ಭಾನುವಾರ, ಏಪ್ರಿಲ್ 18, 2021
31 °C

ಜಪಾನ್‌ನಲ್ಲಿ ಸುನಾಮಿ ಹೊಡೆತ: ಅಣು ಸ್ಥಾವರ ಸ್ಫೋಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೋಕಿಯೊ (ಪಿಟಿಐ): ಪ್ರಕೃತಿಯ ರುದ್ರನರ್ತನದಿಂದ ನಲುಗಿಹೋಗಿರುವ ಜಪಾನ್‌ನಲ್ಲಿ ಹಸಿ ಗಾಯದ ಮೇಲೆ ಬರೆ ಎಳೆದಂತೆ ಶನಿವಾರ ಅಣು ವಿದ್ಯುತ್ ಸ್ಥಾವರವೊಂದರಲ್ಲಿ ಸ್ಫೋಟ ಸಂಭವಿಸಿ ತೀವ್ರ ಆತಂಕ ಸೃಷ್ಟಿಯಾಗಿದೆ. ಭೂಕಂಪ, ಪ್ರಚಂಡ ಸುನಾಮಿ ಅಲೆಗಳ ಭೋರ್ಗರೆತ, ಇವುಗಳ ಪರಿಣಾಮವಾದ ಕಟ್ಟಡ ಕುಸಿತ ಮತ್ತು ಬೆಂಕಿ ದುರಂತಗಳಿಗೆ ಬಲಿಯಾದವರ ಸಂಖ್ಯೆ 1700ಕ್ಕೆ ಏರಿದೆ.ರಾಜಧಾನಿಯಿಂದ ಕೇವಲ 250 ಕಿ.ಮೀ ದೂರದಲ್ಲಿರುವ ಫುಕುಶಿಮಾ ಪರಮಾಣು ಘಟಕದ ಪ್ರಮುಖ ಸ್ಥಾವರ ಮಧ್ಯಾಹ್ನ ಭೀಕರವಾಗಿ ಸಿಡಿಯುತ್ತಿದ್ದಂತೆಯೇ ಅಲ್ಪ ಪ್ರಮಾಣದಲ್ಲಿ ವಿಕಿರಣ ಸೋರಿಕೆಯಾಗಿ ನಾಲ್ವರು ಸಿಬ್ಬಂದಿ ಗಾಯಗೊಂಡಿದ್ದಾರೆ. ಇಬ್ಬರು ಕಾಣೆಯಾಗಿದ್ದಾರೆ.‘ಈ ತಕ್ಷಣಕ್ಕೆ ಹೊರಗಿನ ಜನರ ಆರೋಗ್ಯಕ್ಕೆ ಯಾವುದೇ ಹಾನಿಯಾಗಿಲ್ಲ. ಕಟ್ಟಡದ ಗೋಡೆಗಳಷ್ಟೇ ಧ್ವಂಸಗೊಂಡಿವೆ. ಸ್ಥಾವರವನ್ನು ಸುತ್ತುವರಿದಿರುವ ಲೋಹದ ಕೊಠಡಿ ಸುರಕ್ಷಿತವಾಗಿದೆ. ವಿಕಿರಣ ಸೋರಿಕೆಯ ಪ್ರಮಾಣ ಸಹ ಕಡಿಮೆಯಾಗುತ್ತಿದೆ’ ಎಂದು ಸರ್ಕಾರದ ಉನ್ನತ ಅಧಿಕಾರಿಗಳು ಜನತೆಗೆ ಅಭಯ ನೀಡಿದ್ದಾರೆ.‘ಸಣ್ಣ ಪ್ರಮಾಣದ ವಿಕಿರಣವಷ್ಟೇ ಕರಗಿದೆ. ಘಟಕವನ್ನು ಈಗಾಗಲೇ ಮುಚ್ಚಲಾಗಿದ್ದು ಇಂಧನವನ್ನು ಸಂಗ್ರಹಾಗಾರದಲ್ಲಿ ಇಡಲಾಗಿದೆ. ಹೀಗಾಗಿ ಜನ ಹೆದರುವ ಅಗತ್ಯವಿಲ್ಲ’ ಎಂದು ಟೋಕಿಯೊ ವಿ.