ಭಾನುವಾರ, ಜನವರಿ 26, 2020
31 °C
ತಲಾ 25 ಎಕರೆ ಜಾಗ ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವ

ಜಿಲ್ಲೆಯಲ್ಲಿ ಮೂರು ಕಡೆ ತೆಂಗು ತಾಂತ್ರಿಕ ಪಾರ್ಕ್‌

ಪ್ರಜಾವಾಣಿ ವಾರ್ತೆ/ ಕೆ.ಎನ್‌.ನಾಗಸುಂದ್ರಪ್ಪ Updated:

ಅಕ್ಷರ ಗಾತ್ರ : | |

ತುಮಕೂರು: ರಾಜ್ಯದ 5 ಕಡೆ ₨ 25 ಕೋಟಿ ವೆಚ್ಚದಲ್ಲಿ ತೆಂಗು ಅಭಿವೃದ್ಧಿ ತಾಂತ್ರಿಕ ಪಾರ್ಕ್‌ ನಿರ್ಮಾಣ ಮಾಡಲಾಗುತ್ತಿದೆ. ಇದರಲ್ಲಿ ಜಿಲ್ಲೆಯಲ್ಲೇ 3 ಪಾರ್ಕ್‌ ನಿರ್ಮಾಣ­ವಾಗು­ತ್ತಿದ್ದು, ಮೂರಕ್ಕೂ ಜಾಗ ಗುರುತಿಸ­ಲಾಗಿದೆ.ತಿಪಟೂರು ತಾಲ್ಲೂಕಿನ ಗೊರಗೊಂಡನಹಳ್ಳಿ ಮತ್ತು ಕೆ.ಬಿ.ಕ್ರಾಸ್‌ ಸಮೀಪದ ತಿಮ್ಲಾಪುರ, ಶಿರಾ ತಾಲ್ಲೂಕಿನ ಮುದುಗೆರೆ, ಮಂಡ್ಯ ಜಿಲ್ಲೆಯ ಮದ್ದೂರು ಮತ್ತು ಕದಬಹಳ್ಳಿಯಲ್ಲಿ ತೆಂಗು ಪಾರ್ಕ್‌ ನಿರ್ಮಾಣವಾಗಲಿದೆ.ಸರ್ಕಾರ ಕನಿಷ್ಠ 15 ಎಕರೆ ಜಾಗ ಗುರುತಿಸುವಂತೆ ಸೂಚಿಸಿತ್ತು. ಗೊರಗೊಂಡನ­ಹಳ್ಳಿ ಮತ್ತು ಮುದುಗೆರೆಯಲ್ಲಿ ತೋಟಗಾರಿಕೆ ಕ್ಷೇತ್ರದ 25 ಎಕರೆ, ತಿಮ್ಲಾಪುರದಲ್ಲಿ 19 ಎಕರೆ ತೋಟಗಾರಿಕೆ ಇಲಾಖೆ ಭೂಮಿ ಗುರುತಿಸಲಾಗಿದೆ. ತೆಂಗು ಪಾರ್ಕ್‌ಗೆ ಭೂಮಿ ನೀಡುವುದಾಗಿ ತೋಟಗಾರಿಕೆ ಇಲಾಖೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.ಕಳೆದ ಎರಡು ಬಜೆಟ್‌ನಲ್ಲಿ ತೆಂಗು ಪಾರ್ಕ್‌ ಸ್ಥಾಪನೆ ಘೋಷಣೆ ಮಾಡಲಾಗಿತ್ತು. ಆದರೆ ಇದುವರೆಗೆ ಈ ನಿಟ್ಟಿನಲ್ಲಿ ಯಾವುದೇ ಕೆಲಸ ಆಗಿರಲಿಲ್ಲ. ಯೋಜನೆಗೆ ಆರಂಭದಲ್ಲಿ ಸರ್ಕಾರ ರೂ. 1 ಕೋಟಿ ಕಾಯ್ದಿರಿಸಿದ್ದು, ರೂ. 75 ಲಕ್ಷ ಬಿಡುಗಡೆ ಮಾಡಿದೆ. ಯೋಜನೆಗೆ ಶೀಘ್ರ ಟೆಂಡರ್‌ ಕರೆಯಲಿದ್ದು, ಇದೇ ಮಾರ್ಚ್‌ ಒಳಗಾಗಿ ಕಾಮಗಾರಿ ಆರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಔದ್ಯಮಿಕ ವಲಯದ ಮಾದರಿಯಲ್ಲಿ (ಕೈಗಾರಿಕಾ ಪ್ರದೇಶ) ತೆಂಗು ಪಾರ್ಕ್‌ ನಿರ್ಮಿಸಲು ಸರ್ಕಾರ ಮುಂದಾಗಿದೆ. ತೆಂಗಿನ ವಿವಿಧ ಪದಾರ್ಥಗಳ ಉತ್ಪಾದನೆ, ಸಂಸ್ಕರಣಾ ಘಟಕಗಳನ್ನು ನಿರ್ಮಿಸುವುದು ಮತ್ತು ನಿರ್ವಹಣೆ ಮಾಡುವುದು ಇದರ ಉದ್ದೇಶ.