ಬುಧವಾರ, ಜೂನ್ 23, 2021
30 °C

ಜೀವ ನೀಡಿದ ನೀರ ಸೆಲೆ

ಸ್ವರೂಪಾನಂದ ಎಂ.ಕೊಟ್ಟೂರು Updated:

ಅಕ್ಷರ ಗಾತ್ರ : | |

ಇದು ಸುಮಾರು ೧೭೦ ಮನೆಗಳಿರುವ ಪುಟ್ಟ ಗ್ರಾಮ. ಇಡೀ ಗ್ರಾಮಕ್ಕೆ ಇಂದಿಗೂ ಮೂರೇ ಮೂರು ಸಾರ್ವಜನಿಕ ಕೊಳಾಯಿ. ಮಳೆಯ ಅನಿಶ್ಚಿತತೆ ಪರಿಣಾಮ ಕುಸಿದ ಅಂತರ್ಜಲ. ಕರೆಂಟ್ ಕೈಕೊಟ್ಟರಂತೂ ಮುಗಿದೇ ಹೋಯಿತು. ಪ್ರತಿ ನಿತ್ಯ ಗ್ರಾಮದಲ್ಲಿ ನೀರಿಗಾಗಿ ಹಾಹಾಕಾರ.ಇಂತಿಪ್ಪ ವೇಳೆ ಈ ಜನರ ನೀರಿನ ಬವಣೆ ನೀಗಿಸಿದ್ದಾಳೆ ಭೂತಾಯಿ. ಬರಗಾಲದ ಕರಿನೆರಳು ಬೆಂಬಿಡದೇ ಕಾಡಿದರೂ ಅಭಯಹಸ್ತ ನೀಡುತ್ತಿದ್ದಾಳೆ ಪ್ರಕೃತಿ ಮಾತೆ! ಹೌದು. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ತಿಮ್ಲಾಪುರ ಗ್ರಾಮಕ್ಕೆ ಪ್ರಕೃತಿಯ ಕೃಪಾಕಟಾಕ್ಷವಾಗಿದೆ. ಈ ಗ್ರಾಮದ ಕೂಗಳತೆಯಲ್ಲಿರುವ ಕೆರೆಸರದ ಎರಡು ಗುಡ್ಡಗಳ ನಡುವಿನ ಇಳಿಜಾರಿನ ಎರಡು ಚಿಕ್ಕ ಸಿಹಿ ನೀರಿನ ಬುಗ್ಗೆ (ಸೆಲೆ) ಸೃಷ್ಟಿಯಾಗಿದೆ.ಗುಡ್ಡದಲ್ಲಿನ ಕಲ್ಲಿನ ಪದರುಗಳಿಂದ ನೀರು ಹೊರಬರುತ್ತಿದೆ. ಒಂದು ನೀರಿನ ಬುಗ್ಗೆಯ ಆಳ ಸುಮಾರು ಐದಾರು ಅಡಿ ಇದ್ದರೆ, ಮತ್ತೊಂದು  ಒಂದು ತಂಬಿಗೆಯಿಂದ ನೀರು ತುಂಬುವಷ್ಟಿದೆ. ಆದರೂ ನೀರಿನ ವಿಷಯದಲ್ಲಿ ಇವೆರಡು ಅಕ್ಷಯ ಪಾತ್ರೆಗಳು. ನೀರು ತುಂಬಿದಂತೆಲ್ಲಾ ಮತ್ತೇ ನೀರು ಶೇಖರಣೆಯಾಗುವುದು ಇವುಗಳ ವಿಶೇಷತೆ. ಒಂದು ವೇಳೆ ನೀರನ್ನು ತುಂಬದೇ ಇದ್ದರೂ ನೀರು ಒಂದು ಹಂತದವರೆಗೆ ಬಂದು ನಿಲ್ಲುತ್ತದೆಯೇ ವಿನಾ ವ್ಯರ್ಥವಾಗಿ ಹರಿಯುವುದಿಲ್ಲ!ಈ ಜೀವಜಲಕ್ಕೆ ೨–-೩ ತಲೆಮಾರಿನ ಇತಿಹಾಸವಿದ್ದರೂ ಗ್ರಾಮಸ್ಥರು ಇವುಗಳನ್ನೇ ಆಶ್ರಯಿಸಿದ್ದು ಮಾತ್ರ ಆರೇಳು ವರ್ಷಗಳಿಂದ. ಮಳೆ ಪ್ರಮಾಣ ಇಳಿಮುಖವಾಗಿದ್ದರಿಂದ ಬಾವಿಗಳು ಬತ್ತಿ ಹೋದವು. ಹೀಗಾಗಿ ಜನರಿಗೆ ನೀರನ್ನು ಹುಡುಕಿಕೊಂಡು ತರುವುದೇ ದಿನನಿತ್ಯದ ತಲೆನೋವಾಯಿತು.

