ಮಂಗಳವಾರ, ಜೂಲೈ 7, 2020
22 °C

ಟೂರ್ನಿಯಿಂದ ಬಾಂಗ್ಲಾ ಔಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೂರ್ನಿಯಿಂದ ಬಾಂಗ್ಲಾ ಔಟ್

ಢಾಕಾ (ಪಿಟಿಐ): ಆತಿಥೇಯ ಬಾಂಗ್ಲಾದೇಶ ತಂಡದ ಅಭಿಮಾನಿಗಳು ಮತ್ತೊಂದು ಈ ರೀತಿಯ ಹೀನಾಯ ಸೋಲು ಎದುರಾಗಬಹುದು ಎಂದು ಊಹಿಸಿರಲಿಲ್ಲ. ಆದರೆ ಮಿರ್‌ಪುರದ ಶೇರ್ ಎ ಬಾಂಗ್ಲಾ ನ್ಯಾಷನಲ್ ಕ್ರೀಡಾಂಗಣದಲ್ಲಿ ಶಕೀಬ್ ಉಲ್ ಹಸನ್ ಪಡೆಗೆ ಮತ್ತೊಂದು ದೊಡ್ಡ ಆಘಾತ ಎದುರಾಯಿತು.ಶನಿವಾರ ದಕ್ಷಿಣ ಆಫ್ರಿಕಾ ವಿರುದ್ಧ 206 ರನ್‌ಗಳ ಭಾರಿ ಅಂತರದ ಸೋಲುಕಂಡ ಬಾಂಗ್ಲಾದೇಶ ವಿಶ್ವಕಪ್ ಕ್ರಿಕೆಟ್ ಟೂರ್ನಿಯಿಂದ ನಿರ್ಗಮಿಸಿತು.ಇದರೊಂದಿಗೆ ‘ಬಿ’ ಗುಂಪಿನಿಂದ ಭಾರತ, ಇಂಗ್ಲೆಂಡ್ ಹಾಗೂ ವೆಸ್ಟ್‌ಇಂಡೀಸ್ ತಂಡಗಳ ಕ್ವಾರ್ಟರ್ ಫೈನಲ್ ಹಾದಿ ಸುಗಮವಾಯಿತು. ದಕ್ಷಿಣ ಆಫ್ರಿಕಾ ಈ ಪಂದ್ಯಕ್ಕೆ ಮೊದಲೇ ನಾಕ್‌ಔಟ್ ಹಂತ ತಲುಪಿತ್ತು. ಆರು ಪಂದ್ಯಗಳಿಂದ 10 ಪಾಯಿಂಟ್ ಸಂಗ್ರಹಿಸಿದ ಗ್ರೇಮ್ ಸ್ಮಿತ್ ಪಡೆ ತನ್ನ ಗುಂಪಿನಲ್ಲಿ ಅಗ್ರಸ್ಥಾನ ಪಡೆಯಿತು.ಬಾಂಗ್ಲಾ ತಂಡದವರು ಆಡಿದ ಒಟ್ಟು ಆರು ಪಂದ್ಯಗಳಿಂದ ಆರು ಪಾಯಿಂಟ್ ಗಳಿಸಿದ್ದಾರೆ. ವೆಸ್ಟ್‌ಇಂಡೀಸ್ ಕೂಡ ಆರು ಪಾಯಿಂಟ್ ಹೊಂದಿದೆ. ಆದರೆ ವಿಂಡೀಸ್ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಭಾನುವಾರ ಭಾರತ ತಂಡವನ್ನು ಎದುರಿಸಲಿದೆ. ಇಲ್ಲಿ ಸೋಲು ಕಂಡರೂ ಅವರು ಎಂಟರ ಘಟ್ಟ ತಲುಪುತ್ತಾರೆ. ಕಾರಣ ವಿಂಡೀಸ್ ಬಾಂಗ್ಲಾಕ್ಕಿಂತ ಹೆಚ್ಚು ರನ್‌ರೇಟ್ ಹೊಂದಿದೆ.‘ಬಿ’ ಗುಂಪಿನ ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ನೀಡಿದ 285 ರನ್‌ಗಳ ಗುರಿಗೆ ಉತ್ತರವಾಗಿ ಶಕೀಬ್ ಅಲ್ ಹಸನ್ ಪಡೆ 28 ಓವರ್‌ಗಳಲ್ಲಿ ಕೇವಲ 78 ರನ್‌ಗಳಿಗೆ ಆಲ್‌ಔಟಾಯಿತು.