ಶನಿವಾರ, ಫೆಬ್ರವರಿ 27, 2021
19 °C

ಜಾಣ ಪುಟಾಣಿಗಳ ಬೊಂಬೆಯಾಟ

ಪದ್ಮನಾಭ ಭಟ್‌ Updated:

ಅಕ್ಷರ ಗಾತ್ರ : | |

ಜಾಣ ಪುಟಾಣಿಗಳ ಬೊಂಬೆಯಾಟ

ಇಸ್ರೇನ್‌ನ ದಿಕ್ಲಾ ಕಾಟ್ಜ್‌ ಅವರು ನಾಟಕ ರಚನೆ, ನಿರ್ದೇಶನ, ಬೊಂಬೆಯಾಟ ಹೀಗೆ ಹಲವು ಬಗೆಯಲ್ಲಿ ರಂಗಭೂಮಿಯಲ್ಲಿ ತೊಡಗಿಕೊಂಡಿರುವವರು. ಮಕ್ಕಳ ರಂಗಭೂಮಿ ಬಗ್ಗೆ ವಿಶೇಷ ಆಸ್ಥೆ ಹೊಂದಿರುವ ದಿಕ್ಲಾ ತಮ್ಮ ಪತಿ ಆವಿ ಜಿಚಾ ಅವರೊಂದಿಗೆ ಸೇರಿ ‘ದ ಕೀ ಥಿಯೇಟರ್‌’ ಎಂಬ ತಂಡ ಕಟ್ಟಿಕೊಂಡು ಬೇರೆ ಬೇರೆ ದೇಶಗಳಲ್ಲಿ ಮಕ್ಕಳ ನಾಟಕ, ಬೊಂಬೆಯಾಟಗಳನ್ನು ಪ್ರದರ್ಶಿಸುತ್ತಿದ್ದಾರೆ.ಹಲವು ಜಾಗತಿಕ ರಂಗೋತ್ಸವದಲ್ಲಿ ತಮ್ಮ ದೇಶವನ್ನು ಪ್ರತಿನಿಧಿಸಿರುವ ಇವರು ‘ಇಲಾನೋಟ್‌’ ಎಂಬ ಸಿನಿಮಾವನ್ನೂ ನಿರ್ದೇಶಿಸಿದ್ದಾರೆ.

ಇತ್ತೀಚೆಗೆ ತಮ್ಮ ತಂಡದೊಂದಿಗೆ ನಗರಕ್ಕೆ ಆಗಮಿಸಿದ್ದ ದಿಕ್ಲಾ ರಂಗಶಂಕರದಲ್ಲಿ ‘ವೆನ್ ಆಲ್‌ ವಾಸ್‌ ಗ್ರೀನ್‌’ ಎಂಬ ಬೊಂಬೆಯಾಟವನ್ನು ಪ್ರದರ್ಶಿಸಿದರು.

ಇದೇ ಸಂದರ್ಭದಲ್ಲಿ ಮಾತಿಗೆ ಸಿಕ್ಕ ಅವರು ರಂಗಭೂಮಿಯ ಪ್ರಚಲಿತ ವಿದ್ಯಮಾನಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.* ನೀವು ಮಕ್ಕಳ ರಂಗಭೂಮಿಯತ್ತ ಆಕರ್ಷಿತರಾಗಲು ಪ್ರೇರಣೆಯೇನು?

