ಸೋಮವಾರ, ಮೇ 17, 2021
27 °C

ಜಯದೇವಿ ಸ್ಮರಣೆಗೆ `ನೂರು ಉಪನ್ಯಾಸ'

-ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

ಜಯದೇವಿ ತಾಯಿ ಲಿಗಾಡೆ ಕನ್ನಡಕ್ಕಾಗಿ ಹೋರಾಟ ನಡೆಸಿದ ದಿಟ್ಟ ಮಹಿಳೆ. ಹೊರ ರಾಜ್ಯದಲ್ಲಿ ಹುಟ್ಟಿ, ಬೆಳೆದರೂ; ಕನ್ನಡ ಪ್ರೇಮ ಅಗಾಧವಾದುದು. ಮನೆಯ ಮಾತೃ ಭಾಷೆ ಕನ್ನಡವಾದರೂ; ತಮ್ಮ ಇಪ್ಪತ್ತ ಎರಡನೇ ವಯಸ್ಸಿನಲ್ಲಿ ಕಲಿತು, ಇತರರಿಗೂ ಕಲಿಸಿದ ಗುರು.ಕನ್ನಡ ಮಾತೃ ಭಾಷಿಕರಿಗಾಗಿ ಕನ್ನಡ ಶಾಲೆ ತೆರೆಯಿರಿ ಎಂದು ಐದು ದಶಕಗಳ ಹಿಂದೆಯೇ ಮಹಾರಾಷ್ಟ್ರ ಸರ್ಕಾರಕ್ಕೆ ದುಂಬಾಲು ಬಿದ್ದರೂ; ಅಲ್ಲಿನ ಸರ್ಕಾರ ಮನವಿಗೆ ಓಗೊಡಲಿಲ್ಲ. ಕರ್ನಾಟಕ ರಾಜ್ಯ ಸರ್ಕಾರವೂ ಸ್ಪಂದಿಸಲಿಲ್ಲ. ಇದರಿಂದ ಧೃತಿಗೆಡದ ಕನ್ನಡ ಪ್ರೇಮಿ ಜಯದೇವಿ ತಾಯಿ ಲಿಗಾಡೆ ಮಹಾರಾಷ್ಟ್ರ- ಕರ್ನಾಟಕ ರಾಜ್ಯದ ಗಡಿಯ 42 ತಾಲ್ಲೂಕುಗಳಲ್ಲಿ ನಾನೂರು ಕನ್ನಡ ಶಾಲೆಗಳನ್ನು ತೆರೆದು ನಿರ್ವಹಿಸಿದ ಹಿರಿಮೆ ತಾಯಿಯದ್ದು. ಅಂದು ತೆರೆದ ಶಾಲೆಗಳು ಇಂದೂ ಕಾರ್ಯ ನಿರ್ವಹಿಸುತ್ತಿವೆ. ಸಾವಿರಾರು ಹೆಣ್ಣು ಮಕ್ಕಳಿಗೆ ಅಕ್ಷರ ಕಲಿಸಿವೆ.ಸೊಲ್ಲಾಪುರದ ಸಿರಿವಂತ ಮನೆತನದಲ್ಲಿ 1912ರ ಜೂನ್ 23ರಂದು ಜನಿಸಿದ ಜಯದೇವಿ ತಮ್ಮ ಹದಿನಾಲ್ಕರ ಹರೆಯದಲ್ಲೇ ಅದೇ ಗ್ರಾಮದ ಮತ್ತೊಂದು ಸಿರಿವಂತ ಕುಟುಂಬದ ಸೊಸೆಯಾದರು. ನಂತರ ತಾತನ ಮನೆಯಲ್ಲಿ ನಡೆಯುತ್ತಿದ್ದ ಶಾಲೆಗೆ ಕನ್ನಡ ಕಲಿಯಲು ಬಂದರು. ಹತ್ತು ವರ್ಷದ ಅವಧಿಯಲ್ಲಿ ಕನ್ನಡ ಭಾಷೆಯಲ್ಲಿ ಪ್ರಭುತ್ವ ಸಾಧಿಸಿ ಏಳು ಕೃತಿಗಳನ್ನು ರಚಿಸಿದರು.