ಈ ವಿಶ್ವಕಪ್‌ನಲ್ಲಿ ಈ ತಂಡದವರು ಎರಡನೇ ಬಾರಿ ನೂರು ರನ್‌ನೊಳಗೆ ಎಲ್ಲಾ ವಿಕೆಟ್ ಕಳೆದುಕೊಂಡರು. ವೆಸ್ಟ್‌ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಕೇವಲ 58 ರನ್‌ಗಳಿಗೆ ಆಲ್‌ಔಟ್ ಆಗಿದ್ದರು.‘ಕ್ವಾರ್ಟರ್ ಫೈನಲ್ ಪ್ರವೇಶಿಸಲಿ’ ಎಂಬ ಅಭಿಮಾನಿಗಳ ಪ್ರಾರ್ಥನೆ ಫಲಿಸಲಿಲ್ಲ. ಕಿಕ್ಕಿರಿದು ತುಂಬಿದ್ದ ಕ್ರೀಡಾಂಗಣದಲ್ಲಿ 285 ರನ್‌ಗಳ ಗುರಿ ಬೆನ್ನಟ್ಟಿದ ಬಾಂಗ್ಲಾ ಬ್ಯಾಟ್ಸ್‌ಮನ್‌ಗಳು ಒಮ್ಮೆಲೇ ಪೆರೇಡ್ ನಡೆಸಲು ಶುರು ಮಾಡಿದರು.ದಕ್ಷಿಣ ಆಫ್ರಿಕಾ ತಂಡದ ನಾಯಕ ಗ್ರೇಮ್ ಸ್ಮಿತ್ ಮೊದಲ ಓವರ್ ಬೌಲ್ ಮಾಡಲು ಸ್ಪಿನ್ನರ್ ಜೋಹಾನ್ ಬೋಥಾಗೆ ಚೆಂಡು ನೀಡಿದರು. ಡೇಲ್ ಸ್ಟೇನ್ ಹಾಗೂ ಮಾರ್ನ್ ಮಾರ್ಕೆಲ್ ಅನುಪಸ್ಥಿತಿಯಲ್ಲಿ ಬೌಲಿಂಗ್ ಶುರು ಮಾಡಿದ ಲೊನ್ವಬೊ ಸೊಸೊಬೆಗೆ ಎದೆಕೊಟ್ಟು ಆಡಲು ಬಾಂಗ್ಲಾದ ಒಬ್ಬ ಬ್ಯಾಟ್ಸ್‌ಮನ್‌ಗೆ ಕೂಡ ಸಾಧ್ಯವಾಗಲಿಲ್ಲ.ಸೊಸೊಬೆ ಅವರ ಎರಡನೇ ಓವರ್‌ನಿಂದಲೇ ಆತಿಥೇಯರು ನಡುಗಲು ಶುರು ಮಾಡಿದರು. ಪರಿಣಾಮ ಎಂಟು ಓವರ್‌ಗಳು ಮುಗಿಯುವಷ್ಟರಲ್ಲಿ ನಾಲ್ಕು ಮಂದಿ ಪೆವಿಲಿಯನ್ ಸೇರಿದ್ದರು. ಅದು ಮತ್ತೊಮ್ಮೆ ಕುಸಿತದ ಮುನ್ಸೂಚನೆ ನೀಡಿತು. ಅದಕ್ಕೆ ಮೇಲಿನ ಕ್ರಮಾಂಕದವರು ಗಳಿಸಿದ 5, 4, 2, 5, 3 ಸ್ಕೋರ್ ಸಾಕ್ಷಿ.ಆದರೆ ನಾಯಕ ಶಕೀಬ್ ಕೊಂಚ ಪ್ರತಿರೋಧ ತೋರಿದರು. ಅಕಸ್ಮಾತ್ ಅವರು 30 ರನ್ ಗಳಿಸದಿದ್ದರೆ ಈ ತಂಡದವರು 50 ರನ್‌ಗಳ ಗೆರೆಯನ್ನು ಕೂಡ ದಾಟುತ್ತಿರಲಿಲ್ಲ. ಅವರ ನಂತರದ ಬ್ಯಾಟ್ಸ್‌ಮನ್‌ಗಳು ಗಳಿಸಿದ ಸ್ಕೋರ್ 5, 8, 0, 0, 8. ಈ ತಂಡದವರು ಬೌಲಿಂಗ್ ಪವರ್‌ಪ್ಲೇನಲ್ಲಿ ಗಳಿಸಿದ್ದು ಕೇವಲ 7 ರನ್.ಸೊಸೊಬೆ (14ಕ್ಕೆ3) ಹಾಗೂ ಪೀಟರ್ಸನ್ (12ಕ್ಕೆ4) ಪೈಪೋಟಿಗೆ ಬಿದ್ದವರಂತೆ ವಿಕೆಟ್ ಕಬಳಿಸಿದರು. ಆದರೆ ಪ್ರಮುಖ ವಿಕೆಟ್ ಪಡೆದ ಸೊಸೊಬೆ ‘ಪಂದ್ಯ ಪುರುಷೋತ್ತಮ’ ಎನಿಸಿದರು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ಮುಂದಾದ ದಕ್ಷಿಣ ಆಫ್ರಿಕಾಕ್ಕೆ ಅದ್ಭುತ ಆರಂಭ ದೊರೆಯಿತು. ನಾಯಕ ಗ್ರೇಮ್ ಸ್ಮಿತ್ ಹಾಗೂ ಹಾಶೀಮ್ ಆಮ್ಲಾ ಮೊದಲ ವಿಕೆಟ್‌ಗೆ 98 ರನ್ ಸೇರಿಸಿದರು.