ಭಾನುವಾರ, ಏಪ್ರಿಲ್ 18, 2021
29 °C

ಜನಾಕರ್ಷಣೆಯ ಎತ್ತಿನಗಾಡಿ ಓಟದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸದುರ್ಗ:  ದೇಶದ ಎಲ್ಲೆಡೆ ವಿಶ್ವಕಪ್ ಕ್ರಿಕೆಟ್ ಜ್ವರ ಏರತ್ತಿದೆ. ಇದಕ್ಕೆ ಅಪವಾದ ಎನ್ನುವಂತೆ ತಾಲ್ಲೂಕಿನ ಕಬ್ಬಿನಕರೆ ಗ್ರಾಮದಲ್ಲಿ ಅಪ್ಪಟ ದೇಸಿ ಕ್ರೀಡಾ ಜ್ವರ ಏರಿತ್ತು.

ಆಸಕ್ತ ಯುವಕರು ಗ್ರಾಮದ ಪ್ರಮುಖರ ಸಹಕಾರದೊಂದಿಗೆ ಭಾನುವಾರ ಆಯೋಜಿಸಿದ್ದ ಎತ್ತಿನ ಗಾಡಿ ಓಟದ ಸ್ಪರ್ಧೆ ವೀಕ್ಷಿಸಲು ಸೇರಿದ್ದ ಜನಸ್ತೋಮ ದೇಸಿ ಕ್ರೀಡೆಗಳ ಬಗ್ಗೆ ಗ್ರಾಮೀಣ ಜನರಲ್ಲಿ ಇನ್ನೂ ಆಸಕ್ತಿ ಇದೆ ಎನ್ನುವುದಕ್ಕೆ ಸಾಕ್ಷಿಯಾಗಿತ್ತು.ಉರಿ ಬಿಸಿಲನ್ನೂ ಲೆಕ್ಕಿಸದೇ ಮಹಿಳೆಯರು, ಮಕ್ಕಳು, ವಯೋವೃದ್ಧರು ಸ್ಪರ್ಧೆ ಆಯೋಜಿಸಿದ್ದ ಸ್ಥಳದಲ್ಲಿ ಸೇರಿ ತಮ್ಮ ಗ್ರಾಮಗಳ ಯುವಕರು ಎತ್ತಿನ ಗಾಡಿ ಓಡಿಸುವುದನ್ನು ವೀಕ್ಷಿಸಿ ಸಂಭ್ರಮಿಸಿದರು. ಬಿಸಿಲ ಝಳವನ್ನು  ತಡೆಯಲು ಸಾಧ್ಯವಾಗದ ಕೆಲವರು ಮರಗಳ ಕೆಳಗೆ ಆಶ್ರಯ ಪಡೆದು ದೂರದಿಂದಲೇ ಸ್ಪರ್ಧೆ ವೀಕ್ಷಿಸಿದರು.ಪ್ರತಿ ವರ್ಷವೂ ಬೇಸಿಗೆಯ ದಿನಗಳಲ್ಲಿ ಗ್ರಾಮದಲ್ಲಿ ಆಯೋಜಿಸಲಾಗುವ ಎತ್ತಿನಗಾಡಿ ಓಟದ ಸ್ಪರ್ಧೆ ಹೊಸದುರ್ಗ ತಾಲ್ಲೂಕು ಹಾಗೂ ಪಕ್ಕದ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಹಾಗೂ ಕಡೂರು ತಾಲ್ಲೂಕಿನ ಸ್ಪರ್ಧಿಗಳು ಭಾಗವಹಿಸುತ್ತಾರೆ ಎಂದು ಗ್ರಾಮದ ಮುಖಂಡ ಮಂಜಪ್ಪ ತಿಳಿಸಿದರು.ಸ್ಪರ್ಧಿಗಳನ್ನು ಪ್ರೋತ್ಸಾಹಿಸಲು ವಿಜೇತರಾದವರಿಗೆ ನಗದು ಬಹುಮಾನ ನೀಡಲಾಗುತ್ತದೆ. ಅಪ್ಪಟ ಗ್ರಾಮೀಣ ಕ್ರೀಡೆಯಾಗಿರುವ ಎತ್ತಿನಗಾಡಿ ಓಟದ ಸ್ಪರ್ಧೆಗೆ ಬಂದವರೆಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಎಲ್ಲದಕ್ಕೂ ಗ್ರಾಮಸ್ಥರು ಸಹಕಾರ ನೀಡುತ್ತಾರೆ ಎನ್ನುತ್ತಾರೆ ಗ್ರಾಮದ ಯುವಕ ವಸಂತ್.ಗ್ರಾಮೀಣ ಪ್ರದೇಶದಲ್ಲಿ ದೇಸಿ ಕ್ರೀಡೆಗಳು ನಶಿಸುತ್ತಿರುವ ಇಂದಿನ ದಿನಗಳಲ್ಲಿ ಅವುಗಳನ್ನು ಉಳಿಸಿ ಬೆಳೆಸಲು ಸರ್ಕಾರ ಇಂತಹ ಸ್ಪರ್ಧೆಗಳನ್ನು ಆಯೋಜಿಸುವವರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಸರ್ಕಾರದಿಂದ ಧನಸಹಾಯವೂ ನೀಡಿದಲ್ಲಿ ಇನ್ನೂ ಉತ್ತಮ ರೀತಿಯಲ್ಲಿ ಸ್ಪರ್ಧೆಗಳನ್ನು ಆಯೋಜಿಸಲು ಸಹಕಾರಿಯಾಗುವುದು ಎನ್ನುತ್ತಾರೆ ಸ್ಥಳೀಯ ಯುವಕರು.ಎತ್ತಿನ ಗಾಡಿ ಓಟದ ಸ್ಪರ್ಧೆಯಲ್ಲಿ ವಿವಿಧ ಗ್ರಾಮಗಳ 16 ಸ್ಪರ್ಧಿಗಳು ಭಾಗವಹಿಸಿದ್ದರು. ಒಂದು ಬಾರಿಗೆ ಎರಡು ಜೋಡಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಅಂತಿಮವಾಗಿ ಕಬ್ಬಿನಕೆರೆ ಗ್ರಾಮದ ಸ್ಪರ್ಧಿ ಓಂಕಾರಪ್ಪ ಎಳೆದುಕೊಂಡು ಗುರಿ ಮುಟ್ಟುವ ಮೂಲಕ ಪ್ರಥಮ ಸ್ಥಾನಗಳಿಸಿ 5,001ರೂ ನಗದು ಬಹುಮಾನ ಪಡೆದರು. ತರೀಕೆರೆ ತಾಲ್ಲೂಕು ಅಜ್ಜಂಪುರ ಯತೀಶ್ ದ್ವಿತೀಯ (3,001ರೂ. ನಗದು ಬಹುಮಾನ) ಹಾಗೂ ತರೀಕೆರೆ ತಾಲ್ಲೂಕು ಬೀರನಹಳ್ಳಿಯ ನಾಗರಾಜಪ್ಪ ತೃತೀಯ (2,001) ಸ್ಥಾನ ಪಡೆದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.