ನಾನು ಮಕ್ಕಳ ರಂಗಭೂಮಿಗೆ ಅಡಿಯಿಟ್ಟಿದ್ದು 18 ವರ್ಷಗಳ  ಹಿಂದೆ. ನಾನು ಮತ್ತು ನನ್ನ ಪತಿ ಆವಿ ಜಿಚಾ ಇಬ್ಬರಿಗೂ ಮೊದಲಿನಿಂದಲೂ ರಂಗಭೂಮಿಯ ಕುರಿತು ಆಸಕ್ತಿ ಇತ್ತು. ನಾನು ನಾಟಕ ರಚನೆ ಮತ್ತು ಅವರು ನಟನೆಯ ಬಗ್ಗೆ ಅಧ್ಯಯನ ನಡೆಸಿದ್ದೆವು.ಒಂದು ದಿನ ಆವಿ ಮಕ್ಕಳಿಗೆ ಕಥೆ ಹೇಳುವ ಯೋಜನೆಯನ್ನು ನನ್ನ ಮುಂದೆ ಪ್ರಸ್ತಾಪಿಸಿದ. ನಾನು ‘ಕಥೆ ಹೇಳುವ ಬದಲು ನೀನ್ಯಾಕೆ ಮಕ್ಕಳಿಗಾಗಿ ರಂಗಪ್ರಯೋಗವನ್ನೇ ಮಾಡಬಾರದು?’ ಎಂದು ಕೇಳಿದೆ.ಅವನು ‘ನನಗೂ ಆ ಆಸೆಯಿದೆ. ಆದರೆ ಯಾರಾದರೂ ಮಕ್ಕಳಿಗಾಗಿ ನಾಟಕ ಬರೆಯಬೇಕಲ್ಲವೇ? ನೀನೇ ಯಾಕೆ ಬರೆಯಬಾರದು? ಎಂದು ತಿರುಗಿ ಪ್ರಶ್ನಿಸಿದರು. ನಾನು ಒಪ್ಪಿಕೊಂಡೆ. ಹೀಗೆ ನಾವು ಮಕ್ಕಳ ನಾಟಕ ಆಡಲು ಆರಂಭಿಸಿದೆವು.* ಬೊಂಬೆಯಾಟ ಪ್ರಕಾರಕ್ಕೆ ಹೊರಳಿಕೊಂಡಿದ್ದು ಯಾವಾಗ?

ಲಂಡನ್‌ನಲ್ಲಿ ನಾವಿಬ್ಬರೂ ಒಂದು ಬೊಂಬೆಯಾಟದ ಪ್ರದರ್ಶನ ನೋಡಿದೆವು. ಅದೊಂದು ಅದ್ಭುತ ಪ್ರಯೋಗವಾಗಿತ್ತು. ಆವರೆಗೂ ನಮಗೆ ಬೊಂಬೆಯಾಟದ ಬಗ್ಗೆ ಏನೂ ಗೊತ್ತಿರಲಿಲ್ಲ. ಆದರೆ ಆ ಪ್ರದರ್ಶನ ನೋಡಿದ ಮೇಲೆ ನಮ್ಮ ಅಭಿವ್ಯಕ್ತಿಗಳಿಗೆ, ಪರಿಕಲ್ಪನೆಗಳಿಗೆ ಸೂಕ್ತವಾಗಿ ಹೊಂದುವ ಮಾಧ್ಯಮ ಅದೇ ಎಂಬುದು ಮನವರಿಕೆಯಾಯಿತು.* ಬೊಂಬೆಯಾಟ ಕಲಿತುಕೊಳ್ಳುವಲ್ಲಿ ಎದುರಿಸಿದ ಸವಾಲುಗಳೇನು?

ಇಸ್ರೇಲ್‌ನಲ್ಲಿ ಬೊಂಬೆಯಾಟದ ಸಂಪ್ರದಾಯ ಇಲ್ಲ. ನಾವು ಹೊರಗಿನ ಸಂಸ್ಕೃತಿಯಿಂದ ಎರವಲು ಪಡೆದುಕೊಂಡೇ ಬೊಂಬೆಯಾಟವನ್ನು ಕಲಿತುಕೊಳ್ಳಬೇಕಾಗಿತ್ತು. ಆ ಕಲೆ ಕರಗತ ಆದ ಮೇಲೆ ಅದನ್ನು ನಮ್ಮ ಸಂಸ್ಕೃತಿಗೆ ಅಳವಡಿಸುವುದು ಅಷ್ಟೊಂದು ಕಷ್ಟ ಎನಿಸಿಲ್ಲ.* ನಿಮ್ಮ ಬಾಲ್ಯದ ಅನುಭವಗಳು ಬೊಂಬೆಯಾಟ ಪ್ರಯೋಗದ ಮೇಲೆ ಯಾವ ರೀತಿ ಪ್ರಭಾವ ಬೀರಿವೆ?