ಈ ಟೂರ್ನಿಯಲ್ಲಿ ಅಮೋಘ ಫಾರ್ಮ್‌ನಲ್ಲಿರುವ ಆಮ್ಲಾ ವೇಗವಾಗಿಯೇ ರನ್ ಪೇರಿಸುತ್ತಾ ಹೋದರು. ಹಾಗಾಗಿ ತಮ್ಮ 14ನೇ ಅರ್ಧ ಶತಕ ಬಾರಿಸಲು ಅವರಿಗೆ ಹೆಚ್ಚು ಸಮಯ ಬೇಕಾಗಲಿಲ್ಲ. 59 ಎಸೆತಗಳನ್ನು ಎದುರಿಸಿದ ಅವರು ಆರು ಬೌಂಡರಿಗಳ ಸಮೇತ 51 ರನ್ ಗಳಿಸಿದರು.ಆದರೆ 9 ರನ್‌ಗಳ ಅಂತರದಲ್ಲಿ ಸ್ಮಿತ್ (45) ಹಾಗೂ ಆಮ್ಲಾ ಪೆವಿಲಿಯನ್ ಸೇರಿದರು. ಇದು ಈ ತಂಡದ ಆತಂಕಕ್ಕೆ ಕಾರಣವಾಯಿತು. ಆಗ ಜಾಕ್ ಕಾಲಿಸ್ (69) ತಡೆಗೋಡೆಯಾಗಿ ನಿಂತರು. ಅವರು ಕೂಡ ಅರ್ಧ ಶತಕ ಗಳಿಸಿದರು. 76 ಎಸೆತಗಳ ಅವರ ಇನಿಂಗ್ಸ್‌ನಲ್ಲಿ ಒಂದು ಸಿಕ್ಸರ್ ಹಾಗೂ ಐದು ಬೌಂಡರಿಗಳಿದ್ದವು.ಈ ತಂಡದ ರನ್‌ರೇಟ್ ಹೆಚ್ಚಿಸಿದ್ದು ಎಫ್ ಡು ಪ್ಲೆಸಿಸ್. ಕೇವಲ 52 ಎಸೆತಗಳಲ್ಲಿ 52 ರನ್ ಹೊಡೆದ ಅವರು ಆತಿಥೇಯ ಬೌಲರ್‌ಗಳನ್ನು ಕಾಡಿದರು. ಒಂದು ಸಿಕ್ಸರ್ ಹಾಗೂ 4 ಬೌಂಡರಿಗಳು ಅವರ ಇನಿಂಗ್ಸ್‌ನಲ್ಲಿದ್ದವು. ಕೊನೆಯಲ್ಲಿ ಪೀಟರ್ಸನ್ (22; 9 ಎಸೆತ, 4 ಬೌಂಡರಿ) ತಂಡದ ಮೊತ್ತ ಹೆಚ್ಚಿಸಲು ಕಾರಣರಾದರು. ಹಾಗಾಗಿ ದಕ್ಷಿಣ ಆಫ್ರಿಕಾ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 284 ರನ್ ಗಳಿಸಲು ಸಾಧ್ಯವಾಯಿತು.ಬಾಂಗ್ಲಾದ ರುಬೆಲ್ ಹೊಸೇನ್ ದುಬಾರಿಯಾದರೂ ಮೂರು ವಿಕೆಟ್ ಪಡೆದು ಗಮನ ಸೆಳೆದರು. ನಾಯಕ ಶಕೀಬ್ (46ಕ್ಕೆ2) ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ನಿಯಂತ್ರಿಸಲು ಪ್ರಯತ್ನಿಸಿದರು.ಈ ಪಂದ್ಯದಲ್ಲಿ ಗೆದ್ದಿದ್ದರೆ ಬಾಂಗ್ಲಾ ಕ್ವಾರ್ಟರ್ ಫೈನಲ್ ತಲುಪುತಿತ್ತು. ಆದರೆ ಮತ್ತೊಂದು ಹೀನಾಯ ಸೋಲು ಈ ತಂಡದ ಕನಸನ್ನು ನುಚ್ಚುನೂರು ಮಾಡಿತು. ಅಪಾರ ಸಂಖ್ಯೆಯಲ್ಲಿ ಅಗಮಿಸಿದ್ದ ಅಭಿಮಾನಿಗಳಿಗೂ ಈ ಸೋಲು ನಿರಾಸೆ ಉಂಟು ಮಾಡಿತು.

