ಬುಧವಾರ, ಮೇ 25, 2022
31 °C

ಜೆಡಿಎಸ್ ಬಲಗೊಳಿಸಲು ಸಮಾವೇಶ: ಬಚ್ಚೇಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಮುಂದಿನ ಚುನಾವಣೆ ವೇಳೆಗೆ ಜೆಡಿಎಸ್‌ಗೆ ಬಲ ತುಂಬುವ ಮತ್ತು ಪಕ್ಷದ ಕಾರ್ಯಕರ್ತರಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಂಡು ಸಮಾವೇಶ ನಡೆಸಲಿದ್ದಾರೆ ಎಂದು ಶಾಸಕ ಕೆ.ಪಿ.ಬಚ್ಚೇಗೌಡ ತಿಳಿಸಿದರು.ಭ್ರಷ್ಟ ಬಿಜೆಪಿ ಸರ್ಕಾರ ಅಸ್ಥಿರತೆ ಎದುರಿಸುತ್ತಿದ್ದು, ಶೀಘ್ರದಲ್ಲೇ ವಿಧಾನಸಭಾ ಚುನಾವಣೆಗಳು ಘೋಷಣೆಯಾಗುವ ಸಾಧ್ಯತೆಯಿದೆ.ಮುಂದಿನ ಎರಡು ವರ್ಷಗಳ ನಂತರ ಚುನಾವಣೆ ಘೋಷಣೆಯಾದರೂ ಕೂಡ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹವಿರಬೇಕು ಎಂಬ ಉದ್ದೇಶದಿಂದ ಸಮಾವೇಶ ನಡೆಸಲಾಗುವುದು ಎಂದು ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಫೆಬ್ರುವರಿ 20ರಿಂದ ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ಸಮಾವೇಶಗಳು ನಡೆಯಲಿದ್ದು, ಕುಮಾರಸ್ವಾಮಿ ಅವರು ಸೇರಿದಂತೆ ಪಕ್ಷದ ಮುಖಂಡರು ಭಾಗವಹಿಸಲಿದ್ದಾರೆ. ಭ್ರಷ್ಟ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಮತ್ತು ಜೆಡಿಎಸ್ ಆಡಳಿತದಲ್ಲಿದ್ದಾಗ ಕೈಗೊಂಡ ಸಾಧನೆಗಳ ಬಗ್ಗೆ ಸಮಾವೇಶದಲ್ಲಿ ವಿವರಿಸಲಾಗುವುದು ಎಂದು ಅವರು ತಿಳಿಸಿದರು.ಪ್ರಸಕ್ತ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಭಾರಿ ಹಿನ್ನಡೆಯಾಗಿದ್ದು ನಿಜ. ಕಳೆದ ಬಾರಿ ಗೆದ್ದ ಏಳು ಸ್ಥಾನಗಳಲ್ಲಿ ಮೂರು ಸ್ಥಾನಗಳನ್ನು ಮಾತ್ರ ಉಳಿಸಿಕೊಳ್ಳಲು ಸಾಧ್ಯವಾಯಿತು. ಆದರೆ ಮತಗಳ ಅಂತರವನ್ನು ಗಮನಿಸಿದಾಗ, ಜೆಡಿಎಸ್ ಅಭ್ಯರ್ಥಿಗಳಿಗೆ ಹೆಚ್ಚಿನ ಮತಗಳು ಬಂದಿವೆ ಎಂದು ಅವರು ತಿಳಿಸಿದರು.ಮಾಜಿ ಶಾಸಕಿ ಜ್ಯೋತಿ ರೆಡ್ಡಿ ಮಾತನಾಡಿ, ‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪರ ಮೂಡಿದ ಅನುಕಂಪದ ಅಲೆಯಿಂದ ಜೆಡಿಎಸ್‌ಗೆ ಕಡಿಮೆ ಮತಗಳು ಬಂದವು. ಬಹುತೇಕ ಮತಗಳು ಬಿಜೆಪಿ ಮತ್ತು ಕಾಂಗ್ರೆಸ್ ಪರ ಚಾಲನೆಯಾದ ಕಾರಣ ಜೆಡಿಎಸ್‌ಗೆ ಗೆಲುವು ಸಾಧ್ಯವಾಗಲಿಲ್ಲ’ ಎಂದರು.ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಾಜಣ್ಣ, ದೊಡ್ಡಮರಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೊಳವನಹಳ್ಳಿ ಮುನಿರಾಜು, ಜೆಡಿಎಸ್ ಜಿಲ್ಲಾ ಘಟಕದ ಕಾರ್ಯದರ್ಶಿ ಪಿ.ಶ್ರೀನಿವಾಸ್, ಪಕ್ಷದ ಮುಖಂಡರಾದ ಸಂತೋಷ್, ಮುನಿಕೃಷ್ಣಪ್ಪ, ಜಿ.ಆರ್.ನಾರಾಯಣಸ್ವಾಮಿ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.