ಮಂಗಳವಾರ, ಆಗಸ್ಟ್ 11, 2020
27 °C
ಬೇಲಿಯೇ ಎದ್ದು `ಕೆರೆ ಮೇಯುವ' ಪರಿ...

ಜಿಲ್ಲಾಡಳಿತದಿಂದಲೇ ಕೆರೆ ಒತ್ತುವರಿ!

ಪ್ರಜಾವಾಣಿ ವಾರ್ತೆ/ ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

ಜಿಲ್ಲಾಡಳಿತದಿಂದಲೇ ಕೆರೆ ಒತ್ತುವರಿ!

ಕೋಲಾರ: ಒತ್ತುವರಿದಾರರಿಂದ ಕೆರೆ-ಕುಂಟೆಗಳನ್ನು ತೆರವುಗೊಳಿಸುವ `ಭಗೀರಥ ಪ್ರಯತ್ನ ನಡೆಸುತ್ತಿರುವ' ಜಿಲ್ಲಾಡಳಿತವೇ ಕೆರೆಗಳನ್ನು ಒತ್ತುವರಿ ಮಾಡಿಕೊಂಡು ತನ್ನ ಅನುಕೂಲಕ್ಕೆ ತಕ್ಕಂತೆ ಕಟ್ಟಡಗಳನ್ನು ನಿರ್ಮಿಸಿದರೆ ಅದನ್ನು ಏನೆಂದು ಕರೆಯುವುದು?



ವಿವಿಧ ಇಲಾಖೆಗಳನ್ನು ನಡೆಸುವ ಸಲುವಾಗಿ ಕೆರೆಯ ಅಂಗಳದಲ್ಲೇ ಕಟ್ಟಡಗಳನ್ನು ನಿರ್ಮಿಸುವುದು ಅಭಿವೃದ್ಧಿಯೇ? ಇದೂ ಒಂದು ಬಗೆಯಲ್ಲಿ ಕೆರೆ ಒತ್ತುವರಿಯಾಗುವುದಿಲ್ಲವೇ?



-ಜಿಲ್ಲಾಡಳಿತ ಕಚೇರಿಗೆ ಕೂಗಳತೆಯಲ್ಲಿರುವ ಮತ್ತು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಸೇರಿದ ಕೋಲಾರಮ್ಮ ಅಮಾನಿ ಕೆರೆಯ ಮುಂದೆ ನಿಂತಾಗ ಎದುರಾಗುವ ಪ್ರಶ್ನೆ ಇದು.



ನಗರದ ಕೋಲಾರ- ಬಂಗಾರಪೇಟೆ ಮುಖ್ಯರಸ್ತೆಯಲ್ಲಿ ಸಾಗಿದರೆ ಕೆರೆಯ ಬದಿಯಲ್ಲಿ ಜಿಲ್ಲಾಡಳಿತ ಅಂದರೆ ಸರ್ಕಾರವೇ ನಿರ್ಮಿಸಿದ ವಿವಿಧ ಇಲಾಖೆಯ ವಿಸ್ತಾರವಾದ ಕಟ್ಟಡಗಳು ಕಾಣಿಸುತ್ತವೆ. ಅಲ್ಲಿ ಮೀನುಗಾರಿಕೆ ಇಲಾಖೆ ಇದೆ. ಕೆರೆಯಂಗಳದಲ್ಲೇ ದೇವರಾಜ ಅರಸು ಭವನವನ್ನು ನಿರ್ಮಿಸಿ ಹಲವು ವರ್ಷಗಳಾಗಿವೆ. ಇಲ್ಲಿಯೇ ಜಿಲ್ಲಾ ತರಬೇತಿ ಕೇಂದ್ರವೂ ಇದೆ. ಕೋಲಾರಮ್ಮ ಕುಡಿಯುವ ನೀರು ಸರಬರಾಜು ಕೇಂದ್ರವಿದೆ. ಹಿಂದುಳಿದ ವರ್ಗಗಳ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯವಿದೆ.



ಕನ್ನಡ ಸಂಸ್ಕೃತಿ ಇಲಾಖೆಯ ಸುವರ್ಣ ಭವನವೂ ಇದೇ ಕೆರೆಯಂಗಳಲ್ಲಿ ನಿರ್ಮಾಣ ಹಂತದಲ್ಲಿದೆ. ಇದೇ ಕೆರೆಯಂಗಳದಲ್ಲೇ ಕುರುಬರ ಪೇಟೆ ರಸ್ತೆಯಲ್ಲಿ ನಗರಸಭೆ ವತಿಯಿಂದ ನಿರ್ಮಲ ಶೌಚಾಲಯವನ್ನೂ ನಿರ್ಮಿಸಲಾಗಿದ್ದು, ಅದು ಹಲವು ವರ್ಷಗಳಿಂದ ಜನರ ಬಳಕೆಗೆ ಬಾಗಿಲು ತೆರೆಯದೇ ಕೇವಲ ದನದ ಕೊಟ್ಟಿಗೆಯಾಗಿ ಉಳಿದಿದೆ!



