ಜಿಮ್ ಎಕ್ಸ್ಪೊ: 13 ಕ್ಷೇತ್ರದ ಮಳಿಗೆ
ಬೆಂಗಳೂರು: ಜಾಗತಿಕ ಹೂಡಿಕೆದಾರರ ಎರಡನೆಯ ಸಮಾವೇಶದ ಅಂಗವಾಗಿ ಆಯೋಜಿಸಲಾಗಿರುವ ವಸ್ತು ಪ್ರದರ್ಶನದಲ್ಲಿ (ಜಿಮ್-ಎಕ್ಸ್ಪೊ) 13 ಕ್ಷೇತ್ರಗಳ ಉತ್ಪನ್ನಗಳು ಹಾಗೂ ಸೇವೆಗಳ ಮಾಹಿತಿ ನೀಡುವ ಮಳಿಗೆಗಳನ್ನು ತೆರೆಯಲಾಗಿದೆ.
ಆಟೊಮೊಬೈಲ್, ಮೂಲಸೌಕರ್ಯ, ಇಂಧನ, ಆರೋಗ್ಯ, ಕೃಷಿ ವಿಜ್ಞಾನ, ಜವಳಿ, ಶಿಕ್ಷಣ, ಸಂಶೋಧನೆ ಮತ್ತು ಅಭಿವೃದ್ಧಿ, ಪ್ರವಾಸೋದ್ಯಮ ಮತ್ತಿತರ ಕ್ಷೇತ್ರಗಳ ಮುಂಚೂಣಿ ಕಂಪೆನಿಗಳು ತಮ್ಮ ಮಳಿಗೆಗಳನ್ನು ವಸ್ತುಪ್ರದರ್ಶನ ಕೇಂದ್ರದಲ್ಲಿ ತೆರೆದಿವೆ. `ಜಿಮ್-ಎಕ್ಸ್ಪೊ~ಗೆ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಇಲ್ಲಿನ ತುಮಕೂರು ರಸ್ತೆಯಲ್ಲಿರುವ `ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ~ದಲ್ಲಿ ಬುಧವಾರ ಚಾಲನೆ ನೀಡಿದರು.
ಪ್ಲಾಸ್ಟಿಕ್, ಪ್ಯಾಕಿಂಗ್, ಯಂತ್ರೋಪಕರಣಗಳು, ವೈದ್ಯಕೀಯ ಉಪಕರಣಗಳು, ಎಂಜಿನಿಯರಿಂಗ್, ವೈಮಾನಿಕ ಕ್ಷೇತ್ರ, ಔಷಧ ಮತ್ತಿತರ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆ ಆಗಲಿದೆ ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಎನ್. ವಿದ್ಯಾಶಂಕರ್ ಸುದ್ದಿಗಾರರಿಗೆ ತಿಳಿಸಿದರು.
ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘ (ಎಫ್ಕೆಸಿಸಿಐ), ಕರ್ನಾಟಕ ಸಣ್ಣ ಕೈಗಾರಿಕೆಗಳ ಒಕ್ಕೂಟ (ಕಾಸಿಯಾ), ಬೆಂಗಳೂರು ವಾಣಿಜ್ಯೋದ್ಯಮ ಸಂಘ (ಬಿಸಿಐಸಿ), ಬೆಳಗಾವಿ ವಾಣಿಜ್ಯೋದ್ಯಮ ಸಂಘ ಸೇರಿದಂತೆ ರಾಜ್ಯದ ವಿವಿಧ ವಾಣಿಜ್ಯೋದ್ಯಮ ಸಂಘಗಳ ಜೊತೆ ಸಮಾವೇಶದ ಪೂರ್ವಸಿದ್ಧತೆಗಾಗಿ ಸರ್ಕಾರ ಕೈಜೋಡಿಸಿತ್ತು ಎಂದು ಮೂಲಗಳು ತಿಳಿಸಿವೆ.
ಈ ಬಾರಿಯ ವಸ್ತುಪ್ರದರ್ಶನದಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಕ್ಷೇತ್ರಗಳ ಉತ್ಪನ್ನಗಳೂ ಮಳಿಗೆ ತೆರೆದಿವೆ. ಈ ಕ್ಷೇತ್ರದ ಸಾಧನೆಗಳನ್ನು ಜಾಗತಿಕ ಮಟ್ಟದ ಉದ್ಯಮಿಗಳಿಗೆ ಪರಿಚಯಿಸುವ ಉದ್ದೇಶವೂ ಇದೆ ಎಂದು ಇಲಾಖೆಯ ಆಯುಕ್ತ ಎಂ. ಮಹೇಶ್ವರ ರಾವ್ ಮಾಹಿತಿ ನೀಡಿದರು.
ಜಪಾನ್, ಜರ್ಮನಿ, ಮೆಕ್ಸಿಕೊ, ಇಟಲಿ, ಅಮೆರಿಕ ಸೇರಿದಂತೆ ವಿವಿಧ ದೇಶಗಳ ಪ್ರತಿನಿಧಿಗಳು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಜಪಾನ್ ದೇಶದಿಂದಲೇ 50 ಉದ್ಯಮಿಗಳು ಸಮಾವೇಶಕ್ಕೆ ಬರುತ್ತಿದ್ದಾರೆ. ಇಲ್ಲಿನ ಅವಕಾಶಗಳ ಕುರಿತು ಮಾಹಿತಿ ಪಡೆದು, ಹೂಡಿಕೆ ಬಗ್ಗೆ ನಿರ್ಧರಿಸಲಿದ್ದಾರೆ. ಗುಜರಾತ್, ಜಾರ್ಖಂಡ್, ಪಂಜಾಬ್, ಉತ್ತರ ಪ್ರದೇಶ, ಬಿಹಾರ ಸೇರಿದಂತೆ 10 ರಾಜ್ಯಗಳು ಪಾಲ್ಗೊಳ್ಳುತ್ತಿವೆ ಎಂದು ಅಧಿಕಾರಿಗಳು ತಿಳಿಸಿದರು.
ಟಾಟಾ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ), ವಿವಿಧ ರಾಜ್ಯಗಳ ಪ್ರವಾಸೋದ್ಯಮ ಇಲಾಖೆಗಳು, ಜಿಂದಾಲ್ ಸೌತ್ವೆಸ್ಟ್ ಮೈನಿಂಗ್, ದೇಶದ ಪ್ರಮುಖ ಬ್ಯಾಂಕ್ಗಳು ಸೇರಿದಂತೆ ಒಟ್ಟು 450ಕ್ಕೂ ಹೆಚ್ಚು ಕಂಪೆನಿ/ಸಂಸ್ಥೆಗಳು ತಮ್ಮ ಮಳಿಗೆ ತೆರೆದಿವೆ. ಬ್ಯಾಂಕ್ಗಳು ಹೂಡಿಕೆದಾರರ ಸಮಾವೇಶದಲ್ಲಿ ಮಳಿಗೆ ತೆರೆದಿರುವುದು ಇದೇ ಮೊದಲು. `ಎಕ್ಸ್ಪೊ~ನಲ್ಲಿ 500ಕ್ಕೂ ಹೆಚ್ಚು ಸಭೆಗಳು ನಡೆಯಲಿವೆ. ವಸ್ತುಪ್ರದರ್ಶನ ವೀಕ್ಷಣೆಗಾಗಿ 25 ಸಾವಿರ ಪಾಸ್ಗಳನ್ನು ವಿತರಿಸಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.