ ಎಂದು ಖಾರವಾಗಿ ಪ್ರಶ್ನಿಸುತ್ತಾರೆ ಬ್ರೂಕ್‌ಲಿನ್‌ನ ಹೋಲಿಸ್ಟಿಕ್ ಯೋಗಾ ಸ್ಟುಡಿಯೊದ ಹಿರಿಯ ಯೋಗ ಗುರು ಲೀ ಇವಾನ್ಸ್. `ದೇಹವನ್ನು ನಮ್ಮಿಷ್ಟದಂತೆ ಬಾಗಿಸುವ ಯೋಗಾಸನಗಳನ್ನು  ನಮ್ಮ ಅಂತರ್ ಪ್ರಜ್ಞೆ, ಅರಿವು ವಿಸ್ತಾರಕ್ಕೆ ಉಪಯೋಗಿಸಿಕೊಳ್ಳಬೇಕು. ಅದನ್ನು ಬಿಟ್ಟು ಸ್ಪರ್ಧೆ, ಮಾನಸಿಕ ಪೈಪೋಟಿಗೆ ತಕ್ಕಂತೆ ಬದಲಿಸುವುದು ಯೋಗದ ಮೂಲ ಉದ್ದೇಶಕ್ಕೆ ಮಾಡುವ ಅಪಚಾರ, ದುರುಪಯೋಗ~ ಎಂದು ಅವರು ವ್ಯಾಖ್ಯಾನಿಸುತ್ತಾರೆ.ಆದರೆ ಈ ಮಾತನ್ನು `ಯುಎಸ್‌ಎ ಯೋಗ~ ಸಂಸ್ಥೆ ಸ್ಥಾಪಕ ಮತ್ತು ತಮ್ಮದೇ ಆದ ಕೆಲ ಆಸನಗಳನ್ನು ಪ್ರಚಲಿತಗೊಳಿಸಿದ ವಿಕ್ರಂ ಚೌಧರಿ ಅವರ ಪತ್ನಿ ರಾಜಶ್ರೀ ಚೌಧರಿ ಒಪ್ಪುವುದಿಲ್ಲ. `ಸ್ಪರ್ಧೆ ಇಲ್ಲದೇ ಹೋಗಿದ್ದರೆ ನಾನಂತೂ ಯೋಗ ಕಲಿಯುವ ಉಸಾಬರಿಗೇ ಹೋಗುತ್ತಿರಲಿಲ್ಲ~ ಎಂದು ಆಕೆ ಹೇಳುತ್ತಾರೆ.ಬಾಲ್ಯದಲ್ಲಿ ಕೋಲ್ಕತ್ತದಲ್ಲಿ ವಾಸವಿದ್ದಾಗ ಆಕೆಗೆ ಆಟೋಟಗಳಲ್ಲೇ ಜಾಸ್ತಿ ಆಸಕ್ತಿ. ಆದಾಗ್ಯೂ ಆಕೆ ಅಷ್ಟೇನೂ ಇಷ್ಟವಿಲ್ಲದೆ ಯೋಗಾಭ್ಯಾಸ ಕಲಿಕೆ ಪ್ರಾರಂಭಿಸಿದ್ದು ನಾಲ್ಕನೇ ವಯಸ್ಸಿನಲ್ಲಿ. 9ನೇ ವಯಸ್ಸಿನಲ್ಲಿ ಶಾಲೆಯಲ್ಲಿ ನಡೆದ ಯೋಗ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ದೈಹಿಕ ಶಿಕ್ಷಣ ಶಿಕ್ಷಕರು ತಾಕೀತು ಮಾಡಿದಾಗ ಆಕೆಗೆ ಕೋಪ ಬಂದಿತ್ತು. ಅದರಲ್ಲೇನೂ ಅಂಥ ಆಸಕ್ತಿಯೂ ಇರಲಿಲ್ಲ. ಆದರೂ ಆಕೆ ಗೆದ್ದರು. `ಅಲ್ಲಿಂದ ಯೋಗ, ಅದರ ಆಸನಗಳು, ಸಾಧಕರು