ಶನಿವಾರ, ಮೇ 21, 2022
28 °C

ಜೀವಶಾಸ್ತ್ರ ಇದೆ ಭವಿಷ್ಯ

ಡಾ. ಎಲ್.ಶಶಿಕುಮಾರ್ Updated:

ಅಕ್ಷರ ಗಾತ್ರ : | |

ಪಿ.ಯು.ಸಿ. ಪೂರೈಸಿದ ವಿದ್ಯಾರ್ಥಿಗಳು ಮುಂದಿನ ವ್ಯಾಸಂಗಕ್ಕಾಗಿ ಪೋಷಕರೊಡನೆ ಅಲೆದಾಡುವುದು ಸಾಮಾನ್ಯ ಸಂಗತಿ. ಎಂಜಿನಿಯರಿಂಗ್ ಅಥವಾ ವೈದ್ಯಕೀಯ ಕೋರ್ಸ್‌ಗೆ ಸೇರಲಿಚ್ಛಿಸದ ಹಾಗೂ ಆರ್ಥಿಕವಾಗಿ ಹಿಂದುಳಿದ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಬಿ.ಎಸ್.ಸಿ. ಪದವಿಗೆ ಸೇರುತ್ತಾರೆ. ಆಶ್ಚರ್ಯವೆಂದರೆ, ಬಹುತೇಕ ವಿದ್ಯಾರ್ಥಿಗಳು ಪದವಿ ಹಂತದ ಈ ಸಂದರ್ಭದಲ್ಲಿ ಜೀವಶಾಸ್ತ್ರವನ್ನು ಕಡೆಗಣಿಸುತ್ತಿದ್ದಾರೆ ಎಂಬ ಕೂಗು ಎಲ್ಲೆಡೆ ಕೇಳಿಬರುತ್ತಿದೆ.ವಿದ್ಯಾರ್ಥಿಗಳಿಗೆ ತಾವು ಬಿ.ಎಸ್.ಸಿ. ಪದವಿಯಲ್ಲಿ ಜೀವಶಾಸ್ತ್ರವನ್ನು ಅಭ್ಯಸಿಸಿದರೆ ಮುಂದೆ ಯಾವುದೇ ಪ್ರಯೋಜನವಿಲ್ಲ ಎಂಬ ತಪ್ಪುಕಲ್ಪನೆ ಮೂಡಿದೆ. ಪೋಷಕರಲ್ಲೂ ಇದೇ ಭಾವನೆ ವ್ಯಕ್ತವಾಗುತ್ತಿರುವುದು ಈ ವಿಷಯದ ಕಡೆಗಣನೆಗೆ ಕಾರಣವಾಗಿದೆ. ಇದಲ್ಲದೆ ಜೀವಶಾಸ್ತ್ರಕ್ಕೆ ಸಂಬಂಧಿಸಿದ ವಿವಿಧ ಕೋರ್ಸ್‌ಗಳ ಬಗ್ಗೆಯೂ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಅರಿವಿಲ್ಲದೇ ಇರುವುದು ಸಹ ಈ ವಿಷಯವನ್ನು ಮೂಲೆಗೆ ತಳ್ಳಲು ಪ್ರಮುಖ ಕಾರಣವಾಗಿದೆ.ತರಾವರಿ ಕೋರ್ಸ್