ಇಂಥ ಸನ್ನಿವೇಶದಲ್ಲಿ ಸಾರ್ವಜನಿಕರೂ ಕೆರೆ ಒತ್ತುವರಿ ಮಾಡದೆ ಇರುತ್ತಾರೆಯೇ ಎಂಬ ಪ್ರಶ್ನೆಯೂ ಮೂಡುತ್ತದೆ. ಬೇಲಿಯೇ ಎದ್ದು ಹೊಲ ಮೇಯುವ ಸಂದರ್ಭದ ಅರಾಜಕ ಸನ್ನಿವೇಶವು ಕೋಲಾರಮ್ಮ ಕೆರೆಯ ವಿಷಯದಲ್ಲಿ ನಿರ್ಮಾಣವಾಗಿದೆ. ಅಂದರೆ ಏಕಕಾಲಕ್ಕೆ ಕೋಲಾರಮ್ಮ ಕೆರೆಯು ಜಿಲ್ಲಾಡಳಿತದಿಂದ ಮತ್ತು ಸುತ್ತಮುತ್ತಲಿನ ಜನರಿಂದ ಒತ್ತುವರಿ ಸಂಕಟಕ್ಕೆ ಒಳಗಾಗುತ್ತಲೇ ಇದೆ.



ನಗರದ ಒಳಗೆ ಮತ್ತು ನಗರ ಹೊರವಲಯದ ಕೋಗಿಲಹಳ್ಳಿಯವರೆಗೂ 510.08 ಎಕರೆಯಷ್ಟು ವ್ಯಾಪ್ತಿಯಲ್ಲಿ ಹಬ್ಬಿರುವ ಈ ಕೆರೆಯನ್ನು ಎಲ್ಲ ದಿಕ್ಕುಗಳಿಂದಲೂ ಒತ್ತುವರಿ ಮಾಡಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ 4ರ ನಿರ್ಮಾಣಕ್ಕಾಗಿ ತನ್ನ ಒಂದು ಬದಿಯ ಸ್ವರೂಪವನ್ನು ಕಳೆದುಕೊಂಡ ಈ ಕೆರೆಯ ಅಂಚಿನಲ್ಲಿ ಹೆದ್ದಾರಿ ಪಕ್ಕದಲ್ಲೇ ಈಗ ಬೃಹತ್ ಕಟ್ಟಡಗಳೂ ಎದ್ದಿವೆ. ಏಳುತ್ತಲೇ ಇವೆ. ಜೊತೆಗೆ ಬೇಕಾದವರು ತಮಗೆ ಬೇಕಾದಂತೆ ಕೆರೆಯಂಗಳದಲ್ಲಿ ಕಾಂಪೌಂಡ್ ನಿರ್ಮಿಸುವ ಪ್ರಯತ್ನಗಳೂ ನಡೆದಿವೆ.



ಸಮುದಾಯದ ಸದ್ಬಳಕೆಗೆ ಮೀಸಲಾಗಿದ್ದ ಕೆರೆಯನ್ನು ಎಲ್ಲರ ಆಸ್ತಿಯಂತೆ, ಸ್ವಂತಕ್ಕೆ ಬೇಕಾದಂತೆ ಬಳಸಿಕೊಳ್ಳಲಾಗುತ್ತಿದೆ. ಆದರೆ ಸಮುದಾಯವು ಹೇಗೆ ಕೆರೆಯೊಂದನ್ನು ಸಾಮೂಹಿಕ ನೆಲೆಯಲ್ಲಿ ಬಳಸಿಕೊಳ್ಳಬೇಕಾಗಿತ್ತೋ ಆ ಮಾದರಿಯಲ್ಲಿ ಈ ಐತಿಹಾಸಿಕ ಕೆರೆ ಬಳಕೆ ಆಗುತ್ತಿಲ್ಲ.



ಒತ್ತುವರಿ ಎಷ್ಟು?: 2012ರ ನವೆಂಬರ್‌ನಲ್ಲಿ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ನಾಗರಿಕರೊಬ್ಬರಿಗೆ ನಗರಸಭೆ ಆಯುಕ್ತರು ನೀಡಿರುವ ಮಾಹಿತಿ ಪ್ರಕಾರ, ಕೆರೆಯನ್ನು 36.2 ಎಕರೆಯಷ್ಟು ಒತ್ತುವರಿ ಮಾಡಲಾಗಿದೆ.



ನಗರಸಭೆಯಲ್ಲಿ ಒತ್ತುವರಿದಾರರ ನಿಖರ ಸಂಖ್ಯೆ ಲಭ್ಯವಿಲ್ಲದ ಕಾರಣ, ಅಂಬೇಡ್ಕರ್ ನಗರದ ಮನೆಗಳಿರುವ ಪ್ರದೇಶವೂ ಸೇರಿದಂತೆ 17ಕ್ಕೂ ಹೆಚ್ಚು ಮಂದಿ ಕೆರೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ನೀಡಲಾಗಿದೆ. ಈ  ಪೈಕಿ ಒಬ್ಬರು 10 ಎಕರೆಯಷ್ಟು ಕೆರೆ ಒತ್ತುವರಿ ಮಾಡಿದ್ದಾರೆ.



