ಶನಿವಾರ, ಫೆಬ್ರವರಿ 27, 2021
20 °C
ಚಿಕ್ಕಬಳ್ಳಾಪುರದಲ್ಲಿ ಗಣರಾಜ್ಯೋತ್ಸವ, ಎಲ್ಲೆಲ್ಲೂ ರಾರಾಜಿಸಿದ ತ್ರಿವರ್ಣ ಧ್ವಜ

ಜಿಲ್ಲೆಯ ಅಭಿವೃದ್ಧಿ ಸರ್ಕಾರದ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಿಲ್ಲೆಯ ಅಭಿವೃದ್ಧಿ ಸರ್ಕಾರದ ಗುರಿ

ಚಿಕ್ಕಬಳ್ಳಾಪುರ: ಇಡೀ ದೇಶವು ಗಣರಾಜ್ಯೋತ್ಸವ ಸಂಭ್ರಮ ಆಚರಿಸುತ್ತಿದೆಯಾದರೂ ಜೀತ ಪದ್ಧತಿ, ಬಡತನ, ಅನಕ್ಷರತೆ, ಅಸ್ಪೃಶ್ಯತೆ ಪೂರ್ಣಪ್ರಮಾಣದಲ್ಲಿ ನಿರ್ಮೂಲನೆಗೊಂಡಿಲ್ಲ. ಬಹುತೇಕ ಮಂದಿಗೆ ಇದುವರೆಗೆ ನೆಮ್ಮದಿಯ ಬದುಕು ಸಿಕ್ಕಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ರೋಷನ್‌ ಬೇಗ್‌ ತಿಳಿಸಿದರು.ನಗರದ ಸರ್ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಹಲವಾರು ಸುಧಾರಣಾ ಕ್ರಮ ಕೈಗೊಂಡಿದ್ದೇವೆ. ಉತ್ತಮ ಸಮಾಜ ನಿರ್ಮಾಣಕ್ಕಾಗಿ ನಾವೆಲ್ಲರೂ ಕೈ ಜೋಡಿಸಬೇಕಿದೆ ಎಂದರು.ದೇಶದಲ್ಲಿ ಕಾಡುತ್ತಿರುವ ಸಮಸ್ಯೆ ಮತ್ತು ಸವಾಲುಗಳಿಗೆ ಸಂವಿಧಾನದಲ್ಲಿ ಪರಿಹಾರವಿದ್ದು, ಅದರಲ್ಲಿನ ಅಂಶಗಳ್ನು ಜಾರಿಗೊಳಿಸಬೇಕಿದೆ. ಸಾಮಾಜಿಕ ಪಿಡುಗುಗಳನ್ನು ತೊಡೆದು ಹಾಕುವಲ್ಲಿ ಸಂವಿಧಾನ ಪ್ರಮುಖ ಪಾತ್ರವಹಿಸಲಿದೆ ಎಂಬುದನ್ನು ಯಾವುದೇ ಕಾರಣಕ್ಕೂ ಮರೆಯಬಾರದು ಎಂದರು.ರಾಜ್ಯದ ಸಮಗ್ರ ಅಭಿವೃದ್ಧಿಗೆ ಅಲ್ಲದೇ ಜಿಲ್ಲೆಯನ್ನು ಪ್ರಗತಿಪಥದಲ್ಲಿ ಕರೆದೊಯ್ಯುವಲ್ಲಿ ರಾಜ್ಯ ಸರ್ಕಾರ ಮಹತ್ತರ ಪಾತ್ರವಹಿಸಿದ್ದು ಹಲವಾರು ಯೋಜನೆಗಳನ್ನು ಪರಿಚಯಿಸಿದೆ. ಬಡವರು, ಅಲ್ಪಸಂಖ್ಯಾತರು, ಹಿಂದುಳಿದವರು ಸೇರಿದಂತೆ ಎಲ್ಲಾ ವರ್ಗದವರ ಏಳ್ಗೆಗಾಗಿ ಸರ್ಕಾರ ಶ್ರಮಿಸುತ್ತಿದೆ ಎಂದು ಅವರು ತಿಳಿಸಿದರು.ಜಿಲ್ಲೆಯಾದ್ಯಂತ ಕೃಷಿಭಾಗ್ಯ ಯೋಜನೆಯಡಿ ಇವರೆಗೆ 1198 ಕೃಷಿ ಹೊಂಡ ಮತ್ತು 44 ಪಾಲಿಹೌಸ್‌ ನಿರ್ಮಿಸಲಾಗಿದೆ. ಒಟ್ಟು 216 ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಗ್ರಾಮವಿಕಾಸ ಯೋಜನೆಯಡಿ 6 ತಾಲ್ಲೂಕುಗಳ 29 ಗ್ರಾಮಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.ಜಿಲ್ಲೆಯನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿರುವ ರಾಜ್ಯ ಸರ್ಕಾರಕ್ಕೆ ಸಾರ್ವಜನಿಕರು ಸಹ ಸಹಕಾರ ನೀಡಬೇಕು. ಸರ್ಕಾರಿ ಯೋಜನೆ ಮತ್ತು ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಬಡ, ನಿರ್ಗತಿಕರ ಬದುಕು ಸುಧಾರಿಸಲು ಸರ್ಕಾರ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದು, ಅವು ಅರ್ಹರಿಗೆ ತಲುಪಿಸುವ ಕಾರ್ಯ ನಿರಾತಂಕವಾಗಿ ನೆರವೇರಬೇಕು. ಎಲ್ಲಾ ವರ್ಗಗಳ ಜನರಿಗೆ ಎಲ್ಲಾ ರೀತಿಯ ಅನುಕೂಲತೆ ಮತ್ತು ಸೌಲಭ್ಯಗಳು ದೊರೆಯಬೇಕು ಎಂದು ತಿಳಿಸಿದರು.ಸ್ವಾತಂತ್ರ್ಯ ಹೋರಾಟಗಾರ ಡಿ.ಮಾರಪ್ಪ ಅವರನ್ನು ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ಸಚಿವರು ಪಥ ಪರಿವೀಕ್ಷಣೆ ನಡೆಸಿದರು. ನಂತರ ವಿವಿಧ ತಂಡಗಳು ಪಥಸಂಚಲನ ನಡೆಸಿದರು. ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ್, ಸಿಇಓ ಬಿ.ಬಿ.ಕಾವೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್‌.ಚೈತ್ರಾ, ಶಾಸಕ ಡಾ. ಕೆ.ಸುಧಾಕರ್, ನಗರಸಭೆ ಅಧ್ಯಕ್ಷ ಕೆ.ವಿ.ಮಂಜುನಾಥ್‌ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಆಕರ್ಷಕ ಪಥ ಸಂಚಲನ

ಚಿಕ್ಕಬಳ್ಳಾಪುರ ಗಣರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ನಗರದ ಸರ್‌ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ವಿವಿಧ ಇಲಾಖೆಗಳ ತಂಡಗಳು ಮತ್ತು ಶಾಲಾ ವಿದ್ಯಾರ್ಥಿಗಳು ಪಥಸಂಚಲನ ನಡೆಸಿದರು. ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿದರು.

ಸಶಸ್ತ್ರ ಮೀಸಲು ಪಡೆ, ನಾಗರಿಕ ಪೊಲೀಸ್‌, ಗೃಹರಕ್ಷಕ ದಳ, ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಎನ್‌ಸಿಸಿ, ನ್ಯೂ ಹೊರೈಜೊನ್ ಶಾಲೆ, ಸರ್‌ ಎಂ.ವಿ.ಸ್ಮಾರಕ ಶಾಲೆ, ಪೂರ್ಣಪ್ರಜ್ಞಾ ಪ್ರೌಢಶಾಲೆ, ಪಂಚಗಿರಿ ಬೋಧನಾ ಪ್ರೌಢಶಾಲೆ, ಗುಡ್‌ಶೆಫರ್ಡ್ ಶಾಲೆ, ಇಂಡಿಯನ್ ಪಬ್ಲಿಕ್‌ ಶಾಲೆ, ಕ್ವಾಯಟ್‌ ಕಾರ್ನರ್ ಶಾಲೆ ಮತ್ತು ವಾದವೃಂದ ತಂಡದ ಸದಸ್ಯರು ಪಥಸಂಚಲನದಲ್ಲಿ ಪಾಲ್ಗೊಂಡರು.ಪಥಸಂಚಲನದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಗುಡ್‌ಶೆಫರ್ಡ್‌ ಶಾಲೆ, ಪಂಚಗಿರಿ ಬೋಧನಾ ಪ್ರೌಢಶಾಲೆ, ಸರ್‌ ಎಂ.ವಿ.ಸ್ಮಾರಕ ಪ್ರೌಢಶಾಲೆ, ಪೂರ್ಣಪ್ರಜ್ಞ ಶಾಲೆ, ಕ್ವಾಯಟ್‌ ಕಾರ್ನರ್ ಮತ್ತು ಸರ್ಕಾರಿ ಬಾಲಕಿಯರ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.ಮಕ್ಕಳಿಂದ ನೃತ್ಯ ಪ್ರದರ್ಶನ

ಚಿಕ್ಕಬಳ್ಳಾಪುರ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದ ಪ್ರಯುಕ್ತ ನಾಲ್ಕು ಶಾಲೆಗಳ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಸೇಂಟ್‌ ಜೋಸೆಫ್‌ ಶಾಲೆಯ ವಿದ್ಯಾರ್ಥಿಗಳು ವಂದೇಮಾತರಂ ಸಂಗೀತಕ್ಕೆ ಹೆಜ್ಜೆ ಹಾಕಿದರೆ, ಸೇಂಟ್‌ ಜಾನ್ಸ್‌ ಶಾಲೆ ವಿದ್ಯಾರ್ಥಿಗಳು ವಿವಿಧ ಗೀತೆಗಳಿಗೆ ನೃತ್ಯ ಪ್ರದರ್ಶಿಸಿದರು.

ಪ್ರಕೃತಿ ವಿದ್ಯಾನಿಕೇತನ್‌ ಶಾಲೆಯ ವಿಶಿಷ್ಟ ರೀತಿಯ ನೃತ್ಯ ಪ್ರದರ್ಶಿಸಿದರೆ, ಶಿಡ್ಲಘಟ್ಟದ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ವಿದ್ಯಾರ್ಥಿನಿಯರು ಆಕರ್ಷಕ ನೃತ್ಯ ಪ್ರದರ್ಶಿಸಿದರು. ಎಲ್ಲರೂ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನೃತ್ಯ ಪ್ರದರ್ಶಿಸಿದರು.ಸೌಹಾರ್ದ ಮತ್ತು ಕೋಮು ಸಾಮರಸ್ಯ ಕಾಪಾಡುವಲ್ಲಿ ನಾವೆಲ್ಲರೂ ಕೈಜೋಡಿಸಬೇಕು. ಜಾತೀಯತೆ, ಅಸಮಾನತೆಗೆ ಅವಕಾಶ ನೀಡದೆ ದೇಶದ ಅಭಿವೃದ್ಧಿಯೇ ಗುರಿಯಾಗಬೇಕು.

–ರೋಷನ್‌ ಬೇಗ್,

ಜಿಲ್ಲಾ ಉಸ್ತುವಾರಿ ಸಚಿವ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.