ಭಾನುವಾರ, ಜೂಲೈ 12, 2020
22 °C

ಜರ್ದೋಸಿ ಬದಲಾಯಿತು ಬದುಕು

ಶಶಿಕಾಂತ ಎಸ್. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

ಜರ್ದೋಸಿ ಬದಲಾಯಿತು ಬದುಕು

ಎರಡು ವರ್ಷಗಳ ಹಿಂದೆ ಬೀದರ್‌ನ  ಕೌಸರ್ ಪತಿ ತೀರಿಕೊಂಡಿದ್ದ. ಮೂರು ಮಕ್ಕಳ ತಾಯಿಯಾಗಿರುವ ಕೌಸರ್‌ಗೆ ಆಕಾಶವೇ ತಲೆಯ ಮೇಲೆ ಬಿದ್ದಂತಾಗಿತ್ತು. ಕೆಲ ತಿಂಗಳುಗಳ ಕಾಲ ತಿಂಗಳಿಗೆ ಕೇವಲ 200 ರೂಪಾಯಿಯಲ್ಲಿ  ಮನೆಗೆಲಸ ಮಾಡಿಕೊಂಡು ಅತ್ಯಂತ ಕಷ್ಟದಿಂದ ಕುಟುಂಬ ನಡೆಸುತ್ತಿದ್ದಳು. ಆದರೆ, ಈಗ ಕೌಸರ್ ಪ್ರತಿ ತಿಂಗಳು 4ರಿಂದ 5 ಸಾವಿರ ರೂಪಾಯಿವರೆಗೆ ಗಳಿಸುತ್ತಿದ್ದಾಳೆ. ಅಲ್ಲದೇ ಬೇರೆ ಮಹಿಳೆಯರಿಗೆ ತರಬೇತಿ ನೀಡುವಷ್ಟರ ಮಟ್ಟಿಗೆ ಈಕೆ ಬೆಳೆದಿದ್ದಾಳೆ. ಇದಿಷ್ಟು ಕೌಸರ್ ಕಥೆ.ಬೀದರ್‌ನ ಮತ್ತೊಬ್ಬರು ಕನೀಸ್ ಫಾತಿಮಾಳ ಇಡೀ ಕುಟುಂಬ ಪುಟ್ಟ ಕಿರಾಣಿ ಅಂಗಡಿಯ ಮೇಲೆ ನಡೆಯುತ್ತಿತ್ತು. ಇದು ಜೀವನ ನಿರ್ವಹಣೆಗೆ ಕಷ್ಟವಾಗುತ್ತಿತ್ತು. ಆದರೆ, ಇದೀಗ ಕನೀಸ್ ಪ್ರತಿ ತಿಂಗಳು 3ರಿಂದ 4 ಸಾವಿರ ರೂಪಾಯಿ ಗಳಿಸುತ್ತಿದ್ದಾಳೆ. ಇದರಿಂದಾಗಿ ಆರು ಹೆಣ್ಣು ಮಕ್ಕಳ ಈ ಕುಟುಂಬಕ್ಕೆ ಆಸರೆಯಾಗಿದೆ.ಇದೆಲ್ಲ ಸಾಧ್ಯವಾದದ್ದು ಜರ್ದೋಸಿ ತರಬೇತಿಯಿಂದ. ಕೌಸರ್, ಕನೀಸ್ ಮಾತ್ರವಲ್ಲ ನೂರಾರು ಬಡ, ನಿರ್ಗತಿಕ ಮಹಿಳೆಯರು ಇಂದು ಸ್ವಾವಲಂಬಿ, ಸ್ವಾಭಿಮಾನದ ಜೀವನ ನಡೆಸುತ್ತಿದ್ದಾರೆ. ಬಡ ದಲಿತ, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮಹಿಳೆಯರಿಗೆ ಉಚಿತವಾಗಿ ಜರ್ದೋಸಿ ತರಬೇತಿ ನೀಡಿ ಆರ್ಥಿಕವಾಗಿ ಸಬಲರಾಗಿಸುವ ಕೆಲಸ ಬೀದರ್ ಜಿಲ್ಲೆಯಲ್ಲಿ ಸದ್ದಿಲ್ಲದೇ ನಡೆಯುತ್ತಿದೆ.ವಿವಿಧ ರೀತಿಯ ಅಲಂಕಾರ

