ಶನಿವಾರ, ಜನವರಿ 18, 2020
26 °C
ಹಾಕಿ : ಕೊರಿಯಾ ವಿರುದ್ಧದ ಪಂದ್ಯ ಡ್ರಾ ನಲ್ಲಿ ಅಂತ್ಯ

ಟೂರ್ನಿಯಿಂದ ಭಾರತ ಹೊರಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೂರ್ನಿಯಿಂದ ಭಾರತ ಹೊರಕ್ಕೆ

ನವದೆಹಲಿ (ಪಿಟಿಐ): ಭಾರತ ತಂಡ ಇಲ್ಲಿ ನಡೆಯುತ್ತಿರುವ ಎಫ್‌ಐಎಚ್ ಜೂನಿಯರ್ ವಿಶ್ವ ಕಪ್‌ ಹಾಕಿ ಟೂರ್ನಿಯ ‘ಸಿ’ ಗುಂಪಿನ ಪಂದ್ಯದಲ್ಲಿ ಕೊರಿಯಾ ವಿರುದ್ಧ ಡ್ರಾ ಸಾಧಿಸುವ ಮೂಲಕ  ಟೂರ್ನಿಯಿಂದ ಹೊರ ಬಿದ್ದಿದೆ.ಮಂಗಳವಾರ ಮೇಜರ್ ಧ್ಯಾನ್‌ಚಂದ್ ಕ್ರೀಡಾಂಗಣದಲ್ಲಿ ನಡೆದ ಹೊನಲು ಬೆಳಕಿನ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಒತ್ತಡದೊಂದಿಗೆ ಕಣಕ್ಕಿಳಿದ ಭಾರತ  3–3 ಗೋಲುಗಳಿಂದ  ಡ್ರಾ ಸಾಧಿಸುವ ಮೂಲಕ ನಿರಾಸೆ ಅನುಭವಿಸಿತು.ಪಂದ್ಯ ಡ್ರಾ ನಲ್ಲಿ ಅಂತ್ಯಗೊಂಡಿದ್ದರಿಂದ  ಉಭಯ ತಂಡಗಳು ತಾವಾಡಿದ ಮೂರು ಪಂದ್ಯಗಳಿಂದ ತಲಾ ನಾಲ್ಕು ಪಾಯಿಂಟ್ ಕಲೆ ಹಾಕಿ ಸಮಬಲ ಸಾಧಿಸಿದವು. ಆದರೆ ಗೋಲುಗಳ ಸರಾಸರಿಯಲ್ಲಿ ಭಾರತಕ್ಕಿಂತ ಮುಂದಿದ್ದ  ಕೊರಿಯಾ ಕ್ವಾರ್ಟರ್ ಫೈನಲ್‌ ಪ್ರವೇಶ ಗಿಟ್ಟಿಸಿತು.ಪಂದ್ಯದ 16 ನೇ ನಿಮಿಷದಲ್ಲಿ  ಕೊರಿಯಾ ಆಟಗಾರ ಸಿಯೂಂಗ್‌ಜೂ ಯೂ ಗೋಲು ಗಳಿಸುವ ಮೂಲಕ ತಂಡಕ್ಕೆ ಆರಂಭಿಕ ಮುನ್ನಡೆ ತಂದು ಕೊಟ್ಟರು. ಆದರೆ ಮಿಂಚಿನ ಪ್ರದರ್ಶನ ತೋರಿದ ಭಾರತದ ಗುರ್ಜಿಂಧರ್ ಸಿಂಗ್ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು   32 ಹಾಗೂ 35 ನೇ ನಿಮಿಷದಲ್ಲಿ ಸತತ ಎರಡು ಗೋಲು ಗಳಿಸಿ ಭಾರತಕ್ಕೆ ಮುನ್ನಡೆ ತಂದುಕೊಟ್ಟರು.ನಂತರ ಪಂದ್ಯದ 45 ನೇ ನಿಮಿಷದಲ್ಲಿ ಮಂದೀಪ್‌ ಸಿಂಗ್ ತಂದಿತ್ತ ಗೋಲಿನೊಂದಿಗೆ ಭಾರತ 3–1 ರಿಂದ ಮುನ್ನಡೆ ಸಾಧಿಸಿ ಗೆಲುವು ಸಂಪಾದಿಸುವ ಭರವಸೆ ಮೂಡಿಸಿತ್ತು. ಆದರೆ ಸಿಯೂಂಗ್‌ಜೂ ಯೂ 58 ಹಾಗೂ 60 ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ಭಾರತದ ಕ್ವಾರ್ಟರ್ ಫೈನಲ್‌ ಆಸೆಗೆ ತಣ್ಣೀರೆರಚಿದರು. ಜೂ ಪಂದ್ಯದಲ್ಲಿ ಹ್ಯಾಟ್ರಿಕ್‌ ಗೋಲು ಗಳಿಸಿ  ಮಿಂಚಿದರು.ಕ್ವಾರ್ಟರ್ ಫೈನಲ್‌ಗೆ ಬೆಲ್ಜಿಯಂ : ಮಂಗಳವಾರ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಬೆಲ್ಜಿಯಂ ತಂಡ ಪಾಕಿಸ್ತಾನದ ವಿರುದ್ಧ 2–2 ರಿಂದ ಡ್ರಾ ಸಾಧಿಸಿತು. ಇದರೊಂದಿಗೆ ಮೂರು ಪಂದ್ಯಗಳಿಂದ ಏಳು ಅಂಕಗಳನ್ನು ಕಲೆಹಾಕಿದ ಬೆಲ್ಜಿಯಂ  ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿತು.

ಮತ್ತೊಂದು ಪಂದ್ಯದಲ್ಲಿ ಜರ್ಮನಿ ತಂಡ 6–0 ಅಂತರದಿಂದ ಈಜಿಪ್ಟ್ ತಂಡವನ್ನು ಸುಲಭವಾಗಿ ಮಣಿಸುವ ಮೂಲಕ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತು.ಕ್ವಾರ್ಟರ್ ಫೈನಲ್‌ನಲ್ಲಿ ಜರ್ಮನಿ ಆಸ್ಟ್ರೇಲಿಯಾ ವಿರುದ್ಧ ಹಾಗೂ ಬೆಲ್ಜಿಯಂ, ಫ್ರಾನ್ಸ್ ವಿರುದ್ಧ ಸೆಣಸಲಿವೆ.

ಪ್ರತಿಕ್ರಿಯಿಸಿ (+)