ಮಂಗಳವಾರ, ಮಾರ್ಚ್ 2, 2021
23 °C

ಜಾಡಿಯಲ್ಲಿ ಹಾಡಿನುಂಗುರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಾಡಿಯಲ್ಲಿ ಹಾಡಿನುಂಗುರ!

ಸಿನಿಮಾ ಮಂದಿ ಹೊಸತಾಗಿ ಏನನ್ನಾದರೂ ಮಾಡಬೇಕು ಎಂದು ಯೋಚಿಸುತ್ತಲೇ ಇರುತ್ತಾರೆ. ಚಿತ್ರ ಬಿಡುಗಡೆಗೆ ಮುನ್ನ ನಡೆಯುವ ಬಹುತೇಕ ಚಟುವಟಿಕೆಗಳಲ್ಲಿ ಅವರು ಹೊಸ ರೀತಿಯಲ್ಲಿ ಯೋಚಿಸುತ್ತಿರುವ ಸೂಚನೆಗಳನ್ನಂತೂ ಕೊಡುತ್ತಾರೆ.ಬಿಡುಗಡೆಯ ನಂತರ ಚಿತ್ರದ ಹಣೆಬರಹ ಏನಾಗುತ್ತದೋ, ಬೇರೆ ಮಾತು.`ತೂಫಾನ್~ ಚಿತ್ರದ ನಿರ್ದೇಶಕ ಸ್ಮೈಲ್ ಸೀನು ಕೂಡ `ಡಿಫರೆಂಟ್~ ಆಗಿ ಏನನ್ನಾದರೂ ಮಾಡಬೇಕು ಎಂಬ ಉಮೇದು ಇರುವಂಥವರು.ಚಿತ್ರದ ಹಾಡುಗಳ ಆಡಿಯೋ ಸೀಡಿಯನ್ನು ಮೀನಿನ ಜಾಡಿಯಲ್ಲಿ ಇಟ್ಟಿದ್ದೇ ಇದಕ್ಕೆ ಸಾಕ್ಷಿ.`ತೂಫಾನ್~ನಲ್ಲಿ ಅಭಿನಯಿಸಿರುವ ಆಕರ್ಷ್ ಮೀನಿನ ಟ್ಯಾಂಕೊಳಗೆ ಕೈಯಿಟ್ಟದ್ದೇ ಮೀನುಗಳು ಗಲಿಬಿಲಿಗೊಂಡು ತುಸು ದೂರಕ್ಕೆ ಈಜಿದವು. ಅಲ್ಲಿಂದ ಸೀಡಿ ಹೊರಗೆ ತೆಗೆದ ಆಕರ್ಷ್ ಏನೋ ಸಾಧನೆ ಮಾಡಿದಂತೆ ನಿಂದರು.ಸಾಮಾನ್ಯವಾಗಿ ಚಿತ್ರದ ಬಜೆಟ್ ಎಷ್ಟು ಎಂಬುದನ್ನು ನಿರ್ದೇಶಕರು ಹೇಳುವುದೇ ಇಲ್ಲ. ಸೀನು ಇದಕ್ಕೆ ಅಪವಾದ. `ತೂಫಾನ್~ಗಾಗಿ ಇದುವರೆಗೆ ಎರಡು ಕೋಟಿ ರೂಪಾಯಿಯನ್ನು ಅವರು ಖರ್ಚು ಮಾಡಿಸಿದ್ದಾರೆ. ಬಿಡುಗಡೆ ಹೊತ್ತಿಗೆ ಇನ್ನೂ ಒಂದು ಕೋಟಿ ಬೇಕಂತೆ. ನಿರ್ಮಾಪಕ ಜಡೇಗೌಡರು ಎರಡು ವರ್ಷ ಗಣಿ ಮರ್ಚೆಂಟ್ ಆಗಿದ್ದವರು. ರಿಯಲ್ ಎಸ್ಟೇಟ್‌ನಲ್ಲಿ ಕೂಡ ಕೈಯಾಡಿಸಿದ್ದಾರೆ.

 

ಸದ್ಯಕ್ಕೆ ಗ್ರಾನೈಟ್ ವ್ಯಾಪಾರದಲ್ಲಿ ತೊಡಗಿದ್ದಾರೆ. ವ್ಯವಹಾರ ದೊಡ್ಡದಾಗಿರುವುದರಿಂದ ಮೂರು ಕೋಟಿ ಅವರಿಗೆ ಅಂಥ ದೊಡ್ಡ ಮೊತ್ತವೇನೂ ಅಲ್ಲ.

