ಮಂಗಳವಾರ, ಮೇ 24, 2022
27 °C

ಜೀತ: ಪಶ್ಚಿಮ ಬಂಗಾಳದ 15 ಕಾರ್ಮಿಕರ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಖಚಿತ ಮಾಹಿತಿ ಮೇರೆಗೆ ಇಲ್ಲಿಗೆ ಸಮೀಪದ ಕೆಂಜಾರಿನಲ್ಲಿ ಎಂಆರ್‌ಪಿಎಲ್ ಕಾಮಗಾರಿ ಸ್ಥಳಕ್ಕೆ ಸೋಮವಾರ ದಿಢೀರ್ ದಾಳಿ ನಡೆಸಿದ ತಹಸೀಲ್ದಾರ್ ಮತ್ತು ಕಾರ್ಮಿಕ ಇಲಾಖೆಯ ಅಧಿಕಾರಿಗಳು, ಜೀತಕ್ಕಿದ್ದ ಪಶ್ಚಿಮ ಬಂಗಾಳದ 15 ಮಂದಿ ಕಾರ್ಮಿಕರನ್ನು ರಕ್ಷಿಸಿದ್ದಾರೆ.

ತಹಸೀಲ್ದಾರ್ ರವಿಚಂದ್ರ ನಾಯಕ್ ಮತ್ತು ಸಹಾಯಕ ಕಾರ್ಮಿಕ ಆಯುಕ್ತ ವೆಂಕಟೇಶ್ ಅಪ್ಪಯ್ಯ ಶಿಂಧಿಹಟ್ಟಿ ನೇತೃತ್ವದ ತಂಡ ಕೆಂಜಾರಿನ ಕೊಳೆಗೇರಿ ಒಂದರಲ್ಲಿ ಕಾರ್ಮಿಕರು ವಾಸವಿದ್ದ ಟೆಂಟ್ ಮೇಲೆ ದಾಳಿ ನಡೆಸಿದರು. ಇವರೆಲ್ಲ  ಪಶ್ಚಿಮ ಬಂಗಾಳದ ಪುರುಲಿಯಾ ಮತ್ತು ಭಂಕುರಾ ಜಿಲ್ಲೆಯವರು. ಎಂಆರ್‌ಪಿಎಲ್ ವಿಸ್ತರಣಾ ಸ್ಥಳದಲ್ಲಿ ಗ್ಯಾನನ್ ಡಂಕೆರ್ಲೆ ಅಂಡ್ ಕಂಪೆನಿ  (ಜಿಡಿಸಿ) ಗಾಗಿ ದುಡಿಯಲು ಇವರನ್ನು ಉಪ ಗುತ್ತಿಗೆದಾರ ಬಿಹಾರದ ಸಂಜಯ್ ಸಿಂಗ್ ಎಂಬಾತ ರವಾನಿಸಿದ್ದ.

ಇವರೆಲ್ಲರಿಗೆ ದಿನಕ್ಕೆ 200 ರೂಪಾಯಿ ವೇತನ ನೀಡುವ ಭರವಸೆ ನೀಡಿ ಮಂಗಳೂರಿಗೆ ಕರೆತರಲಾಗಿತ್ತು. ಆದರೆ ಆವರೆಲ್ಲ ಕೇವಲ 10 ರೂಪಾಯಿಗೆ ಬೆಳಿಗ್ಗೆ 8ರಿಂದ ಮಧ್ಯರಾತ್ರಿ 2 ಗಂಟೆಯವರೆಗೆ ದುಡಿಯಬೇಕಿತ್ತು. ಕಳೆದ ಎರಡು ತಿಂಗಳಿಂದ ಅವರು ಇಂತಹ ಶೋಚನೀಯ ಬದುಕು ಸಾಗಿಸುತ್ತಿದ್ದಾರೆ.

~ನಮಗೆ ಏಕೆ ಈ ಪರಿಯ ಗೋಳು~ ಎಂದು ಕಾರ್ಮಿಕರು ಸಂಜಯ್ ಸಿಂಗ್ ಬಳಿ ಕೇಳಿದಾಗ, ತನ್ನಿಂದ 4 ಲಕ್ಷ ರೂಪಾಯಿ ಪಡೆದುಕೊಂಡಿರುವ ಗುತ್ತಿಗೆದಾರ ತಲೆಮರೆಸಿಕೊಂಡಿದ್ದಾನೆ, ದುಡ್ಡು ವಾಪಸ್ ಮಾಡಲು ಈ ಎಲ್ಲಾ 15 ಮಂದಿ ಕೇವಲ 10 ರೂಪಾಯಿಗೆ ದುಡಿಯಲೇಬೇಕು ಎಂದು ಹೇಳಿದ್ದ.