ಪಿ.ಯು.ಸಿ.ಯನ್ನು ಜೀವಶಾಸ್ತ್ರದ ಜೊತೆಯಲ್ಲಿ ಪೂರೈಸಿದ ವಿದ್ಯಾರ್ಥಿಗಳು ಮುಂದೆ ಸೂಚಿಸಿರುವ ಕೋರ್ಸ್‌ಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು. ಅವೆಂದರೆ, ಬಿ.ಎಸ್.ಸಿ. (ಮೈಕ್ರೊ ಬಯಾಲಜಿ/ ಬಯೊಟೆಕ್ನಾಲಜಿ/ ಬಯೊಕೆಮಿಸ್ಟ್ರಿ/ ಜೆನೆಟಿಕ್ಸ್). ಮಾನವ ಜೀವಶಾಸ್ತ್ರ, ಬಿ.ಎಸ್.ಸಿ. ಕೃಷಿ ಹಾಗೂ ಬಿ.ಎಸ್.ಸಿ. ಹಾರ್ಟಿಕಲ್ಚರ್ ಮೂರು ವರ್ಷದ ಕೋರ್ಸ್‌ಗಳು. ಇನ್ನು ಬಿ.ಎಸ್.ಸಿ. ನರ್ಸಿಂಗ್ ಮತ್ತು ಬಿ.ಎಸ್.ಸಿ. ಫಾರ್ಮಗಳು ನಾಲ್ಕು ವರ್ಷದ ಕೋರ್ಸ್‌ಗಳಾಗಿವೆ.ಬಿ.ಎಸ್.ಸಿ. ಮೈಕ್ರೊ ಬಯಾಲಜಿ/ ಬಯೊಟೆಕ್ನಾಲಜಿ/ ಬಯೊಕೆಮಿಸ್ಟ್ರಿ/ ಜೆನೆಟಿಕ್ಸ್ ಕೋರ್ಸ್‌ಗಳಲ್ಲಿ ರಸಾಯನ ಶಾಸ್ತ್ರದ ಬಗ್ಗೆ ಅಧ್ಯಯನ ಮಾಡಬೇಕಾಗುತ್ತದೆ. ಇದರ ಜೊತೆಗೆ ಸಸ್ಯಶಾಸ್ತ್ರ ಅಥವಾ ಪ್ರಾಣಿಶಾಸ್ತ್ರವನ್ನೂ ಕಲಿಯಬೇಕಾಗುತ್ತದೆ. ಅಂದರೆ ಒಟ್ಟು ಮೂರು ವಿಷಯಗಳ ಬಗ್ಗೆ ಅಧ್ಯಯನ ಮಾಡಬೇಕು.ಬಿ.ಎಸ್.ಸಿ. ಕೃಷಿ ಪದವಿಯಲ್ಲಿ ವಿಜ್ಞಾನದ ಮೂಲಗಳ ಬಗ್ಗೆ ಹೇಳಿಕೊಡಲಾಗುತ್ತದೆ. ಇದರ ಜೊತೆಗೆ ಹಲವು ಅನ್ವಯಿಕ ವಿಷಯಗಳಾದ ಮಣ್ಣು, ಕೃಷಿ ಉತ್ಪಾದನೆ, ವ್ಯಾಪಾರ ವಹಿವಾಟು ಹಾಗೂ ಕೃಷಿ, ಕೈಗಾರಿಕೆಗಳ ಬಗ್ಗೆ ತಿಳಿಸಿಕೊಡಲಾಗುತ್ತದೆ. ಬಿ.ಎಸ್.ಸಿ. ಹಾರ್ಟಿಕಲ್ಚರ್‌ನಲ್ಲಿ ತೋಟಗಾರಿಕಾ ವಿಚಾರ, ಯಂತ್ರಕಲಾ ಶಾಸ್ತ್ರವನ್ನು ಅಧ್ಯಯನ ಮಾಡಬೇಕಾಗುತ್ತದೆ.ಬಿ.ಎಸ್.ಸಿ. ನರ್ಸಿಂಗ್ ಕೋರ್ಸ್‌ನಲ್ಲಿ ರೋಗಿಗಳ ಉಪಚಾರ ಹಾಗೂ ಬಹು ಮುಖ್ಯ ಅಂಶಗಳಾದ ವಿಶ್ಲೇಷಣೆ, ಪರಿಕಲ್ಪನೆ ಚಾತುರ್ಯ, ಕೆಲ ಸಂಶೋಧನಾ ವಿಚಾರಗಳನ್ನು ಹೇಳಿಕೊಡಲಾಗುತ್ತದೆ. ಬಿ.ಎಸ್.