ಭಾನುವಾರ, ಫೆಬ್ರವರಿ 28, 2021
24 °C

ಜೆಡಿಎಸ್ ಶಾಪ ವಿಮೋಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೆಡಿಎಸ್ ಶಾಪ ವಿಮೋಚನೆ

ಬೆಂಗಳೂರು: ಸರ್ಕಾರ ರಚಿಸಲು ಬಿಜೆಪಿ ಜೊತೆ 2006ರಲ್ಲಿ ಕೈಜೋಡಿಸಿದಾಗ ಪಕ್ಷಕ್ಕೆ ಅಂಟಿದ್ದ ಶಾಪ ಈಗ ವಿಮೋಚನೆಯಾಗಿದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಹೇಳಿದರು.

ಇಲ್ಲಿನ ಅರಮನೆ ಮೈದಾನದ `ಗಾಯತ್ರಿ ವಿಹಾರ~ದಲ್ಲಿ ಜೆಡಿಎಸ್ ಭಾನುವಾರ ಆಯೋಜಿಸಿದ್ದ `ಮುಸ್ಲಿಂ ಸಮಾವೇಶ~ದಲ್ಲಿ ಮಾತನಾಡಿದ ಅವರು, `ನಾವು ಸಮಯ ಸಾಧಕರಲ್ಲ. ನನ್ನ ಮಗ (ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ) ಬಿಜೆಪಿ ಜೊತೆ ಕೈಜೋಡಿಸುವ ತಪ್ಪು ಕೆಲಸ ಮಾಡಲು ಕಾಂಗ್ರೆಸ್‌ನ ಕೆಲವು ಮುಖಂಡರೂ ಕಾರಣ~ ಎಂದು ದೂರಿದರು.

`ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದ ಆಡಳಿತಾವಧಿಯಲ್ಲಿ ದತ್ತ ಪೀಠ ವಿಷಯದಲ್ಲಿ ಬಿಜೆಪಿ ರಾಜ್ಯ ಘಟಕದ ಅಂದಿನ ಅಧ್ಯಕ್ಷ ಡಿ.ವಿ. ಸದಾನಂದ ಗೌಡರು ಕಾನೂನು ಉಲ್ಲಂಘಿಸಿದಾಗ ಅವರ ಬಂಧನಕ್ಕೆ ಆದೇಶಿಸಲೂ ಕುಮಾರಸ್ವಾಮಿ ಹಿಂಜರಿಯಲಿಲ್ಲ~ ಎಂದು ನೆನಪಿಸಿಕೊಂಡ ಅವರು, `ನನಗೆ ಈಗ ರಾಜಕೀಯ ಮಹತ್ವಾಕಾಂಕ್ಷೆ ಇಲ್ಲ. ನಮ್ಮ ಪಕ್ಷದ ಜಾತ್ಯತೀತ ನಿಲುವು ಗಟ್ಟಿಯಾಗಿರಬೇಕು~ ಎಂದರು.

`ಕಾಂಗ್ರೆಸ್ಸಿಗರೇ ಕಾರಣ~:  ಜೆಡಿಎಸ್ ಒಡೆಯುವ ಕಾರ್ಯಕ್ಕೆ ಕೆಲವು ಕಾಂಗ್ರೆಸ್ ಮುಖಂಡರು ಮುಂದಾದ ಕಾರಣ, ಅನಿವಾರ್ಯವಾಗಿ ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಬೇಕಾಯಿತು. ಈ ವಿಚಾರವಾಗಿ ದೇವೇಗೌಡರ ಮನಸ್ಸಿನಲ್ಲಿ ಇಂದಿಗೂ ನೋವಿದೆ ಎಂದು ಕುಮಾರಸ್ವಾಮಿ ಹೇಳಿದರು.

ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಹಾಗೂ ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಅವರೂ ಬೇರೆ ಬೇರೆ ಸಂದರ್ಭಗಳಲ್ಲಿ ಬಿಜೆಪಿ ಜೊತೆ ಕೈಜೋಡಿಸಿ ಸರ್ಕಾರ ರಚಿಸಿದ್ದಾರೆ. ಆದರೆ ಅವರು ಮುಸ್ಲಿಮರಿಗೆ ಅನ್ಯಾಯ ಎಸಗಿಲ್ಲ. ಅದೇ ರೀತಿ ಜೆಡಿಎಸ್ ಕೂಡ ಮುಸ್ಲಿಮರಿಗೆ ದ್ರೋಹವೆಸಗಿಲ್ಲ ಎಂದರು. 2001ರ ಜನಗಣತಿ ಪ್ರಕಾರ ರಾಜ್ಯದ ಒಟ್ಟು 5.6 ಕೋಟಿ ಜನಸಂಖ್ಯೆಯಲ್ಲಿ ಮುಸ್ಲಿಮರ ಪಾಲು 65 ಲಕ್ಷ. ಇಷ್ಟಿದ್ದರೂ, ಆಸರೆ ಮನೆಗಳ ನಿರ್ಮಾಣ, ಸರ್ಕಾರಿ ಮತ್ತು ಖಾಸಗಿ ಉದ್ಯೋಗ, ಸಾಲ ಯೋಜನೆಗಳಲ್ಲಿ ಮುಸ್ಲಿಮರನ್ನು ಕಡೆಗಣಿಸಲಾಗಿದೆ ಎಂದರು.

ಕೇಂದ್ರದ ಯುಪಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಅಲಿ, `ದೇಶದ ಪ್ರತಿಯೊಬ್ಬ ಮುಸ್ಲಿಂ ಯುವಕನನ್ನು ಅನುಮಾನದ ಕಣ್ಣಿನಿಂದ ನೋಡಿರುವುದೇ ಕೇಂದ್ರ ಸರ್ಕಾರದ ಸಾಧನೆ~ ಎಂದು ಟೀಕಿಸಿದರು.

ಕಾಂಗ್ರೆಸ್ ಮುಖಂಡ ಸಿ.ಎಂ. ಇಬ್ರಾಹಿಂ ಅವರನ್ನು ಲೇವಡಿ ಮಾಡಿದ ಶಾಸಕ ಬಿ.ಜೆಡ್. ಜಮೀರ್ ಅಹಮದ್ ಖಾನ್, `ಅವರು (ಇಬ್ರಾಹಿಂ) ದೇವೇಗೌಡರ ಜೊತೆಯಿದ್ದಾಗ ಕೇಂದ್ರ ಸಚಿವರಾಗಿದ್ದರು. ಕಾಂಗ್ರೆಸ್ ಸೇರಿದ ನಂತರ ಅವರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ಪಡೆಯಲೂ ಸಾಧ್ಯವಾಗಿಲ್ಲ~ ಎಂದರು. ಸಮಾವೇಶದಲ್ಲಿ ಮಾತನಾಡಿದ ಜೆಡಿಎಸ್ ಮುಖಂಡರೆಲ್ಲರೂ, ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅಹಮದ್ ಸರಡಗಿ ವಿಧಾನ ಪರಿಷತ್ ಚುನಾವಣೆಯಲ್ಲಿ ಸೋಲುಂಡಿದ್ದನ್ನು ಪ್ರಸ್ತಾಪಿಸಿದರು.

ಜೆಡಿಎಸ್ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ, ರಾಜ್ಯ ಘಟಕದ ಕಾರ್ಯಾಧ್ಯಕ್ಷ ಪಿ.ಜಿ.ಆರ್. ಸಿಂಧ್ಯ, ಮುಖಂಡರಾದ ಎಚ್.ಡಿ. ರೇವಣ್ಣ, ಬಂಡೆಪ್ಪ ಕಾಶೆಂಪುರ, ಚೆಲುವರಾಯಸ್ವಾಮಿ, ಬಸನಗೌಡ ಪಾಟೀಲ ಯತ್ನಾಳ, ಸೈಯದ್ ಮುದೀರ್ ಆಗಾ, ಮುಸ್ಲಿಂ ಧರ್ಮಗುರುಗಳು ಮತ್ತಿತರರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ದೇವೇಗೌಡ, ಕುಮಾರಸ್ವಾಮಿ, ಜಮೀರ್ ಅಹಮದ್ ಖಾನ್ ಮತ್ತಿತರರನ್ನು ಕ್ರೇನ್ ಮೂಲಕ ವೇದಿಕೆಗೆ ಕರೆತರಲಾಯಿತು.

