ಮಂಗಳವಾರ, ಜೂನ್ 15, 2021
27 °C

ಜೋಯಿಡಾ ಹೆಣ್ಮಕ್ಕಳೇ ಸ್ಟ್ರಾಂಗ್!

ಚಿತ್ರ Updated:

ಅಕ್ಷರ ಗಾತ್ರ : | |

ಜೋಯಿಡಾ ಹೆಣ್ಮಕ್ಕಳೇ ಸ್ಟ್ರಾಂಗ್!

ಅದು ತಾಲ್ಲೂಕು ಕೇಂದ್ರ. ಹಾಗಂತ ಪಟ್ಟಣ ಅಲ್ಲ. ಏಕೆಂದರೆ ಅಲ್ಲಿ ಪಟ್ಟಣ ಪಂಚಾಯಿತಿಯೂ ಇಲ್ಲ. ಹಾಗಾಗಿ ಅದೊಂದು ಸಣ್ಣ ಪೇಟೆ ಎನ್ನುವುದೇ ಸೂಕ್ತ. ಆ ಪೇಟೆಯ ಬಹುತೇಕ ಅಂಗಡಿಗಳಿಗೆ ನಾಮಫಲಕಗಳೇ ಇಲ್ಲ! ಅದರ ಅಗತ್ಯವೂ ಇಲ್ಲ.ಅದು ಯಾರ ಅಂಗಡಿ? ಅಲ್ಲೇನು ಸಿಗುತ್ತದೆ ಎಂಬುದು ಆ ಪೇಟೆಯವರಿಗೆಲ್ಲ ಗೊತ್ತು! ಅಂಗಡಿಗಳನ್ನು ಅವುಗಳ ಮಾಲೀಕರ ಹೆಸರಿನಿಂದಲೇ ಕರೆಯುತ್ತಾರೆ. ಉದಾಹರಣೆಗೆ ಗಂಗಕ್ಕನ ಪಾನ್ ಶಾಪ್, ಗೌಸುಬಿ ಕಿರಾಣಿ ಅಂಗಡಿ, ಸುಷ್ಮಾರಾಮ ಮಿರಾಶಿ ಫ್ಯಾನ್ಸಿ ಸ್ಟೋರ್, ಮಾಯಾ ಲೇಡಿಸ್ ಟೈಲರ್, ವೀಣಾ ಸಾವರ್ಕರ್ ಬಜ್ಜಿ ಅಂಗಡಿ, ಮಕ್ತುಂಬಿ ಬಳೆ ಅಂಗಡಿ ಹೀಗೆ...ಇದೇನು ಅಂಗಡಿಗಳ ಜೊತೆಗೆ ಬರೀ ಹೆಣ್ಮಕ್ಕಳ ಹೆಸರೇ ಸೇರಿಕೊಂಡಿದೆಯಲ್ಲ ಅಂತ ಅಚ್ಚರಿಯೇ? ಹೌದು. ಆ ಪೇಟೆಯಲ್ಲಿ ಎಲ್ಲ ಸೇರಿ 35ರಿಂದ 40 ಅಂಗಡಿ, ಗೂಡಂಗಡಿಗಳು ಇರಬಹುದು.ಅಲ್ಲಿನ ಶೇ 80ರಷ್ಟು ಅಂಗಡಿಗಳನ್ನು ನಡೆಸುವವರು, ವ್ಯವಹಾರ ಮಾಡುವವರು ಬರೀ ಹೆಣ್ಮಕ್ಕಳೇ! ಆ ಪ್ರಮೀಳಾ ವ್ಯಾಪಾರಿಗಳ ಪಟ್ಟಣವೇ, ಭೌಗೋಳಿಕ ವಿಸ್ತೀರ್ಣದಲ್ಲಿ ರಾಜ್ಯದ ಎರಡನೇ ಅತಿ ದೊಡ್ಡ ತಾಲ್ಲೂಕು ಎನಿಸಿದ ಜೋಯಿಡಾದ ಕೇಂದ್ರ ಸ್ಥಾನ.ಉತ್ತರ ಕನ್ನಡ ಜಿಲ್ಲೆಯ ಸಸ್ಯ ಶ್ಯಾಮಲೆಯ ಮಡಿಲಲ್ಲಿರುವ ಜೋಯಿಡಾ ತಾಲ್ಲೂಕು ತನ್ನ ಉಡಿಯಲ್ಲಿ ಹಲವಾರು ಅಚ್ಚರಿಗಳನ್ನು ಬಚ್ಚಿಟ್ಟುಕೊಂಡಿದೆ. ಅಂಥ ಅಚ್ಚರಿಗಳಲ್ಲಿ ಒಂದು ಹಾಗೂ ಮಾದರಿ ಅನ್ನಿಸುವಂಥದ್ದು ಆ ಪೇಟೆಯ ಹೆಣ್ಮಕ್ಕಳ ಸ್ವಾವಲಂಬಿ ಬದುಕು. ದುಡಿದು ತಿನ್ನಬೇಕೆಂಬ ಛಲ.ಮೊದಲ ಚಿಕನ್‌ಸೆಂಟರ್