ಸಿ. ಫಾರ್ಮ ಕೋರ್ಸ್‌ನಲ್ಲಿ ವಿದ್ಯಾರ್ಥಿಗಳು ಔಷಧಿಗಳು ಮತ್ತು ರೋಗಲಕ್ಷಣ ನಿರೂಪಣಾ ಚಾತುರ್ಯಗಳನ್ನು ಪ್ರಾಯೋಗಿಕವಾಗಿ ಕಲಿತು ಪರಿಣತಿ ಹೊಂದಬಹುದು. ಇಷ್ಟೇ ಅಲ್ಲದೆ ಜೀವಶಾಸ್ತ್ರಕ್ಕೆ ಸಂಬಂಧಿಸಿದಂತೆ ಕಡಿಮೆ ಅವಧಿಯ ಇನ್ನೂ ಹಲವು ಹೊಸ ಹೊಸ ಕೋರ್ಸ್‌ಗಳು ಸಹ ಲಗ್ಗೆ ಇಡುತ್ತಿವೆ.ಹಲವು ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ಜೀವಶಾಸ್ತ್ರವನ್ನು ಸ್ನಾತಕೋತ್ತರ ಪದವಿಯಲ್ಲಿ ಒಂದು ಪ್ರಮುಖ ವಿಷಯವನ್ನಾಗಿ ಸೇರಿಸಿವೆ. ಸ್ನಾತಕೋತ್ತರ ಪದವಿಯು ಎರಡು ವರ್ಷದ ಕೋರ್ಸ್ ಆಗಿರುತ್ತದೆ. ವಿದ್ಯಾರ್ಥಿಗಳು ಜೀವಶಾಸ್ತ್ರದ ಜೊತೆಗೆ ಬಿ.ಎಸ್.ಸಿ. ಪದವಿಯನ್ನು ಸಸ್ಯಶಾಸ್ತ್ರ ಅಥವಾ ಪ್ರಾಣಿಶಾಸ್ತ್ರ ವಿಷಯಗಳೊಟ್ಟಿಗೆ ಮುಗಿಸಿದ ನಂತರ ಸ್ನಾತಕೋತ್ತರ ಪದವಿಯನ್ನು ಮುಂದೆ ಸೂಚಿಸಿರುವ ಯಾವುದಾದರೂ ಒಂದು ವಿಷಯದಲ್ಲಿ ಮಾಡಬಹುದು: ಸಸ್ಯಶಾಸ್ತ್ರ (ಬಾಟನಿ), ಪ್ರಾಣಿಶಾಸ್ತ್ರ (ಜುವಾಲಜಿ), ಸೂಕ್ಷ್ಮಜೀವಿಶಾಸ್ತ್ರ (ಮೈಕ್ರೊಬಯಾಲಜಿ), ಜೈವಿಕ ತಂತ್ರಜ್ಞಾನ (ಬಯೊಟೆಕ್ನಾಲಜಿ), ಜೀವರಸಾಯನ ಶಾಸ್ತ್ರ (ಬಯೊ ಕೆಮಿಸ್ಟ್ರಿ), ಅನ್ವಯಿಕ ತಳಿಶಾಸ್ತ್ರ (ಅಪ್ಲೈಡ್ ಜೆನೆಟಿಕ್ಸ್) ಮತ್ತು ಕಡಲ ಜೀವಶಾಸ್ತ್ರ (ಮರೈನ್ ಬಯಾಲಜಿ). ಇವುಗಳಲ್ಲಿ ಪಠ್ಯಕ್ರಮವು ತರಗತಿಯ ಅಧ್ಯಯನವಲ್ಲದೆ ಪ್ರಾಯೋಗಿಕ ಕಲಿಕೆಯನ್ನೂ ಒಳಗೊಂಡಿರುತ್ತದೆ.ಜೀವಶಾಸ್ತ್ರವನ್ನು ಅಭ್ಯಸಿಸುವ ವಿದ್ಯಾರ್ಥಿಗಳಿಗೆ ಹಲವು ವೃತ್ತಿನಿರತ ಅವಕಾಶಗಳು ಕೈ ಬೀಸಿ ಕರೆಯುತ್ತವೆ. ಔಷಧಿ ತಯಾರು ಮಾಡುವವರಿಗೆ, ಭೌತಿಕ ಮತ್ತು ವೃತ್ತಿನಿರತ ಚಿಕಿತ್ಸಕರಿಗೆ, ಕಾಲೇಜು