ನಾನು ಬಾಲ್ಯದಲ್ಲಿ ನಿಗೂಢ ಕತೆಗಳನ್ನು ತುಂಬಾ ಇಷ್ಟಪಟ್ಟು ಕೇಳುತ್ತಿದ್ದೆ. ಆ ಕಥೆಗಳಲ್ಲಿ ನಡೆಯುವ ಮ್ಯಾಜಿಕ್‌ಗಳನ್ನು ಮನಸಾ ಆನಂದಿಸುತ್ತಿದ್ದೆ. ಬೊಂಬೆಯಾಟದಲ್ಲಿ ಈ ಕಲ್ಪಿತಗಳನ್ನು ಸಾಕಾರಗೊಳಿಸಲು ಸಾಕಷ್ಟು ಅವಕಾಶವಿದೆ. ಅಲ್ಲಿ ಪಾತ್ರಗಳು ಚಂದ್ರನ ಮೇಲೆ ಹಾರಾಡಬಲ್ಲವು.ನೀರಿನ ಮೇಲೆ ನಡೆಯಬಲ್ಲವು. ಬೆಂಕಿಯನ್ನು ಉಗುಳಬಲ್ಲವು. ಇವೆಲ್ಲವೂ ನನ್ನ ಬಾಲ್ಯದ ಕಥೆಗಳಲ್ಲಿ ಕಲ್ಪಿಸಿಕೊಳ್ಳುತ್ತಿದ್ದಂಥ ಅಂಶಗಳು. ಇಂದು ನಾನು ಬೊಂಬೆಯಾಟ ಪ್ರಯೋಗ ಮಾಡುವಾಗಲೂ ನನ್ನ ಬಾಲ್ಯದ ಕಲ್ಪನೆಗಳೇ ನನ್ನ ಮನಸಲ್ಲಿರುತ್ತವೆ.* ಸಾಮಾನ್ಯವಾಗಿ ಮಕ್ಕಳ ನಾಟಕಗಳು ಎಂದಾಕ್ಷಣ ಅದು ನೀತಿ ಬೋಧಕವಾಗಿರಬೇಕು ಎಂದು ನಿರ್ಬಂಧಿಸಿಕೊಂಡುಬಿಡುತ್ತೇವೆ. ಅದು ಎಷ್ಟರಮಟ್ಟಿಗೆ ಸರಿ?

ನನ್ನ ಪ್ರಕಾರ ಎರಡು ಪ್ರಕಾರದ ಮಕ್ಕಳ ರಂಗಭೂಮಿ ಇದೆ. ಮೊದಲನೆಯದು ಬೋಧಕ ರಂಗಭೂಮಿ. ಇದು ಯಾವಾಗಲೂ ಇದು ಸರಿ, ಇದು ತಪ್ಪು– ಏನು ಮಾಡಬೇಕು, ಏನು ಮಾಡಬಾರದು ಎಂದು ಶಿಕ್ಷಣ ನೀಡುವುದನ್ನೇ ಉದ್ದೇಶ ಆಗಿಟ್ಟುಕೊಂಡಿರುತ್ತದೆ. ಆ ನಾಟಕಗಳಲ್ಲಿ ಸಂದೇಶ ತುಂಬ ವಾಚ್ಯವಾಗಿ ವ್ಯಕ್ತವಾಗುತ್ತದೆ.ಈ ಥರದ ರಂಗಭೂಮಿ ನನಗಿಷ್ಟವಾಗುವುದಿಲ್ಲ. ನಾನು ಅದನ್ನು ಮಾಡುವುದೂ ಇಲ್ಲ. ಇನ್ನೊಂದು ಥರದ ರಂಗಭೂಮಿ ಇದೆ. ಅದು ಕಲಾತ್ಮಕ ಅನುಭವ ನೀಡುವುದನ್ನು ತನ್ನ ಮುಖ್ಯ ಗುರಿಯಾಗಿರಿಸಿಕೊಂಡಿರುತ್ತದೆ. ದೃಶ್ಯ, ಬೆಳಕು, ಪರಿಕರಗಳು, ಪಾತ್ರಗಳು ಇವುಗಳನ್ನೆಲ್ಲ ಬಳಸಿಕೊಂಡು ಅದೇ ಸಂದೇಶವನ್ನು ಭಿನ್ನವಾಗಿ, ವಿಶಾಲ ವ್ಯಾಪ್ತಿಯಲ್ಲಿ ಪರೋಕ್ಷವಾಗಿ ವೀಕ್ಷಕರಿಗೆ ದಾಟಿಸುತ್ತಿರುತ್ತದೆ.