ಉಪ ಉತ್ಪನ್ನಗಳ ಉತ್ಪಾದನೆ ಮತ್ತು ಸಂಶೋಧನೆಗೆ ಆದ್ಯತೆ ನೀಡುವಂತೆ ಸರ್ಕಾರ ತಿಳಿಸಿದೆ. ತೆಂಗಿನ ಮೌಲ್ಯವರ್ಧನೆ ಮುಖ್ಯ ಉದ್ದೇಶ. ಈ ನಿಟ್ಟಿನಲ್ಲಿ ಇತರ ರಾಜ್ಯಗಳಲ್ಲಿ ನಿರ್ಮಾಣವಾಗಿರುವ ತೆಂಗು ಪಾರ್ಕ್‌ಗಳ ಬಗ್ಗೆಯೂ ಇಲಾಖೆ ಅಧಿಕಾರಿಗಳ ಮಟ್ಟದಲ್ಲಿ ಅಧ್ಯಯನ ನಡೆಯುತ್ತಿದೆ.ತೆಂಗು ಬೆಳೆಯುವ ಜಿಲ್ಲೆಗಳಲ್ಲಿ ತೆಂಗು ಉತ್ಪನ್ನಗಳ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕೆಂಬ ಬೇಡಿಕೆ ಹಲವು ದಶಕಗಳಿಂದ ಇತ್ತು. ಕಳೆದ ಎರಡು ವರ್ಷದಿಂದ ಬಜೆಟ್‌ನಲ್ಲಿ ತೆಂಗು ಪಾರ್ಕ್‌ ಪ್ರಸ್ತಾಪವಿತ್ತು. ಆದರೆ ಯೋಜನೆ ಜಾರಿಗೆ ಬಂದಿರಲಿಲ್ಲ. ಎಲ್ಲಿ ನಿರ್ಮಾಣ ಮಾಡಬೇಕೆಂಬ ಬಗ್ಗೆ ತೀರ್ಮಾನವೂ ಆಗಿರಲಿಲ್ಲ. ಜಿಲ್ಲೆಯಲ್ಲಿ ಅತಿ ಹೆಚ್ಚು ತೆಂಗು ಬೆಳೆಯಲಾಗುತ್ತಿದ್ದು, ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಹೀಗಾಗಿ ಕಲ್ಪತರು ನಾಡಿಗೆ 3 ತೆಂಗು ಪಾರ್ಕ್‌ಗಳನ್ನು ನೀಡಲಾಗಿದೆ.ತೆಂಗು ಬೆಳೆಯುವ ಪ್ರದೇಶದಲ್ಲಿ ತೆಂಗು ಆಧಾರಿತ ಉದ್ಯೋಗ ಒದಗಿಸುವುದು ತೆಂಗು ಪಾರ್ಕ್‌ ಸ್ಥಾಪನೆಯ ಮುಖ್ಯ ಉದ್ದೇಶ. ತೆಂಗಿನ ಕಾಯಿ, ಕೊಬ್ಬರಿ ಸೇರಿದಂತೆ ಎಲ್ಲ ಉಪ ಉತ್ಪನ್ನಗಳನ್ನು ಸಂಪೂರ್ಣವಾಗಿ ಬಳಕೆ ಮಾಡಲು ಅನುವಾಗುವಂತೆ ಪಾರ್ಕ್‌ ನಿರ್ಮಾಣವಾಗಲಿದೆ.ಕೈಗಾರಿಕಾ ಪ್ರದೇಶದ ಮಾದರಿಯಲ್ಲಿ ಅಭಿವೃದ್ಧಿ ಮಾಡಲು ಸರ್ಕಾರ ಸೂಚನೆ ನೀಡಿದ್ದು, ಇಲ್ಲಿ ಕೈಗಾರಿಕೆ ಸ್ಥಾಪನೆಗೆ ತಾಂತ್ರಿಕ ಸಹಾಯ ನೀಡುವ ಬಗ್ಗೆ ಮುಂದಿನ ಹಂತದಲ್ಲಿ ತೀರ್ಮಾನವಾಗಲಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಸವಿತಾ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)