ಮಂಗಳವಾರ, ಮಾರ್ಚ್ 9, 2021
23 °C

ಜೈನ್ ವಿವಿಯಲ್ಲಿ ಕಾರ್ಪೊರೇಟ್ ಯುದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೈನ್ ವಿವಿಯಲ್ಲಿ ಕಾರ್ಪೊರೇಟ್ ಯುದ್ಧ

ಜೈನ್ ವಿಶ್ವವಿದ್ಯಾಲಯ, ಸ್ಕೂಲ್ ಆಫ್‌ ಕಾಮರ್ಸ್ ಅಂಡ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಈಚೆಗೆ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಅಂತರಕಾಲೇಜು ಮ್ಯಾನೇಜ್‌ಮೆಂಟ್‌ ಉತ್ಸವ ‘ಸಮನ್ವಯ’ ಅದ್ದೂರಿಯಾಗಿ ನಡೆಯಿತು. ೨೦೨೦ನೇ ಇಸವಿಯಲ್ಲಿ ಕಾರ್ಪೊರೇಟ್‌ಗಳ ೪ನೇ ಮಹಾಯುದ್ಧ ಎಂಬ ಕಾಲ್ಪನಿಕ ಥೀಮ್ ಆಧರಿಸಿ ಇಡೀ ಕಾರ್ಯಕ್ರಮವನ್ನು ಹೆಣೆಯಲಾಗಿತ್ತು.ಆರ್ಥಿಕವಾಗಿ ಸುಸ್ಥಿತವಾಗುತ್ತಿರುವ ಈ ಸಂದರ್ಭದಲ್ಲಿ, ಮುಂದೆ ಕಾರ್ಪೊರೇಟ್‌ಗಳ ನಡುವೆ ನಡೆಯಬಹುದಾದ ಸ್ಪರ್ಧೆ ಹಾಗೂ ಅದನ್ನು ಎದುರಿಸಲು ನಡೆಸಬೇಕಾದ ತಯಾರಿಯನ್ನು ಕುರಿತು ಕಾರ್ಯಕ್ರಮ ರೂಪುಗೊಂಡಿತ್ತು. ಸಮನ್ವಯ, ವಿದ್ಯಾರ್ಥಿಗಳ ವ್ಯಾವಹಾರಿಕ ಹಾಗೂ ಕಲಾತ್ಮಕ ಕ್ಷೇತ್ರದಲ್ಲಿನ ಅವರ ಜ್ಞಾನಕ್ಕೆ ಸವಾಲೊಡ್ಡುವಂತಹ ಹಲವು ಆಸಕ್ತಿಕರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಈ ಬಾರಿಯ ಸಮನ್ವಯದಲ್ಲಿ, ಪ್ರತಿ ಕಾಲೇಜು ಒಂದೊಂದು ಕಾರ್ಪೊರೇಟ್ ಸ್ಥಳವನ್ನು ಪ್ರತಿನಿಧಿಸುವ ಮೂಲಕ ಯುದ್ಧರಂಗಕ್ಕೆ ಸಜ್ಜಾಯಿತು. ಪಬ್ಲಿಕ್ ರಿಲೇಶನ್ಸ್, ಹ್ಯೂಮನ್ ರಿಸೋರ್ಸ್, ಫೈನಾನ್ಸ್ ಮತ್ತು ಮಾರ್ಕೆಟಿಂಗ್ ವಿಭಾಗಗಳಲ್ಲಿ ಸ್ಪರ್ಧಿಗಳು ತಮ್ಮ ಯೋಜನೆಗಳ ಮೂಲಕ ಆಯೋಜಕರು ನೀಡಿದ ಕೆಲಸದಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು.ಈ ಕಾರ್ಯಕ್ರಮದ ಮುಖ್ಯ ಆಕರ್ಷಣೆ ಸಾಂಘಿಕ ಕಾರ್ಯಕ್ರಮಗಳು (ಗ್ರೂಪ್ ಇವೆಂಟ್ಸ್). ಇತರೆ ಕಾಲೇಜುಗಳ ಮ್ಯಾನೇಜ್‌ಮೆಂಟ್‌ ಉತ್ಸವದಲ್ಲಿ ಬೆಸ್ಟ್ ಮ್ಯಾನೇಜರ್ ಸ್ಪರ್ಧೆ ಪ್ರಮುಖ ಆಕರ್ಷಣೆಯಾಗಿದ್ದರೆ, ಜೈನ್ ವಿಶ್ವವಿದ್ಯಾಲಯ ಸಾಂಘಿಕ ಕೆಲಸಕ್ಕೆ ಒತ್ತು ನೀಡುವ ಮೂಲಕ ಬೆಸ್ಟ್ ‘ಗ್ರೂಪ್’ ಎಂಬ ಅಂಶವನ್ನು ಬೆಳಕಿಗೆ ತಂದಿತು. ಒಟ್ಟಿನಲ್ಲಿ, ಜೈನ್ ವಿಶ್ವವಿದ್ಯಾಲಯ ಆಯೋಜಿಸಿದ್ದ ಸಮನ್ವಯ ಕಾರ್ಯಕ್ರಮದಲ್ಲಿ, ವ್ಯಾವಹಾರಿಕ ಕ್ಷೇತ್ರಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಕ್ರಿಯಾಶೀಲ ಕೌಶಲಕ್ಕೆ ಸವಾಲೆಸೆದು, ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿತು.ಅಂದಹಾಗೆ, ಭಾರತೀಯ ಸಿನಿಮಾರಂಗಕ್ಕೆ ನೂರು ವರ್ಷ ತುಂಬಿದ ನೆನಪಿನಲ್ಲಿ ಜೈನ್‌ ವಿವಿ ಮತ್ತೊಂದು ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. 