ಏಳನೇ ತರಗತಿವರೆಗೆ ಓದಿರುವ 50ರ ಹರೆಯದ ಫೈರೋಜಾ 17 ವರ್ಷದಿಂದ ಚಿಕನ್ ಶಾಪ್ ನಡೆಸುತ್ತಾರೆ. ಇದು ಜೋಯಿಡಾದ ಮೊದಲ ಚಿಕನ್ ಸೆಂಟರ್. `ಕೆಲ್ಸದವರು ಸಿಗೋದಿಲ್ಲ.

 

ಹಾಗಾಗಿ ಗಿರಾಕಿಗಳಿಗೆ ನಾನೇ ಚಿಕನ್ ರೆಡಿ ಮಾಡಿ ಕೊಡ್ತೇನೆ. ದಾಂಡೇಲಿಯಿಂದ ಕೋಳಿ ತರಿಸ್ತೇನೆ. ಗುಣಮಟ್ಟದ ಚಿಕನ್ ನಮ್ದು. ತೂಕದಲ್ಲಿ ಮೋಸ ಇಲ್ಲ. ಹಾಗಾಗಿ ಜನರಿಂದ ದೂರುಗಳಿಲ್ಲ. ಬುಧವಾರ ಸಂತೆ ದಿನ 50ರಿಂದ 60 ಕೋಳಿಗಳು ಹೋಗುತ್ತವೆ. ಏಪ್ರಿಲ್- ಮೇನಲ್ಲಿ ಮಕ್ಕಳಿಗೆ ಶಾಲೆ ರಜೆ ಇದ್ದಾಗ, ಭಾನುವಾರ, ರಂಜಾನ್, ಬಕ್ರೀದ್, ದುರ್ಗಾದೇವಿ ಜಾತ್ರೆ, ಹೊಸ ವರ್ಷ, ಕ್ರಿಸ್‌ಮಸ್, ಮದುವೆ ಸೀಸನ್‌ಗಳಲ್ಲಿ ವ್ಯಾಪಾರ ಹೆಚ್ಚು.ಮಳೆಗಾಲದಲ್ಲಿ ಹೊಳೆ ಮೀನು ಬಂದರೆ ವ್ಯಾಪಾರ ಸ್ವಲ್ಪ ಕಮ್ಮಿ. ಮನೆಯಲ್ಲಿ ಒಬ್ಬೊಬ್ಬರೇ ದುಡಿದರೆ ಎಲ್ಲಿಗೂ ಸಾಲೋದಿಲ್ಲ. ಅದಕ್ಕೆ ನಾನೂ ದುಡಿಯುತ್ತೇನೆ~ ಎನ್ನುತ್ತಾರೆ ಫೈರೋಜಾ.ಪಾನ್ ಶಾಪ್ ಗಂಗಕ್ಕ

