ಭಾನುವಾರ, ಮೇ 9, 2021
27 °C

ಜಾತಿ ಮೀರಿದ ಪ್ರೀತಿ ಅರಸಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಜ್ಜಳನ ಆಸ್ಥಾನ. ಕಾಲ ಹನ್ನೆರಡನೇ ಶತಮಾನ. ಪ್ರಖರ ಬೆಳಕಿನ ನಡುವೆ ಬಸವಣ್ಣ ಕುಳಿತಿದ್ದಾರೆ. ಮೀಸೆ ತೀಡುತ್ತಿರುವುದು ಕಲಚೂರಿ ದೊರೆ ಬಿಜ್ಜಳ. ರಾಜಭಟರೊಂದಿಗೆ ಶರಣರೂ ಇದ್ದಾರೆ. ಕ್ಯಾಮೆರಾ ಟ್ರಾಲಿ ನಿಧಾನವಾಗಿ ಚಲಿಸುತ್ತಿದೆ...ಬೆಂಗಳೂರು ಮೂವೀಸ್ ಸ್ಟುಡಿಯೋದ ಒಳಾಂಗಣದಲ್ಲಿ ಶುರುವಾಗಿತ್ತು `ಮಹಾಶರಣ ಹರಳಯ್ಯ' ಚಿತ್ರದ ಚಿತ್ರೀಕರಣ. ಹಲವು ಭಕ್ತಿ ಪ್ರಧಾನ ಚಿತ್ರಗಳ ಸೂತ್ರಧಾರರಾಗಿರುವ ಬಿ.ಎ. ಪುರುಷೋತ್ತಮ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಒಟ್ಟು ಹತ್ತು ವಚನಗಳನ್ನು ಚಿತ್ರಕ್ಕೆಂದು ಬಳಸಿಕೊಳ್ಳಲಾಗುತ್ತಿದೆ. ಅಲ್ಲದೆ ಐದು ಹಾಡುಗಳೂ ಇದ್ದು ಪುರುಷೋತ್ತಮ್ ಅವರೇ ಸಾಹಿತ್ಯ ರಚಿಸುತ್ತಿದ್ದಾರೆ. ಚಿತ್ರಕ್ಕೆ ಜಿಮ್ಮಿ ರಾಜು ಸಂಗೀತವಿದೆ.ಹರಳಯ್ಯನ ಬದುಕನ್ನು ಹೇಳುವ ಕತೆಯಲ್ಲಿ ನಾಡಿನ ಮೊಟ್ಟ ಮೊದಲ ಅಂತರ್ಜಾತಿ ವಿವಾಹದ ಚಿತ್ರಣವಿರುವುದು ವಿಶೇಷ. ಬಸವಣ್ಣ ಹರಳಯ್ಯನಿಗೆ ಲಿಂಗದೀಕ್ಷೆ ನೀಡಿದ್ದು, ಹರಳಯ್ಯ ದಂಪತಿ ತಮ್ಮ ತೊಡೆಯ ಚರ್ಮವನ್ನೇ ಸುಲಿದು ಬಸವಣ್ಣನಿಗೆ ಪಾದರಕ್ಷೆಯಾಗಿ ಕೊಟ್ಟದ್ದು, ಚಮ್ಮಾರ ಹರಳಯ್ಯನ ಮಗನಿಗೆ ಬ್ರಾಹ್ಮಣ ಮಧುವರಸ ತನ್ನ ಮಗಳನ್ನು ಕೊಟ್ಟು ಮದುವೆ ಮಾಡುವುದು ಕಥಾ ಹಂದರ. ಸಾಕಷ್ಟು ಸಂಶೋಧನೆ ನಡೆಸಿ ಚಿತ್ರವನ್ನು ರೂಪಿಸಲಾಗಿದೆಯಂತೆ. ವಿವಾದಕ್ಕೆ ಆಸ್ಪದವಿಲ್ಲದಂತೆ ಎಚ್ಚರವಹಿಸಲಾಗಿದೆಯಂತೆ.ಕಥಾನಾಯಕ ಹರಳಯ್ಯನಾಗಿ ಕಾಣಿಸಿಕೊಳ್ಳುತ್ತಿರುವುದು ನಟ ಶ್ರೀಧರ್. ಅನೇಕ ಭಕ್ತಿಪ್ರಧಾನ ಚಿತ್ರಗಳಲ್ಲಿ ಅಭಿನಯಿಸಿರುವ ಅವರಿಗೆ ಇದೊಂದು ಭಿನ್ನ ಯತ್ನವಾಗಿ ಕಂಡಿದೆ. ಏಕೆಂದರೆ ಭಾರತೀಯ ಚರಿತ್ರೆಯಲ್ಲಿ ದಾಖಲಾದ ದೊಡ್ಡ ಕ್ರಾಂತಿ ಚಿತ್ರದ ಹಿನ್ನೆಲೆಗಿದೆ.