ಜೆಡಿಎಸ್‌ಗೆ ಅಜೀಂ ವಿದಾಯ

ಬೆಂಗಳೂರು: ವಿಧಾನ ಪರಿಷತ್‌ನ ಮಾಜಿ ಸದಸ್ಯ ಅಬ್ದುಲ್ ಅಜೀಂ ಜೆಡಿಎಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ಭಾನುವಾರ ರಾಜೀನಾಮೆ ಸಲ್ಲಿಸಿದ್ದಾರೆ. ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಬೆಳವಣಿಗೆಯನ್ನು ಸಹಿಸದಿರುವುದೇ ಈ ನಿರ್ಧಾರಕ್ಕೆ ಕಾರಣ ಎಂದು ತಿಳಿಸಿದ್ದಾರೆ.

ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರಿಗೆ ಪತ್ರ ಬರೆದಿರುವ ಅಜೀಂ, `ನೀವು ನನ್ನಲ್ಲಿ ವಿಶ್ವಾಸವಿಟ್ಟು ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಿದಿರಿ. ಪರಿಷತ್ ಸದಸ್ಯನನ್ನಾಗಿಯೂ ನೇಮಕ ಮಾಡಿದಿರಿ. ಪಕ್ಷದ ಚೌಕಟ್ಟಿನಲ್ಲಿ ನಾನು ಕೆಲಸ ಮಾಡಿದ್ದೇನೆ.

ನೀವು ನನ್ನ ಮೇಲೆ ಹೆಚ್ಚು ಪ್ರೀತಿ ತೋರಿಸಿದ್ದು ನಿಮ್ಮ ಪುತ್ರ ಕುಮಾರಸ್ವಾಮಿ ಅವರಿಗೆ ಪಥ್ಯವಾಗಲಿಲ್ಲ. ಅವರು ಉದ್ದೇಶಪೂರ್ವಕವಾಗಿ ನನ್ನನ್ನು ಕಡೆಗಣಿಸಿದರು~ ಎಂದು ದೂರಿದ್ದಾರೆ.

`ಪಕ್ಷಕ್ಕೆ ಸೇರಿ ಎಂಟು ವರ್ಷಗಳಾಯಿತು. ಈ ಅವಧಿಯಲ್ಲಿ ನೀವು ವಹಿಸಿದ ಎಲ್ಲ ಕೆಲಸಗಳನ್ನೂ ಜವಾಬ್ದಾರಿಯಿಂದ ನಿರ್ವಹಿಸಿರುವೆ. ಆದರೆ, ಕುಮಾರಸ್ವಾಮಿಯವರು ನನಗೆ ಪಕ್ಷದ ಚಟುವಟಿಕೆಗಳಲ್ಲಿ ಅವಕಾಶ ನೀಡದೇ ದೂರ ಇಟ್ಟರು.

ಅಸ್ಪೃಶ್ಯನಂತೆ ನಡೆಸಿಕೊಂಡರು. ತತ್ವ ಮೌಲ್ಯಗಳಿಗೆ ನಿಷ್ಠನಾದ, ಸನ್ನಡತೆಯ ಮತ್ತು ಸಾಮರ್ಥ್ಯ ಹೊಂದಿದ ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬರು ಸಾರ್ವಜನಿಕ ಜೀವನದಲ್ಲಿ ಯಶಸ್ವಿಯಾಗುವುದು ಅವರಿಗೆ ಇಷ್ಟವಿಲ್ಲ ಎಂದು ಕಾಣುತ್ತದೆ.

ಇನ್ನು ಪಕ್ಷದಲ್ಲಿ ಮುಂದುವರಿಯುವುದು ವ್ಯರ್ಥ ಪ್ರಯತ್ನವಾಗುತ್ತದೆ. ಈ ಕಾರಣಕ್ಕಾಗಿಯೇ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ~ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.