ಕೆರೆಯಂಗಳದಲ್ಲೇ ದೇಗುಲವನ್ನು ನಿರ್ಮಿಸಲಾಗಿದೆ. ನಿವೇಶನಗಳನ್ನೂ ವಿಂಗಡಿಸಲಾಗಿದೆ. ಮಸಣದ ಸಲುವಾಗಿಯೂ 3 ಎಕರೆಯನ್ನು ಒತ್ತುವರಿ ಮಾಡಲಾಗಿದೆ. ಅದರೊಂದಿಗೆ ಕೆರೆಯಂಗಳದಲ್ಲೇ 5 ಎಕರೆಯಷ್ಟು ಪ್ರದೇಶದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ  ಸುವರ್ಣ ಭವನವನ್ನೂ ನಿರ್ಮಿಸುತ್ತಿದೆ.



ಕೆರೆ ಒತ್ತುವರಿ ನಿಜಕ್ಕೂ ಎಷ್ಟು?

ಕೋಲಾರಮ್ಮ ಅಮಾನಿಕೆರೆಯನ್ನು ಎಷ್ಟು ಪ್ರಮಾಣದಲ್ಲಿ ಒತ್ತುವರಿ ಮಾಡಲಾಗಿದೆ ಎಂಬ ಬಗ್ಗೆ ನಗರಸಭೆ  ಮತ್ತು ತಾಲ್ಲೂಕು ಆಡಳಿತದಲ್ಲಿ ಬೇರೆ ಬೇರೆ ಅಂಕಿ -ಅಂಶಗಳಿವೆ.

510.08 ಎಕರೆಯಷ್ಟು ವ್ಯಾಪ್ತಿಯಲ್ಲಿರುವ ಕೆರೆಯನ್ನು 36.2 ಎಕರೆಯಷ್ಟು ಒತ್ತುವರಿ ಮಾಡಲಾಗಿದೆ ಎಂಬುದು ನಗರಸಭೆ ಮೂಲದ ಮಾಹಿತಿ.

ಆದರೆ ಕೋಲಾರ ತಹಶೀಲ್ದಾರರು ಕಳೆದ ವರ್ಷ ಮಾರ್ಚ್‌ನಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಿರುವ ವರದಿ ಪ್ರಕಾರ, ಆ ಹೊತ್ತಿಗೆ ಕೆರೆಯಲ್ಲಿ 110.20 ಎಕರೆಯಷ್ಟು ಒತ್ತುವರಿಯಾಗಿದ್ದು, ಆ ಪೈಕಿ 84.20 ಎಕರೆಯಷ್ಟು ಪ್ರದೇಶವನ್ನು ಮುಕ್ತಗೊಳಿಸಲಾಗಿದೆ.



ನಂತರ, ಉಳಿದ 26 ಎಕರೆಯಷ್ಟು ಕೆರೆ ಪ್ರದೇಶದ ಒತ್ತುವರಿಯನ್ನು ತೆರವುಗೊಳಿಸುವ ಪ್ರಯತ್ನಗಳು ನಡೆದ ನಿದರ್ಶನಗಳು ಕಂಡುಬಂದಿಲ್ಲ.



ನಿರ್ಮಾಣ ಹಂತದಲ್ಲಿ...

ಕೋಲಾರ-ಬಂಗಾರಪೇಟೆ ಮುಖ್ಯರಸ್ತೆಯಲ್ಲಿ ಸಾಗಿದರೆ ಕೆರೆಯ ಬದಿಯಲ್ಲಿ ಜಿಲ್ಲಾಡಳಿತ ಅಂದರೆ ಸರ್ಕಾರವೇ ನಿರ್ಮಿಸಿದ ವಿವಿಧ ಇಲಾಖೆಯ ವಿಸ್ತಾರವಾದ ಕಟ್ಟಡಗಳು ಕಾಣಿಸುತ್ತವೆ. ಅಲ್ಲಿ ಮೀನುಗಾರಿಕೆ ಇಲಾಖೆ ಇದೆ. ಕೆರೆಯಂಗಳದಲ್ಲೇ ದೇವರಾಜ ಅರಸು ಭವನವನ್ನು ನಿರ್ಮಿಸಿ ಹಲವು ವರ್ಷಗಳಾಗಿವೆ.



ಇಲ್ಲಿಯೇ ಜಿಲ್ಲಾ ತರಬೇತಿ ಕೇಂದ್ರವೂ ಇದೆ. ಕೋಲಾರಮ್ಮ ಕುಡಿಯುವ ನೀರು ಸರಬರಾಜು ಕೇಂದ್ರವಿದೆ. ಹಿಂದುಳಿದ ವರ್ಗಗಳ ಇಲಾಖೆಯ ಮೆಟ್ರಿಕ್ ನಂತರದ ಮತ್ತು ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯವಿದೆ. ಕನ್ನಡ ಸಂಸ್ಕೃತಿ ಇಲಾಖೆಯ ಸುವರ್ಣ ಭವನವೂ ಇದೇ ಕೆರೆಯಂಗಳಲ್ಲಿ ನಿರ್ಮಾಣ ಹಂತದಲ್ಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.