48ರ ಹರೆಯದ ಗಂಗಾ ಪಾಂಡುರಂಗ ನಾಯಕ ಅವರು ಪಾನ್ ಶಾಪ್ ನಡೆಸುತ್ತಾರೆ. ಹೆಂಡತಿ,ಮಕ್ಕಳನ್ನು ಬಿಟ್ಟು ಗಂಡ ನಾಪತ್ತೆಯಾದಾಗ ಕುಟುಂಬದ ಜವಾಬ್ದಾರಿ ಗಂಗಕ್ಕನ ಹೆಗಲ ಮೇಲೆ ಬಿತ್ತು. ದುಡಿಮೆ ಅನಿವಾರ್ಯ ವಾಗಿತ್ತು.ಪಾನ್ ಅಂಗಡಿಯಲ್ಲಿ ಬೀಡಾ ಕಟ್ಟುವುದನ್ನು ಗಮನಿಸಿ, ಅವರಿವರಿಂದ ಕೇಳಿ ತಿಳಿದು ಕೊನೆಗೆ ತಾವೇ ಪಾನ್ ಅಂಗಡಿ ತೆರೆದರು. ಬೆಳಿಗ್ಗೆ 8ರಿಂದ ರಾತ್ರಿ 10ರವರೆಗೆ ಅಂಗಡಿ ನಡೆಸುವ ಗಂಗಕ್ಕ, ಮಸಾಲ ಪಾನ್, ಸ್ವೀಟ್, ಜರ್ದಾ, ತೀನ್ ಸೌ, ಒನ್ ಟ್ವೆಂಟಿ ಹೀಗೆ ಗ್ರಾಹಕರು ಕೇಳಿದಾಗ ಚಕಾಚಕ್ ಅಂತ ರೆಡಿ ಮಾಡಿಕೊಡುತ್ತಾರೆ.`ದೇವ್ರ ದಯೆ ವ್ಯಾಪಾರ ಚಲೋ ನಡೀತಿದೆ~ ಎನ್ನುವ ಗಂಗಕ್ಕ `ಸ್ವಂತ ದುಡಿದು ತನ್ನ ಕಾಲ ಮೇಲೆ ನಿಲ್ಲಬೇಕು~ ಎಂಬ ಸ್ವಾಭಿಮಾನ ದಿಂದ ಪಾನ್‌ಶಾಪ್ ಇಟ್ಟರಂತೆ.