~ನಾವು ಮನೆಗೆ ಹೋಗುತ್ತೇವೆ ಎಂದು ಹೇಳಿದರೆ ಗುತ್ತಿಗೆದಾರ ನಮಗೆ ಥಳಿಸುತ್ತಿದ್ದ. ಕೆಟ್ಟ ಭಾಷೆಯಲ್ಲಿ ನಿಂದಿಸುತ್ತಿದ್ದ~ ಎಂದು ಸಂಜಯ್ (24) ಎಂಬ ಕಾರ್ಮಿಕ ಹೇಳಿದ. ಇಲ್ಲಿ ಊರ್ಮಿಳಾ ಗೋಸ್ವಾಮಿ ಮತ್ತು ಭೀಮ್ ಗೋಸ್ವಾಮಿ ಹೆಸರಿನ ದಂಪತಿ ಇದ್ದು, ಇಬ್ಬರೂ ಅಸೌಖ್ಯದಿಂದ ಬಳಲುತ್ತಿದ್ದಾರೆ. 

ಈ ಬಗ್ಗೆ ತಹಸೀಲ್ದಾರ್ ರವಿಚಂದ್ರ ನಾಯಕ್ ಅವರು ಪತ್ರಕರ್ತರೊಂದಿಗೆ ಮಾತನಾಡಿ, ಇದನ್ನು ಜೀತ ಪದ್ಧತಿ ಎಂದು ಹೇಳುವುದು ಸೂಕ್ತವಲ್ಲ, ಇಲ್ಲಿ ಎಲ್ಲಾ ಕಾರ್ಮಿಕ ಕಾನೂನುಗಳನ್ನು ಉಲ್ಲಂಘಿಸಲಾಗುತ್ತಿದೆ. ಈ ಕಾರ್ಮಿಕರಿಗೆ ಹಳೆ ಬಾಕಿ ಎಲ್ಲವನ್ನೂ ನೀಡಿ ಅವರ ಊರುಗಳಿಗೆ ಸುರಕ್ಷಿತವಾಗಿ ಕಳುಹಿಸುವುದಕ್ಕೆ ತಾವು ಕ್ರಮ ಕೈಗೊಂಡಿರುವುದಾಗಿ ಹೇಳಿದರು. ಸೋಮವಾರ ಸಂಜೆ ವೇಳೆಗೆ ಎಲ್ಲಾ 15 ಕಾರ್ಮಿಕರಿಗೆ ಬಾಕಿ ಪಾವತಿ ಮಾಡಿದ ಕಂಪೆನಿ, ಹೆಚ್ಚುವರಿಯಾಗಿ ಒಂದು ಸಾವಿರ ರೂಪಾಯಿ ನೀಡಿ ಅವರ ಊರುಗಳಿಗೆ ಕಳುಹಿಸಿಕೊಟ್ಟಿತು.

ಹಸಿವೆ, ಬಡತನದ ಪ್ರಭಾವ

ಪಶ್ಷಿಮ ಬಂಗಾಳದ ಹಲವು ಜಿಲ್ಲೆಗಳಲ್ಲಿ ಬಡತನ ತಾಂಡವವಾಡುತ್ತಿದೆ. ಉದ್ಯೋಗ ಖಾತರಿ ಯೋಜನೆ ಸಹ ಇಲ್ಲಿ ಯಶಸ್ವಿಯಾಗಿಲ್ಲ. ಹೀಗಾಗಿ ಭಾರಿ ಪ್ರಮಾಣದಲ್ಲಿ ಜನರು ಅಲ್ಲಿಂದ ಗುಳೆ ಹೋಗುತ್ತಿದ್ದಾರೆ ಎಂದು ಪಶ್ಚಿಮ್ ಬಂಗಾಳ್ ಖೇತ್ ಮಜ್ದೂರ್ ಸಮಿತಿಯ ಸದಸ್ಯ ಸ್ವಪನ್ ಗಂಗೂಲಿ ದೂರವಾಣಿ ಮೂಲಕ ~ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.