ಜರ್ದೋಸಿ ಅಂದರೆ ಸೀರೆ ಮೇಲೆ ಅಲಂಕಾರ ಹಾಕುವುದು. ವಿವಿಧ ರೀತಿಯ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಅಲ್ಲಮಾ ಇಕ್ಬಾಲ್ ಸಂಸ್ಥೆ ಇದರ ಹೊಣೆ ಹೊತ್ತಿದೆ. ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರಿಗೆ ಎರಡು ತಿಂಗಳ ಜರ್ದೋಸಿ ತರಬೇತಿ ನೀಡಲಾಗುತ್ತದೆ. ವಿವಿಧ ಪ್ರಕಾರದ ಸೀರೆಗಳ ಮೇಲೆ ಅಲಂಕಾರಿಕ ಹರಳುಗಳ ಜೋಡಣೆ (ಮೋತಿ ವರ್ಕ್), ಜರ್ದೋಸಿ, ಕುಂದನ್, ಕಲ್ಕತ್ತಾ ಬಾರ್, ಕಟ್ ವರ್ಕ್, ಪ್ಯಾಚ್ ವರ್ಕ್ ಸೇರಿದಂತೆ ಅನೇಕ ವಿಧದ ಕೆಲಸ ತಿಳಿಸಿಕೊಡಲಾಗುತ್ತದೆ.ಎರಡು ತಿಂಗಳ ಜರ್ದೋಸಿ ತರಬೇತಿ ಪೂರ್ಣಗೊಳಿಸಿದ ಮಹಿಳೆಯರಿಗೆ ಸೀರೆಗಳನ್ನು ಅಲಂಕಾರಗೊಳಿಸುವ ಕೆಲಸಕ್ಕೆ ಹಚ್ಚಲಾಗುತ್ತದೆ. ಅಲಂಕಾರಕ್ಕೆ ಬೇಕಾದ ಎಲ್ಲಾ ರೀತಿಯ ವಸ್ತುಗಳನ್ನು ಸಂಸ್ಥೆಯೇ ಪೂರೈಸುತ್ತದೆ. ಉದಾಹರಣೆಗೆ ಒಂದು ಸೀರೆಯ ಬಟ್ಟೆ 200ರಿಂದ 250 ರೂಪಾಯಿ ಮತ್ತು ಅಲಂಕಾರಿಕ ವಸ್ತುವಿಗೆ 300 ರೂಪಾಯಿ ಖರ್ಚು ತಗಲುತ್ತದೆ. ಅಂದರೆ ಒಂದು ಸೀರೆ ಸಿದ್ಧಗೊಳ್ಳಲು ಸುಮಾರು 500 ರೂಪಾಯಿ ವರೆಗೆ ಖರ್ಚು ಬರುತ್ತದೆ. ಹೀಗೆ ಸಿದ್ಧವಾದ ಸೀರೆಯನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಒಂದು ಸಾವಿರ ರೂಪಾಯಿ ಬೆಲೆಯಲ್ಲಿ  ಮಾರಾಟ ಮಾಡಲಾಗುತ್ತದೆ. ಹೈದರಾಬಾದ್ ಸೇರಿದಂತೆ ಅನ್ಯ ಭಾಗದ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಿದರೆ 1200 ರಿಂದ 1500 ರೂಪಾಯಿವರೆಗೆ ಸಿಗುತ್ತದೆ. ಸೀರೆ ಸಿದ್ಧಪಡಿಸಲು ಹಾಗೂ ಮಾರುಕಟ್ಟೆ ವೆಚ್ಚವನ್ನು ಸಂಸ್ಥೆ ಕಡಿತಗೊಳಿಸಿದ ನಂತರ ಒಂದು ಸೀರೆ ಹಿಂದೆ ಸುಮಾರು 500 ರೂಪಾಯಿ ಸೀರೆ ಅಲಂಕಾರಗೊಳಿಸಿದ ಮಹಿಳೆಗೆ ಸಿಗುತ್ತದೆ. ಹೀಗೆ ಒಂದು ಸೀರೆಯನ್ನು ಅಲಂಕಾರಗೊಳಿಸಲು ಸುಮಾರು ಒಂದು ವಾರದ ಸಮಯ ಹಿಡಿಯುತ್ತದೆ. ಅಂದರೆ ಒಂದು ತಿಂಗಳಲ್ಲಿ 4 ಸೀರೆಗಳನ್ನು ಸಿದ್ಧಪಡಿಸಲು ಸಾಧ್ಯವಾಗುತ್ತದೆ. ಇದರಿಂದಾಗಿ ಪ್ರತಿ ತಿಂಗಳು ಒಬ್ಬ ಮಹಿಳೆಗೆ 2 ಸಾವಿರ ರೂಪಾಯಿ ಸಿಗುತ್ತದೆ. ಅಲ್ಲದೇ ಕೆಲವು ಮಹಿಳೆಯರು ನೇರವಾಗಿ ಸ್ಥಳೀಯ ಮಾರುಕಟ್ಟೆಗಳಲ್ಲಿ  ತಾವೇ ಮಾರಾಟ ಮಾಡಿ ಅದಕ್ಕಿಂತ ಹೆಚ್ಚು ಹಣ ಗಳಿಸುತ್ತಿದ್ದಾರೆ.ಅಲ್ಲಮಾ ಇಕ್ಬಾಲ್ ಸಂಸ್ಥೆಯು 2004ರಲ್ಲಿ ಪ್ರಾಯೋಗಿಕವಾಗಿ 50 ಜನರಿಗೆ ಜರ್ದೋಸಿ ತರಬೇತಿ ಹಮ್ಮಿಕೊಂಡಿತ್ತು. ಇದಕ್ಕಾಗಿ ಉತ್ತರ ಪ್ರದೇಶದ ಫರೂಕಾಬಾದ್‌ನಿಂದ ಇಬ್ಬರು ನುರಿತ ಕೆಲಸಗಾರರನ್ನು ಕರೆಸಿ ತರಬೇತಿ ನೀಡಿತ್ತು. ಅದಾದ ನಂತರ ತರಬೇತಿ ಪಡೆಯಲು ಬರುವ ಮಹಿಳೆಯರ ಸಂಖ್ಯೆಯಲ್ಲಿ ಹೆಚ್ಚಳ ಆಗಿದೆ.2009ನೇ ಸಾಲಿನ ಅಂತ್ಯದವರೆಗೆ ಸುಮಾರು 2600 ಮಹಿಳೆಯರು ಜರ್ದೋಸಿ ತರಬೇತಿ ಪಡೆದಿದ್ದಾರೆ. ವಿಶೇಷ ಏನೆಂದರೆ ತರಬೇತಿ ಪಡೆದವರಲ್ಲಿಯೇ ಸುಮಾರು 50 ಜನ ಮಹಿಳೆಯರು ಜರ್ದೋಸಿಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆರಂಭದಲ್ಲಿ ಸಣ್ಣ ಹಾಲ್‌ನಲ್ಲಿ ಈ ಮಹಿಳೆಯರು ಕೆಲಸ ಮಾಡುತ್ತಿದ್ದರು. ಆದರೆ, ಇದೀಗ ತರಬೇತಿ ಪಡೆಯುವವರ ಸಂಖ್ಯೆ ಹೆಚ್ಚಾಗಿದ್ದರಿಂದ ಬೀದರ್‌ನ ಸಿದ್ಧಿ ತಾಲೀಮ್‌ನಲ್ಲಿ ಮೂರು ಅಂತಸ್ತಿನ ಜರ್ದೋಸಿ ಕೇಂದ್ರ ತೆರೆಯಲಾಗಿದೆ.