ದೇಹವನ್ನು ಬೇಕಾದಂತೆ ಬಾಗಿಸುವ ರೀತಿಗಳು ನನ್ನಲ್ಲಿ ಆಸಕ್ತಿ ಕೆರಳಿಸಿದವು. ಯೋಗ ನನಗೂ ಮೆಚ್ಚುಗೆಯಾಯ್ತು~ ಎಂದು ನೆನಪಿಸಿಕೊಳ್ಳುವ ಅವರು ಮುಂದೆ 5 ಸಲ ಅಮೆರಿಕದ ರಾಷ್ಟ್ರೀಯ ಯೋಗ ಚಾಂಪಿಯನ್ ಪಟ್ಟ ಗಳಿಸಿಕೊಂಡರು.ಯೋಗ ಅಮೆರಿಕಕ್ಕೆ ಹೊಸದಾದರೂ ಇತ್ತೀಚಿನ ವರ್ಷಗಳಲ್ಲಿ ಯೋಗಾಸನ ಸ್ಪರ್ಧೆಗಳು ಜನಪ್ರಿಯವಾಗುತ್ತಿವೆ. ಪಾಶ್ಚಾತ್ಯ ದೇಶಗಳಲ್ಲಿ ಯೋಗ ಕೇಂದ್ರಗಳನ್ನು ಪರಿಚಯಿಸಿದವರಲ್ಲಿ ಪ್ರಮುಖರಾದವರು ಪಟ್ಟಾಭಿ ಜೋಯಿಸ. ಅವರ ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ ಕಠಿಣ ಅಭ್ಯಾಸ ಕಡ್ಡಾಯ. ಇದು ಕ್ರೀಡಾಪಟುಗಳ ತಾಲೀಮಿನಷ್ಟೇ ಕಟ್ಟುನಿಟ್ಟಾಗಿರುತ್ತದೆ ಎಂದು ಅವರ ಬಳಿ ಕಲಿತ ಜೀವಮುಕ್ತಿ ಯೋಗ ಶಾಲೆ ಸ್ಥಾಪಕರಾದ ಶರಾನ್ ಗೆನನ್ ಹೇಳುತ್ತಾರೆ.

`ಅವರು ಯಾವ ಆಸನ ಹೇಳುತ್ತಾರೋ ಅದನ್ನು ನೀವು ಜನರ ಸಮ್ಮುಖದಲ್ಲಿ ಮಾಡಿ ತೋರಿಸಬೇಕಾಗುತ್ತದೆ. ನೀವು ಯೋಗ ಶಿಕ್ಷಕರಾಗುವುದಾದರೆ ಸಾಕಷ್ಟು ಕಲಿತಿದ್ದೀರಿ ಎಂಬುದನ್ನು ಸಾಬೀತು ಮಾಡಬೇಕಾಗುತ್ತದೆ. ಇನ್ನು, ಸ್ಪರ್ಧೆಯಲ್ಲಿ ಭಾಗವಹಿಸುವವರು ವಿಕ್ರಂ ಸ್ಟುಡಿಯೊದಲ್ಲಿ 105 ಡಿಗ್ರಿ ಫ್ಯಾರನ್‌ಹೀಟ್‌ನಲ್ಲಿ ವಾರಕ್ಕೆ ಆರು ದಿನ, ದಿನಕ್ಕೆ ನಾಲ್ಕು ತಾಸು ದೇಹ ದಂಡಿಸಿ ಕಲಿಯುತ್ತಾರೆ. ಅವರೆಲ್ಲ ವಾರಾಂತ್ಯದ ವಿಹಾರಿ ಯೋಗಿಗಳಲ್ಲ~ ಎನ್ನುತ್ತಾರೆ.1984ರಲ್ಲಿ ಪತಿ ವಿಕ್ರಂ ಜತೆ ಅಮೆರಿಕಕ್ಕೆ ಬಂದಿಳಿದ ರಾಜಶ್ರಿ, ಆಗಿನಿಂದಲೂ ಯೋಗದ ಸ್ವಾಸ್ಥ್ಯ ಲಾಭಗಳ ಬಗ್ಗೆ ಅಮೆರಿಕನ್ನರಿಗೆ ಅರಿವು ಮೂಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಯೋಗಕ್ಕೂ ಕ್ರೀಡೆಯ ಮಾನ್ಯತೆ ಸಿಗಬೇಕು, ಒಲಿಂಪಿಕ್ಸ್‌ನಲ್ಲೂ ಜಾಗ ಸಿಗಬೇಕು ಎಂಬುದು ಅವರ ಏಕೈಕ ಧ್ಯೇಯ. ಆದರೆ ಇದರ ಬಗ್ಗೆ ಹಾಸ್ಯ ಮಾಡುವವರೂ ಇದ್ದಾರೆ. ಒಲಿಂಪಿಕ್ಸ್‌ನಲ್ಲಿ `ಹಾ ಹೂ~ ಎಂದು ಚೀರುತ್ತ ಸ್ಪರ್ಧಿಗಳನ್ನು ಹುರಿದುಂಬಿಸುವ ಪ್ರೇಕ್ಷಕ ವರ್ಗ  ಒಂದೇ ಕೈ ಮೇಲೆ ಬಿಲ್ಲಿನಾಕಾರದಲ್ಲಿ ಬಾಗಿಸಿ ಇಡೀ ದೇಹದ ಭಾರ ನಿಲ್ಲಿಸುವ ಯೋಗಪಟುಗಳ ಆಸನವನ್ನು ಶಾಂತಚಿತ್ತದಿಂದ ವೀಕ್ಷಿಸುತ್ತದೆ ಎಂದು ನಿರೀಕ್ಷಿಸುವುದು ಹುಚ್ಚುತನದ್ದು ಎನ್ನುವುದು ಇವರ ವಾದ. `ಯಾಕಾಗಬಾರದು?~ ಎಂಬುದು 28ರ ಹರೆಯದ ಝಕ್ ಗೋಲ್ಡ್ ಮುಂದಿಡುವ ಪ್ರಶ್ನೆ. ಈತ ಇದೇ ಮೊದಲ ಸಲ ಪ್ರಾದೇಶಿಕ ಯೋಗಾಸನ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.ಒಲಿಂಪಿಕ್ಸ್‌ಗಾದರೆ...

ಒಲಿಂಪಿಕ್ಸ್‌ನಲ್ಲಿ ಯೋಗಕ್ಕೂ ಸ್ಥಾನ ಸಿಗಬೇಕಾದರೆ ಕನಿಷ್ಠ 75 ದೇಶಗಳ ಜನ ಇದನ್ನು ಅಭ್ಯಾಸ ಮಾಡಿರಬೇಕು ಮತ್ತು ಅಂತರರಾಷ್ಟ್ರೀಯ ಒಲಿಂಪಿಕ್ ಸಂಸ್ಥೆ ಒಪ್ಪಿಗೆ ಕೊಡಬೇಕು. ಆದರೆ ಪ್ರಸ್ತುತ ಕೇವಲ 15 ದೇಶಗಳಲ್ಲಿ ಯೋಗ ಸ್ಪರ್ಧೆಗಳು ನಡೆಯುತ್ತಿವೆ, ಯೋಗದ ಅಧಿಕೃತ ನಿಯಮ ಇನ್ನೂ ರೂಪುಗೊಳ್ಳಬೇಕಿದೆ. ಯೋಗ ಸ್ಪರ್ಧೆಯ ಸೋಲು- ಗೆಲುವಿನ ಕರಾರುವಾಕ್ ಮಾನದಂಡ ಇನ್ನೂ ಇಲ್ಲ ಎಂದು ನೆನಪಿಸುತ್ತಾರೆ ಮಾಜಿ ಜಿಮ್ನಾಷಿಯಂ ಪಟು ಮತ್ತು ಪ್ರಾದೇಶಿಕ ಯೋಗ ಸ್ಪರ್ಧೆ ಚಾಂಪಿಯನ್ 40 ವರ್ಷದ ಕ್ಯೊಕೊ ಕತ್ಸುರಾ. ಯೋಗ ಸ್ಪರ್ಧೆಯ ಗರಿಷ್ಠ 80 ಅಂಕಗಳಲ್ಲಿ ಸ್ಪರ್ಧಿಯ ಭಂಗಿ, ಸಮಯ, ಒಂದೇ ಭಂಗಿಯಲ್ಲಿ ನಿಲ್ಲುವ ಸಾಮರ್ಥ್ಯ ಪರಿಗಣಿಸಲಾಗುತ್ತಿದೆ. ತಪ್ಪು ಮಾಡಿದರೆ ಅಂಕ ಕಳೆದುಕೊಳ್ಳಬೇಕಾಗುತ್ತದೆ.`ಹಿಂದೆಲ್ಲ ತೀರ್ಪುಗಾರರು ಸ್ಪರ್ಧಿಯೊಬ್ಬ ಆಸನವನ್ನು ಪ್ರಾರಂಭಿಸುವ, ಮುಗಿಸುವ ಶೈಲಿಯನ್ನು ಹೆಚ್ಚಾಗಿ ಗಮನಿಸುತ್ತಿದ್ದರು. ಆದರೆ ಈಗಿನವರು ಆಸನಗಳ ಕಲಾತ್ಮಕ ಪ್ರದರ್ಶನಕ್ಕೆ ಒತ್ತು ಕೊಡುತ್ತಿದ್ದಾರೆ~ ಎಂದು ಹೇಳುತ್ತಾರೆ 35ರ ಹರೆಯದ ಜಾನ್ ಶಾಗಿನ್ಸ್. ಈತ ಸೂಕ್ಷ್ಮಾಣು ಜೀವಶಾಸ್ತ್ರ ತಜ್ಞ. ಈ ಸಲದ ಸ್ಪರ್ಧೆಯಲ್ಲಿ  ತನಗೆ 19ಕ್ಕಿಂತ ಮೇಲಿನ ಸ್ಥಾನ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.ಸ್ಪರ್ಧೆಗೆ ಸ್ಪಷ್ಟ ನಿಯಮ ರೂಪಿಸುವ ಕಾರ್ಯದಲ್ಲಿ ಯುಎಸ್‌ಎ ಯೋಗ ತೊಡಗಿಸಿಕೊಂಡಿದೆ. ಒಲಿಂಪಿಕ್ಸ್‌ಗೆ ಸೂಕ್ತವಾದ ನಿಯಮ ಸಿದ್ಧಪಡಿಸಲು ರಾಜಶ್ರಿ ಕಾರ್ಯೋನ್ಮುಖರಾಗಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಯೋಗಾಸನ ಜಿಮ್ನಾಸ್ಟಿಕ್‌ನ ಇನ್ನೊಂದು ಸ್ವರೂಪ ಆಗದಂತೆ ಎಚ್ಚರ ವಹಿಸಬೇಕಿದೆ ಎಂದು ಅವರ ಪತಿ ಕಿವಿಮಾತು ಹೇಳಿದ್ದಾರಂತೆ.