ಶುಕ್ರವಾರ, ಮೇ 14, 2021
32 °C
ಸತ್ಯಾಸತ್ಯತೆಯ ಸಂಶೋಧನೆಯಾಗಲಿ- ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ

ಟಿಪ್ಪು ಸಾಹಸ ಮರೆಮಾಚುವ ಕೆಲಸ ಸಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರ. ಸತ್ಯಾಸತ್ಯತೆಯ ಸರಿಯಾದ ಸಂಶೋಧನೆಯಾಗದೇ ಟಿಪ್ಪು ಸುಲ್ತಾನ್ ಸಾಹಸವನ್ನು ಮರೆಮಾಚುವ ಕೆಲಸ ಮಾಡಬಾರದು' ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಹೇಳಿದರು.ಅಖಿಲ ಕರ್ನಾಟಕ ಮಹಮದೀಯರ ಕನ್ನಡ ವೇದಿಕೆಯು ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ನ ಮಾಜಿ ಸದಸ್ಯ ಏಜಾಸುದ್ದೀನ್ ಅವರಿಗೆ `ಮೈಸೂರು ಹುಲಿ ಟಿಪ್ಪು ಸುಲ್ತಾನ್ ಪ್ರಶಸ್ತಿ' ಪ್ರದಾನ ಮಾಡಿ ಅವರು ಮಾತನಾಡಿದರು.`ಟಿಪ್ಪು ಸುಲ್ತಾನ್ ಬಗ್ಗೆ ಪರ ವಿರೋಧ ಅಭಿಪ್ರಾಯಗಳಿವೆ. ಎಲ್ಲ ರಾಜರಂತೆ ಟಿಪ್ಪು ಸುಲ್ತಾನ್ ಕೂಡ ಯುದ್ಧಗಳಲ್ಲಿ ಪಾಲ್ಗೊಂಡಿದ್ದ. ಇದನ್ನೇ ಕೌರ್ಯ ಎಂದು ಬಿಂಬಿಸುವುದು ಸರಿಯಲ್ಲ. ಆತ ಮಲಬಾರ್ ಪ್ರಾಂತ್ಯದಲ್ಲಿ ಮತಾಂತರ ಮಾಡಿಸಿದ್ದ ಬಗ್ಗೆ ಕೆಲವು ದಾಖಲೆಗಳು ಸಿಗುತ್ತವೆ. ಆದರೆ, ಮೈಸೂರು ಪ್ರಾಂತ್ಯದಲ್ಲಿ ಮತಾಂತರ ಮಾಡಿದ್ದ ಬಗ್ಗೆ ದಾಖಲೆಗಳಿಲ್ಲ. ಈ ಬಗ್ಗೆ ಸಮಗ್ರ ಸಂಶೋಧನೆಯಾಗದೆ ಟಿಪ್ಪು ಸುಲ್ತಾನ್ ಕ್ರೂರಿ ಹಾಗೂ ಮತಾಂಧ ಎಂಬ ಅಭಿಪ್ರಾಯಕ್ಕೆ ಬರುವುದು ಸರಿಯಲ್ಲ' ಎಂದು ಅವರು ಹೇಳಿದರು.`ಟಿಪ್ಪು ಸುಲ್ತಾನ್ ಹೆಸರಿನಲ್ಲಿ ಧಾರ್ಮಿಕ ದ್ವೇಷ ಬಿತ್ತುವುದು ಸರಿಯಲ್ಲ. ಜನ ಸಾಮಾನ್ಯರಲ್ಲಿ ಧಾರ್ಮಿಕ ದ್ವೇಷ ಹುಟ್ಟು ಹಾಕಬಾರದು. ಸಮಾಜದಲ್ಲಿ ಎಲ್ಲ ಧರ್ಮದ ಜನರೂ ಪರಸ್ಪರ ಪ್ರೀತಿ, ವಿಶ್ವಾಸಗಳಿಂದ ಬದುಕುವಂತಾಗಬೇಕು. ಇದೇ ನಮ್ಮ ದೇಶದ ಸಂವಿಧಾನದ ಮೂಲ ಆಶಯ' ಎಂದು ಅವರು ನುಡಿದರು.`ಸರ್ವಧರ್ಮ ಸಮ್ವನಯ ಹಾಗೂ ಬಹುತ್ವಕ್ಕೆ ಹೆಸರಾದವರು ಏಜಾಸುದ್ದೀನ್. ಅನ್ಯ ಧರ್ಮಗಳನ್ನು ಗೌರವಿಸುವ ಹಾಗೂ ಅನ್ಯ ಧರ್ಮೀಯರನ್ನು ಪ್ರೀತಿಯಿಂದ ಕಾಣುವ ಗುಣವನ್ನು ನಾವು ಅವರಿಂದ ಕಲಿಯಬೇಕು' ಎಂದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಏಜಾಸುದ್ದೀನ್, `ಎಲ್ಲ ಧರ್ಮೀಯರೂ ಸೋದರರಂತೆ ಬಾಳಬೇಕು. ನಾಡು ಸರ್ವಜನಾಂಗದ ಶಾಂತಿಯ ತೋಟವಾಗಬೇಕು' ಎಂದು ಆಶಿಸಿದರು.ನಿವೃತ್ತ ಐಎಎಸ್ ಅಧಿಕಾರಿ ಜಮೀರ್ ಪಾಷಾ, ವೇದಿಕೆಯ ಅಧ್ಯಕ್ಷ ಸಮೀಉಲ್ಲಾಖಾನ್ ಮತ್ತಿತರರು ಉಪಸ್ಥಿತರಿದ್ದರು.ಪ್ರಶಸ್ತಿಯು 10 ಸಾವಿರ ನಗದು ಮತ್ತು ಪ್ರಶಸ್ತಿ ಪತ್ರಗಳನ್ನು ಒಳಗೊಂಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.