ಬುಧವಾರ, ಜನವರಿ 22, 2020
28 °C
ನೀರಾವರಿ ಹೋರಾಟ ಸಮಿತಿ ಪದಾಧಿಕಾರಿಗಳ ಆಯ್ಕೆ ಸಭೆ

ಜನವರಿಯಲ್ಲಿ ಜಾಗೃತಿ ಸಮಾವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೊಳಕಾಲ್ಮುರು: ‘ಕುಡಿಯುವ ನೀರು ಬಿಡದಿದ್ದರೆ ಗ್ರಾಮಪಂಚಾಯ್ತಿ ಎದುರು ಪ್ರತಿಭಟನೆ ಮಾಡಿ ನೀರು ಬಿಡಿಸಿಕೊಳ್ಳುತ್ತೇವೆ, ಆದರೆ ಸ್ಥಿತಿ ಹೀಗೇ ಮುಂದುವರಿದಲ್ಲಿ ಎಂತಹ ಪ್ರತಿಭಟನೆ ಮಾಡಿದರೂ ನೀರು ಬಿಡದ ಹಾಗೂ ಸಿಗದ ದಿನಗಳು ದೂರವಿಲ್ಲ. ಇದನ್ನು ಮೊದಲು ಮಹಿಳೆಯರು ಮನಗಾಣಬೇಕಿದೆ.–ಹೀಗೆಂದವರು ತಾಲ್ಲೂಕಿನ ರಾಂಪುರದ ಕೀರ್ತಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷೆ ನಿರ್ಮಲಾ. ಸ್ಥಳೀಯ ಪ್ರವಾಸಿಮಂದಿರ ಆವರಣದಲ್ಲಿ ಭಾನುವಾರ ನಡೆದ ನೀರಾವರಿ ಹೋರಾಟ ಸಮಿತಿ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಅವರು ಮಾತನಾಡಿದರು.

ನೀರು ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ಅಗತ್ಯ. ಇದಕ್ಕಾಗಿಯೇ ಈ ಸಭೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದೇವೆ.ಅಲ್ಲದೇ ಹೋರಾಟಕ್ಕೆ ದೇಣಿಗೆಯಾಗಿ ರೂ 10 ಸಾವಿರ ನೀಡುತ್ತಿದ್ದೇವೆ. ಮುಂದಿನ ಸಭೆಗಳಲ್ಲಿ ಮುಂಚೂಣಿ ಯಲ್ಲಿ ಭಾಗವಹಿಸುತ್ತೇವೆ ಎಂದು ಹೇಳಿದರು.ರೈತ ತಿಪ್ಪೇಸ್ವಾಮಿ ಮಾತನಾಡಿ ಸದ್ಯದ ಪರಿಸ್ಥಿತಿಯಲ್ಲಿ ಕೊಳವೆಬಾವಿ ಕೊರೆಸಿದಾಗ ನೀರು ಬಿದ್ದರೆ ಸಾಕು ‘ಮನೆತನದ ಪುಣ್ಯ’ ಎಂಬ ವಾತಾವರಣವಿದೆ.  ಅದೂ ಸಿಗುವುದು ಹೆಚ್ಚು ಫ್ಲೋರೈಡ್‌ ನೀರು. ಶುದ್ಧ ನೀರಿನ ಘಟಕ ಉಪಯೋಗ ಜನಕ್ಕೆ ಮಾತ್ರ ಸೀಮಿತ. ಜಾನುವಾರುಗಳ ಕೂಗು ಕೇಳುವವರು ಯಾರು ಎಂದು ಪ್ರಶ್ನಿಸಿದರು.ಜಿಲ್ಲಾಪಂಚಾಯ್ತಿ ಸದಸ್ಯ ಎಚ್‌.ಟಿ.ನಾಗರೆಡ್ಡಿ ಮಾತನಾಡಿ, ನೀರು ಹರಿಸಲು ಹೋರಾಟ ತೀವ್ರಗೊಳಿಸುವ ನಿಟ್ಟಿನಲ್ಲಿ ಮುಖ್ಯ ಸಮಿತಿ, ಉಪ ಸಮಿತಿ ಹಾಗೂ ಗ್ರಾಮಸಮಿತಿ ಎಂಬ ಮೂರು ಹಂತದಲ್ಲಿ ರಚಿಸಲಾಗುವುದು. ನಂತರ ಸಮಾಜದ ಎಲ್ಲಾ  ಸಂಘ, ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋರಾಟ ಮಾಡಲಾಗುವುದು. ಶೀಘ್ರವೇ ಕಾಡಾ ಅಧಿಕಾರಿಗಳು ಹಾಗೂ ಪದಾಧಿಕಾರಿಗಳನ್ನು ಸಂಪರ್ಕಿಸಿ ತುಂಗಭದ್ರಾ ಹಿನ್ನೀರು ಲಭ್ಯತೆ ಮಾಹಿತಿ ಪಡೆಯಲಾಗುವುದು ಎಂದು ಹೇಳಿದರು.ಸಮಿತಿ ಸಂಚಾಲಕ ಆರ್‌.ಎಂ.ಅಶೋಕ್‌ ಮಾತನಾಡಿ, ಭದ್ರಾಮೇಲ್ದಂಡೆ ಯೋಜನೆ ‘ಎ’ ಮತ್ತು ‘ಬಿ’ ಸ್ಕೀಂನಲ್ಲಿ ಬಿಟ್ಟು ಹೋಗಿರುವ ಮೊಳಕಾಲ್ಮುರು ತಾಲ್ಲೂಕನ್ನು ಜನತೆ ಹೋರಾಟ ಮಾಡದಿದ್ದಲ್ಲಿ ಸ್ಕೀಂನ ‘ಝೆಡ್‌’ ಹಂತದಲ್ಲಿಯೂ ಸೇರ್ಪಡೆ ಮಾಡುವುದಿಲ್ಲ. ಮುಂದಿನ ಪೀಳಿಗೆ ಹಿತದೃಷ್ಟಿಯಿಂದಾಗಿ ಎಲ್ಲರೂ ಹೋರಾಟಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಶೀಘವೇ ಸಮಿತಿ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಪ್ರಕಟಿಸುವ ಜತೆಗೆ ಜನವರಿ ಆರಂಭದಲ್ಲಿ ಬೃಹತ್ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದರು.ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಶ್ರೀಕಾಂತರೆಡ್ಡಿ, ಸದಸ್ಯರಾದ ಹನುಮಂತಪ್ಪ, ಚಿದಾನಂದ್‌, ಮಾಜಿ ಅಧ್ಯಕ್ಷ ಶಂಕರರೆಡ್ಡಿ, ಬಿ.ಪಿ.ಬಸವರೆಡ್ಡಿ, ವಕೀಲ ವಿ.ಜಿ.ಪರಮೇಶ್ವರಪ್ಪ, ಜಿಂಕಲು ಬಸವರಾಜ್‌, ಅಗರೇಗೌಡ, ಡಿ.ಸಿ.ನಾಗರಾಜ್‌, ರಾಮಕೃಷ್ಣ ಉಪಸ್ಥಿತರಿದ್ದರು.ರೂ 2 ಲಕ್ಷ ಸಂಗ್ರಹ

ಸಭೆಯಲ್ಲಿ ಭಾಗವಹಿಸಿದ್ದ ರೈತರು ಮುಂದಿನ ಹೋರಾಟದ ಖರ್ಚು ವೆಚ್ಚಕ್ಕಾಗಿ ಸ್ಥಳದಲ್ಲೇ ರೂ 2 ಲಕ್ಷಕ್ಕೂ ಹೆಚ್ಚು ದೇಣಿಗೆ ನೀಡುವ ಮೂಲಕ ಗಮನ ಸೆಳೆದರು. ಮುಂದೆ ಎಂತಹ ಸಹಕಾರವಾದರೂ ನೀಡಲು ಸಿದ್ಧ ಎನ್ನುವ ಮೂಲಕ ಹೋರಾಟಕ್ಕೆ ಚುರುಕು ಮುಟ್ಟಿಸಿದರು.

ಪ್ರತಿಕ್ರಿಯಿಸಿ (+)