ವಿಯ ಪ್ರೊಫೆಸರ್ ನವೋಟೊ ಸೆಕಿಮುರ ಹೇಳಿದ್ದಾರೆ.ಒಟ್ಟಾರೆ ಪರಿಸ್ಥಿತಿ ಗಂಭೀರವಾಗಿದ್ದರೂ ಇದು ಹ್ಯಾರಿಸ್‌ಬರ್ಗ್ ದ್ವೀಪದಲ್ಲಿ 1979ರಲ್ಲಿ ವಿಕಿರಣ ಭಾಗಶಃ ಕರಗಿ ಸಂಭವಿಸಿದ ವಿಪತ್ತಿನಷ್ಟು ತೀವ್ರವಾದದ್ದಲ್ಲ ಎಂದು ನಂಬಲಾಗಿದೆ. ಇದರ ನಡುವೆಯೂ, ಫುಕುಶಿಮಾ ಸ್ಥಾವರದ ಪರಿಸ್ಥಿತಿಯನ್ನು ದೇಶದ ಪರಮಾಣು ಸುರಕ್ಷಾ ಸಂಸ್ಥೆ ‘ಆತಂಕಕಾರಿ’ ಎಂದು ಬಣ್ಣಿಸಿದೆ.ಯಾವ ಪ್ರಮಾಣದಲ್ಲಿ ವಿಕಿರಣ ಸೋರಿಕೆಯಾಗಿದೆ ಎಂಬುದು ಅಂದಾಜಿಗೆ ಸಿಕ್ಕಿಲ್ಲ. ಸ್ಥಾವರದ ಹೊರಭಾಗದಲ್ಲಿ ಸೀಸಿಯಂ ಲೋಹಧಾತು ಕಂಡುಬಂದಿದೆ. ಈ ಸ್ಥಾವರಕ್ಕೆ ಹೊಂದಿಕೊಂಡಿರುವ ಮತ್ತೊಂದು ಸ್ಥಾವರವೂ ಸ್ಫೋಟಿಸುವ ಲಕ್ಷಣ ಕಂಡುಬಂದಿದೆ. ನಿಯಂತ್ರಣ ಕೊಠಡಿಯಲ್ಲಿ ವಿಕಿರಣದ ಒತ್ತಡ ಸಾಮಾನ್ಯ ಸ್ಥಿತಿಗಿಂತ ಒಂದು ಸಾವಿರ ಪಟ್ಟು ಹಾಗೂ ಮುಖ್ಯ ದ್ವಾರದಲ್ಲಿ 8 ಪಟ್ಟು ಹೆಚ್ಚಾಗಿದೆ.ತುರ್ತು ಸ್ಥಿತಿ: ಎರಡೂ ಘಟಕಗಳ 10 ಕಿ.ಮೀ ವ್ಯಾಪ್ತಿಯ 2.10 ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಅಲ್ಲದೆ ಐದು ಪರಮಾಣು ಸ್ಥಾವರಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಇತರ ಘಟಕಗಳಲ್ಲಿ ಒತ್ತಡ ಕಡಿಮೆ ಮಾಡಲು ಸ್ಥಾವರಗಳ ಮುಚ್ಚಳ ತೆರೆದು ಅಲ್ಪ ಪ್ರಮಾಣದ ವಿಕಿರಣವನ್ನು ಹೊರಬಿಡಲಾಗುತ್ತಿದೆ.ಪರಮಾಣು ಮತ್ತು ಕೈಗಾರಿಕಾ ಸುರಕ್ಷಾ ಸಂಸ್ಥೆಯ ಮೇಲ್ವಿಚಾರಣೆಯಲ್ಲಿ ರಾಸಾಯನಿಕ ವಿಪತ್ತು ನಿರ್ವಹಣಾ ಪರಿಣತರು, ವಿಶೇಷ ಅಗ್ನಿಶಾಮಕ ತಜ್ಞರು ಹೆಚ್ಚಿನ ಅನಾಹುತ ತಡೆಯಲು ತೀವ್ರ ಪರಿಶ್ರಮ ವಹಿಸುತ್ತಿದ್ದಾರೆ.  