ಇದರಲ್ಲಿ ಸಿದ್ಧರಾಮೇಶ್ವರ ಪುರಾಣ ಮೇರು ಕೃತಿ. ಕನ್ನಡದ ದೇಸಿ ಛಂದಸ್ಸಿನ ತ್ರಿಪದಿಯಲ್ಲಿ ರಚಿತವಾದ ಮಹಾಕಾವ್ಯ. 600 ಪುಟಗಳ ಕೃತಿಯಲ್ಲಿ 4 ಸಾವಿರ ತ್ರಿಪದಿಗಳಿವೆ. ಸಿದ್ದರಾಮನ ಮೇಲಿನ ಭಕ್ತಿಯಿಂದ ಪ್ರೇರಿತರಾಗಿ ಹತ್ತು ವರ್ಷ ತಪ್ಪಸ್ಸಿನೋಪಾದಿ ಕೃತಿ ರಚಿಸಿ 1965ರಲ್ಲಿ ಬಿಡುಗಡೆ ಮಾಡಿದರು. ಕನ್ನಡ ಸಾಹಿತ್ಯ ಸೇವೆಯಂತೆ ಮರಾಠಿಯಲ್ಲೂ ಏಳು ಕೃತಿ ರಚಿಸಿದ್ದಾರೆ.ಅನ್ಯಾಯ ಸಹಿಸದ ಜಯದೇವಿ ಹಲ ಸಾಮಾಜಿಕ ಚಳವಳಿಗಳಲ್ಲಿ ಪಾಲ್ಗೊಂಡಿದ್ದಾರೆ. ಮಹಿಳೆಯರಿಗೆ ದೇವಾಲಯದ ಗರ್ಭಗುಡಿ ಪ್ರವೇಶ ನಿಷೇಧವಿದ್ದ ಕಾಲದಲ್ಲೇ ಗರ್ಭಗುಡಿ ಪ್ರವೇಶಿಸಿ ಲಿಂಗ ಸ್ಪರ್ಶಿಸಿ, ಪೂಜೆ ಸಲ್ಲಿಸಿ ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದ ಸಾಧಕಿ. ವರದಕ್ಷಿಣೆ ವಿರೋಧಿ ವೇದಿಕೆ ರಚಿಸಿ ಹೋರಾಟ ನಡೆಸಿದರು. ವಿಧವಾ ವಿವಾಹಕ್ಕೆ ಮುನ್ನುಡಿ ಬರೆದರು. ಗ್ರಾಮ ಸ್ವಚ್ಛತೆ ಕುರಿತು ಹಳ್ಳಿಗಳಲ್ಲಿ ಜಾಗೃತಿ ಮೂಡಿಸಿದರು. ದಲಿತರ ಕೇರಿಗಳಲ್ಲಿ ವಾಸ್ತವ್ಯ ಹೂಡಿದರು. ಚಿಕ್ಕ ಕುಟುಂಬದ ಪರಿಕಲ್ಪನೆ ಬಿತ್ತಿದರು. ನೊಂದವರಿಗೆ ಆಸರೆ ನೀಡಿದರು. ಬ್ರಿಟಿಷರ `ಕೈಸರ್-ಇ-ಹಿಂದ್' ಪ್ರಶಸ್ತಿ ತಿರಸ್ಕರಿಸಿದ ದಿಟ್ಟೆ. ಹೈದರಾಬಾದ್ ನಿಜಾಮನ ವಿರುದ್ಧ ಗುಡುಗಿದ ಸಿಂಹಿಣಿ. ನಿಜಾಮನ ಸೈನ್ಯದಿಂದ ಕಂಗೆಟ್ಟು ಬಂದವರಿಗೆ ಆಸರೆ ನೀಡಿದರು. ನೊಂದವರು ನೀಡಿದ `ತಾಯಿ' ಪದವಿಯನ್ನು ಪ್ರೀತಿಯಿಂದ ಸ್ವೀಕರಿಸಿ ಜಯದೇವಿ ತಾಯಿ ಲಿಗಾಡೆಯಾದರು.ಕನ್ನಡಿಗರ ನೆಲ ಸೊಲ್ಲಾಪುರದಲ್ಲಿ ಕನ್ನಡಕ್ಕೆ ಧಕ್ಕೆ ಬಂದ ತಕ್ಷಣವೇ ಜಯದೇವಿ `ಕನ್ನಡ ಕೋಟೆ' ಕಟ್ಟಲು ಮುಂದಾದರು. ಇದಕ್ಕಾಗಿ 1950ರಲ್ಲೇ `ಕನ್ನಡ ಕೋಟೆ' ಎಂಬ ಸಂಸ್ಥೆ ಹುಟ್ಟುಹಾಕಿದರು. ಸೊಲ್ಲಾಪುರವನ್ನು ಕರ್ನಾಟಕಕ್ಕೆ ಸೇರಿಸಿ ಎಂಬ ಹೋರಾಟಕ್ಕೆ ಚಾಲನೆ ನೀಡಿದರು. ತನು-ಮನ-ಧನ ಅರ್ಪಿಸಿಕೊಂಡು ಹೋರಾಡಿದರು. ಭಾಷಾವಾರು ಪ್ರಾಂತ್ಯ ವಿಂಗಡಣೆಯಾದಾಗ ಸೊಲ್ಲಾಪುರ ಮಹಾರಾಷ್ಟ್ರದಲ್ಲೇ ಉಳಿದಾಗ ನೊಂದುಕೊಂಡರು. ಕನ್ನಡಿಗರ ಬೆಂಬಲ ದೊರಕದ್ದಕ್ಕೆ ಕಣ್ಣೀರಿಟ್ಟರು.ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಥಮ ಮಹಿಳಾ ಅಧ್ಯಕ್ಷೆ ಇವರು. ಮಂಡ್ಯದಲ್ಲಿ 1974ರಲ್ಲಿ ನಡೆದ 48ನೇ ಸಮ್ಮೇಳನದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿ `ಅನ್ನ, ಅಕ್ಷರ, ಅರಿವು, ಅರಿವೆಯ' ಮಹತ್ವ ಪ್ರತಿಪಾದಿಸಿದರು. ಕನ್ನಡವೇ ನನ್ನ ಧರ್ಮ, ಕನ್ನಡವೇ ನನ್ನ ಉಸಿರು ಎಂದು ಘೋಷಿಸಿದ ತಾಯಿ ಕೊನೆಗೂ ಸೊಲ್ಲಾಪುರ ಕರ್ನಾಟಕಕ್ಕೆ ಸೇರಿದಿದ್ದರಿಂದ ಮನನೊಂದು ಬಸವಕಲ್ಯಾಣಕ್ಕೆ ಬಂದು ನೆಲೆಸಿದರು. ಇದೇ ಕೊರಗಿನಲ್ಲಿ 74ರ ಹರಯಲ್ಲಿ 1989ರ ಜುಲೈ 25ರಂದು ನಿಧನರಾದರು.ಸ್ಮರಣೆ

2012ರ ಜೂನ್ 19ರ `ಪ್ರಜಾವಾಣಿ' ಪತ್ರಿಕೆಯ ಕರ್ನಾಟಕ ದರ್ಶನ ಪುರವಣಿಯಲ್ಲಿ ಜಯದೇವಿ ತಾಯಿ ಲಿಗಾಡೆ ಕುರಿತ ಲೇಖನ ಪ್ರಕಟಗೊಂಡಿತ್ತು. ಇದನ್ನು ಓದಿ ಪ್ರಭಾವಿತರಾದ ತಿಪಟೂರು ಬಾಲಕಿಯರ ಸರ್ಕಾರಿ ಕಾಲೇಜಿನ ಕನ್ನಡ ಉಪನ್ಯಾಸಕ ಎಂ.ಜಿ.ಸಿದ್ದರಾಮಯ್ಯ ತಕ್ಷಣವೇ ಸಂಕಲ್ಪವೊಂದನ್ನು ಕೈಗೊಂಡರು.ಕೆಲ ದಿನಗಳಲ್ಲೇ ಸೊಲ್ಲಾಪುರ, ಬಸವ ಕಲ್ಯಾಣ ಇತರೆಡೆ ಸಂಚರಿಸಿ ತಾಯಿ ಕುರಿತು ಮಾಹಿತಿ ಕಲೆ ಹಾಕಿದರು. ಈ ಸಂದರ್ಭ ಜಯದೇವಿ ಬಗ್ಗೆ ಪೂಜ್ಯ ಭಾವನೆ ಬೆಳೆಯುವ ಜತೆ ಮತ್ತಷ್ಟು ಪ್ರಭಾವಿತರಾದರು. ಎಲ್ಲೆಡೆ ಸುತ್ತಾಡಿ ಸಮಗ್ರ ಮಾಹಿತಿ ಸಂಗ್ರಹಿಸಿದರು.ಕನ್ನಡಕ್ಕಾಗಿ ಹೋರಾಟ ನಡೆಸಿದ ಮಹಾತಾಯಿಯ ಸಾಧನೆಯನ್ನು ಎಲ್ಲರಿಗೂ ತಿಳಿಸಬೇಕು ಎಂಬ ಹಂಬಲವನ್ನು ಕುಟುಂಬ, ಸ್ನೇಹಿತರ ಜತೆ ಹಂಚಿಕೊಂಡರು. ಎಲ್ಲರ ಪ್ರೋತ್ಸಾಹ ಸಿಕ್ಕಿತು. ತಕ್ಷಣವೇ ತಮ್ಮ ಒಂಟಿ ಪಯಣಕ್ಕೆ ಸಿದ್ಧರಾದರು. ಕಾಲೇಜಿನ ಕರ್ತವ್ಯಕ್ಕೆ ಕೊಂಚವೂ ಚ್ಯುತಿ ಬಾರದ ರೀತಿ, ವಿದ್ಯಾರ್ಥಿಗಳಿಗೆ ಮೋಸವಾಗದ ರೀತಿ ತಮ್ಮ ಬಿಡುವಿನ ವೇಳೆಯನ್ನು ತಾಯಿ ಸೇವೆಗೆ ಸಮರ್ಪಿಸಿಕೊಂಡರು.