ಗುರುವಾರ , ಮೇ 26, 2022
31 °C

ಜೆಡಿಯುನ ನಿಶಾದ್ ಸ್ಪರ್ಧೆ ಇಂಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಟ್ನಾ/ ನವದೆಹಲಿ (ಪಿಟಿಐ, ಐಎಎನ್‌ಎಸ್): ಬಿಹಾರದ ಮುಜಾಫರ್‌ಪುರನ ಜೆಡಿಯು ಸಂಸದ ಜೈ ನಾರಾಯಣ್ ಪ್ರಸಾದ್ ನಿಶಾದ್ ಅವರು ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.ರಾಷ್ಟ್ರಪತಿ ಚುನಾವಣೆ ಕುರಿತು ಚರ್ಚಿಸಲು ಕರೆಯಲಾಗಿದ್ದ ಎನ್‌ಡಿಎ ಸಭೆಯಲ್ಲಿ ತಮ್ಮ ಹೆಸರನ್ನು ಪ್ರಸ್ತಾಪಿಸದ ಜೆಡಿಯು ಅಧ್ಯಕ್ಷ ಶರದ್ ಯಾದವ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.`ಹಿಂದುಳಿದ ವರ್ಗಗಳೆಂದರೆ ಕೇವಲ ಯಾದವರು ಮಾತ್ರವಲ್ಲ. ನನ್ನ ಜಾಗದಲ್ಲಿ ಯಾದವ ಜನಾಂಗದ ವ್ಯಕ್ತಿ ಇದ್ದರೆ ಖಂಡಿತವಾಗಿಯೂ ನೀವು ಹೆಸರನ್ನು ಪ್ರಸ್ತಾಪ ಮಾಡುತ್ತಿದ್ದಿರಿ~ ಎಂದು ನಿಶಾದ್ ಅವರು ಶರದ್ ಯಾದವ್ ಅವರಿಗೆ ಬರೆದ ಪತ್ರದಲ್ಲಿ ನೇರವಾಗಿ ಆರೋಪಿಸಿದ್ದಾರೆ.ಶರದ್ ಯಾದವ್ ಮಾತ್ರವಲ್ಲ, ಆರ್‌ಜೆಡಿಯ ಲಾಲು ಪ್ರಸಾದ್ ಮತ್ತು ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್ ಅವರಂಥ ಹಿಂದುಳಿದ ವರ್ಗಗಳ ಬಲವಾದ ಸಮರ್ಥರು ಕೂಡಾ ಚುನಾವಣೆಯಲ್ಲಿ ತಮ್ಮ ಗೆಲುವಿನ ಬಗ್ಗೆ ಮಾತ್ರ ಮಾತನಾಡುತ್ತಾರೆ ಎಂದು ಆರೋಪಿಸಿದ್ದಾರೆ.ರಾಷ್ಟ್ರಪತಿ ಸ್ಥಾನಕ್ಕೆ ನಡೆಯುವ ಚುನಾವಣೆಗೆ ಸ್ಪರ್ಧಿಸುವ ತಮ್ಮ ಮನದ ಇಂಗಿತವನ್ನು ಅವರು ಎನ್‌ಡಿಎ ಸಭೆಗೂ ಮುನ್ನ ಶರದ್ ಅವರ ಮುಂದೆ ವ್ಯಕ್ತಪಡಿಸಿದ್ದರು. ಇದುವರೆಗೂ ಅವರು ನಾಮಪತ್ರ ಸಲ್ಲಿಸಿಲ್ಲ.ವಾರಾಂತ್ಯಕ್ಕೆ ನಿರ್ಧಾರ: ಜೇಠ್ಮಲಾನಿ:

ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧೆಗೆ ಸಂಬಂಧಿಸಿದಂತೆ ವಾರಾಂತ್ಯದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಬಿಜೆಪಿ ಸಂಸದ ರಾಮ್ ಜೇಠ್ಮಲಾನಿ ಹೇಳಿದ್ದಾರೆ.ಲಂಡನ್‌ನಿಂದ ದೂರವಾಣಿಯಲ್ಲಿ ಮಾತನಾಡಿದ ಅವರು, ವಾರಾಂತ್ಯದಲ್ಲಿ ಭಾರತಕ್ಕೆ ಹಿಂದಿರುಗಲಿದ್ದು, ನಂತರ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ. ಈ ವಿಷಯದಲ್ಲಿ ತಮ್ಮನ್ನು ಯಾರೂ ಬೆಂಬಲಿಸದಿದ್ದರೂ ತೊಂದರೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.ಚುನಾವಣೆಗೆ ಸ್ಪರ್ಧಿಸುವಂತೆ ಕಲಾಂ ಅವರ ಮೇಲೆ ಒತ್ತಡ ಹೇರುವ ಬದಲು ಅವರ ಮನವೊಲಿಸಬೇಕು. ಪ್ರಣವ್ ವಿರುದ್ಧ ಎನ್‌ಡಿಎ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂದು ಅವರು ಒತ್ತಾಯಿಸಿದರು. ವಿದೇಶಿ ಬ್ಯಾಂಕ್‌ಗಳಲ್ಲಿರುವ ಕಪ್ಪುಹಣವನ್ನು ಹೊಂದಿರುವವರ ಹೆಸರು ಬಹಿರಂಗಗೊಳಿಸಲು ಅವರು ನಿರಾಕರಿಸುತ್ತಿರುವ ಕಾರಣ ತಾವು ಅವರನ್ನು ವಿರೋಧಿಸುತ್ತಿರುವುದಾಗಿಯೂ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.