ಮಂಗಳವಾರ, ಮೇ 24, 2022
22 °C

`ಜೀವ ವೈವಿಧ್ಯ ಸಂರಕ್ಷಣೆಗೆ ಜಾಗೃತಿ ಅಗತ್ಯ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಡಿಬಂಡೆ: ಜೀವ ವೈವಿಧ್ಯ ಸಂರಕ್ಷಣೆ ಕುರಿತು ಎಲ್ಲರಲ್ಲಿಯೂ ಜಾಗೃತಿ ಮೂಡಿದಾಗ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯ ಎಂದು ಜಿಲ್ಲಾ ಪರಿಸರ ಅಧಿಕಾರಿ ಸಿ.ಆರ್.ಮಂಜುನಾಥ್ ಹೇಳಿದರು.ಪಟ್ಟಣದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಈಚೆಗೆ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಪರಿಸರ ದಿನಾಚರಣೆಯ ಘೋಷಣೆಯಾಗಿರುವ `ಯೋಚಿಸು- ತಿನ್ನು- ಉಳಿಸು' ಎಂಬ ಘೋಷಣೆಯನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.ಆಹಾರ ವ್ಯರ್ಥ ಮಾಡಿದರೆ ಪರಿಸರದ ಮೇಲೆ ವ್ಯತಿರಿಕ್ತ ಪ್ರಭಾವ ಬೀರುತ್ತದೆ. ಕಾಡು ಬೆಳೆಸಲು ಯೋಗ್ಯವಾದ ಭೂಮಿಯನ್ನು ಆಹಾರ ಪದಾರ್ಥ ಬೆಳೆಯಲು ಉಪಯೋಗಿಸುತ್ತಿದ್ದೇವೆ ಎಂದು ನುಡಿದರು.ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಐ.ವಿ.ನಾಗೇಶ್ ಮಾತನಾಡಿ, ಮರಗಿಡಗಳನ್ನು ಬೆಳೆಸುವ ಉದ್ದೇಶದಿಂದ ಕೃಷಿ ಅರಣ್ಯ ಪ್ರೋತ್ಸಾಹ ವ್ಯವಸ್ಥೆ ಜಾರಿಯಾಗಿದೆ. ತಾಲ್ಲೂಕಿನ ರೈತರು ತಮಗೆ ಅನುಕೂಲವಾಗುವ ಸಸಿಗಳನ್ನು ಪಡೆಯಬಹುದು ಎಂದು ಹೇಳಿದರು.ರೈತರು ತಮ್ಮ ಜಮೀನಿನಲ್ಲಿ ಗಿಡಗಳನ್ನು ನೆಟ್ಟು ಬೆಳಸಿದರೆ ಮೊದಲ ವರ್ಷಕ್ಕೆ ಪ್ರತಿ ಗಿಡಕ್ಕೆ ರೂ 10, ಎರಡನೇ ವರ್ಷ ಪ್ರತಿ ಗಿಡಕ್ಕೆ ರೂ 15, ಮೂರನೇ ವರ್ಷ ಪ್ರತಿ ಗಿಡಕ್ಕೆ ರೂ 20ರ ಅನುದಾನ ನೀಡುತ್ತದೆ.  ತಾಲ್ಲೂಕಿನಲ್ಲಿ ವಿತರಿಸಲು ಒಟ್ಟು 1 ಲಕ್ಷ ವಿವಿಧ ಜಾತಿಯ ಗಿಡಗಳು ವಿವಿಧ ನರ್ಸರಿಗಳಲ್ಲಿ ಸಿದ್ಧವಿದೆ ಎಂದು ನುಡಿದರು.ಕಾರ್ಯಕ್ರಮದಲ್ಲಿ ಮಾತನಾಡಿದ ಪರಿಸರ ಸಂರಕ್ಷಣಾ ವೇದಿಕೆಯ ಕಾರ್ಯದರ್ಶಿ ಗುಂಪು ಮರದ ಆನಂದ್, ಪರಿಸರ ನಾಶದಿಂದ ಈ ಪ್ರಾಂತ್ಯದಲ್ಲಿ ಮಳೆ ಮತ್ತು ಬೆಳೆ ಎರಡೂ ಕಡಿಮೆಯಾಗಿದೆ ಎಂದರು. ಕಾರ್ಯಕ್ರಮದ ಅಂಗವಾಗಿ ವಿವಿಧ ತಳಿಯ ಸಸಿಗಳನ್ನು ಪ್ರೌಢಶಾಲೆಯ ಆವರಣದಲ್ಲಿ ನೆಡಲಾಯಿತು. ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ವಲಯ ಅರಣ್ಯಾಧಿಕಾರಿ ಮಹೇಶ್,ಪಟ್ಟಣ ಪಂಚಾಯಿತಿ ಅಧಿಕಾರಿ ಶ್ರೀರಾಮರೆಡ್ಡಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಜಾವಿದ್, ಮಂಜುನಾಥ್, ಮುಖ್ಯ ಶಿಕ್ಷಕ ಎನ್.ನಾರಾಯಣಸ್ವಾಮಿ, ಮುಖ್ಯ ಶಿಕ್ಷಕಿ ಸರಳಾಕುಮಾರಿ, ದೈಹಿಕ ಶಿಕ್ಷಕರಾದ ಶಿವಪ್ರಸಾದ್, ಶಿಕ್ಷಕರಾದ ವಿ.ವೆಂಕಟೇಶ್, ಗಂಗರಾಜು, ವೆಂಕಟೇಶಮೂರ್ತಿ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.