ಪ್ರಾಧ್ಯಾಪಕರಿಗೆ, ಸಂಶೋಧನಾ ವಿಜ್ಞಾನಿಗಳಿಗೆ, ರೋಗ ಉಪಚಾರಕರಿಗೆ (ನರ್ಸಿಂಗ್), ಕೃಷಿ ನಿರತ ಕಾರ್ಯಗಳಿಗೆ ಜೀವಶಾಸ್ತ್ರ ತಳಹದಿಯಾಗಿದೆ. ಇದಲ್ಲದೆ ಪರಿಸರ ಅಭಿವೃದ್ಧಿಯ ವಿಚಾರಗಳು ಹಾಗೂ ವನ್ಯಜೀವಿಗಳ ಅಧ್ಯಯನಕ್ಕೆ ಜೀವಶಾಸ್ತ್ರಜ್ಞರು ಬೇಕೇ ಬೇಕು.ಪದವಿಯಲ್ಲಿ ಜೀವಶಾಸ್ತ್ರ ಓದಿದವರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ತಂತ್ರಜ್ಞರಾಗುವ, ಸಂಶೋಧನಾ ಸಹಾಯಕರಾಗುವ ಅಥವಾ ಪರೀಕ್ಷಕರಾಗುವ ಅವಕಾಶಗಳು ದೊರೆಯುತ್ತವೆ. ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳಲ್ಲಿ ಜೀವಶಾಸ್ತ್ರದ ವಿದ್ಯಾರ್ಥಿಗಳಿಗೇ ಹೆಚ್ಚು ಪ್ರಾಮುಖ್ಯತೆ. ಔಷಧಿಗಳನ್ನು ತಯಾರಿಸಲು ಮತ್ತು ಮಾರಾಟ ಮಾಡಲು ಜೀವಶಾಸ್ತ್ರದ ಪದವೀಧರರನ್ನೇ ಕಾರ್ಖಾನೆಗಳು ಬಳಸಿಕೊಳ್ಳುತ್ತವೆ. ಇನ್ನು ಜೀವಶಾಸ್ತ್ರ ಪದವೀಧರರು ಆಡಳಿತ, ಆಹಾರ, ಔಷಧಿ ಪರೀಕ್ಷೆ ಅಥವಾ ಸಸ್ಯ ಉದ್ಯಾನವನ್ನು ನಿರ್ವಹಿಸಬಹುದು. ಕೃಷಿ ಪದವೀಧರರಾದರೆ ಬೀಜ, ಗೊಬ್ಬರ, ರಾಸಾಯನಿಕ ಹಾಗೂ ರಫ್ತು ಕ್ಷೇತ್ರಗಳಲ್ಲಿ ಸಾಕಷ್ಟು ಹೆಸರು ಗಳಿಸಬಹುದು.ಜೀವಶಾಸ್ತ್ರದಲ್ಲಿ ಪಿಎಚ್.ಡಿ. ಪದವಿ ಪಡೆದರೆ ಕಾಲೇಜುಗಳಲ್ಲಿ ಉಪನ್ಯಾಸಕರಾಗುವ, ಸ್ವತಂತ್ರವಾಗಿ ಸಂಶೋಧನೆ ಮಾಡುವ ಮತ್ತು ಆಡಳಿತದ ಜವಾಬ್ದಾರಿಗಳನ್ನು ನಿರ್ವಹಿಸುವ ಕೆಲಸಗಳು ದೊರಕುತ್ತವೆ. ಅಲ್ಲದೆ ವೈದ್ಯಕೀಯ ಕ್ಷೇತ್ರದಲ್ಲಿ ಪ್ರಗತಿ ಹೊಂದಲು ಜೀವಶಾಸ್ತ್ರಜ್ಞರ ಕೊಡುಗೆ ಬಹು ಮುಖ್ಯ. ಉತ್ತಮ ಸಂಶೋಧನೆಗಳನ್ನು ಜೀವಶಾಸ್ತ್ರದಲ್ಲಿ ಕೈಗೊಂಡರೆ ಹೊರದೇಶಕ್ಕೆ ಹೋಗುವ ಅವಕಾಶಗಳು ಸಹ ಸಿಗುತ್ತವೆ.