ಭಾನುವಾರ, ಮೇ 22, 2022
28 °C

ಜೈಲಿನಲ್ಲಿ ಕೈದಿಗಳ ಅಟ್ಟಹಾಸ: ಖಾಕಿಧಾರಿಗಳಿಂದ ಬೆತ್ತದ ಪಾಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ನಗರದ ಉಪ ಕಾರಾಗೃಹದಲ್ಲಿ ಶುಕ್ರವಾರ ವಿಚಾರಣಾಧೀನ ಕೈದಿಗಳಿಂದ ನಡೆದ ದಾಂದಲೆ ಪೂರ್ವನಿಯೋಜಿತ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದೆ. ಉಪ ಕಾರಾಗೃಹ ಆವರಣದ ಎಲ್ಲ ಏಳೂ ಬ್ಯಾರಕ್‌ಗಳನ್ನು ಮುರಿದುಕೊಂಡು ಹೊರಬಂದ ಕೈದಿಗಳು ಸಾಮೂಹಿಕವಾಗಿ ಹಿಂಸಾತ್ಮಕ ದಾಂದಲೆಯಲ್ಲಿ ತೊಡಗಿದ್ದು ಅವರ ವಾದಕ್ಕೆ ಪುಷ್ಠಿನೀಡಿದೆ.ಉಪ ಕಾರಾಗೃಹ ಆವರಣದಲ್ಲಿ ಐದು ಮೊಬೈಲ್ ಸೆಟ್‌ಗಳು, ಎರಡು ಚಾಕುಗಳು, ಒಂದು ಕೊಡಲಿ ಮತ್ತು ಗಾಂಜಾ ಮತ್ತಿತರ ವಸ್ತುಗಳು ಪತ್ತೆಯಾಗಿವೆ. ‘ಘಟನೆ ಆಕಸ್ಮಿಕವಾಗಿದ್ದರೆ ಹೀಗೆ ಇಡಿಯಾಗಿ ಕೈದಿಗಳು ನಮ್ಮ ಮೇಲೆ ಎರಗುತ್ತಿರಲಿಲ್ಲ. ಸೈಂಟಿಸ್ಟ್ ಮಂಜ್ಯಾ, ಅರ್ಜುನ ಬಂಡಿವಡ್ಡರ ಮತ್ತು ಬಂಟಿ ನೇತೃತ್ವದ ಕೈದಿಗಳು ಪೂರ್ವಯೋಜಿತವಾಗಿಯೇ ಈ ಕೃತ್ಯವನ್ನು ಎಸಗಿದ್ದಾರೆ’ ಎಂದು ಪೊಲೀಸರು ಹೇಳಿದರು.ಕೈದಿಗಳ ಆಕ್ರೋಶಕ್ಕೆ ಬ್ಯಾರಕ್ ಬಾಗಿಲುಗಳು ಚೌಕಟ್ಟು ಸಮೇತ ಉರುಳಿಬಿದ್ದಿವೆ. ಔಷಧಿ ದಾಸ್ತಾನು ಮಣ್ಣುಪಾಲಾಗಿದೆ. ಮಧ್ಯಾಹ್ನದ ಊಟಕ್ಕೆ ಮಾಡಿಟ್ಟ ಅನ್ನ-ಸಾರನ್ನೂ ಬಿಡದ ಅವರು, ಅದನ್ನೆಲ್ಲ ನೆಲದ ಮೇಲೆ ಚೆಲ್ಲಾಡಿದ್ದಾರೆ. ವಾಕಿಂಗ್ ಪಾತ್‌ಗೆ ಹಾಕಿದ ಕಡಪಾ ಕಲ್ಲುಗಳನ್ನು ಕಿತ್ತು ಬೀಸಾಡಿದ್ದಾರೆ. ಅವುಗಳನ್ನು ಕೀಳಲು ಅಲ್ಲಿಯೇ ಇದ್ದ ಹಾರಿಯನ್ನು ಬಳಸಿದ್ದಾರೆ.ತುಂಬಿದ ಆರು ಸಿಲಿಂಡರ್‌ಗಳನ್ನು ದ್ವಾರದಲ್ಲೇ ತೆರೆದಿಟ್ಟು ಅವುಗಳನ್ನು ಸ್ಫೋಟಿಸಲೂ ಹವಣಿಸಿದ್ದಾರೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಪೊಲೀಸರು ಸಿಲಿಂಡರ್‌ಗಳು ಖಾಲಿ ಆಗುವವರೆಗೆ ಮುನ್ನುಗ್ಗಲಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ದಳದ ಎರಡು ವಾಹನಗಳನ್ನೂ ಕರೆಯಿಸಲಾಯಿತು. ಒಂದೆಡೆ ಅಶ್ರುವಾಯು, ಇನ್ನೊಂದೆಡೆ ಜಲಫಿರಂಗಿ ಪ್ರಯೋಗಿಸಿ, ಕೈದಿಗಳನ್ನು ಒಳ ದ್ವಾರದ ಬಳಿಯಿಂದ ಚದುರಿಸಲಾಯಿತು.