ಅಮೆರಿಕದಿಂದ ವಿಮಾನದಲ್ಲಿ ಲೋಡ್‌ಗಟ್ಟಲೆ ಕೂಲಂಟ್‌ಗಳು (ಶೀತಕ) ಬಂದು ತಲುಪಿವೆ. ಮಹಾದುರಂತದ 20 ಗಂಟೆಗಳ ಬಳಿಕ ಸ್ಥಾವರಗಳಲ್ಲಿ ಬ್ಯಾಟರಿಚಾಲಿತ ಶೀತಕ ವ್ಯವಸ್ಥೆ ಕಾರ್ಯ ನಿರ್ವಹಿಸಲಾರಂಭಿಸಿದೆ. ಈ ವ್ಯವಸ್ಥೆಯಲ್ಲಿ ಶೀತಕಗಳು ಎಷ್ಟು ಹೊತ್ತು ಕಾರ್ಯನಿರ್ವಹಿಸಬಲ್ಲವು ಮತ್ತು ವಿದ್ಯುತ್ ಸರಬರಾಜು ಯಾವಾಗ ಸಹಜ ಸ್ಥಿತಿಗೆ ಬರುತ್ತದೆ ಎಂಬುದು ಮಾತ್ರ ಸ್ಪಷ್ಟವಾಗಿಲ್ಲ.ಹವಾ ನಿಯಂತ್ರಕಗಳು ಮತ್ತು ನಲ್ಲಿಯ ನೀರನ್ನು ಬಳಸದಂತೆ ಸಮೀಪದ ನಿವಾಸಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಹೊರಗೆ ತೆರಳುವ ಜನರು ಚರ್ಮವನ್ನು ಗಾಳಿಗೆ ಒಡ್ಡದೆ ಮುಖಗವುಸು ಹಾಗೂ ಒದ್ದೆ ಟವೆಲ್‌ಗಳಿಂದ ದೇಹವನ್ನು ಮುಚ್ಚಿಕೊಳ್ಳುವಂತೆ ಸೂಚಿಸಲಾಗಿದೆ.ಸ್ಫೋಟಕ್ಕೆ ಕಾರಣವೇನು?: ಪ್ರಬಲ ಭೂಕಂಪದಿಂದ ಅಣು ಸ್ಥಾವರಕ್ಕೆ ವಿದ್ಯುತ್ ಸರಬರಾಜು ಸ್ಥಗಿತಗೊಂಡು ನೀರು ಪೂರೈಕೆ ಅಸಾಧ್ಯವಾಗಿತ್ತು. ಇದರಿಂದ ವಿಕಿರಣವನ್ನು ತಂಪಾಗಿಡುವ ಕೂಲಂಟ್ (ತಂಪು ಜಲ) ಆವಿಯಾಗುತ್ತಾ ಬಂದು ನಿಯಂತ್ರಣ ಕೊಠಡಿಯಲ್ಲಿ ಬಿಸಿಯ ಒತ್ತಡ ಹೆಚ್ಚುತ್ತಾ ಇಂಧನ ಕರಗಲಾರಂಭಿಸಿತ್ತು. ಶೀತಕ ವ್ಯವಸ್ಥೆಯ ನಿರ್ವಹಣೆಗಾಗಿ ಬಳಸುವ ತುರ್ತು ಡೀಸೆಲ್ ಜನರೇಟರ್‌ಗಳನ್ನೂ ಭೂಕಂಪ ಹಾಳು ಮಾಡಿತ್ತು. ಕಡೆಗೆ ದುರಂತ ಘಟಿಸದಂತೆ ತಡೆಯುವ ಎಲ್ಲ ಪ್ರಯತ್ನಗಳೂ ವಿಫಲಗೊಂಡು ಸ್ಥಳೀಯ ಕಾಲಮಾನ 3.30ರ ಸುಮಾರಿಗೆ ಪ್ರಖರ ತಾಪಮಾನ ಭುಗಿಲೆದ್ದು ಸ್ಥಾವರದ ಪ್ರಮುಖ ಕಟ್ಟಡ ಮತ್ತು ಹೊರಗೋಡೆಗಳು ನೆಲಸಮಗೊಂಡವು. ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಕಟ್ಟಡ ಬರೀ ‘ಲೋಹದ ಅಸ್ಥಿಪಂಜರ’ದಂತೆ ಗೋಚರಿಸುತ್ತಿತ್ತು ಎಂದು ಮಾಧ್ಯಮಗಳು ಬಣ್ಣಿಸಿವೆ.ಸ್ಥಾವರಗಳಿಗೆ ಆತಂಕ ಉಂಟಾಗಿರುವುದು ಈ ಮೊದಲೇ ಗಮನಕ್ಕೆ ಬಂದಿದ್ದ ಹಿನ್ನೆಲೆಯಲ್ಲಿ ಪ್ರಧಾನಿ ನವೋಟಿ ಕಾನ್ ಅವರು ಬೆಳಿಗ್ಗೆ ಹೆಲಿಕಾಪ್ಟರ್ ಮೂಲಕ ಫುಕುಶಿಮಾ ಸ್ಥಾವರದ ಸ್ಥಳ ವೀಕ್ಷಣೆ ಮಾಡಿದ್ದರು. ಇದಾದ ಕೆಲವೇ ಸಮಯದಲ್ಲಿ, ಅಧಿಕ ತಾಪಮಾನದಿಂದ ಸ್ಥಾವರ ಕರಗಲಾರಂಭಿಸಿದ್ದುದನ್ನು ಅಣು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದರು.

ಶಂಕಾಸ್ಪದ ಮಾನದಂಡ: ಜಪಾನ್ ತನ್ನ ಮೂರನೇ ಒಂದು ಭಾಗಕ್ಕಿಂತಲೂ ಹೆಚ್ಚು ವಿದ್ಯುತ್ ಅಗತ್ಯಗಳಿಗೆ ಅಣು ವಿದ್ಯುತ್‌ಅನ್ನೇ ಅವಲಂಬಿಸಿದೆ. ಮೂಲತಃ ಇಡೀ ದೇಶ ಭೂಕಂಪಪೀಡಿತ ಪ್ರದೇಶವೇ ಆಗಿರುವುದರಿಂದ ಅಣು ಸ್ಥಾವರಗಳನ್ನು ಭೂಕಂಪ ನಿರೋಧಕಗಳಾಗಿಯೇ ನಿರ್ಮಿಸಲಾಗಿರುತ್ತದೆ. ಸಂಭಾವ್ಯ ಅನಾಹುತ ತಡೆಯಲು ಸರ್ಕಾರ ಅವುಗಳಿಗೆ ಕಠಿಣ ನಿಬರ್ಂಧಗಳನ್ನು ವಿಧಿಸುತ್ತದೆ. ಇದರ ನಡುವೆಯೂ ಭೂಕಂಪದ ಕಾರಣದಿಂದ ದೇಶದ 54 ವಾಣಿಜ್ಯ ಸ್ಥಾವರಗಳ ಪೈಕಿ 10ನ್ನು ಮುಚ್ಚಲಾಗಿದೆ. ಈಗಿನ ಸುರಕ್ಷಾ ಮಾನದಂಡಗಳು ಲಘು ಭೂಕಂಪಗಳನ್ನು ತಡೆಯಬಲ್ಲವಾದರೂ ಪ್ರಬಲ ಭೂಕಂಪವನ್ನು ಎದುರಿಸುವ ಅವುಗಳ ಸಾಮರ್ಥ್ಯ ಶಂಕಾಸ್ಪದ ಎಂದು ತಜ್ಞರು ಹಿಂದಿನಿಂದಲೂ ಹೇಳುತ್ತಲೇ ಬಂದಿದ್ದರು. ಅವರ ಈ ಆತಂಕ ಈಗ ನಿಜವಾಗಿದೆ.