ಗ್ರಾಮದಿಂದ ೪ ಕಿ.ಮೀ ದೂರದ ಎಕ್ಕನಹಳ್ಳಿ ಗುಡ್ಡದ ಬುಡದಲ್ಲಿರುವ ಭದ್ರಾ ಡ್ಯಾಮ್ ನೀರಿನ ಕಾಲುವೆ ಕಡೆ ಮುಖ ಮಾಡದೇ ವಿಧಿ ಇರಲಿಲ್ಲ.  ಹೀಗೆ ಹನಿ ನೀರಿಗೂ ಚಡಪಡಿಸುತ್ತಿದ್ದರಿಂದಲೇ ಅನೇಕರು ಈ ಗ್ರಾಮಕ್ಕೆ ಹೆಣ್ಣು ಕೊಡಲು ಮುಂದೆ ಬರುತ್ತಿರಲಿಲ್ಲ!ಸರ್ಕಾರ ಈ ಕರುಣಾಜನಕ ಪರಿಸ್ಥಿತಿಯನ್ನರಿತು ೨೫–೩೦ ಬೋರ್‌ವೆಲ್‌ ಕೊರೆಯಿಸಿತು. ಆದರೆ ನೀರು ಕಂಡಿದ್ದು ಕೇವಲ ಎರಡರಲ್ಲಿ. ಅದೂ, ಗ್ರಾಮದಿಂದ ಬಹಳ ದೂರದಲ್ಲಿ. ಸರ್ಕಾರ ಪೈಪ್‌ಲೈನ್ ಮೂಲಕ ಗ್ರಾಮಕ್ಕೆ ನೀರು ಒದಗಿಸಿತು. ಸಾವಿರ ಜನಸಂಖ್ಯೆಗೆ ಮೂರು ಕೊಳಾಯಿ ನೀರು ಸಾಲಲಿಲ್ಲ. ದಿನವಿಡೀ ಸರದಿ ಪ್ರಕಾರ ನಿಂತರೂ ಒಂದು ಕೊಡ ನೀರು ಸಿಗಲಿಲ್ಲ. ಇಷ್ಟು ಪಡಿಪಾಟಲು ಪಟ್ಟು ನೀರು ಸಂಗ್ರಹಿಸಿದರೂ ಅವು ಕುಡಿಯಲಿಕ್ಕೆ ಯೋಗ್ಯವಿರಲಿಲ್ಲ. ಆಗ ಕಂಡಿದ್ದು ಕೆರೆಸರದ ಈ ನೀರಿನ ಸೆಲೆ.ಇಷ್ಟು ವರ್ಷ ನಗಣ್ಯವಾಗಿದ್ದ ಈ ನೀರಿನ ಸೆಲೆಗಳೇ ಇಂದು ಇವರಿಗೆ ಸರ್ವಸ್ವ. ಗ್ರಾಮಸ್ಥರು ದಿನನಿತ್ಯ ಇಲ್ಲಿಂದ ಹಗಲು-ರಾತ್ರಿ ಎನ್ನದೇ ನೀರು ಒಯ್ಯುತ್ತಾರೆ. ಒಂದು ವೇಳೆ ವಿದ್ಯುತ್ ವ್ಯತ್ಯಯದಿಂದ ಒಂದೆರೆಡು ದಿನ ಕೊಳದ ನೀರು ಬಾರದೇ ಇದ್ದರೆ ಇಲ್ಲಿ ಜನಜಾತ್ರೆ, ಕೊಡಗಳ ಮೆರವಣಿಗೆ!ಜಾನುವಾರುಗಳಿಗೆ ಪ್ರತಿ ಬಾರಿ ಕೆರೆಸರಕ್ಕೆ ಕರೆದೊಯ್ಯುವುದು, ನೀರು ಹೊತ್ತು ತಂದು ಕುಡಿಸುವುದು ಕಷ್ಟ ಸಾಧ್ಯ. ಆದ್ದರಿಂದ ಗ್ರಾಮಕ್ಕೆ ಅಂಟಿಕೊಂಡು ಸಣ್ಣಪ್ಪಜ್ಜರ ಮನೆತನಕ್ಕೆ ಸೇರಿದ ಜಮೀನಿನಲ್ಲಿ ಹೊಂಡವಿದೆ. ಇದನ್ನೇ ಈ ಮನೆತನ ಮಳೆ ನೀರು ಶೇಖರಣೆಗೆ ಬಿಟ್ಟು ಗ್ರಾಮಕ್ಕೆ ಅರ್ಪಿಸಿದೆ.