ಇದು ಸರಿ– ಇದು ತಪ್ಪು ಎಂಬುದನ್ನು ನೇರವಾಗಿ ಹೇಳದೆ ಜಗತ್ತು ಹೇಗಿದೆ ಎಂಬುದನ್ನು ತೋರಿಸುತ್ತಲೇ ಅದನ್ನು ಇನ್ನಷ್ಟು ಸುಂದರಗೊಳಿಸುವ ದಾರಿಗಳನ್ನು ಹೊಳೆಯಿಸುತ್ತದೆ. ಇದು ನನಗಿಷ್ಟವಾದ ರಂಗಭೂಮಿಯ ರೀತಿ.* ಮಕ್ಕಳ ರಂಗಭೂಮಿಯಲ್ಲಿ ಬಳಕೆಯಾಗುವ ಭಾಷೆಯ ಬಗ್ಗೆ ಹೇಳಿ.

ಸಾಮಾನ್ಯವಾಗಿ ಮಕ್ಕಳ ನಾಟಕ ಎಂದಾಕ್ಷಣ ಬಾಲಿಶ ಭಾಷೆಯನ್ನು ಬಳಕೆ ಮಾಡುತ್ತಾರೆ. ಇದು ಮೂರ್ಖತನ. ಮಕ್ಕಳನ್ನು ಬಾಲಿಶ ಎಂದು ನಾವು ಭಾವಿಸುವುದೇ ಸರಿಯಲ್ಲ.ಅವರೂ ಪ್ರಬುದ್ಧ ಭಾಷೆ, ಪಾತ್ರ, ಶಬ್ದ ಚಮತ್ಕಾರಗಳನ್ನು ಆನಂದಿಸಬಲ್ಲರು.  ಮನರಂಜನೆ ಮತ್ತು ರಂಗಭೂಮಿ ನಡುವೆ ಸಾಕಷ್ಟು ಅಂತರವಿದೆ. ರಂಗಭೂಮಿಯ ಮನರಂಜನೆ ನೀಡುವುದೇ ಮುಖ್ಯ ಗುರಿಯಲ್ಲ.ಹಾಗೆ ನೋಡಿದರೆ ಮಕ್ಕಳ ರಂಗಭೂಮಿಯ ಭಾಷೆ ಪ್ರಬುದ್ಧವಾಗಿರುವುದು ಹೆಚ್ಚು ಉಪಯುಕ್ತ. ಅದನ್ನು ನೋಡಿದ ಮಕ್ಕಳೂ ಆ ಭಾಷೆಯ ಮಟ್ಟಕ್ಕೆ ಬೆಳೆಯುತ್ತಾರೆ. ಮಕ್ಕಳು ತುಂಬಾ ಜಾಣರಿರುತ್ತಾರೆ. ನಮ್ಮಷ್ಟೇ ಸಮರ್ಥವಾಗಿ ರಂಗಭೂಮಿಯನ್ನು ಅರ್ಥೈಸಿಕೊಳ್ಳುವ ಆಸ್ವಾದಿಸುವ ಶಕ್ತಿ ಅವರಿಗಿರುತ್ತದೆ.

*ರಂಗಭೂಮಿ ಚಟುವಟಿಕೆ ಹಿಂದಿಗಿಂತಲೂ ಸಾಕಷ್ಟು ಹೆಚ್ಚಿದೆ. ಆದರೆ ಪ್ರಮಾಣಕ್ಕೂ ಗುಣಮಟ್ಟಕ್ಕೂ ನಡುವಿನ ವ್ಯತ್ಯಾಸ ಹೆಚ್ಚುತ್ತಿದೆಯಲ್ಲವೇ?

ನಿಜ. ಆದರೆ ಇದು ಕೇವಲ ಭಾರತ, ಇಸ್ರೇಲ್‌ಗಳಲ್ಲಷ್ಟೆ ಕಂಡುಬರುತ್ತಿರುವ ಬೆಳವಣಿಗೆಯಲ್ಲ. ಜಗತ್ತಿನಾದ್ಯಂತ ಹೀಗೆಯೇ ಆಗುತ್ತಿದೆ.