1700 ಸಾವು: ಈ ಮಧ್ಯೆ, ಭೂಕಂಪ, ಪ್ರಚಂಡ ಸುನಾಮಿ ಅಲೆಗಳ ಭೋರ್ಗರೆತ, ಇವುಗಳ ಪರಿಣಾಮವಾದ ಕಟ್ಟಡ ಕುಸಿತ ಮತ್ತು ಬೆಂಕಿ ದುರಂತಗಳಿಗೆ ಬಲಿಯಾದವರ ಸಂಖ್ಯೆ 1700ಕ್ಕೆ ಏರಿದೆ.ಸರ್ಕಾರ ಸಮರೋಪಾದಿಯಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಕ್ಕೆ ಮುಂದಾಗಿದೆ. ಸುಮಾರು ಒಂದು ಸಾವಿರ ಮಂದಿ ಕಾಣೆಯಾಗಿದ್ದಾರೆ. ಕುಸಿದು ಬಿದ್ದಿರುವ ಅವಶೇಷಗಳ ಅಡಿ ಸಿಲುಕಿದವರನ್ನು ಹೊರತೆಗೆಯುವ ಕಾರ್ಯ ಬಿರುಸಿನಿಂದ ಸಾಗಿದೆ.ಹಲವಾರು ಸೇತುವೆಗಳು ಕುಸಿದಿವೆ. ರಸ್ತೆಗಳು ನಿರ್ನಾಮವಾಗಿವೆ. ಹಳ್ಳಿಗಳು ನೆಲಸಮಗೊಂಡಿದ್ದು ಭಗ್ನಗೊಂಡ ನಗರಗಳಲ್ಲಿ ಅವಶೇಷಗಳೇ ರಾರಾಜಿಸುತ್ತಿವೆ. ರಸ್ತೆ, ರೈಲು ಸಂಚಾರ, ದೂರವಾಣಿ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿರುವುದರಿಂದ ರಕ್ಷಣಾ ಕಾರ್ಯಕ್ಕೆ ತೀವ್ರ ಅಡಚಣೆ ಉಂಟಾಗಿದೆ. ಕೆಲವೆಡೆ ಬರೀ ಹೆಲಿಕಾಪ್ಟರ್ ಕಾರ್ಯಾಚರಣೆ ಮಾತ್ರ ಸಾಧ್ಯವಾಗಿದೆ. ಸುನಾಮಿ ಎಚ್ಚರಿಕೆ ಇನ್ನೂ ಮುಂದುವರಿದಿರುವುದರಿಂದ ಅಲೆಗಳ ಹೊಡೆತಕ್ಕೆ ಸಿಲುಕಿದವರ ರಕ್ಷಣೆಯಲ್ಲೂ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಇದರಿಂದ ಒಟ್ಟಾರೆ ಹಾನಿಯ ಪ್ರಮಾಣ ಇನ್ನೂ ಅಂದಾಜಿಗೆ ನಿಲುಕುತ್ತಿಲ್ಲ.ಮಿಯಾಗಿ ಮತ್ತು ಇವಾಟೆ ಪ್ರಾಂತ್ಯದ ಕರಾವಳಿ ಪ್ರದೇಶದಲ್ಲಿ ನಾಲ್ಕು ರೈಲುಗಳು ಕಾಣೆಯಾಗಿವೆ. ಇವುಗಳಲ್ಲಿ ಎಷ್ಟು ಜನರಿದ್ದರು ಎಂಬುದು ತಿಳಿದುಬಂದಿಲ್ಲ. 5.57 ದಶಲಕ್ಷ ಮನೆಗಳಲ್ಲಿ ವಿದ್ಯುತ್ ಕಡಿತವಾಗಿದ್ದು 6 ಲಕ್ಷ ಮನೆಗಳಿಗೆ ಕುಡಿಯುವ ನೀರು ಸರಬರಾಜು ಸ್ಥಗಿತಗೊಂಡಿದೆ. ಬಹುತೇಕ ಇಡೀ ದೇಶ ವಿದ್ಯುತ್ ಸಮಸ್ಯೆ ಎದುರಿಸುತ್ತಿದೆ.ಸಂತ್ರಸ್ತ ರಾಷ್ಟ್ರಕ್ಕೆ 50 ದೇಶಗಳು ಸಹಾಯ ಹಸ್ತ ಚಾಚಿವೆ. ದಕ್ಷಿಣ ಕೊರಿಯಾ, ಆಸ್ಟ್ರೇಲಿಯ, ನ್ಯೂಜಿಲೆಂಡ್, ಸಿಂಗಾಪುರ ಮತ್ತಿತರ ದೇಶಗಳ ರಕ್ಷಣಾ ತಂಡಗಳು ಬಂದಿಳಿದಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.