ಮಳೆಗಾಲದಲ್ಲಿ ಗುಡ್ಡಗಳ ಮೇಲೆ ಬಿದ್ದ ನೀರು ಇಳಿಜಾರಿನ ಮೂಲಕ ಸೀದಾ ಈ ಹೊಂಡದಲ್ಲಿ ಸೇರುವ ವ್ಯವಸ್ಥೆ ನೈಸರ್ಗಿಕವಾಗಿಯೇ ಇದೆ. ಹಾಗಾಗಿ ವರ್ಷದಲ್ಲಿ ಒಂದೆರೆಡು ಬಾರಿ ಭರ್ಜರಿ ಮಳೆಯಾದರೆ ಈ ಹೊಂಡ ಭರ್ತಿಯಾದಂತೆ.‘ಈ ನೀರಿನ ಸೆಲೆಗಳು ನಮ್ಮ ಗ್ರಾಮದ ನೀರಿನ ಬವಣೆ ನೀಗಿಸಿವೆ. ಈಗ ನಾನೇ ಹಣ ಖರ್ಚು ಮಾಡಿ, ವೈಜ್ಞಾನಿಕವಾಗಿ ಚಿಕ್ಕ ಗೋಡೆ ಕಟ್ಟಿ, ಕುಡಿಯಲು ಮತ್ತು ಬಳಕೆಗೆ ಪ್ರತ್ಯೇಕ ವ್ಯವಸ್ಥೆ ಮಾಡುವುದಕ್ಕೆ ಕಂಕಣ ತೊಟ್ಟಿದ್ದೇನೆ. ಗ್ರಾಮಕ್ಕೆ ಇದೇ ನೀರನ್ನು ತರುವ ಚಿಂತನೆ ಇದ್ದು, ಪ್ರಯೋಗಾರ್ಥವಾಗಿ ಉಡುಸಲಮ್ಮ ಗುಡಿ ಬಳಿ ಇರುವ ಬತ್ತಿದ ಬಾವಿಗೆ ಆ ನೀರನ್ನು ಪೈಪ್‌ಲೈನ್ ಮೂಲಕ ತುಂಬಿಸುವೆ. ಇದರಿಂದ ಜನರು ದಿನನಿತ್ಯ ಕೆರೆಸರದವರೆಗೆ ಹೋಗುವುದು ತಪ್ಪುತ್ತದೆ’ ಎನ್ನುತ್ತಾರೆ ಗ್ರಾಮಸ್ಥ ಎನ್.ಕೆ. ಮಂಜುನಾಥ್.ಈ ಮುಂಚೆ ಆರೋಗ್ಯ ಇಲಾಖೆಯವರು ಸೆಲೆಯ ನೀರು ಶುದ್ಧೀಕರಣಕ್ಕೆ ಗುಳಿಗೆಗಳನ್ನು ಕಾಲ-ಕಾಲಕ್ಕೆ ಕೊಡುತ್ತಿದ್ದರು. ಅವುಗಳನ್ನು ಈ ಸೆಲೆಯಲ್ಲಿ ಹಾಕುತ್ತಿದ್ದೆವು. ಇದರಿಂದ ನೀರು ಶುದ್ಧಗೊಳ್ಳುತ್ತಿದ್ದವು. ಆದರೆ ಇತ್ತೀಚೆಗೆ ಇಲಾಖೆ ಗುಳಿಗೆಗಳನ್ನು ನೀಡುವುದನ್ನು ನಿಲ್ಲಿಸಿದೆ. ಹಾಗಾಗಿ ನೀರು ಶುದ್ಧವಿದ್ದರೂ ಸೋಸಿ ಕುಡಿಯುತ್ತಿದ್ದೇವೆ. ಸರ್ಕಾರ ಇದರತ್ತ ಗಮನಕೊಡಬೇಕಿದೆ ಎನ್ನುತ್ತಾರೆ ಗ್ರಾಮಸ್ಥ  ಸಣ್ಣಪ್ಪಜ್ಜರ ಉಮ್ಮಣ್ಣ. ಮಂಜುನಾಥ ಅವರ ಸಂಪರ್ಕಕ್ಕೆ ೯೬೧೧೭೭೦೨೦೩.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.