ಶುಕ್ರವಾರ, ಜನವರಿ 24, 2020
18 °C

ಜಾನಪದ ಸಾಹಿತ್ಯದಲ್ಲಿ ಮಾತ್ರ ವೈವಿಧ್ಯತೆ: ದಿಬ್ಬದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ಧಾರವಾಡ ಕಟ್ಟೆ  ಮತ್ತು ನೀಲಪರ್ವತ ಪ್ರಕಾಶನದ ಆಶ್ರಯದಲ್ಲಿ ರಾಜಶೇಖರ ಮಠಪತಿಯವರ ‘ಇರುವಷ್ಟು ಕಾಲ... ಇರುವಷ್ಟೇ ಕಾಲ’ ಕವನ ಸಂಕಲನದ ಬಿಡುಗಡೆ ಮತ್ತು ಸನ್ಮಾನ ಸಮಾರಂಭವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು.ಸನ್ಮಾನ ಸ್ವೀಕರಿಸಿದ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವ ಶಾಂತಿನಾಥ ದಿಬ್ಬದ, ‘ಜಾನಪದ ಶಿಷ್ಟ ಸಾಹಿತ್ಯಕ್ಕೆ ತಾಯಿಬೇರು. ಶಿಷ್ಟ ಸಾಹಿತ್ಯಕ್ಕೆ ಭಾಷೆ, ವಿಷಯ ವಸ್ತು ಜಾನಪದ ಸಾಹಿತ್ಯ ಒದಗಿಸಿದೆ, ಆದರೆ ತಾಯಿಬೇರನ್ನು ಉದಾಸೀನ ಮಾಡುವ ಪರಿಪಾಠ ಎಲ್ಲೆಡೆ ಶುರುವಾಗಿದೆ. ಶಿಷ್ಟ ಸಾಹಿತ್ಯದಲ್ಲಿ ಕಾಣದ ವೈವಿಧ್ಯತೆ ಜಾನಪದ ಸಾಹಿತ್ಯದಲ್ಲಿ ಲಭ್ಯವಿದೆ. ಧಾರವಾಡ ಕಟ್ಟೆಗೂ ಜನಪದ ಸೊಗಡು ಇದೆ. ಧಾರವಾಡದ ಸಾಹಿತ್ಯ ಸಂಸ್ಕೃತಿಯಲ್ಲಿ ಕಟ್ಟೆ ಸಂಬಂಧಗಳನ್ನು ಬೆಸೆಯಲಿ’ ಎಂದು ಆಶಿಸಿದರು.ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ರಂಗರಾಜ ವನದುರ್ಗ, ‘ಬ್ಯಾಂಕ್ ಖಾತೆಯಲ್ಲಿ ಬಂದು ಸೇರುವ ಪ್ರತಿ ತಿಂಗಳ ವೇತನದ ಮೊತ್ತ ನೋಡಿ ಕಣ್ತುಂಬಿಕೊಳ್ಳುವುದಕ್ಕಿಂತ ತರಗತಿಯಲ್ಲಿ ವಿದ್ಯಾರ್ಥಿಗಳು ನಮ್ಮ ಪಾಠದ ಕುರಿತು ಮಾಡಿಕೊಳ್ಳುವ ನೋಟ್ಸ್ ನೋಡುವುದು ಹೆಚ್ಚು ಫಲಪ್ರದವಾದುದು. ಶಿಕ್ಷಕನಿಗೆ ಸಾರ್ಥಕತೆ ಸಿಗುವುದು ತರಗತಿಯೊಳಗೆ’ ಎಂದು ಹೇಳಿದರು.‘ಲೇಖಕನಿಗೆ ಸಾಮಾಜಿಕ ಜವಾಬ್ದಾರಿ ಇರಬೇಕು. ಸಾಮಾಜಿಕ ಜವಾಬ್ದಾರಿಯ ಎಚ್ಚರ ಇರಬೇಕೆಂದರೆ ಲೇಖಕನು ತಾನು ನಡೆದ ಬಂದ ದಾರಿಯನ್ನು ಮರೆಯಕೂಡದು. ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರ ಎಂಬ ಅಂಬೇಡ್ಕರರ ಮಾತು ಅಕ್ಷರಶಃ ನಿಜವಾದುದು’ ಎಂದು ಕರ್ನಾಟಕ ವಿ.ವಿ. ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಟಿ.ಪೋತೆ ಹೇಳಿದರು.ಗುಲ್ಬರ್ಗದ ಕೇಂದ್ರೀಯ ವಿ.ವಿ. ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಡಾ.ಬಸವರಾಜ ಡೋ­ಣೂರ, ‘ಬರಹ, ಕೃತಿ, ಮಾತುಗಳಲ್ಲಿ ಪ್ರಬುದ್ಧತೆ ಇರಬೇಕು. ಪ್ರಬುದ್ಧತೆ ಕೆಲವರಿಗೆ ಚಿಕ್ಕ ವಯಸ್ಸಿನಲ್ಲಿ ಬರುತ್ತದೆ. ಕೆಲವರು ಪ್ರಬುದ್ಧತೆಯನ್ನು ಪಡೆಯದೇ ಬದುಕಿ ಹೋಗುತ್ತಾರೆ’ ಎಂದರು.ಕೃತಿ ಪರಿಚಯಿಸಿದ ಲೇಖಕಿ ಡಾ.ಪ್ರಜ್ಞಾ ಮತ್ತಿಹಳ್ಳಿ, ‘ತಾಜಾ ಪ್ರತಿಭೆಯ ಕವಿ, ಭಗ್ನ ಕನಸುಗಳು ಇಲ್ಲಿ ಅಕ್ಷರ ರೂಪ ತಾಳಿವೆ. ದ್ವಂದ್ವ, ತುಮುಲ ಕಾವ್ಯಕ್ಕೆ ಕಳೆ ಕಟ್ಟುವುದು. ಖಚಿತತೆ ಗದ್ಯಕ್ಕೆ ಯೋಗ್ಯ, ಕಾವ್ಯ ತನ್ನ ಒಳಗಣ ಬಂಧನಗಳನ್ನು ವಿಶ್ಲೇಷಿಸುವ ದಾರಿಯಾಗಿದೆ. ತಲ್ಲಣ, ತುಮುಲ ಮಠಪತಿಯವರ ಕಾವ್ಯದ ಸ್ಥಾಯಿಭಾವ ಭಾವಗಿದೆ. ಕಾವ್ಯದಲ್ಲಿ ಖಚಿತತೆ ಬಂದರೆ ವರದಿಯಾಗುತ್ತದೆ. ಹಲವು ಯಶಸ್ವಿ ಕವಿತೆಗಳಿವೆ. ಗಾಢವಾದ ಸಂಕೀರ್ಣ ಅನುಭವಕ್ಕೆ ಕೊಂಡೊಯ್ಯುವಂಥ ಕವಿತೆಗಳು ಈ ಸಂಗ್ರಹದಲ್ಲಿವೆ’ ಎಂದರು. ಕೃತಿಕಾರ ಡಾ.ರಾಜ­ಶೇಖರ ಮಠಪತಿ ಮಾತನಾಡಿದರು.ಧಾರವಾಡ ಕಟ್ಟೆ ಅಧ್ಯಕ್ಷ ಡಾ.ಡಿ.ಎಂ.ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ನೀಲಪರ್ವತ ಪ್ರಕಾಶನದ ವ್ಯವಸ್ಥಾಪಕ ಶ್ರೀನಿವಾಸ ಸೊರಟೂರ ಉಪಸ್ಥಿತರಿದ್ದರು. ಆರ್.ಕೆ.ರಂಗಣ್ಣನವರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಪ್ರತಿಕ್ರಿಯಿಸಿ (+)