ಕೈದಿಗಳು ದ್ವಾರದಿಂದ ಚದುರುತ್ತಿದ್ದಂತೆಯೇ ಒಳನುಗ್ಗಿದ ಪೊಲೀಸರು ಚೆನ್ನಾಗಿ ಥಳಿಸಿದರು. ಮರ ಏರಿ ಕುಳಿತಿದ್ದ ಕೈದಿಗಳನ್ನು ಕೆಳಕ್ಕೆ ಇಳಿಸಲಾಯಿತು. ಬ್ಯಾರಕ್ ಏರಿದ್ದ ಮೂವರನ್ನು ಕರೆತರಲು ಪೊಲೀಸರು ಏಣಿ ತಂದು ಮೇಲೆ ಹೋದರು. ಪೊಲೀಸರ ಬೆತ್ತದ ರುಚಿಗೆ ಹೆದರಿದ ಓರ್ವ ಕೈದಿ ಮೇಲಿಂದ ಕೆಳಕ್ಕೆ ಹಾರಿದ. ಮತ್ತೊಬ್ಬನೂ ತಡವರಿಸುತ್ತಾ ಜಾರಿಬಿದ್ದ.ಆವರಣದ ತುಂಬ ಖಾರದಪುಡಿ ಮಣ್ಣಿನಂತೆ ಹರಡಿ ಬಿದ್ದಿತ್ತು. ಕಲ್ಲುಗಳ ರಾಶಿಯೇ ಎಲ್ಲೆಡೆ ಹರಡಿಕೊಂಡಿತ್ತು. ನಿತ್ಯ ತಾವೇ ಬಳಸುತ್ತಿದ್ದ ತಂಬಿಗೆ, ಲೋಟಗಳ ಮೇಲೂ ಅವರು ಆಕ್ರೋಶ ಹರಿದಿತ್ತು. ಚಪ್ಪಲಿಗಳು, ಟಾವೆಲ್-ಲುಂಗಿಗಳು ಅಸ್ತವ್ಯಸ್ತವಾಗಿ ಬಿದ್ದಿದ್ದವು.ನಿಷೇಧಿತ ವಸ್ತುಗಳು ಕೈದಿಗಳ ಕೈಗೆ ಸಿಕ್ಕಿದ್ದು ನೋಡಿದಾಗ ಜೈಲು ಸಿಬ್ಬಂದಿಯೂ ಅವರ ಜೊತೆ ಶಾಮೀಲಾದ ಸಂಶಯ ಸ್ಥಳದಲ್ಲಿ ನೆರೆದಿದ್ದ ಹಿರಿಯ ಅಧಿಕಾರಿಗಳನ್ನು ಕಾಡಿತು.‘ತನಿಖೆಯಿಂದ ಲೋಪ-ದೋಷ ಕಂಡು ಬಂದರೆ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು’ ಎಂದು ಎಡಿಜಿಪಿ (ಬಂಧಿಖಾನೆ) ಕುಚ್ಚಣ್ಣ ಶ್ರೀನಿವಾಸ ಹೇಳುತ್ತಾರೆ. ಸೆಟ್ಲಮೆಂಟ್ ಗುಂಪಿಗೂ ಇಂದಿರಾನಗರ ಗುಂಪಿಗೂ ಮೊದಲಿನಿಂದಲೂ ಬದ್ಧದ್ವೇಷ. ಈ ಹಿಂದೆ ಹಲವು ಮಾರಾಮಾರಿಗಳು ಎರಡೂ ಗುಂಪಿನ ಮಧ್ಯೆ ನಡೆದಿವೆ. ಇಂದಿರಾನಗರದಲ್ಲಿ ತೆಲುಗು ಮೂಲದವರೇ ಹೆಚ್ಚು. ಈಚೆಗೆ ಹತ್ಯೆಗೀಡಾದ ಪಾಲಾಕ್ಷ ವಲ್ಲೂರ (ಪಲ್ಲಿ) ಇದೇ ಪ್ರದೇಶಕ್ಕೆ ಸೇರಿದವನಾಗಿದ್ದ. ಪಲ್ಲಿ ಹತ್ಯೆಯ ಆರೋಪ ಹೊತ್ತ ದುರ್ಗಪ್ಪ ಹಾಗೂ ರಜನಿ ಬಿಜವಾಡ ತಮ್ಮ ತಂಡದ ಜೊತೆ ಪೊಲೀಸರಿಗೆ ಶರಣಾಗಿದ್ದರು.