ಭಾನುವಾರ, ಮೇ 9, 2021
20 °C
ಆರೋಗ್ಯ ಸೌಲಭ್ಯ ಬಳಕೆ: ಡಾ. ಆರ್.ಎಸ್.ದೇಶಪಾಂಡೆ ಅನಿಸಿಕೆ

ಜನರಿಗೆ ಸರಿಯಾದ ತಿಳಿವಳಿಕೆ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆರೋಗ್ಯ ಸೌಲಭ್ಯಗಳನ್ನು ಹೇಗೆ, ಯಾವಾಗ ಹಾಗೂ ಯಾವ ರೀತಿ ಬಳಸಿಕೊಳ್ಳಬೇಕು ಎಂಬುದರ ಬಗ್ಗೆ ಕೇವಲ ಗ್ರಾಮೀಣ ಜನರಿಗೆ ಮಾತ್ರವಲ್ಲ ನಗರದ ಜನರಿಗೂ ಸರಿಯಾದ ತಿಳಿವಳಿಕೆ ಇಲ್ಲ ಎಂದು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆಯ ನಿರ್ದೇಶಕ ಡಾ.ಆರ್.ಎಸ್.ದೇಶಪಾಂಡೆ ಅಭಿಪ್ರಾಯಪಟ್ಟರು.ಆರೋಗ್ಯ ನಿರ್ವಹಣಾ ಸಂಶೋಧನಾ ಸಂಸ್ಥೆಯ 2011-2013ನೇ ಸಾಲಿನ ಆಸ್ಪತ್ರೆ ಮತ್ತು ಆರೋಗ್ಯ ನಿರ್ವಹಣಾ ಸ್ನಾತಕೋತ್ತರ ಡಿಪ್ಲೋಮದ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಕ್ಷಯರೋಗ ಸೇರಿದಂತೆ ಹಲವು ಮಾರಕ ರೋಗಗಳ ದುಷ್ಪರಿಣಾಮಗಳ ಬಗ್ಗೆ ಬಹುಪಾಲು ಜನರಿಗೆ ಅರಿವಿಲ್ಲ. ಹೀಗಾಗಿ ಆರೋಗ್ಯದ ಕಾಳಜಿ ಮತ್ತು ವೈದ್ಯರ ಮಾರ್ಗದರ್ಶನ ಆರೋಗ್ಯವನ್ನು ಕಾಪಾಡುಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದರು.ಯಾರು ಯಾವುದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರೂ, ಅದಕ್ಕೆ ಉತ್ತಮವಾದ ನಿರ್ವಹಣೆಯ ಅಗತ್ಯವಿರುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ಉತ್ತಮ ತರಬೇತಿ ಪಡೆದರೆ ಮಾತ್ರ ಅವರ ಭವಿಷ್ಯ ಉಜ್ವಲವಾಗಿರುತ್ತದೆ. ಜೊತೆಗೆ ವಿದ್ಯಾರ್ಥಿಗಳು ಪರೋಪಕಾರಿಯಾಗಿ ಸಮಯಪ್ರಜ್ಞೆಯಿಂದ ಪರಿಪಕ್ವತೆಯಿಂದ ಕೂಡಿದ  ನಿರ್ಧಾರಗಳೊಂದಿಗೆ ಹುರುಪಿನಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಮುಖ್ಯ ಆಡಳಿತಾಧಿಕಾರಿ ಡಾ.ಕೆ.ಎನ್.ಮೂರ್ತಿ ಮಾತನಾಡಿ, ಕಾರ್ಯಕ್ಷೇತ್ರದಲ್ಲಿ ಒಳ್ಳೆಯ ಪ್ರತಿಫಲ ಬೇಕಾದರೆ ಮಾಡುವ ಕೆಲಸದಲ್ಲಿ ನಂಬಿಕೆ ಹಾಗೂ ಒಗ್ಗಟ್ಟಿನಿಂದ ಕೆಲಸ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ದಿನದ ಅಂತ್ಯದಲ್ಲಿ ನಾವು ದೇಶಕ್ಕೆ ಏನು ಕೊಡುಗೆ ಕೊಟ್ಟೆವು ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕು ಎಂದು ಹೇಳಿದರು.ಕುಪ್ಪಂನ ಪಿ.ಇ.ಎಸ್.ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ವೈದ್ಯಕೀಯ ನಿರ್ದೇಶಕ ಡಾ. ಸುರೇಶ್ ಕೃಷ್ಣಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ಒಳ್ಳೆಯ ಪ್ರಜೆಗಳಾಗಿ, ಸಮುದಾಯಕ್ಕೆ ಏನಾದರೂ ಸೇವೆ ಮಾಡುವಂತಿರಬೇಕು. ವೃತ್ತಿ ಜೀವನ ಪ್ರಾರಂಭವಾಗುತ್ತಿದ್ದಂತೆ ಹಣಕ್ಕಾಗಿ ತಮ್ಮ ಆತ್ಮವನ್ನು ಮಾರಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.ದೇಶದ 18 ರಾಜ್ಯಗಳಿಂದ ವಿದ್ಯಾಭ್ಯಾಸಕ್ಕಾಗಿ ಈ ವಿದ್ಯಾ ಸಂಸ್ಥೆಗೆ ಬಂದಿದ್ದ 50 ಮಂದಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ, ಸನ್ಮಾನ ಮಾಡಲಾಯಿತು. ಅವರಲ್ಲಿ ಆರೋಗ್ಯ ನಿರ್ವಹಣಾ ವಿಭಾಗ ಹಾಗೂ ಆಸ್ಪತ್ರೆ ನಿರ್ವಹಣಾ ವಿಭಾಗದಲ್ಲಿ ರ‌್ಯಾಂಕ್ ಪಡೆದ ಡಾ.ದೀಪಶ್ರೀ ಹಾಗೂ ಜಿನಿ ಅಲಿಯಸ್ ಅವರಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.