ಮಂಗಳವಾರ, ಜೂನ್ 15, 2021
27 °C

ಜಮೀನು ವಿವಾದ ಇತ್ಯರ್ಥ ತಡ ₨ 1 ಲಕ್ಷ ಪರಿಹಾರಕ್ಕೆ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಮನಗರ ತಾಲ್ಲೂಕಿನ ರಂಗೇನಹಳ್ಳಿಯ ಚನ್ನಬಸಪ್ಪ ಅವರಿಗೆ ಸೇರಿದ 2.2 ಎಕರೆ ಜಮೀನಿಗೆ ಸಂಬಂಧಿಸಿದ ವ್ಯಾಜ್ಯವನ್ನು 35 ವರ್ಷಗಳಿಂದ ಬಾಕಿ ಉಳಿಸಿಕೊಂಡಿದ್ದ ಕಾರಣಕ್ಕೆ ಚನ್ನಬಸಪ್ಪ ಅವರಿಗೆ ₨ 1 ಲಕ್ಷ ಪರಿಹಾರ ನೀಡಬೇಕು ಎಂದು ಹೈಕೋರ್ಟ್‌ ಸರ್ಕಾರಕ್ಕೆ ಆದೇಶಿಸಿದೆ.ಚನ್ನಬಸಪ್ಪ ಅವರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ಬಗ್ಗೆ  ನ್ಯಾಯಮೂರ್ತಿ ಕೆ.ಎಲ್‌. ಮಂಜುನಾಥ್‌ ಮತ್ತು ರವಿ ಮಳಿಮಠ ಅವರಿದ್ದ ವಿಭಾಗೀಯ ಪೀಠ ಶುಕ್ರವಾರ ವಿಚಾರಣೆ ನಡೆಸಿತು.1978ರಲ್ಲಿ ಚನ್ನಬಸಪ್ಪ ಅವರಿಗೆ ಈ ಜಮೀನನ್ನು ಅಲ್ಲಿನ ಜಿಲ್ಲಾಧಿಕಾರಿ ಮಂಜೂರು ಮಾಡಿದ್ದರು. ಇದಕ್ಕೆ ಕೆಲವರು ತಕರಾರು ಎತ್ತಿದರು. ಇದರ ವಿಚಾರಣೆ ನಡೆಸಿದ ಅಂದಿನ ಜಿಲ್ಲಾಧಿ ಕಾರಿ, ಮಂಜೂರಾತಿ ಹಿಂಪಡೆದರು. ಇದನ್ನು ಪ್ರಶ್ನಿಸಿ ಚನ್ನಬಸಪ್ಪ ಅವರು ಕರ್ನಾಟಕ ಮೇಲ್ಮನವಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದರು.ಪ್ರಕರಣವನ್ನು ಆರು ತಿಂಗಳಲ್ಲಿ ಪುನರ್‌ ಪರಿಶೀಲಿಸಬೇಕು ಎಂದು ಪ್ರಾಧಿಕಾರ 1980ರಲ್ಲಿ ಜಿಲ್ಲಾಧಿಕಾರಿಗೆ ಆದೇಶಿಸಿತು. ಆದರೆ ಅದು ಅನುಷ್ಠಾನಕ್ಕೆ ಬರಲಿಲ್ಲ. ಇದನ್ನು ಪ್ರಶ್ನಿಸಿ ಚನ್ನಬಸಪ್ಪ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಆದೇಶ ಪುನರ್‌ ಪರಿಶೀಲಿಸುವಂತೆ ಹೈಕೋರ್ಟ್‌ ಕೂಡ ಆದೇಶಿಸಿತು.ಅದೂ ಜಾರಿಗೆ ಬರಲಿಲ್ಲ. ನಂತರ ಚನ್ನಬಸಪ್ಪ ಅವರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದರು.  ‘ಚನ್ನಬಸಪ್ಪ ಅವರ ಜಮೀನಿಗೆ ಸಂಬಂಧಿಸಿದ ವ್ಯಾಜ್ಯವನ್ನು ಐದು ತಿಂಗಳಲ್ಲಿ ಇತ್ಯರ್ಥಪಡಿಸಬೇಕು. ಅವರಿಗೆ ಪರಿಹಾರ ರೂಪದಲ್ಲಿ ₨ 1 ಲಕ್ಷ ನೀಡಬೇಕು’ ಎಂದು ಆದೇಶಿಸಿ, ವಿಭಾಗೀಯ ಪೀಠ ಅರ್ಜಿ ಇತ್ಯರ್ಥಪಡಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.