ಐದಾರು ವರ್ಷಗಳಿಂದ ಸಂಸ್ಥೆಯ ಅಡಿಯಲ್ಲಿ ಮಹಿಳೆಯರು ಮೌನ ಕ್ರಾಂತಿ ಮಾಡುತ್ತಿದ್ದಾರೆ. 2008ರಲ್ಲಿ  ಕೇಂದ್ರ ಜವಳಿ ಮತ್ತು ಕೈಮಗ್ಗ ಇಲಾಖೆಯು ಸಂಸ್ಥೆಯ ಕೆಲಸವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿತು. ಅಲ್ಲದೇ ಸಂಸ್ಥೆ ಅಡಿಯಲ್ಲಿ ಜರ್ದೋಸಿ ತರಬೇತಿ ಪಡೆಯುವ ಮಹಿಳೆಯರಿಗೆ ತರಬೇತಿ ಅವಧಿಯಲ್ಲಿ 2500 ರೂಪಾಯಿ ಶಿಷ್ಯ ವೇತನ ನೀಡಲು ಆರಂಭಿಸಿತು. ಇಲ್ಲಿಯವರೆಗೆ ಸುಮಾರು 700 ಮಹಿಳೆಯರು ಶಿಷ್ಯ ವೇತನ ಪಡೆದಿದ್ದಾರೆ. ಅಲ್ಲದೇ ತರಬೇತಿ ಪಡೆಯುವ ಮಹಿಳೆಯರನ್ನು ಆರೋಗ್ಯ ವಿಮೆಯ ವ್ಯಾಪ್ತಿಗೆ ಒಳಪಡಿಸಿ ಉಚಿತ ಆರೋಗ್ಯ ಸಂಬಂಧಿ ಸೌಕರ್ಯ ಒದಗಿಸಲಾಗುತ್ತಿದೆ. ಮತ್ತು 80 ಸ್ವಸಹಾಯ ಸಂಘಗಳನ್ನು ರಚಿಸಿಕೊಂಡು ರಾಷ್ಟ್ರೀಕೃತ ಬ್ಯಾಂಕ್‌ಗಳೊಂದಿಗೆ ಸಂಪರ್ಕ ಕಲ್ಪಿಸಲಾಗಿದೆ.ಜರ್ದೋಸಿ ಕೇಂದ್ರದಲ್ಲಿ ತಯಾರಾದ ಸೀರೆಗೆ ಮಾರುಕಟ್ಟೆಯಲ್ಲಿ ಬಹಳ ಬೇಡಿಕೆ ಇದೆ. ಅನೇಕ ಜನ ನೇರವಾಗಿ ಕೇಂದ್ರಕ್ಕೆ ಬಂದು ಸೀರೆಗಳನ್ನು ಖರೀದಿಸುತ್ತಿರುವುದನ್ನು ಗಮನಿಸಿದರೆ ಇದರ ಜನಪ್ರಿಯತೆ ಎಷ್ಟಾಗಿದೆ ಎಂಬುದನ್ನು ಗಮನಿಸಬಹುದು. ಇಷ್ಟೇ ಅಲ್ಲದೇ ಕೇಂದ್ರವೂ ಒಂದು ಹೆಜ್ಜೆ ಮುಂದೆ ಹೋಗಿ ಸರ್ಕಾರದಿಂದ ಅನುಮತಿ ಪಡೆದು ಕೇಂದ್ರ ಕೈಮಗ್ಗ ಮತ್ತು ಜವಳಿ ಇಲಾಖೆಯು ಏರ್ಪಡಿಸುವ ಮಾರಾಟ ಮೇಳ ಮತ್ತು