ಕೆಳವರ್ಗದವರಿಗೆ ಸಮಾನತೆಯನ್ನು ನೀಡ ಹೊರಡುವ ಆದರ್ಶಗಳು ಕತೆಯಲ್ಲಿವೆ. ಅವರ ಮೊದಲ ಚಿತ್ರ `ಅಮೃತ ಘಳಿಗೆ' ತೆರೆಗೆ ಬರುವ ಹೊತ್ತಿಗೆ ಹಲವು ಚಿತ್ರಗಳಲ್ಲಿ ಅಭಿನಯಿಸಿ ತಾರೆ ಎನಿಸಿಕೊಂಡಿದ್ದ ರಾಮಕೃಷ್ಣ ಇಲ್ಲಿ ಬಿಜ್ಜಳನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.`ಎನಗಿಂತ ಕಿರಿಯರಿಲ್ಲ' ಎಂಬ ಬಸವಣ್ಣನ ಮಾತನ್ನು ನೆನಪಿಗೆ ತಂದರು ನಟ ರಮೇಶ್ ಅರವಿಂದ್. ಸುತ್ತಲೂ ಹಿರಿಯ ನಟರೇ ಇದ್ದುದರಿಂದ ಅವರ ಮಾತು ಇನ್ನಷ್ಟು ಮಾರ್ಮಿಕವಾಗಿ ತೋರುತ್ತಿತ್ತು. ಬಸವಣ್ಣನವರೇ ಮತ್ತೊಮ್ಮೆ ಧರೆಗಿಳಿದಂತೆ ಅವರ ಪೋಷಾಕು ಇತ್ತು. ಅಂತದ್ದೊಂದು ಪಾತ್ರ ಮಾಡಬೇಕು ಎಂದು ಅವರಿಗೆ ಅನ್ನಿಸಿದ್ದು ಬಸವ ಉತ್ಸವದ ವೇಳೆ. ಬಸವಣ್ಣ ಹೇಳಿದ್ದ ಏಳು ಸಂದೇಶಗಳು ಅವರನ್ನು ಇನ್ನಿಲ್ಲದಂತೆ ಕಾಡಿದ್ದವು. ಈಗ ಅವರದೇ ಪಾತ್ರ ಮಾಡುತ್ತಿರುವುದು ಒಂದು ಯೋಗದಂತೆ ತೋರಿದೆ.ರಮೇಶ್ ಭಟ್ `ಕೊಂಡಿ ಮಂಚಣ್ಣ'ನಾಗಿ ನಟಿಸುತ್ತಿದ್ದಾರೆ. ಮಹಾಭಾರತದ ಶಕುನಿಯಂತೆ ಸಂಚುಗಾರನ ಪಾತ್ರ ಅದು. `ಶ್ರೀ ಅಯ್ಯಪ್ಪ' ಚಿತ್ರದಲ್ಲಿ ಇಂಥದ್ದೇ ಋಣಾತ್ಮಕ ಪಾತ್ರದಲ್ಲಿ ಕಾಣಿಸಿಕೊಂಡದ್ದನ್ನು ಅವರು ನೆನೆದರು. ಡಿಂಗ್ರಿ ನಾಗರಾಜು ಅವರ ಪುತ್ರ ರಾಜು ಡಿಂಗ್ರಿ ಹರಳಯ್ಯನ ಮಗ ಶೀಲವಂತನಾಗಿ ಚಿತ್ರರಂಗಕ್ಕೆ ಅಡಿಯಿಡುತ್ತಿದ್ದಾರೆ. ಕಲ್ಯಾಣಮ್ಮನಾಗಿ ನಟಿ ಶೀಲಾ, ಮಧುವರಸನಾಗಿ ವೀರೇಶ್ ಬಣ್ಣ ಹಚ್ಚುತ್ತಿದ್ದಾರೆ.ಅಂದಹಾಗೆ ದೇವರಾಜ್, ರವಿಚಂದ್ರನ್, ವಿಜಯಕುಮಾರ್ ಹಾಗೂ ವೆಂಕಟೇಶ್ ಚಿತ್ರದ ನಿರ್ಮಾಪಕರು. `ಪಗಡೆ' ಹಾಗೂ `ದೇವಿ ಭಾಗಮ್ಮ' ಚಿತ್ರಗಳಲ್ಲಿ ಪುರುಷೋತ್ತಮ್ ಅವರೊಂದಿಗೆ ದುಡಿದ ಅನುಭವ ದೇವರಾಜ್ ಅವರಿಗೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.