ಅತ್ತೆ ಸೊಸೆ ಕಾರುಬಾರು

ಹೊಟೇಲ್ ಅಂಬಾ ಭವನ್ ಇಲ್ಲಿನ `ಬನ್ಸ್~ (ಉಪಾಹಾರ ಖಾದ್ಯ) ಅಂದರೆ ಜೋಯಿಡಾದಲ್ಲಿ ಸಖತ್ ಫೇಮಸ್ಸು. ಅದರ ಹಿಂದೆ ಅತ್ತೆ ಸೊಸೆಯರಿಬ್ಬರ ಕೈ ಚಳಕ ಇದೆ. ಆ ಹೊಟೇಲ್‌ನಲ್ಲಿ ಅತ್ತೆ ಸೊಸೆಯರದ್ದೇ ಕಾರುಬಾರು. ಅತ್ತೆ ಬನ್ಸ್ ಕರಿಯುತ್ತಿದ್ದರೆ ಇತ್ತ ಸೊಸೆ ಹೊಟೇಲ್‌ಗೆ ಬಂದ ಗ್ರಾಹಕರನ್ನು ವಿಚಾರಿಸುತ್ತಾರೆ.ಸೊಸೆ ದೋಸೆ ಹೊಯ್ಯುತ್ತಿದ್ದರೆ ಅತ್ತೆ ಕ್ಯಾಷ್‌ನಲ್ಲಿ ಕೂತು ಗಿರಾಕಿಗಳಿಂದ ರೊಕ್ಕ ಇಸ್ಕೋತ್ತಾರೆ.36ರ ಹರೆಯದ ಸೊಸೆ ರಾಜಶ್ರೀ ಹಾಗೂ 75ರ ಹರೆಯದ ಅತ್ತೆ ಸರಸ್ವತಿ ಅನಂತ ಪಾಟ್ನೇಕರ್ ಅವರದ್ದು ಎಲ್ಲ ಅತ್ತೆ- ಸೊಸೆಯರಿಗೂ ಮಾದರಿಯಾಗುವಂಥ ಅನ್ಯೋನ್ಯ ಅನುಬಂಧ. ರಾಜಶ್ರೀ ಅವರ ಪತಿ ವ್ಯವಹಾರ ನಿಮಿತ್ತ ಬೇರೆ ಊರಿಗೆ ಹೋದಾಗ ದಿನಗಟ್ಟಲೆ ಹೊಟೇಲ್ ವಹಿವಾಟು ನಡೆಸುವವರು ಅವರಿಬ್ಬರೇ!ಎಸ್ಸೆಸ್ಸೆಲ್ಸಿ ಓದಿರುವ ಸುಷ್ಮಾ ರಾಮ ಮಿರಾಶಿ ಅವರು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ. ಈಗ ಸ್ಟೇಷನರಿ ಮತ್ತು ಗಿಫ್ಟ್ಸ್ ಅಂಗಡಿ ನಡೆಸುತ್ತಾರೆ. ಬೆಳಿಗ್ಗೆ 9ರಿಂದ ರಾತ್ರಿ 7ರವರೆಗೆ ವ್ಯವಹಾರ ನಡೆಸುವ ಸುಷ್ಮಾ ತನ್ನ ಅಂಗಡಿಗೆ ಬೇಕಾದ ಸಾಮಾನುಗಳನ್ನು ಸ್ವತಃ ತಾವೇ ಬೆಳಗಾವಿ, ಹುಬ್ಬಳ್ಳಿಗೆ ಹೋಗಿ ತರುತ್ತಾರೆ. ಬೆಳಗಾವಿಯಲ್ಲಿ ಒಳ್ಳೆ ಮಾಲು ಸಿಕ್ಕರೆ ಹುಬ್ಬಳ್ಳಿಯಲ್ಲಿ ನಕಲಿ ಮಾಲೇ ಹೆಚ್ಚು ಎನ್ನುತ್ತಾರೆ ಸುಷ್ಮಾ.ನಾಲ್ಕನೇ ತರಗತಿವರೆಗೆ ಓದಿರುವ 67ರ ಹರೆಯದ ಫಿಲೊಮಿನಾ ಅವರು `ಸೈಮನ್ ಫೂಟ್‌ವೇರ್~ ಮಳಿಗೆ ಮಾಲಕಿ. 22 ವರ್ಷಗಳಿಂದ ತಾನೇ ಚಪ್ಪಲಿ ಅಂಗಡಿ ನಡೆಸುತ್ತ ಬಂದಿದ್ದಾರೆ.

 

