ಜಪಾನ್ ಟೋಕಿಯೋದಲ್ಲಿ ಸುನಾಮಿ
ಕಾರವಾರ: ಜಪಾನ್ ರಾಜಧಾನಿ ಟೋಕಿಯೊಗೆ ಬಂದು ಅಪ್ಪಳಿಸಿರುವ ಸುನಾಮಿಯಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಯಾವುದೇ ರೀತಿಯ ಪರಿಣಾಮ ಆಗುವುದಿಲ್ಲ ಎಂದು ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ. ಶುಕ್ರವಾರ ಗರಿಷ್ಠ 36 ಹಾಗೂ ಕನಿಷ್ಠ 20.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು ಮೋಡ ತುಂಬಿದ ವಾತಾವರಣ ಕಂಡುಬರಬಹುದು ಎಂದು ತಿಳಿಸಿದೆ.
ಟೋಕಿಯೊದಲ್ಲಿ ಸುನಾಮಿ ಅಪ್ಪಳಿಸಿ ಲಕ್ಷಾಂತರ ಜನರು ಸಾವಿಗೀಡಾಗಿರುವ ಹಿನ್ನೆಲೆಯಲ್ಲಿ ಕರಾವಳಿ ತೀರಗಳಲ್ಲಿ ಸೂಕ್ತ ಎಚ್ಚರಿಕೆ ವಹಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಮೀನುಗಾರರು ಮೂರು ದಿನಗಳ ವರೆಗೆ ಸಮುದ್ರಕ್ಕಿಳಿಯದಂತೆ ಜಿಲ್ಲಾಧಿಕಾರಿ ಬಿ.ಎನ್. ಕೃಷ್ಣಯ್ಯ ಸೂಚನೆ ನೀಡಿದ್ದಾರೆ.ಇನ್ನೊಂದೆಡೆ ಕರಾವಳಿ ಕಾವಲು ಪಡೆ ದಡಕ್ಕೆ ಹೋಗುವಂತೆ ಆಳ ಸಮುದ್ರದಲ್ಲಿರುವ ಮೀನುಗಾರಿಕಾ ದೋಣಿಗಳಿಗೆ ಸಲಹೆ ನೀಡುತ್ತಿದೆ. ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಮೀನುಗಾರರು ಬೋಟ್ಗಳು ಬೇಗನೆ ದಡಕ್ಕೆ ಬಂದು ಸೇರಿವೆ.
ಟೋಕಿಯೊಗೆ ಸುನಾಮಿ ಅಲೆಗಳು ಅಪ್ಪಳಿಸಿದ ಸುದ್ದಿಯನ್ನು ಸುದ್ದಿ ವಾಹಿನಿಗಳಲ್ಲಿ ನೋಡಿದ ನಾಗಕರಿಕರು ಅರಬ್ಬಿ ಸಮುದ್ರದಲ್ಲೂ ಸುನಾಮಿ ಅಲೆಗಳು ಏಳಬಹುದು ಎಂದು ಆತಂಕಗೊಂಡಿದ್ದರು. ಕೆಲವರು ಪತ್ರಿಕಾ ಕಚೇರಿಗಳಿಗೆ ದೂರವಾಣಿ ಕರೆ ಮಾಡಿ ‘ರಾಜ್ಯದ ಕರಾವಳಿ ತೀರಕ್ಕೆನಾದರೂ ಅಪಾಯವಿದೆಯೇ’ ಎಂದು ಕೇಳಿ ಮನದಲ್ಲಿ ಕಾಡುತ್ತಿದ್ದ ಭಯವನ್ನು ನಿವಾರಿಸಿಕೊಂಡರು.