೨೪ ವೈವಿಧ್ಯಮಯ ಕಾರ್ಯಕ್ರಮಗಳನ್ನು ಒಳಗೊಂಡಿದ್ದ ‘ಸಂಯೋಗ’ ಉತ್ಸವದಲ್ಲಿ ಬಣ್ಣದ ಜಗತ್ತಿನ ದಿಗ್ಗಜರ ಹಾಡು, ಸಂಗೀತ, ನೃತ್ಯ, ಸಂಭಾಷಣೆಗಳು ಝರಿಯಾಗಿ ಹರಿದು ನೆರೆದಿದ್ದ ಪ್ರೇಕ್ಷಕರಿಗೆ ರಸದೌತಣ ಉಣಬಡಿದವು.ನಗರದ ೧೫ ಪ್ರತಿಷ್ಠಿತ ಕಾಲೇಜುಗಳು ಈ ಸಂಭ್ರಮದಲ್ಲಿ ಭಾಗವಹಿಸಿ ಜಿದ್ದಾಜಿದ್ದಿನ ಪೈಪೋಟಿ ನೀಡಿದವು. ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿದ್ದ ಬಾಲಿವುಡ್ ‘ಗ್ರೂಪ್ ಡಾನ್ಸ್‌’ನಲ್ಲಿ ಅತಿರಥ ಮಹಾರಥ ನಾಯಕ– ನಾಯಕಿಯರ ಜನಪ್ರಿಯ ನೃತ್ಯ ಶೈಲಿಯನ್ನು ತಮ್ಮದೇ ರೀತಿಯಲ್ಲಿ ನಿರೂಪಿಸಿ, ಕ್ರೈಸ್ಟ್ ವಿಶ್ವವಿದ್ಯಾಲಯ ಜಯಭೇರಿ ಬಾರಿಸಿತು.ಇನ್ನು ‘ಥೀಮ್ ಡಾನ್ಸ್‌’ನಲ್ಲಿ ಜ್ಯೋತಿ ನಿವಾಸ್ ಕಾಲೇಜು ಪ್ರೇಕ್ಷಕರ ಮನಸೂರೆಗೊಂಡರೆ, ಬೀಟ್ ಬಾಕ್ಸಿಂಗ್‌ನಲ್ಲಿ ಎಸ್‌ಎಸ್‌ಆರ್ ಕಾಲೇಜಿನ ಹಿಲಾಲ್ ಅಲಾಲ್ ತಮ್ಮ ಧ್ವನಿಪೆಟ್ಟಿಗೆಯಿಂದ ಡ್ರಮ್ಸ್‌ನ ಶಬ್ದವನ್ನು ತಾಳಬದ್ಧವಾಗಿ ಹೊರಹಿಮ್ಮಿಸಿ, ಪ್ರೇಕ್ಷಕರನ್ನು ಕುಳಿತಲ್ಲೇ ರೋಮಾಂಚನಗೊಳಿಸಿದರು.ಆಯೋಜಕರು ನೀಡುವ ಸಂಗೀತ ಸುಳಿವು, ಸಾಹಿತ್ಯ ಸುಳಿವು, ಸಂಭಾಷಣೆಯ ಸುಳಿವು ಹಾಗೂ ಪಾತ್ರಧಾರಿಗಳ ಸುಳಿವುಗಳನ್ನು ಪತ್ತೆಹಚ್ಚಿ ಟ್ರೆಷರ್ ಹಂಟ್ ಸ್ಪರ್ಧೆಯಲ್ಲಿ ಅಲಿಯನ್ಸ್ ಅಸೆಂಟ್ ಕಾಲೇಜು  ವಿದ್ಯಾರ್ಥಿಗಳು ವಿಜೇತರಾದರು. ಕಾರ್ಯಕ್ರಮದ ಜೀವಾಳವೆಂದೇ ಬಿಂಬಿಸಲಾಗಿದ್ದ ‘ವಾಯ್ಸ್ ಆಫ್‌ ಸಂಯೋಗ’ ಹಲವು ಪ್ರತಿಭೆಗಳ ಅನಾವರಣಕ್ಕೆ ವೇದಿಕೆ ಕಲ್ಪಿಸಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.