ಸೆಟ್ಲಮೆಂಟ್ ಪ್ರದೇಶದ ಕೆಲವು ಆರೋಪಿಗಳು ಉಪ ಕಾರಾಗೃಹದಲ್ಲಿ ಇರುವುದರಿಂದ ಗುಂಪುಗಾರಿಕೆಗೆ ಅವಕಾಶ ಒದಗಿಸಿದಂತಾಗಿದ್ದು, ದುರ್ಗಪ್ಪ ಮತ್ತು ರಜನಿ ಅವರನ್ನು ಸ್ಥಳಾಂತರಿಸಬೇಕು ಎಂಬುದು ಪೊಲೀಸರ ವಾದವಾಗಿತ್ತು. ಎರಡು ದಿನಗಳ ಹಿಂದೆ ಕೋರ್ಟ್, ಅವರನ್ನು ಗುಲ್ಬರ್ಗಕ್ಕೆ ಸ್ಥಳಾಂತರಿಸಲು ಆದೇಶ ಹೊರಡಿಸಿತು. ಬಿಜವಾಡ ಕುಟುಂಬಕ್ಕೆ ಆಗಲೇ ಆತಂಕ ಎದುರಾಗಿತ್ತು.ಗುಲ್ಬರ್ಗ ಕಾರಾಗೃಹದಲ್ಲಿ ತೆಲುಗು ಮೂಲದ ಕೈದಿಗಳಿದ್ದು, ಹತ್ಯೆ ನಡೆಸುವ ಸಾಧ್ಯತೆ ಇದೆ. ಹೀಗಾಗಿ ದುರ್ಗಪ್ಪ ಮತ್ತು ರಜನಿ ಅವರನ್ನು ಗುಲ್ಬರ್ಗಕ್ಕೆ ಸ್ಥಳಾಂತರಿಸಬಾರದು ಎಂಬುದು ಬಿಜವಾಡ ಕುಟುಂಬದ ಬೇಡಿಕೆಯಾಗಿತ್ತು. ದುರ್ಗಪ್ಪನನ್ನು ಬೆಳಿಗ್ಗೆ ಕರೆದೊಯ್ಯುವಾಗ ಪಾಲಿಕೆ ಸದಸ್ಯೆ ಲಕ್ಷ್ಮಿಬಾಯಿ ಬಿಜವಾಡ ತಮ್ಮ ಸಂಬಂಧಿಗಳ ಜೊತೆ ವಾಹನದ ಮುಂದೆ ಅಡ್ಡಲಾಗಿ ಮಲಗಿದರು. ‘ತೆಲುಗು ಜನರ ಜೊತೆ ಒಳ್ಳೆಯ ಸಂಬಂಧ ಹೊಂದಿದ ಶಾಸಕ ಮತ್ತು ಪಾಲಿಕೆ ಸದಸ್ಯರು ಪಿತೂರಿ ಮಾಡಿ ಈ ಸ್ಥಳಾಂತರಕ್ಕೆ ಕಾರಣವಾಗಿದ್ದಾರೆ. ದುರ್ಗಪ್ಪ ಮತ್ತು ರಜನಿಯನ್ನು ಹತ್ಯೆ ಮಾಡಿಸುವ ಸಂಚು ನಡೆದಿದೆ’ ಎಂದು ಅವರು ದೂರಿದರು.ವಿವಿಧ ಗುಂಪುಗಳು ತಳಕುಹಾಕಿಕೊಂಡ ಒಳಸುಳಿಗಳ ಮೇಲೆ ಈ ಘಟನೆ ಬೆಳಕು ಚೆಲ್ಲಿತ್ತು. ಪಲ್ಲಿ ಹತ್ಯೆ ನಡೆದು ತಿಂಗಳುಗಳೇ ಗತಿಸಿದರೂ ಅದರ ಪ್ರತಿಧ್ವನಿ ಮತ್ತೆ ಮತ್ತೆ ಕೇಳುತ್ತಿದೆ. ಹಿಂದೆಂದೂ ಕಂಡಿರದಂತಹ ಘಟನೆಗಳಿಗೆ ಹುಬ್ಬಳ್ಳಿ ಸಾಕ್ಷಿಯಾಗುತ್ತಿದೆ. ಪ್ರಬಲವಾದ ‘ರಕ್ಷಣೆ’ ಬಯಸಿದ ಗುಂಪು ವ್ಯವಸ್ಥಿತ ಮತ್ತು ಸಂಘಟಿತವಾದ ದಾಂದಲೆ ನಡೆಸಿದೆ.‘ನಗರದಲ್ಲಿ ಹೊಡೆದಾಟದ ಪ್ರಕರಣಗಳು ಕಡಿಮೆಯಾಗಿವೆ’ ಎಂದು ನಗರದ ಜನ ಸಮಾಧಾನದ ನಿಟ್ಟುಸಿರು ಬಿಡುವಾಗಲೇ ಈ ಘಟನೆ ನಡೆದಿದ್ದು, ಅವರನ್ನು ಬೆಚ್ಚಿಬೀಳಿಸಿದೆ.ಇಂದಿರಾನಗರ, ಆರ್‌ಜಿಎಸ್, ಹೊಸೂರು, ಸೆಟ್ಲಮೆಂಟ್ ಗುಂಪುಗಳು ಕಾರ್ಯನಿರತವಾಗಿವೆ ಎಂಬುದಕ್ಕೆ ಮತ್ತೆ ಮತ್ತೆ ಸಾಕ್ಷ್ಯಗಳು ದೊರೆಯುತ್ತಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.