ಬಹುಶಃ ಎಲ್ಲ ಕಡೆಗಳಲ್ಲಿಯೂ ಜನರು ಮನರಂಜನೆ ಮತ್ತು ರಂಗಭೂಮಿ ನಡುವಿನ ವ್ಯತ್ಯಾಸದ ಕುರಿತು ಗೊಂದಲಗೊಂಡಿದ್ದಾರೆ.ಇದೇ ಕಾರಣಕ್ಕೆ ರಂಗಭೂಮಿಗೆ ಸಾಕಷ್ಟು ಜನರು ಬರುತ್ತಿದ್ದರೂ ಈ ಮಾಧ್ಯಮವನ್ನು ಗಂಭೀರವಾಗಿ ತೆಗೆದು ಕೊಂಡು ಮುಂದುವರಿಯುತ್ತಿರುವವರ ಸಂಖ್ಯೆ ವಿರಳ. ನಾವು ಅಂತರಾಷ್ಟ್ರೀಯ ರಂಗೋತ್ಸವಗಳಲ್ಲಿ ಪ್ರದರ್ಶನ ನೀಡಲು ಬೇರೆ ಬೇರೆ ದೇಶಗಳಲ್ಲಿ ಸಂಚರಿಸುತ್ತಿರುತ್ತೇವೆ. ಪ್ರತಿ ಸಲವೂ ಅವವೇ ನಾಟಕ ತಂಡಗಳು, ನಾಟಕಗಳು ಎದುರಾಗುತ್ತಿರುತ್ತವೆ. ಅಂದರೆ ಒಳ್ಳೆಯ ನಾಟಕಗಳನ್ನು ಮಾಡುವ ತಂಡಗಳು ಕೆಲವು.*ಬೆಂಗಳೂರಿನಲ್ಲಿ ಬೊಂಬೆಯಾಟ ಪ್ರದರ್ಶಿಸಿದ ಅನುಭವ ಹೇಗಿತ್ತು?

ನಿಜಕ್ಕೂ ತುಂಬ ಒಳ್ಳೆಯ ಅನುಭವ. ರಂಗಭೂಮಿಗೆ ಇಲ್ಲಿನ ಪ್ರೇಕ್ಷಕರು ಸ್ಪಂದಿಸುವ ರೀತಿ ಅನನ್ಯವಾದದ್ದು. ಸಾಮಾನ್ಯವಾಗಿ ಪ್ರದರ್ಶನ ಮುಗಿದ ತಕ್ಷಣ ಎಲ್ಲರೂ ಎದ್ದು ಹೋಗುತ್ತಾರೆ. ಆದರೆ ಇಲ್ಲಿ ಪ್ರದರ್ಶನ ಮುಗಿದ ಮೇಲೆಯೂ ತುಂಬ ಹೊತ್ತು ಕೂತಿದ್ದು ನಾಟಕದ ಬಗ್ಗೆ, ಅದರ ತಂತ್ರಗಳ ಬಗ್ಗೆ ಚರ್ಚಿಸುತ್ತಿದ್ದರು. ನಮ್ಮನ್ನು ಪ್ರಶ್ನಿಸುತ್ತಿದ್ದರು. ಇಂಥ ಪ್ರೇಕ್ಷಕರ ಎದುರಿಗೆ ಪ್ರದರ್ಶನ ನೀಡುವುದು ನಿಜಕ್ಕೂ ಖುಷಿಯ ವಿಷಯ.

*

ಮಕ್ಕಳ ರಂಗಭೂಮಿಯಲ್ಲಿ ಪರಿಣಿತಿ ಪಡೆದುಕೊಳ್ಳಲು ವಿಶ್ವವಿದ್ಯಾಲಯಗಳಿಗೆ ಹೋಗುತ್ತಾರೆ. ಆರ್ಟ್‌ ಅಕಾಡೆಮಿಗಳಿಗೆ ಹೋಗುತ್ತಾರೆ. ಆದರೆ ಬದಲಾಗುತ್ತಿರುವ ಮಕ್ಕಳ ಮನಸ್ಥಿತಿಯನ್ನು ಅರಿತುಕೊಳ್ಳುವತ್ತ ಗಮನಹರಿಸುವವರು ತುಂಬಾ ಕಡಿಮೆ. ಹೀಗಾಗಿಯೇ ಇಂದು ಮಕ್ಕಳ ರಂಗಭೂಮಿ ಗುಣಮಟ್ಟದ ಕೊರತೆಯಿಂದ ಸೊರಗುತ್ತಿದೆ.

-ದಿಕ್ಲಾ ಕಾಟ್ಜ್‌, ರಂಗಕರ್ಮಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.