ಡಿ. 26, 2004ರಲ್ಲಿ ಸುನಾಮಿ ಬಂದ ಸಂದರ್ಭದಲ್ಲಿ ಮಾತ್ರ ಜಿಲ್ಲೆಯ ಕರಾವಳಿ ತೀರಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿ ಕಡಲತೀರದ ನಿವಾಸಿಗಳಲ್ಲಿ ಭಯ ಮೂಡಿಸಿತ್ತು. 2004ರಲ್ಲಿ ಬಂದ ಸುನಾಮಿ ಅಲೆಗಳು ಜಿಲ್ಲೆಯ ಕೆಲವು ಭಾಗಗಳಲ್ಲಿ ಆಸ್ತಿಗೆ ಹಾನಿಯನ್ನುಂಟು ಮಾಡಿತ್ತು.ಅಂದು ಆಗಿರುವ ಅನುಭವವನ್ನು ಮೀನುಗಾರರು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು. ‘ನೀರು ಒಂದೇ ಸವನೆ ಮೇಲೆರುತ್ತಿತ್ತು. ನೀರು ಏರುತ್ತಿದ್ದ ರಭಸಕ್ಕೆ ಬೈತಕೋಲ್ದ ಹೊಳೆಯ ದಂಡೆಯ ಮೇಲಿರುವ ಮನೆಗಳಿಗೆ ನೀರು ನುಗ್ಗಿತ್ತು. ಬೈತಖೋಲ ಜಾತ್ರೆಯ ಸಂಭ್ರಮವೆಲ್ಲ ಅಂದು ನೀರು ಪಾಲಾಗಿತ್ತು’ ಎಂದರು ವಿನಾಯಕ ಹರಿಕಂತ್ರ.
‘ಸುನಾಮಿಯ ಪ್ರಭಾವ ಹೇಗಿತ್ತೆಂದರೆ ಸಮುದ್ರದ ನೀರು ತಂಪಾಗಿತ್ತು. ಸಂಜೆಯ ಹೊತ್ತಿಗೆ ನೀರಿನ ಮಟ್ಟ ಇದ್ದಕ್ಕಿದ್ದಂತೆ ಹೆಚ್ಚಾಗಲು ಪ್ರಾರಂಭವಾಯಿತು. ರಾತ್ರಿಯಿಡೀ ಅಂದು ಜಾಗರಣೆ ಮಾಡಿದ್ದೇವು. ಕೋಣೆನಾಲದಲ್ಲೂ ನೀರು ತುಂಬಿ ಮನೆಗಳಿಗೆ ನೀರು ನುಗ್ಗಿತ್ತು’ ಎಂದು ತುಕಾರಾಮ ಹೇಳಿದರು.
ನಿಲ್ಲದ ಚಟುವಟಿಕೆ
ಸುನಾಮಿ ಭೀತಿಯ ಮಧ್ಯೆಯೂ ಜಿಲ್ಲೆಯ ಎಲ್ಲ ಬಂದರುಗಳಲ್ಲಿ ಮೀನುಗಾರಿಕೆ ಚಟುವಟಿಕೆಗಳು ನಿರಾಂತಕವಾಗಿ ನಡೆಯುತ್ತಿತ್ತು. ಸುನಾಮಿ ಬಂದಿರುವ ಬಗ್ಗೆ ಮೀನುಗಾರರ ಗುಂಪುಗುಂಪಾಗಿ ಚರ್ಚೆ ನಡೆಸುತ್ತಿರುವ ದೃಶ್ಯ ಬಂದರು ಪ್ರದೇಶದಲ್ಲಿ ಸಾಮಾನ್ಯವಾಗಿತ್ತು.ಡಿ. 26, 2004ರಲ್ಲಿ ಬಂದ ಸುನಾಮಿಯಿಂದ ಜಿಲ್ಲೆಯ ಕರಾವಳಿ ತೀರಗಳಲ್ಲಿ ಕೆಲವು ಕಡೆಗಳಲ್ಲಿ ಒಂದೇ ಸಮನೆ ನೀರಿನ ಮಟ್ಟ ಹೆಚ್ಚಾಗಿ ಹಾಗೇ ಕಡಿಮೆ ಆಗುತ್ತಿತ್ತು. ಇದರಿಂದ ಆಸ್ತಿಪಾಸ್ತಿಗಳಿಗೆ ಅಲ್ಪ ಪ್ರಮಾಣದಲ್ಲಿ ಹಾನಿಯಾಗಿತ್ತೇ ಹೊರತು ಜೀವ ಹಾನಿ ಸಂಭವಿಸಿರಲಿಲ್ಲ. ಕಹಿ ನೆನಪುಗಳನ್ನು ಮೀನುಗಾರರು ಸ್ಮರಿಸಿಕೊಂಡು ನಿಟ್ಟುಸಿರು ಬಿಟ್ಟರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.