ಮಂಗಳವಾರ, ಮಾರ್ಚ್ 2, 2021
26 °C

ಜಿಮ್ನಾಸ್ಟಿಕ್ಸ್‌: ಪದಕ ತಪ್ಪಿದರೂ ಮನಗೆದ್ದ ದೀಪಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಿಮ್ನಾಸ್ಟಿಕ್ಸ್‌: ಪದಕ ತಪ್ಪಿದರೂ ಮನಗೆದ್ದ ದೀಪಾ

ರಿಯೊ ಡಿ ಜನೈರೊ:  ಒಲಿಂಪಿಕ್ಸ್‌ ಜಿಮ್ನಾಸ್ಟಿಕ್ಸ್‌ನಲ್ಲಿ  ಸ್ಪರ್ಧಿಸಿದ ಭಾರತದ ಪ್ರಥಮ ವನಿತೆ ದೀಪಾ ಕರ್ಮಾಕರ್ ಅವರು ಭಾನುವಾರ ರಾತ್ರಿ ಸ್ವಲ್ಪದರಲ್ಲಿ ಪದಕ ವಂಚಿತರಾದರು.ವಿಶ್ವದ ಘಟಾನುಘಟಿ ಜಿಮ್ನಾಸ್ಟಿಕ್ ಪಟುಗಳಿಗೆ ಕಠಿಣ ಪೈಪೋಟಿ ಒಡ್ಡಿದ ದೀಪಾ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಎಂಟು ಸ್ಪರ್ಧಿಗಳಿದ್ದ ಫೈನಲ್‌ ಹಂತದಲ್ಲಿ ಆರನೇಯವರಾಗಿ ದೀಪಾ ಕಣಕ್ಕಿಳಿದರು.  ವಾಲ್ಟ್‌ ಜಿಗಿತದ ಎರಡು ಅವಕಾಶಗಳಲ್ಲಿ  ಅವರು ವಿಭಿನ್ನ ಸಾಮರ್ಥ್ಯ ತೋರಿದರು.ಮೊದಲ ಅವಕಾಶದಲ್ಲಿ 14,866 ಮತ್ತು ಎರಡನೇ ಅವಕಾಶದಲ್ಲಿ ಕಠಿಣವಾದ ಪ್ರುಡೊನೊವಾ ವಾಲ್ಟ್‌ನಲ್ಲಿ ಮಿಂಚಿನ ವೇಗ ಮೆರೆದರು. ಆದರೆ, ಭೂಸ್ಪರ್ಶದ ಸಂದರ್ಭದಲ್ಲಿ ಅವರ ಕಾಲುಗಳು ಹೆಚ್ಚು ಬಾಗಿದ್ದು  ಹಿನ್ನಡೆಗೆ ಕಾರಣವಾಯಿತು. ಆದರೂ ಅವರು 15.266 ಅಂಕಗಳನ್ನು ಗಳಿಸುವಲ್ಲಿ ಯಶಸ್ವಿಯಾದರು. ಒಟ್ಟು 15.066 ಅಂಕಗಳು ಡಿಜಿಟಲ್ ಸ್ಕೋರ್‌ಬೋರ್ಡ್‌ ಮೇಲೆ ಮಿರಿ ಮಿಂಚಿದವು. ಆಗ  ದೀಪಾ ಅವರ ಹೆಸರು ಎರಡನೇ ಸ್ಥಾನದಲ್ಲಿ ಮಿಂಚಿತ್ತು.  ಆಗ ಅವರು ತಮ್ಮ ಕೋಚ್‌ ವಿಶ್ವೇಶ್ವರ ನಂದಿ ಅವರನ್ನು ಅಪ್ಪಿಕೊಂಡು ಸಂಭ್ರಮಿ ಸಿದರು. ಆಗ ಮೊದಲ ಸ್ಥಾನದಲ್ಲಿ ರಷ್ಯಾದ ಮರಿಯಾ ಪಸೇಕಾ ಇದ್ದರು. ಆದರೆ, ದೀಪಾ ನಂತರ ಕಣಕ್ಕಿಳಿದ ಗುಲಿಯಾ ಸ್ಟೇನ್‌ಗ್ರುಬೆರ್ 15.216 (ದೀಪಾಗಿಂತ 0.150 ಅಂಕಗಳನ್ನು ತಮ್ಮದಾಗಿಸಿಕೊಂಡರು. ಕೊನೆಯ ಸ್ಪರ್ಧಿಯಾಗಿ ಕಣಕ್ಕಿಳಿದ ಅಮೆರಿಕದ ಸಿಮೊನ್ ಬೈಲ್ಸ್ (15.966 ) ಚಿನ್ನಕ್ಕೆ ಕನ್ನ ಹಾಕಿದರು. ಅದರಿಂದಾಗಿ ಪಸೇಕಾ ಎರಡನೇ ಸ್ಥಾನಕ್ಕೆ ಇಳಿದರೆ, ಮೂರನೇ ಸ್ಥಾನಕ್ಕೆ ಗುಲಿಯಾ ತೃಪ್ತಿಪಟ್ಟರು. ದೀಪಾ ಕನಸು ಕಮರಿತು. ಭಾರತದ 70ನೇ ಸ್ವಾತಂತ್ರ್ಯ ಉತ್ಸವದ ಮುನ್ನಾದಿನ ರಿಯೊ ಅಂಗಳದಲ್ಲಿ ತ್ರಿವರ್ಣ ಧ್ವಜ ಅರಳುವ ಅವಕಾಶವು ಕೊಂಚದರಲ್ಲಿ ತಪ್ಪಿತು. ಆದರೆ, ದೀಪಾ ಪ್ರಯತ್ನ ಮಾತ್ರ ನೋಡುಗರನ್ನು ನಿಬ್ಬೆರಗಾಗಿಸಿತು.ಚೀನಾದ ವಾಂಗ್‌ ಯಾನ್ (5ನೇ ಸ್ಥಾನ), ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿದ್ದ ಕೊರಿಯಾದ ಜಾಂಗ್ ಹಾಂಗ್ ಉನ್ (6ನೇ ಸ್ಥಾನ), ಉಜ್ಬೆಕಿಸ್ತಾನದ ವಕ್ಸಾನಾ  (7ನೇ ಸ್ಥಾನ), ಕೆನಡಾದ ಶಾಲನ್ ಒಲ್ಸೆನ್ (8ನೇ ಸ್ಥಾನ) ಅವರ ಸವಾಲನ್ನು ದೀಪಾ ಮೆಟ್ಟಿ ನಿಂತರು.  ಅರ್ಹತಾ ಸುತ್ತಿನಲ್ಲಿ ದೀಪಾ 14.850  ಅಂಕ ಗಳಿಸಿ ಎಂಟನೇ ಸ್ಥಾನ ಪಡೆದಿದ್ದರು. ಫೈನಲ್‌ನಲ್ಲಿ ಅವರು ನಾಲ್ಕನೇ ಸ್ಥಾನಕ್ಕೆ ಜಿಗಿದು ತಮ್ಮ ಛಲದ ಆಟವನ್ನು ಜಗತ್ತಿಗೆ ಪ್ರದರ್ಶಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.