ಗುರುವಾರ , ಏಪ್ರಿಲ್ 15, 2021
31 °C

ಜನಸಂಖ್ಯೆ ನಿಯಂತ್ರಣ ಅತಿ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಇಂದಿನ ಪರಿಸರ ಮಾಲಿನ್ಯಕ್ಕೆ ಬಹತೇಕ ಹೆಚ್ಚುತ್ತಿರುವ ಜನಸಂಖ್ಯೆಯೇ ಕಾರಣವಾಗಿದೆ~ ಎಂದು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಎ.ಎಸ್. ಸದಾಶಿವಯ್ಯ ಅವರು ಅಭಿಪ್ರಾಯಪಟ್ಟರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಮತ್ತು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಮತ್ತು ಕರ್ನಾಟಕ ಕ್ಯಾನ್ಸರ್ ಸೊಸೈಟಿಯು ಶುಕ್ರವಾರ ಆಯೋಜಿಸಿದ್ದ `ವಿಶ್ವ ಜನಸಂಖ್ಯಾ ದಿನಾಚರಣೆ~ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.`ಇಂದು ವಾಯು ಮಾಲಿನ್ಯ ಉಂಟಾಗಿರುವುದು ಜನಸಂಖ್ಯೆಯ ಪ್ರಮಾಣ ಹೆಚ್ಚಾಗಿರುವುದರಿಂದ. ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಅದನ್ನು ಬಳಸುವವರ ಸಂಖ್ಯೆ ಹೆಚ್ಚಾಗಿದೆ. ಕೈಗಾರಿಕೀಕರಣ ಹೆಚ್ಚಾಗಿದೆ. ನೀರಿನ ಮೂಲಗಳಲ್ಲಿ ಗಣನೀಯ ಪ್ರಮಾಣದ ವ್ಯತ್ಯಾಸ ಕಂಡುಬಂದಿದೆ~ ಎಂದರು.`ಭೂಮಿ ಇರುವಷ್ಟೇ ಇದೆ. ಸಂಪನ್ಮೂಲಗಳಲ್ಲಿ ಹೆಚ್ಚಳವಾಗಿಲ್ಲ. ಆದರೆ, ಅದನ್ನು ಬಳಸುವವರ ಸಂಖ್ಯೆ ಮಾತ್ರ ಹೆಚ್ಚಾಗಿದೆ. ಹಿಂದೆ ನಾನು ಬೆಂಗಳೂರಿನಲ್ಲಿ ಓದುತ್ತಿದ್ದಾಗ ನಗರದ ಜನಸಂಖ್ಯೆ 1 ಲಕ್ಷ ಮಾತ್ರವಿತ್ತು. ಆದರೆ, ಇಂದು ಹೆಚ್ಚಾಗಿದೆ. ಇದರಿಂದ ಜನಸಂಖ್ಯಾ ನಿಯಂತ್ರಣ ನಮ್ಮ ಮೊದಲ ಆದ್ಯತೆಯಾಗಬೇಕು~ ಎಂದು ಹೇಳಿದರು.`ನಮ್ಮ ದೇಶ ವಾಯುಮಾಲಿನ್ಯದಲ್ಲಿ 6ನೇ ಸ್ಥಾನದಲ್ಲಿದೆ. ಪರಿಸರ ರಕ್ಷಣೆ ಮತ್ತು ಜನಸಂಖ್ಯಾ ನಿಯಂತ್ರಣ ಇಂದಿನ ಅವಶ್ಯಕತೆಯಾಗಿದೆ. ಜಗತ್ತಿನಲ್ಲಿ ಅತಿ ಹೆಚ್ಚು ಶಿಕ್ಷಿತ ಯುವ ಜನತೆಯಿರುವ ದೇಶ ನಮ್ಮದಾಗಿದೆ. ಇದನ್ನು ಬಳಕೆ ಮಾಡಬೇಕು~ ಎಂದರು.ಸ್ತ್ರೀರೋಗ ಹಾಗೂ ಲೈಂಗಿಕ ತಜ್ಞರಾದ ಡಾ.ಪದ್ಮಿನಿ ಪ್ರಸಾದ್ ಮಾತನಾಡಿ, `ಜನಸಂಖ್ಯಾ ಸ್ಫೋಟದಿಂದ ರಾಜಕೀಯ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿಯಬೇಕಾಗುತ್ತದೆ. ಜನಸಂಖ್ಯೆ ಸಮಸ್ಯೆಯಾಗುವ ಮೊದಲು ಅದನ್ನು ಪರಿಹರಿಸಿಕೊಳ್ಳಬೇಕು~ ಎಂದು ಹೇಳಿದರು.`ಎಲ್ಲರಿಗೂ ಆರೋಗ್ಯ ಸಂಬಂಧಿ ಸೌಲಭ್ಯಗಳು ದೊರೆಯುವಂತಾಗಬೇಕು. ಸ್ತ್ರೀಯರು ಹೆರಿಗೆ ವೇಳೆಯಲ್ಲಿ ಸಾಯುವುದು ಇಂದು ಸಾಮಾನ್ಯವಾಗಿದೆ. ಇದನ್ನು ತಪ್ಪಿಸುವ ಸಲುವಾಗಿ ಅವರಿಗೆ ಒಳ್ಳೆಯ ಆರೋಗ್ಯ ಸೌಲಭ್ಯ ಮತ್ತು ಆರೋಗ್ಯ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು~ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕರ್ನಾಟರ ರಾಜ್ಯ ಶಾಖೆಯ ಅಧ್ಯಕ್ಷ ಡಾ.ಎಸ್.ಬಿ.ಕುಲಕರ್ಣಿ, ಎಫ್‌ಪಿಎ ಇಂಡಿಯಾ ಬೆಂಗಳೂರು ಶಾಖೆ ಅಧ್ಯಕ್ಷೆ ಮಧುರಾ ಅಶೋಕ್ ಕುಮಾರ್ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.