ಸ್ಕೋರ್ ವಿವರ

ದಕ್ಷಿಣ ಆಫ್ರಿಕಾ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 284

ಹಾಶೀಮ್ ಆಮ್ಲಾ ಬಿ ಅಬ್ದುರ್ ರಜಾಕ್  51

ಗ್ರೇಮ್ ಸ್ಮಿತ್ ಸ್ಟಂಪ್ಡ್ ಮುಷ್ಫಿಕರ್ ರಹೀಮ್ ಬಿ ಮೊಹ್ಮದುಲ್ಲಾ  45

ಜಾಕ್ ಕಾಲಿಸ್ ಸಿ ಅಂಡ್ ಬಿ ಶಕೀಬ್ ಅಲ್ ಹಸನ್  69

ಜೀನ್ ಪಾಲ್ ಡುಮಿನಿ ಸಿ ಮುಷ್ಫಿಕರ್ ರಹೀಮ್ ಬಿ ರುಬೆಲ್ ಹೊಸೇನ್  17

ಎಫ್ ಡು ಪ್ಲೆಸಿಸ್ ಸಿ ತಮೀಮ್ ಇಕ್ಬಾಲ್ ಬಿ ರುಬೆಲ್ ಹೊಸೇನ್  52

ವಾನ್ ವಿಕ್ ಬಿ ಶಕೀಬ್ ಅಲ್ ಹಸನ್  05

ಜೋಹಾನ್ ಬೋಥಾ ರನ್‌ಔಟ್ (ರುಬೆಲ್ ಹೊಸೇನ್)  12

ರಾಬಿನ್ ಪೀಟರ್ಸನ್ ಔಟಾಗದೆ  22

ವೇಯ್ನಾ ಪಾರ್ನೆಲ್ ಬಿ ರುಬೆಲ್ ಹೊಸೇನ್  00

ಲೊನ್ವಬೊ ಸೊಸೊಬೆ ಔಟಾಗದೆ  04

ಇತರೆ (ಲೆಗ್‌ಬೈ-3, ವೈಡ್-4)  07

ವಿಕೆಟ್ ಪತನ: 1-98 (ಸ್ಮಿತ್; 20.4); 2-107 (ಆಮ್ಲಾ; 22.3); 3-141 (ಡುಮಿನಿ; 29.6); 4-223 (ಕಾಲಿಸ್; 44.3); 5-245 (ವಾನ್ ವಿಕ್; 46.4); 6-249 (ಡು ಪ್ಲೆಸಿಸ್; 47.3); 7-273 (ಬೋಥಾ; 49.1); 8-280 (ಪಾರ್ನೆಲ್; 49.4).