ಚಿತ್ರರಂಗಕ್ಕೆ ತಾವೇ ಇಷ್ಟಪಟ್ಟು ಬಂದಿರುವುದಾಗಿ ಹೇಳಿದ ಗೌಡರಿಗೆ ಒಳ್ಳೆಯ ಸಿನಿಮಾ ಕೊಡುವ ಹಂಬಲವಿದೆ. 45 ದಿನಗಳ ಚಿತ್ರೀಕರಣವನ್ನು ಅವರು ಆಸ್ಥೆಯಿಂದ ನಿಗಾ ಮಾಡಿದ್ದಾರೆ.ನಾಯಕ ಯಶಸ್‌ಗೆ ಇದು ನಾಲ್ಕನೇ ಚಿತ್ರ. ಇದರಲ್ಲಾದರೂ ಗೆಲುವು ಸಿಕ್ಕೀತೇ ಎಂಬ ಆಸೆಗಣ್ಣು ಅವರದ್ದು. ಬಲಗಣ್ಣಿನ ಬಳಿ ಪೆಟ್ಟಾಗಿದ್ದ ಕಾರಣ ಕೆಲವು ದಿನ ಚಿತ್ರೀಕರಣದಲ್ಲಿ ತೊಡಗುವುದು ಅವರಿಗೆ ಕಷ್ಟವಾಗಿತ್ತಂತೆ. ಅದೇ ಕಾರಣಕ್ಕೆ ಚಿತ್ರೀಕರಣದಲ್ಲಿ ತುಸು ವಿಳಂಬವಾಯಿತು ಎಂದು ಸೀನು ಹೇಳಿದರು.`ತೂಫಾನ್~ನಲ್ಲಿ ಇಪ್ಪತ್ತು ನಿಮಿಷಗಳ ಅವಧಿಯ ಕ್ಲೈಮ್ಯಾಕ್ಸ್ ಇರುತ್ತದೆ. ನಿರ್ದೇಶಕರ ಪ್ರಕಾರ ಇದು ಕೂಡ ಹೊಸತನ! ಎರಡು ಬಿಟ್ ಹಾಗೂ ಒಂದು ಹಾಡಿನ ಚಿತ್ರೀಕರಣವಿನ್ನೂ ಬಾಕಿ ಇದೆ.ಚಿತ್ರದ ಗೀತೆಗಳಿಗೆ ಎಲ್ವಿನ್ ಜೋಶ್ವಾ ಮಟ್ಟು ಹಾಕಿದ್ದಾರೆ. ಚೆನ್ನೈನಲ್ಲಿ ರೀರೆಕಾರ್ಡಿಂಗ್ ಮಾಡಿದ್ದು, ಗುಣಮಟ್ಟ ಕಾಯ್ದುಕೊಳ್ಳುವ ಉದ್ದೇಶ ಅವರದ್ದು. ಚಿತ್ರಕ್ಕೆ ಹಾಡು ಬರೆದಿರುವ ನಾಗೇಂದ್ರ ಪ್ರಸಾದ್ ಅವರಿಗೆ ಖುದ್ದು ಗಾಯಕ ಬಾಲಸುಬ್ರಹ್ಮಣ್ಯಂ ಹೊಗಳಿಕೆಯ ಸರ್ಟಿಫಿಕೇಟ್ ನೀಡಿದ್ದು ಖುಷಿ ಕೊಟ್ಟಿದೆ.ಆನಂದ್ ಆಡಿಯೋ `ತೂಫಾನ್~ ಗೀತೆಗಳನ್ನು ಮಾರುಕಟ್ಟೆಗೆ ತಂದಿದೆ. ಚಿತ್ರದ ತಾರಾಬಳಗದಲ್ಲಿರುವ ರವೀಂದ್ರನಾಥ್, ವಿದ್ಯಾಮೂರ್ತಿ ಮೊದಲಾದವರು ಒಳ್ಳೆಯ ಸಿನಿಮಾ ಮಾಡುವ ನಿರ್ಮಾಪಕರ ಉಮೇದನ್ನು ಮೆಚ್ಚಿಕೊಂಡು ಮಾತನಾಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.