ತಿಪಟೂರು ತಾಲ್ಲೂಕು ಹಾಲ್ಕುರಿಕೆ ಗ್ರಾಮದ ಹೂಲಿಹಳ್ಳಿ ಚಿಕ್ಕಮಲ್ಲಯ್ಯ, ಗಂಗಮ್ಮ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ ಒಪ್ಪಿಗೆ ಪಡೆಯುವ ಜತೆ, ಸಾಣಿಹಳ್ಳಿಯ ತರಳಬಾಳು ಮಠದ ಪಂಡಿತಾರಾಧ್ಯ ಸ್ವಾಮೀಜಿ ಸಮ್ಮುಖ 2012ರ ಜುಲೈ 14ರಂದು ಮೊದಲ ಉಪನ್ಯಾಸ ನೀಡಿ ಎಲ್ಲರ ಗಮನ ಸೆಳೆದರು. ನೆರೆದಿದ್ದ ಪ್ರತಿಯೊಬ್ಬರ ಮನದಲ್ಲೂ ಜಯದೇವಿ ತಾಯಿ ಲಿಗಾಡೆಯವರ ಸಾಧನೆ ಅಚ್ಚಳಿಯದೆ ನಿಲ್ಲುವಂತೆ ಮೋಡಿ ಮಾಡಿದರು.ಮೊದಲ ಉಪನ್ಯಾಸಕ್ಕೆ ಸಿಕ್ಕ ಉತ್ತೇಜನ, ಪ್ರೋತ್ಸಾಹದಿಂದ ಮುಂದಡಿಯಿಟ್ಟರು. ತಿಪಟೂರಿನ ವೀರಶೈವ ಗುರುಕುಲಾನಂದಾಶ್ರಮದ ಜಯದೇವ ಹಾಸ್ಟೆಲ್‌ನಲ್ಲಿ ಹುಣ್ಣಿಮೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ತಮ್ಮ 12ನೇ ಉಪನ್ಯಾಸ ನೀಡಿದರು. ಅಲ್ಲಿ ಉಪಸ್ಥಿತರಿದ್ದ ಸ್ವಾಮೀಜಿ ನಿಮ್ಮ ನೂರನೇ ಉಪನ್ಯಾಸ ಕಾರ್ಯಕ್ರಮ ಇಲ್ಲಿಯೇ ನಡೆಯಬೇಕು. ಅದು ಜಯದೇವಿ ಅವರು ಜನಿಸಿದ ದಿನವೇ ಆಗಿರಬೇಕು ಎಂದು ಆಶೀರ್ವದಿಸಿದರು. ಸ್ವಾಮೀಜಿ ಆಶಯದಂತೆ ನೂರನೇ ಉಪನ್ಯಾಸ ಜೂನ್ 23ರ ಭಾನುವಾರ ಕಾರ ಹುಣ್ಣಿಮೆ ದಿನ ಆಶ್ರಮದಲ್ಲಿ ನಡೆಯಲಿದೆ.ನೂರನೇ ಉಪನ್ಯಾಸ ನಡೆಯುತ್ತಿರುವ ಕುರಿತು ಎಂ.ಜಿ.ಸಿದ್ದರಾಮಯ್ಯ `ಪ್ರಜಾವಾಣಿ' ಜತೆ ತಮ್ಮ ಅನಿಸಿಕೆ ಹಂಚಿಕೊಂಡರು. ತಮಗಾದ ಹಲ ಅನುಭವಗಳನ್ನು ಬಿಚ್ಚಿಟ್ಟರು. ಜಯದೇವಿ ತಾಯಿ ಲಿಗಾಡೆಯವರ ಕುರಿತು ಉಪನ್ಯಾಸ ನೀಡುವ ಮೂಲಕ ಕನ್ನಡಮ್ಮನ ಸೇವೆ ಸಲ್ಲಿಸುತ್ತಿದ್ದೇನೆ ಎಂದರು.