ಬೌಲಿಂಗ್: ಶಫಿಯುಲ್ ಇಸ್ಲಾಮ್ 5-0-44-0 (ವೈಡ್-1), ರುಬೆಲ್ ಹೊಸೇನ್ 8-0-56-3, ಅಬ್ದುರ್ ರಜಾಕ್ 10-1-47-1 (ವೈಡ್-1), ನಯೀಮ್ ಇಸ್ಲಾಮ್ 7-0-42-0 (ವೈಡ್-1), ಮೊಹ್ಮದುಲ್ಲಾ 10-0-46-1(ವೈಡ್-1), ಶಕೀಬ್ ಅಲ್ ಹಸನ್ 10-0-46-2.

ಬಾಂಗ್ಲಾದೇಶ 28 ಓವರ್‌ಗಳಲ್ಲಿ 78

ತಮೀಮ್ ಇಕ್ಬಾಲ್ ಸಿ ವಾನ್ ವಿಕ್ ಬಿ ಲೊನ್ವಬೊ ಸೊಸೊಬೆ  05

ಇಮ್ರುಲ್ ಕಯೇಸ್ ಬಿ ಲೊನ್ವಬೊ ಸೊಸೊಬೆ  04

ಜುನೇದ್ ಸಿದ್ದಿಕಿ ಎಲ್‌ಬಿಡಬ್ಲ್ಯು ಬಿ ಜೋಹಾನ್ ಬೋಥಾ  02

ಶಹ್ರಿಯಾರ್ ನಫೀಸ್ ಬಿ ಲೊನ್ವಬೊ ಸೊಸೊಬೆ  05

ಮುಷ್ಫಿಕರ್ ರಹೀಮ್ ಸಿ ಗ್ರೇಮ್ ಸ್ಮಿತ್ ಬಿ ರಾಬಿನ್ ಪೀಟರ್ಸನ್  03

ಶಕೀಬ್ ಅಲ್ ಹಸನ್ ಸಿ ವಾನ್ ವಿಕ್ ಬಿ ರಾಬಿನ್ ಪೀಟರ್ಸನ್  30

ಮೊಹ್ಮದುಲ್ಲಾ ರನ್‌ಔಟ್ (ಬೋಥಾ/ವಾನ್ ವಿಕ್)  05

ನಯೀಮ್ ಇಸ್ಲಾಮ್ ಬಿ ರಾಬಿನ್ ಪೀಟರ್ಸನ್  08

ಶಫಿಯುಲ್ ಇಸ್ಲಾಮ್ ಬಿ ರಾಬಿನ್ ಪೀಟರ್ಸನ್  00

ಅಬ್ದುರ್ ರಜಾಕ್ ಸಿ ರಾಬಿನ್ ಪೀಟರ್ಸನ್ ಬಿ ಇಮ್ರಾನ್ ತಾಹಿರ್  00

ರುಬೇಲ್ ಹೊಸೇನ್ ಔಟಾಗದೆ  08

ಇತರೆ (ಲೆಗ್‌ಬೈ-5, ವೈಡ್-03)  08

ವಿಕೆಟ್ ಪತನ: 1-14 (ತಮೀಮ್; 3.3); 2-15 (ಕಯೇಸ್; 5.4); 3-21 (ಸಿದ್ದಿಕಿ; 6.6); 4-21 (ನಫೀಜ್; 7.6); 5-36 (ರಹೀಮ್; 15.1); 6-58 (ಮೊಹ್ಮದುಲ್ಲಾ; 21.3); 7-61 (ಶಕೀಬ್; 23.4); 8-61 (ಶಫಿಯುಲ್; 23.6); 9-62 (ಅಬ್ದುರ್; 24.6); 10-78 (ನಯೀಮ್; 27.6).

ಬೌಲಿಂಗ್: ಜೋಹಾನ್ ಬೋಥಾ 7-1-23-1, ಲೊನ್ವಬೊ ಸೊಸೊಬೆ 5-2-14-3 (ವೈಡ್-1), ವೇಯ್ನಿ ಪಾರ್ನೆಲ್ 4-1-4-0, ರಾಬಿನ್ ಪೀಟರ್ಸನ್ 7-3-12-4, ಇಮ್ರಾನ್ ತಾಹಿರ್ 5-0-20-1 (ವೈಡ್-2).

ಫಲಿತಾಂಶ: ದಕ್ಷಿಣ ಆಫ್ರಿಕಾ ತಂಡಕ್ಕೆ 206 ರನ್‌ಗಳ ಗೆಲುವು.

ಪಂದ್ಯ ಪುರುಷೋತ್ತಮ: ಲೊನ್ವಬೊ ಸೊಸೊಬೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.