ಬಟ್ಟೆ ಪ್ರದರ್ಶನದಲ್ಲಿ ಇವುಗಳನ್ನು ಇಟ್ಟು ಮಾರಾಟ ಮಾಡಲಾಗುತ್ತಿದೆ. ಅಲ್ಲದೇ ಖಾಸಗಿಯವರು ಆಯೋಜಿಸುವ ಪ್ರದರ್ಶನ ಮತ್ತು ಹಬ್ಬದ ಸಂದರ್ಭದಲ್ಲಿ  ಮಾರಾಟ ಮೇಳ ನಡೆಸಿ ಇವುಗಳನ್ನು ಇಡುವ ಮೂಲಕ ಮಾರುಕಟ್ಟೆಯಲ್ಲಿ ಇದರ ವಿಸ್ತಾರ ಹೆಚ್ಚಿಸಲಾಗುತ್ತಿದೆ. ಸರ್ಕಾರ ಜರದೋಸಿ ಕೆಲಸಕ್ಕಾಗಿ ಪ್ರಶಸ್ತ ಸ್ಥಳ, ಸೂಕ್ಷ್ಮ ಕೆಲಸಕ್ಕಾಗಿ ಯಂತ್ರೋಪಕರಣಗಳು ಹಾಗೂ ಬ್ರ್ಯಾಂಡ್ ನೀಡಿದರೆ ಇದನ್ನು ದೊಡ್ಡ ಉದ್ಯಮವಾಗಿ ಪರಿವರ್ತಿಸಬಹುದು ಎಂದು ಜರದೋಸಿ ಸಂಸ್ಥೆಯ ಸಂಸ್ಥಾಪಕರಾದ ಮೆಹರ್ ಸುಲ್ತಾನಾ ತಿಳಿಸಿದರು.ಆರಂಭದಲ್ಲಿ ಜರ್ದೋಸಿ ತರಬೇತಿ ಪಡೆಯಲು ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮಹಿಳೆಯರು ಮಾತ್ರ ಬರುತ್ತಿದ್ದರು. ಆದರೆ, ಇದೀಗ ಮೇಲ್ಜಾತಿಯ ಬಡ ಮಹಿಳೆಯರು ಕೂಡ ತರಬೇತಿ ಪಡೆಯುತ್ತಿದ್ದಾರೆ. ಅಲ್ಲದೇ ಸಂಸ್ಥೆಯು ಗ್ರಾಮೀಣ ಮಹಿಳೆಯರಿಗೂ ಇದರ ಸದುಪಯೋಗ ಸಿಗಲು ತರಬೇತಿಗಾಗಿ ಅರ್ಜಿಗಳನ್ನು ಸಲ್ಲಿಸಲು ಪತ್ರಿಕೆಗಳ ಮೂಲಕ ತಿಳಿಸುತ್ತಿದೆ. 2016ರ ವರೆಗೆ ಸುಮಾರು 10 ಸಾವಿರ ಜನರಿಗೆ ಜರದೋಸಿ ತರಬೇತಿ ನೀಡಿ ಬಡ ಮಹಿಳೆಯರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಸಂಸ್ಥೆ ಶ್ರಮಿಸುತ್ತಿದೆ. ಅತಿ ಹೆಚ್ಚು ಸ್ವಸಹಾಯ ಸಂಘಗಳನ್ನು ಸ್ಥಾಪಿಸಿ ಸ್ವಸಹಾಯ ಕ್ರಾಂತಿ ಮಾಡಿದ ಬೀದರ್ ಜಿಲ್ಲೆ ಮತ್ತೊಂದು ಕ್ರಾಂತಿಗೆ ಸಜ್ಜಾಗುತ್ತಿದೆ.

9972146667

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.