ಯಂತ್ರದೊಂದಿಗೆ ದುಡಿಮೆ

ಜೋಯಿಡಾದ ಒಂದೇ ಒಂದು ಖಾರ ಕುಟ್ಟುವ ಗಿರಣಿ ಎಂದೇ ಹೆಸರಾಗಿರುವ `ಡೋಂಗ್ರೆ ಹಿಟ್ಟಿನ ಗಿರಣಿ~ಯನ್ನು ನಡೆಸುವವರೂ ಹೆಣ್ಮಗಳೇ. 33ರ ಹರೆಯದ ಸುಜಾತಾ ನಿತಿನ್ ಡೋಂಗ್ರೆ ಮುಂಜಾನೆಯೇ ಎದ್ದು ಅಡುಗೆ ತಯಾರಿಸಿ ಮಕ್ಕಳನ್ನು ಶಾಲೆಗೆ ಕಳುಹಿಸಿ ಸ್ವತಃ ತಾನೇ ಗಿರಣಿ ಯಂತ್ರದೊಂದಿಗೆ ದುಡಿಯುತ್ತಾರೆ.`ಮದುವೆ ಸೀಸನ್‌ನಲ್ಲಂತೂ ಊಟಕ್ಕೂ ಬಿಡುವು ಸಿಗೋದಿಲ್ಲ. ಇಲ್ಲಿನ ಜನ ತುಂಬ ನಂಬಿಕಸ್ತರು. ಊರಿನ ಜನರೆಲ್ಲ ನಮ್ಮಲ್ಲಿಗೇ ಬರ‌್ತಾರೆ. ಸಾಲನೂ ಕೊಡ್ತೇನೆ. ನಂಬಿಕೆಯ ವ್ಯವಹಾರ. ಮೋಸ ಇಲ್ಲ~ ಎನ್ನುತ್ತಾರೆ ಸುಜಾತಾ.70ರ ಹರೆಯದ ಮಕ್ತುಂಬಿ 30 ವರ್ಷದಿಂದ ಬಳೆ ಅಂಗಡಿ ನಡೆಸುತ್ತಿದ್ದಾರೆ. ಜೋಯಿಡಾ ಕಂಡ ಮೊದಲ ಬಳೆ ಅಂಗಡಿ ಅವರದು. ಆದರೆ ಇನ್ನೂ ಅವರಿಗೆ ಸ್ವಂತ ಅಂಗಡಿ ಕಟ್ಟಡ ಇಲ್ಲ.ಬಾಡಿಗೆಯ ಅಂಗಡಿಯಲ್ಲಿ ಬಳೆ ವ್ಯಾಪಾರ ನಡೆಸುತ್ತಾರೆ. ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೂ ವರ್ಷದ 365 ದಿನವೂ ಅವರ ಅಂಗಡಿ ತೆರೆದಿರುವುದಂತೆ! `ಈಗೀಗ ಬಳೆ ತೊಡುವವರು ಬಹಳ ಕಮ್ಮಿ. ಗಾಜಿನ ಬಳೆಗಳಿಗೆ ಬೇಡಿಕೆ ಇಳಿದಿದೆ. ಈಗಿನವರು ಫ್ಯಾಷನ್ ಬಳೆಯನ್ನೇ ಕೇಳುತ್ತಾರೆ~ ಎನ್ನುತ್ತಾರೆ ಮಕ್ತುಂಬಿ.ಆರ್.ಎನ್.ಕೆ. ರೆಡಿಮೇಡ್ ಗಾರ್ಮೆಂಟ್ ಶಾಪ್ ನಡೆಸುತ್ತಿರುವ 44ರ ಹರೆಯದ 9ನೇ ತರಗತಿ ವರೆಗೆ ಓದಿರುವ ಅನುರಾಧಾ ವಿ. ಕಾಮ್ರೆಕರ್ 15 ವರ್ಷದಿಂದ ಅಂಗಡಿ ನಿರ್ವಹಿಸುತ್ತಿದ್ದಾರೆ. `ಪತಿ ಬಟ್ಟೆ ತಂದು ಕೊಡುತ್ತಾರೆ.ಉಳಿದೆಲ್ಲ ನಿರ್ವಹಣೆ ನನ್ನದೇ. ಹಿಂದೆ ಆರು ತಿಂಗಳಿಗೆಲ್ಲ ಫ್ಯಾಷನ್ ಬದಲಾಗುತ್ತಿತ್ತು. ಆದರೆ ಈಗ ದಿನೇದಿನೇ ಫ್ಯಾಷನ್ ಬದಲಾಗುತ್ತಿದೆ. ಗೋವಾಕ್ಕೆ ಹೋಗುವ ಇಲ್ಲಿನ ಜನ ಅಲ್ಲಿನ ಫ್ಯಾಷನ್ ನೋಡ್ಕೊಂಡು ಇಲ್ಲೂ ಅದನ್ನೇ ಕೇಳ್ತಾರೆ. ಜೊತೆಗೆ ಚೌಕಾಶಿನೂ ಇದೆ~ ಎನ್ನುತ್ತಾರೆ ಅನುರಾಧಾ.ಫಾತಿಮಾ ಕಿರಾಣಿ ಸ್ಟೋರ್ಸ್‌ನ ಅನಿತಾ ಪ್ರತಿ ಬುಧವಾರ ನಡೆಯುವ ಸಂತೆಯಲ್ಲಿ ಅಂಗಡಿ ತೆರೆದು ಕೈತುಂಬ ವ್ಯಾಪಾರ ಮಾಡುತ್ತಾರೆ.ಹಾಗೆಯೇ ದಬಗಾರ ಜನರಲ್ ಮರ್ಚಂಟ್‌ನ ನಿರ್ಮಲ ದಬಗಾರ, ಕಿರಾಣಿ ಅಂಗಡಿ ನಡೆಸುವ 65ರ ಹರೆಯ ಗೌಸುಬಿ, ರೋಶನ್ ಕಿರಾಣಿ ಅಂಗಡಿಯ ಪರ್ವಿನ್, ಬಿ.ಎ. ಓದಿರುವ ಲೇಡಿಸ್ ಟೈಲರ್ ಮಾಯಾ, ವಿದ್ಯಾ ಹೊಟೇಲಿನ ಲಕ್ಷ್ಮೀ ವಿ. ನಾಯಕ್, ಆಶ್ರಯ ಹೊಟೇಲಿನ ಪಲ್ಲವಿ ಪಂಡಿತ್ ನಾಯಕ್, ಬಜ್ಜಿ ಅಂಗಡಿಯ ವೀಣಾ ಸಾವರ್ಕರ್ ಹೀಗೆ ಸಾಗುವುದು ಜೋಯಿಡಾದ ಸ್ವಾಭಿಮಾನಿ, ಸ್ವ ಉದ್ಯೋಗಿ ಹೆಣ್ಮಕ್ಕಳ ಪಟ್ಟಿ.

`ಜೋಯಿಡಾ ಪೇಟೆಯಲ್ಲಿ ಹೆಣ್ಮಕ್ಕಳಿಗೆ ಯಾವುದೇ ಭಯ ಇಲ್ಲ.

 

ಇಲ್ಲಿ ಹೆಣ್ಮಕ್ಕಳನ್ನು ಕೆಟ್ಟ ಭಾವನೆಯಿಂದ ನೋಡುವವರಿಲ್ಲ. ಕಳ್ಳತನ ಪ್ರಕರಣಗಳೂ ಇಲ್ಲ. ಜನರ ಸಭ್ಯ ಗುಣವೇ ಹೆಣ್ಮಕ್ಕಳು ನಿರ್ಭಯದಿಂದ ಸ್ವಾವಲಂಬಿಯಾಗಲು ಕಾರಣ. ವ್ಯಾಪಾರದಲ್ಲಿ ಹೆಣ್ಣಕ್ಕಳ ದುಡ್ಡಿನ ಲೆಕ್ಕಾಚಾರ ತಪ್ಪಾದರೆ ಗಿರಾಕಿಗಳೇ ಸರಿಪಡಿಸ್ಕೋತಾರೆ ಎನ್ನುತ್ತಾರೆ~ ರೋಶನ್ ಕಿರಾಣಿ ಅಂಗಡಿಯ ಪರ್ವೀನ್ ಅವರ ಪತಿ ಸೈಯದ್ ಹುಸೇನ್.ಪ್ರೀತಿ, ಆದರದ ಭಾವನೆ, ಸಹಾಯ ಮನೋಭಾವ ಜೋಯಿಡಾ ಜನರಲ್ಲಿದೆ. ಅಸೂಯೆ ಪಡುವುದು, ಇನ್ನೊಬ್ಬರ ಕಾಲೆಳೆಯುವುದು ಅವರಿಗೆ ಗೊತ್ತಿಲ್ಲ. ಗಮನಿಸಲೇ ಬೇಕಾದದ್ದು ಅಂದರೆ.. ಅಲ್ಲಿ ಯಾವ ಹೆಣ್ಮಗಳು ಗಂಡನ ಮೇಲೆ ಪ್ರಾಬಲ್ಯ ಮೆರೆದು ವ್ಯಾಪಾರ ನಡೆಸುತ್ತಿಲ್ಲ. `ನಾನಿಲ್ಲದಿದ್ದರೂ ಅವಳೇ ಅಂಗಡಿ, ಹೊಟೇಲ್ ನಿಭಾಯಿಸುತ್ತಾಳೆ~ ಎಂಬುದು ಪತಿಯ ಹೆಮ್ಮೆಯ ನುಡಿ.ಇಲ್ಲಿನ ಸ್ವಾವಲಂಬಿ ಹೆಣ್ಮಕ್ಕಳಲ್ಲಿ ಕೆಲವರು ಇಲ್ಲೇ ಹುಟ್ಟಿ ಬೆಳೆದವರಾದರೆ, ಇನ್ನು ಕೆಲವರು ಮದುವೆಯಾಗಿ ಜೋಯಿಡಾಕ್ಕೆ ಬಂದು ಪತಿಯ ವ್ಯವಹಾರದಲ್ಲಿ ತಾವೂ ಕೈಜೋಡಿಸಿದ್ದಾರೆ. ಬಹುತೇಕ ಅಂಗಡಿ ಹಾಗೂ ಮನೆ ಒಂದೇ ಸೂರಿನಡಿ ಇರುವುದರಿಂದ ಹೆಣ್ಮಕ್ಕಳು ಮನೆಗೆಲಸದೊಂದಿಗೆ ವ್ಯಾಪಾರದಲ್ಲೂ ತೊಡಗಿಸಿಕೊಳ್ಳಲು ಅನುಕೂಲ.