ಬುಧವಾರ, ಜೂನ್ 16, 2021
22 °C

ಜಯಲಲಿತಾ ಅಕ್ರಮ ಆಸ್ತಿ ಪ್ರಕರಣ: ಶಶಿಕಲಾ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರ ಆಸ್ತಿಯ ಮೊತ್ತವನ್ನು ಕಸ್ಟಮ್ಸ ಅಧಿಕಾರಿಗಳು ತಪ್ಪಾಗಿ ಎಣಿಕೆ ಮಾಡುವ ಮೂಲಕ ಅಧಿಕ ಮೊತ್ತವನ್ನು ತೋರಿಸಿದ್ದಾರೆ ಎಂದು ಅವರ ಆಪ್ತ ಸ್ನೇಹಿತೆಯಾಗಿದ್ದ ಶಶಿಕಲಾ ಸಿಬಿಐ ವಿಶೇಷ ಕೋರ್ಟ್‌ಗೆ ಶುಕ್ರವಾರ ತಿಳಿಸಿದರು.ಜಯಲಲಿತಾ ಅವರ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ನಲ್ಲಿ ಶಶಿಕಲಾ ಅವರ ಸಾಕ್ಷ್ಯ ಪಡೆಯಲಾಗುತ್ತಿದೆ. ಆ ಸಂದರ್ಭದಲ್ಲಿ ಅವರು ಈ ಮಾಹಿತಿ ನೀಡಿದರು.`1996ರಲ್ಲಿ ಜಯಾ ಅವರು ಇದೇ ವಿವಾದದಲ್ಲಿ ಜೈಲಿನಲ್ಲಿ ಇದ್ದರು. ಆ ಸಂದರ್ಭದಲ್ಲಿ ಅವರ ಎರಡು ಮನೆಗಳಲ್ಲಿ ಪೊಲೀಸರು ತನಿಖೆ ನಡೆಸಿದ್ದಾರೆ. ಜಯಲಲಿತಾ ಅವರಿಗೆ ಇದರ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಕಸ್ಟಮ್ಸ ಅಧಿಕಾರಿಗಳು ತಜ್ಞರ ಸಲಹೆ ಪಡೆದುಕೊಳ್ಳದೇ ಜಯಾ ಅವರ ಆಸ್ತಿ 3.35 ಕೋಟಿ ರೂಪಾಯಿ ಎಂದು ಮಾಹಿತಿ ನೀಡಿದ್ದಾರೆ. ಇದು ಸರಿಯಲ್ಲ~ ಎಂದರು.ಸಿವಿಲ್ ಕೋರ್ಟ್ ಆವರಣದಲ್ಲಿ ವಕೀಲರಿಂದ ಜಟಾಪಟಿ ನಡೆದ ಕಾರಣ ವಿಚಾರಣೆಯನ್ನು ನ್ಯಾಯಾಧೀಶ ಬಿ.ಎಂ.ಮಲ್ಲಿಕಾರ್ಜುನ ಮುಂದೂಡಿದರು.ಕೋರ್ಟ್ ಗರಂ: ಈ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯದ ಆವರಣ ಗುರುವಾರ `ಗರಂ~ಆಗಿದ್ದು ಇಲ್ಲಿ ಉಲ್ಲೇಖಾರ್ಹ.  ಶಶಿಕಲಾ ಅವರಿಗೆ ಇಂಗ್ಲಿಷ್ ಬರುವುದಿಲ್ಲ. ಈ ಹಿನ್ನೆಲೆಯಲ್ಲಿ  ಅವರು ಕೆಲವೊಂದು ಉತ್ತರಗಳನ್ನು ತಮಿಳಿನಲ್ಲಿ ಬರೆದುಕೊಂಡು ಬರುತ್ತಿದ್ದಾರೆ. ಪ್ರಾಸಿಕ್ಯೂಷನ್ ಪರ ವಕೀಲರು ಕೇಳುವ ಪ್ರಶ್ನೆಗಳಿಗೆ ಉತ್ತರ ಹುಡುಕಿ ಹೇಳುತ್ತಿದ್ದಾರೆ. ನಂತರ ಅವರ ಉತ್ತರಗಳನ್ನು ಅವರ ಪರ ವಕೀಲರು ಇಂಗ್ಲಿಷ್‌ಗೆ ಭಾಷಾಂತರ ಮಾಡುತ್ತಿದ್ದಾರೆ. ಈ ರೀತಿ `ಸಿದ್ಧ ಉತ್ತರ~ ನೀಡದಂತೆ ಹಿಂದೆ ಕೆಲವು ಬಾರಿ ನ್ಯಾಯಾಧೀಶರು ಸೂಚಿಸಿದ್ದರೂ ಇದೇ ಪ್ರಕ್ರಿಯೆ ಮುಂದುವರಿದಿದೆ.ಇದರಿಂದ ಕೋಪಗೊಂಡಿದ್ದ ಸಹಾಯಕ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸಂದೇಶ ಜೆ.ಚೌಟ ಅವರು, ಈ ರೀತಿ ಮಾಡದಂತೆ ಶಶಿಕಲಾ ಅವರಿಗೆ ತಿಳಿಸಿದರು. ಆಗ ನ್ಯಾಯಾಧೀಶರು ಶಶಿಕಲಾ ಅವರ ಬಳಿ ಇರುವ ದಾಖಲೆಗಳನ್ನು ನೀಡುವಂತೆ ಕೋರ್ಟ್ ಅಧಿಕಾರಿಗಳಿಗೆ ಸೂಚಿಸಿದರು. ಅದರಲ್ಲಿ ತಮಿಳಿನಲ್ಲಿ ಬರೆದಿರುವ ಹಲವು ಉತ್ತರಗಳನ್ನು ನ್ಯಾಯಾಧೀಶರು ಗಮನಿಸಿದರು.ಈ ಬೆಳವಣಿಗೆಗಳನ್ನು ಗಮನಿಸಿದ ಶಶಿಕಲಾ ಪರ ವಕೀಲರು, `ಪ್ರಾಸಿಕ್ಯೂಷನ್ ನನ್ನ ಕಕ್ಷಿದಾರರಿಗೆ ಬೆದರಿಕೆ ಹಾಕುತ್ತಿದೆ~ ಎಂದು ಗುಡುಗಿದರು. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ವಿ.ಆಚಾರ್ಯ ಅವರು ಕೂಡ ಶಶಿಕಲಾ ಅವರ `ಸಿದ್ಧ ಉತ್ತರ~ಕ್ಕೆ ಅಸಮಾಧಾನ ಸೂಚಿಸಿದರು. ಶುಕ್ರವಾರವೂ `ಸಿದ್ಧ ಉತ್ತರ~ ಪ್ರಕ್ರಿಯೆ ಮುಂದುವರಿಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.