ಬುಧವಾರ, ಏಪ್ರಿಲ್ 21, 2021
31 °C

ಜಾಗತಿಕ ಷೇರುಪೇಟೆ ಭಾರತಕ್ಕೆ 7ನೇ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಅತ್ಯುತ್ತಮ ವಹಿವಾಟು ದಾಖಲಿಸಿರುವ ಜಾಗತಿಕ ಷೇರುಪೇಟೆಗಳ ಪಟ್ಟಿಯಲ್ಲಿ  ಭಾರತಕ್ಕೆ 7ನೇ ಸ್ಥಾನ ಲಭಿಸಿದೆ. ಅಮೆರಿಕ, ಇಂಗ್ಲೆಂಡ್, ಚೀನಾ  ಮತ್ತು ಜಪಾನ್‌ಗೆ ಹೋಲಿಸಿದರೆ ಮುಂಬೈ ಷೇರುಪೇಟೆ ಹೂಡಿಕೆದಾರರ ನೆಚ್ಚಿನ ತಾಣವಾಗಿದೆ ಎಂದು `ಬ್ಯಾಂಕ್ ಆಫ್ ಅಮೆರಿಕ ಮೆರಿಲ್ ಲಿಂಚ್~ ಇತ್ತೀಚೆಗೆ ನಡೆಸಿದ ಅಧ್ಯಯನ ಹೇಳಿದೆ.ಡಾಲರ್ ಎದುರು ರೂಪಾಯಿ ಮೌಲ್ಯ ಚೇತರಿಕೆ ಹಾದಿಗೆ ಮರಳಿರುವುದರಿಂದ ಕಳೆದ ಮೂರು ವಾರದಲ್ಲಿ ಭಾರತದಲ್ಲಿ ಹೂಡಿಕೆದಾರರ ಸಂಪತ್ತು ಶೇ 12ರಷ್ಟು ವೃದ್ಧಿಸಿದೆ. ಜಾಗತಿಕ ಆರ್ಥಿಕ ಅಸ್ಥಿರತೆಯಿಂದ ಅಮೆರಿಕ ಮತ್ತು ಯೂರೋಪ್‌ನಲ್ಲಿ ಷೇರುಪೇಟೆ ನೆಲಕಚ್ಚಿದರೆ ಟರ್ಕಿಯಲ್ಲಿ ಗರಿಷ್ಠ ಚೇತರಿಕೆ ಕಂಡಿದೆ. ಟರ್ಕಿ ಸರ್ಕಾರಿ ಸಾಲಪತ್ರಗಳ ಮೌಲ್ಯ ಕಳೆದೊಂದು ವರ್ಷದಲ್ಲಿ ಶೇ 29ರಷ್ಟು ಹೆಚ್ಚಿದೆ. ಪೂರ್ಚುಗಲ್ ಸರ್ಕಾರಿ ಬಾಂಡ್‌ಗಳ ಬೆಲೆ ಶೇ 24ರಷ್ಟು ಹೆಚ್ಚಿದೆ. ಇದೇ ವೇಳೆ ಸಿಂಗಪುರ ಷೇರು ಮಾರುಕಟ್ಟೆ ಶೇ 17ರಷ್ಟು, ಮೆಕ್ಸಿಕೊ  ಸರ್ಕಾರಿ ಸಾಲಪತ್ರಗಳು ಶೇ 14ರಷ್ಟು ಚೇತರಿಕೆ ಕಂಡಿವೆ. ಅತ್ಯುತ್ತಮ ಹೂಡಿಕೆ ಪಟ್ಟಿಯಲ್ಲಿ ಭಾರತ ಸರ್ಕಾರದ ಬಾಂಡ್‌ಗಳು 36ನೇ ಸ್ಥಾನದಲ್ಲಿವೆ. ಈ ಸಾಲಪತ್ರದ ಮೇಲೆ ಹೂಡಿಕೆ ಮಾಡಿದವರಿಗೆ ಪ್ರಸಕ್ತ ವರ್ಷ ಇಲ್ಲಿಯವರೆಗೆ ಶೇ 2.9ರಷ್ಟು ಲಾಭವಾಗಿದೆ. ಚೀನಾದ ಕಾರ್ಪೊರೇಟ್ ಬಾಂಡ್‌ಗಳು, ಜಪಾನ್, ಕೆನಡಾ, ಸ್ಪೇನ್, ಹಾಂಕಾಂಗ್, ಇಟಲಿ, ಗ್ರಿಸ್‌ನ  ಷೇರು ವಿನಿಮಯ ಕೇಂದ್ರಗಳಿಗೆ ಹೋಲಿಸಿದರೆ  ಲಾಭಾಂಶ ಪ್ರಮಾಣದಲ್ಲಿ ಮುಂಬೈ ಷೇರುಪೇಟೆ ಮುಂದಿದೆ. ಡಾಲರ್ ಎದುರು ಆಯಾ ದೇಶಗಳ ಕರೆನ್ಸಿ ವಿನಿಮಯ ಮೌಲ್ಯ ಆಧರಿಸಿ ಬ್ಯಾಂಕ್ ಆಫ್ ಅಮೆರಿಕ ಈ ಶ್ರೇಣಿ ನೀಡಿದೆ.ಪ್ರಸಕ್ತ ವರ್ಷ (2012) ಇಲ್ಲಿಯವರೆಗೆ ಜಾಗತಿಕ ಷೇರುಪೇಟೆಗಳು  84 ಕೋಟಿ ಡಾಲರ್ ಬಂಡವಾಳ ಆಕರ್ಷಿಸಿವೆ ಎಂದು ಈ ವರದಿ ಹೇಳಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.