ಇನ್ನು ವಿದ್ಯಾರ್ಥಿಗಳು ಜೀವಶಾಸ್ತ್ರದ ವಿಜ್ಞಾನಿಗಳಾದರೆ ಜೀವಿಗಳ ಜೀವನ ಕ್ರಮ, ಅವುಗಳ ಆಗುಹೋಗುಗಳ ಬಗ್ಗೆ ಸಂಶೋಧನೆ ಮಾಡಬಹುದು. ಅಲ್ಲದೆ ಅನ್ವಯಿಕ (ಅಪ್ಲೈಡ್) ವಿಷಯಗಳಲ್ಲಿ, ಅಂದರೆ ಹೊಸ ಹೊಸ ಔಷಧಿ ಕಂಡುಹಿಡಿಯುವ, ಉತ್ತಮ ತಳಿಯ ಆಹಾರ ಬೆಳೆ  ಉತ್ಪಾದಿಸುವ, ಪ್ರಕೃತಿಯಲ್ಲಿ ಮತ್ತಷ್ಟು ಸುಧಾರಣೆ ತರುವ ವಿಷಯಗಳ ಬಗ್ಗೆ ಸಂಶೋಧನೆ ಮಾಡುವ ಅವಕಾಶ ಇರುತ್ತದೆ. ಇವುಗಳಲ್ಲಿ ಪ್ರಾಯೋಗಿಕ ಕಲಿಕೆಯೇ ಹೆಚ್ಚಾಗಿರುತ್ತದೆ ಎಂಬುದರಲ್ಲಿ ಹುರುಳಿಲ್ಲ.ಇದಲ್ಲದೆ ಜೀವಶಾಸ್ತ್ರಜ್ಞರು ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐ.ಸಿ.ಎ.ಆರ್.), ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ, ಪ್ರಾಣಿ ಸಂಗ್ರಹಾಲಯಗಳು, ಔಷಧಿ ತಯಾರಿಕಾ ಘಟಕಗಳು, ಹೈನುಗಾರಿಕೆ, ಆಹಾರ ಸಂಸ್ಕರಣಾ ಸಂಸ್ಥೆಗಳು, ಸೌಂದರ್ಯ ವರ್ಧಕಗಳ ತಯಾರಿಕೆ, ಜೀವಿಗಳ ಪರೀಕ್ಷಾ ಪ್ರಾಯೋಗಿಕ ಶಾಲೆಗಳು, ವೈದ್ಯಕೀಯ ಮಂಡಳಿಗಳು, ವಿಧಿವಿಜ್ಞಾನ ಪ್ರಯೋಗಾಲಯಗಳು, ಶಿಕ್ಷಣ ಸಂಸ್ಥೆ, ಕೇಂದ್ರ ಅಥವಾ ರಾಜ್ಯ ಸರ್ಕಾರಿ ಸಂಸ್ಥೆಗಳು, ರಾಷ್ಟ್ರೀಯ ಹಾಗೂ ಅಂತರ ರಾಷ್ಟ್ರೀಯ ಖಾಸಗಿ ಕಂಪೆನಿಗಳಲ್ಲಿ ತಮ್ಮ ತಮ್ಮ ವಿದ್ಯಾರ್ಹತೆ ಮತ್ತು ಅನುಭವವನ್ನು ಆಧರಿಸಿ ಕೆಲಸಕ್ಕೆ ಪ್ರಯತ್ನಿಸಬಹುದು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.