ಇಪ್ಪತ್ತರ ಹರೆಯದ ಯುವತಿಯಿಂದ ಹಿಡಿದು ಎಪ್ಪತ್ತರ ಹರೆಯದ ಅಜ್ಜಿಯವರೆಗೆ, ಶಾಲೆಯ ಮೆಟ್ಟಿಲು ಹತ್ತದವರಿಂದ ಹಿಡಿದು ಪದವಿ ಓದಿಕೊಂಡವರವರೆಗೆ. ಮದುವೆ ಆಗಲು ಕಾದಿರುವ ಕುಮಾರಿಯರಿಂದ ಹಿಡಿದು ಪತಿಯ ವ್ಯಾಪಾರದಲ್ಲಿ ಕೈಜೋಡಿಸಿರುವ ಶ್ರೀಮತಿಯವರೆಗೆ.ಎಳವೆಯಲ್ಲೇ ಪತಿಯನ್ನು ಕಳೆದುಕೊಂಡ ವಿಧವೆಯಿಂದ ಹಿಡಿದು ಮದುವೆಯಾಗಿ ಕೈಕೊಟ್ಟು ಓಡಿಹೋದ ಬೇಜವಾಬ್ದಾರಿ ಗಂಡನಿಂದಾಗಿ ಅನಾಥಳಾದ ಅಮಾಯಕ ಹೆಣ್ಣಿನವರೆಗೆ ಅಲ್ಲಿ ಎಲ್ಲರೂ ಜೀವನೋಪಾಯಕ್ಕಾಗಿ ಅಂಗಡಿ ನಡೆಸುವವರೇ!ಜೋಯಿಡಾ ಪೇಟೆಯೇ ವಿಶಿಷ್ಟ. `ಅಭಿವೃದ್ಧಿ~ಯಾಗುತ್ತಿರುವ ಇತರ ತಾಲ್ಲೂಕು ಕೇಂದ್ರಗಳಿಗೆ ಹೋಲಿಸಿದರೆ ಜೋಯಿಡಾ ತುಂಬ ಹಿಂದುಳಿದಿದೆ. ಪೇಟೆಯಲ್ಲಿ ಹಳ್ಳಿ ಸೊಗಡು ಹಾಸುಹೊಕ್ಕಾಗಿದೆ. ಅಲ್ಲಿನ ಜನರಿಗೆ `ಅಭಿವೃದ್ಧಿ~ಯ ವಿಕೃತಿಗಳು ತಟ್ಟಿಲ್ಲ.ದುರಾಸೆ ಇಲ್ಲ. ಮುಗ್ಧ ಮನಸ್ಸಿನ ಜನರಲ್ಲಿ ಕಲ್ಮಶಗಳಿಲ್ಲ. ಜೋಯಿಡಾ ಹೆಣ್ಮಕ್ಕಳ ಸ್ವಾವಲಂಬನೆಯ ಕೆಚ್ಚಿಗೆ ಇದೇ ಕಾರಣ ಅಲ್ಲವೆ? ಸಬಲೀಕರಣ ಅಂದರೆ ಇದೇ ತಾನೆ? ಮಹಿಳೆ ಎಂದರೆ ಕೈಯಲ್ಲಿ ಆಗದವಳು ಎನ್ನುವವರು ಜೋಯಿಡಾ ಹೆಣ್ಮಕ್ಕಳನ್ನು ನೋಡಿ ಕಲಿಯಬೇಕು.