`ನಾನು ಕನ್ನಡ ಪಂಡಿತ ವಿದ್ಯಾರ್ಥಿ. 1978ರಲ್ಲಿ ಮೈಸೂರಿನಲ್ಲಿ ಕನ್ನಡ ಡಿಪ್ಲೊಮಾ ವ್ಯಾಸಂಗ ಮಾಡುವಾಗ ರಸಋಷಿ ಕುವೆಂಪು ಅವರನ್ನು ಭೇಟಿ ಮಾಡುವ ಸುಯೋಗ ಸಿಕ್ಕಿತು. ಒಂದು ಗಂಟೆ ಕಾಲ ನನ್ನ ಜತೆ ಮಾತನಾಡಿದ ರಾಷ್ಟ್ರಕವಿ ಕೊನೆಗೆ ನೀನು ಮುಂದೆ ದೊಡ್ಡವನಾದಾಗ ಕನ್ನಡ ಸೇವೆ ಮಾಡು ಎಂದರು. ಇಪ್ಪತ್ತರ ಹರೆಯದ ನನಗೆ ಆ ವಾಕ್ಯ ವೇದ ವಾಕ್ಯವಾಯಿತು. ಅಂದಿನಿಂದಲೂ ಕುವೆಂಪು ವಾಣಿಯಂತೆ ಕನ್ನಡ ಕೈಂಕರ್ಯದಲ್ಲಿ ನಿರತನಾಗಿದ್ದೇನೆ' ಎನ್ನುತ್ತಾರೆ.`ಸಿದ್ಧಗಂಗಾ ಮಠದಲ್ಲಿ ವ್ಯಾಸಂಗ ಮಾಡುವಾಗ ನಿತ್ಯ ವಿದ್ಯಾರ್ಥಿಗಳಿಗಾಗಿ ಶಿವಕುಮಾರ ಸ್ವಾಮೀಜಿ ನೀಡುತ್ತಿದ್ದ ಆಶೀರ್ವಚನ ನನ್ನ ಬದುಕಿನ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಯಾವುದೇ ಕಾಯಕ ಮಾಡಿದರೂ ಬದ್ಧತೆಯಿಂದ ನಿರ್ವಹಿಸಿ ಎಂಬ ಸ್ವಾಮೀಜಿ ಮಾತನ್ನು ಈ ಕ್ಷಣಕ್ಕೂ ತಪ್ಪದೇ ಪಾಲಿಸುತ್ತಿದ್ದೇನೆ. ಸರಳವಾಗಿ ಬದುಕುತ್ತಿದ್ದೇನೆ. ಇಂದಿಗೂ ಬೈಕ್-ಕಾರು ಬಳಸಲ್ಲ. ಸೈಕಲ್ಲೇ ನನ್ನ ಪ್ರಯಾಣದ ಸಂಗಾತಿ' ಎಂದರು.ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ `ಕನಸು ಕಾಣಿರಿ. ದೊಡ್ಡ ದೊಡ್ಡ ಕನಸು ಕಾಣಿರಿ' ಎಂಬ ವಾಕ್ಯವೂ ನನ್ನ ಜೀವನದಲ್ಲಿ ಸಾಕಷ್ಟು ಪರಿಣಾಮ ಬೀರಿದೆ ಎನ್ನುತ್ತಾರೆ ಈ ಕನ್ನಡ ಪ್ರೇಮಿ ಉಪನ್ಯಾಸಕರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.