ಜಿಮ್ನಾಷಿಯಂ ದೇಹದ ಚುರುಕು ಚಲನೆಗೆ ಸಂಬಂಧಿಸಿದ್ದು. ಆದರೆ ಯೋಗದಲ್ಲಿ ದೇಹ ಅಲುಗಾಡದೆ ಸ್ಥಿರವಾಗಿ ಇರುವಂತೆ ಮಾಡುವುದೇ ಮುಖ್ಯ. ಯೋಗ ಶಿಕ್ಷಕರ ಪ್ರಕಾರ ಪದ್ಮಾಸನ ಧ್ಯಾನವೇ ಇರಲಿ ಅಥವಾ ಶವಾಸನವೇ ಇರಲಿ, ಸಮಾಧಿ ಸ್ಥಿತಿಯನ್ನು ಕಲಿತುಕೊಳ್ಳುವುದು ಪಾಶ್ಚಾತ್ಯ ಯೋಗಾಭ್ಯಾಸಿಗಳಿಗೆ ನಿಜವಾಗಿಯೂ ಸವಾಲು. ಆದರೆ ಸ್ಪರ್ಧೆಯಲ್ಲಿ ಈ ಆಸನಗಳೇ ಮುಖ್ಯ. `ನಿಮ್ಮ ಕಾಲನ್ನು ತಲೆ ಹಿಂದೆ ಹಾಕಲು (ಇದೂ ಒಂದು ಆಸನ) ಸಾಧ್ಯವೇ ಎಂಬುದು ಮುಖ್ಯವಲ್ಲ. ಏಕೆಂದರೆ ಯೋಗ ಎನ್ನುವುದು ಮನಸ್ಸಿನ ಸ್ಥಿತಿ~ ಎನ್ನುತ್ತಾರೆ ಇವಾನ್ಸ್.ಪಾರ್ಟಿಯೊಂದರಲ್ಲಿ ಸ್ನೇಹಿತರನ್ನು ಪ್ರೇರೇಪಿಸಲು ನವಿಲು ಆಸನ ಪ್ರದರ್ಶಿಸಿದ್ದ ಶಾಗಿನ್ಸ್, `ನೀವು ಎಲ್ಲಿ ಪ್ರದರ್ಶಿಸುತ್ತೀರಿ ಎನ್ನುವುದು ಮುಖ್ಯವಲ್ಲ. ನೀವು ಪ್ರದರ್ಶಿಸುವ ಆಸನ ಸರಿಯಾಗಿರಬೇಕು. ಆಗ ಪ್ರಶಾಂತ ಚಿತ್ತ, ಗಾಂಭಿರ್ಯ ತಾನಾಗಿಯೇ ಬರುತ್ತದೆ. ಏಕೆಂದರೆ ಆ ಅರಿವಿನ ಮಟ್ಟವನ್ನು ತಲುಪದೇ ಇರುವ ಜನರಿಗೆ ಯೋಗಾಸನ ದೈಹಿಕ ವ್ಯಾಯಾಮ ಎಂದೇ ಅನಿಸಬಹುದು~ ಎನ್ನುತ್ತಾರೆ.`ಯೋಗ ಪ್ರದರ್ಶನ ವೀಕ್ಷಣೆಯೂ ಪರಿಣಾಮಕಾರಿ ಎಂಬುದು ನನ್ನ ಗುರುವಿನ ಭಾವನೆ~ ಎಂದು ಉದ್ಗರಿಸುತ್ತಾರೆ ಗೆನನ್. `ನಾನು ಒಮ್ಮೆಯೂ ಸ್ಪರ್ಧೆಯಲ್ಲಿ ಪಾಲ್ಗೊಂಡಿಲ್ಲ. ಆದರೆ ಯೂಟ್ಯೂಬ್‌ನಲ್ಲಿ ನೋಡಿದ್ದೇನೆ. ಅದನ್ನು ನೋಡಿದಾಗ ನಾನೆಷ್ಟು ಸಣ್ಣವನು ಎನಿಸಿತು~ ಎನ್ನುವಾಗ ಅವರಲ್ಲಿ ವಿನೀತ ಭಾವ ಹೊರಹೊಮ್ಮುತ್ತದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.