 

ಮಾದರಿಯಾದ ನೀತಾ

 
ಇದು ನೀತಾ ನಾಗರಾಜ್ ಚಿತ್ರಗಾರ್ ಅವರ ಯಶೋಗಾಥೆ. ಇಬ್ಬರು ಪುಟಾಣಿ ಮಕ್ಕಳನ್ನು ಹೊಂದಿರುವ ಅವರು ತಮ್ಮ ಬದುಕನ್ನು ಸಾಗಿಸಲು ಏನಾದರೂ ಮಾಡಲೇಬೇಕಿತ್ತು. ಈಗ 30ರ ಹರೆಯಕ್ಕೆ ಕಾಲಿಟ್ಟಿರುವ ನೀತಾ, ಇಪ್ಪತ್ತರ ಹರೆಯಕ್ಕೆ ವಿಧವೆಯಾದವರು. ಒಂಬತ್ತು ವರ್ಷದಿಂದ `ಮಂಜುನಾಥ ರೊಟ್ಟಿ ಖಾನಾವಳಿ~ ನಡೆಸುತ್ತ ಸ್ವಾವಲಂಬಿಯಾಗಿ ಸ್ವಾಭಿಮಾನದ ಬದುಕು ನಡೆಸುತ್ತಿದ್ದಾರೆ.`ಆರಂಭದಲ್ಲಿ ಕಾಲು ಕೆ.ಜಿ.ಯಂತೆ ಸಾಮಾನುಗಳನ್ನು ತಂದು ಹೊಟೇಲ್ ಶುರು ಮಾಡಿದೆ. ಆದರೆ ಈಗ ಚೀಲಗಟ್ಟಲೆ ಸಾಮಾನುಗಳನ್ನು ತರ‌್ತೇನೆ. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸ್ವ ಸಹಾಯ ಸಂಘಗಳಿಂದ ತುಂಬ ಸಹಾಯವಾಯಿತು.ಈಗ  ಸ್ವಂತ ಮನೆಯನ್ನೂ ಕಟ್ಟಿಸಿದ್ದೇನೆ. ಬ್ಯಾಂಕು ಬ್ಯಾಲೆನ್ಸೂ ಇದೆ. ಹೊಟೇಲ್ ಇನ್ನೂ ಛಲೋ ಮಾಡಬೇಕು. ಊರಿನ ಜನರ ಸಹಾಯವೂ ಇದೆ. ಮಕ್ಕಳನ್ನು ಚೆನ್ನಾಗಿ ಓದಿಸಬೇಕು~ ಎನ್ನುತ್ತಾರೆ ನೀತಾ. ಅವರ ಸ್ವಾವಲಂಬಿ ಬದುಕು ಎಲ್ಲರಿಗೂ ಮಾದರಿ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.