ಭಾನುವಾರ, ಫೆಬ್ರವರಿ 28, 2021
31 °C

ಟೋಲ್‌ ದರ ಹೆಚ್ಚಳ ಖಂಡಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೋಲ್‌ ದರ ಹೆಚ್ಚಳ ಖಂಡಿಸಿ ಪ್ರತಿಭಟನೆ

ಬೆಂಗಳೂರು: ಕೆಂಪೇಗೌಡ ಅಂತರ­ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಟೋಲ್‌ ಶುಲ್ಕ ಹೆಚ್ಚಳ ಮಾಡಿ­ರುವ ಕ್ರಮವನ್ನು ವಿರೋಧಿಸಿ ವಿವಿಧ ಸಂಘಟನೆಗಳ ಸದಸ್ಯರು ನವಯುಗ ಟೋಲ್‌ ಕೇಂದ್ರದ ಬಳಿ ಶುಕ್ರವಾರ ಸಾಂಕೇ­ತಿಕ ಪ್ರತಿಭಟನೆ ನಡೆಸಿದರು.ಟೋಲ್‌ ಹೆಚ್ಚಳ ಖಂಡಿಸಿ ಲಾರಿ ಮಾಲೀ­ಕರು ಹಾಗೂ ಟ್ಯಾಕ್ಸಿ ಚಾಲಕರು ಶುಕ್ರ­­­ವಾರ ವಾಹನಗಳನ್ನು ಸ್ಥಗಿತ­ಗೊ­ಳಿಸಿ ಹೋರಾಟ ಮಾಡುವುದಾಗಿ ಹೇಳಿ­­ದ್ದರು. ಅದರಂತೆ ಬೆಳಿಗ್ಗೆ 10 ಗಂಟೆಗೆ ಟೋಲ್‌ ಕೇಂದ್ರದ ಬಳಿ ಜಮಾ­ಯಿ­­ಸಿದ ಪ್ರತಿಭ­­ಟನಾಕಾರರು, ಕೆಲ ಕಾಲ ನವ­­ಯುಗ ಕಂಪೆನಿ ವಿರುದ್ಧ ಘೋಷಣೆ­ಗಳನ್ನು ಕೂಗಿದರು.ಲಾರಿ ಮಾಲೀಕರು ಮತ್ತು ಏಜೆಂ­ಟರ ಸಂಘದ ಅಧ್ಯಕ್ಷ ಜಿ.ಆರ್.­ಷಣ್ಮುಗಪ್ಪ, ‘ಟೋಲ್‌ ಶುಲ್ಕ ಕಡಿತ­ಗೊಳಿಸುವ ಸಂಬಂಧ ಕೇಂದ್ರ ಹೆದ್ದಾರಿ ಸಚಿವ ಆಸ್ಕರ್‌ ಫರ್ನಾಂಡಿಸ್‌ ಹಾಗೂ ನವ­ಯುಗ ಕಂಪೆನಿ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಮುಖ್ಯ­ಮಂತ್ರಿ ಸಿದ್ದರಾಮಯ್ಯ ಅವರು ಭರ­ವಸೆ ನೀಡಿದ್ದಾರೆ. ಹೀಗಾಗಿ ಕೆಲ ಕಾಲ ಸಾಂಕೇತಿಕ ಪ್ರತಿಭಟನೆ ನಡೆಸಲಾ­ಗು­ತ್ತಿದೆ. ಟೋಲ್ ದರ ಇಳಿಸದಿದ್ದರೆ ತಮಿಳು­ನಾಡಿನ ಸೇಲಂನಲ್ಲಿ ಮೇ 11ರಂದು ದಕ್ಷಿಣ ಭಾರತದ ಲಾರಿ ಮಾಲೀ­ಕರ ಸಭೆ ನಡೆಸುತ್ತೇವೆ. ಆ ಸಭೆ­ಯಲ್ಲಿ ಮುಂದಿನ ಹೋರಾಟದ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದು ಎಚ್ಚರಿಕೆ ನೀಡಿದರುಪ್ರತಿಭಟನೆ ಹಿನ್ನೆಲೆಯಲ್ಲಿ ಟೋಲ್‌ ಕೇಂದ್ರ­ಗಳ ಬಳಿ ಬಿಗಿ ಪೊಲೀಸ್ ಬಂದೋ­­­ಬಸ್ತ್ ಮಾಡಲಾಗಿತ್ತು. 4 ಎಸಿಪಿ, 15 ಇನ್‌ಸ್ಪೆಕ್ಟರ್‌, 30 ಎಸ್‌ಐ­ಗಳು ಸೇರಿದಂತೆ 300 ಮಂದಿ ಪೊಲೀ­ಸ­ರನ್ನು ಭದ್ರತೆಗೆ ನಿಯೋಜಿಸ­ಲಾ­ಗಿತ್ತು.  ಒಂದೂ­ವರೆ ತಾಸಿನಲ್ಲಿ ಪ್ರತಿಭ­ಟನೆ ಪೂರ್ಣಗೊಂಡಿದ್ದರಿಂದ ಟೋಲ್‌ ಸಂಗ್ರಹ ಪ್ರಕ್ರಿಯೆ ಸಹಜ ಸ್ಥಿತಿಗೆ ಮರ­ಳಿತು. ಪ್ರತಿಭಟನೆಗೆ ಕರೆ ನೀಡಿದ್ದ ಹಿನ್ನೆಲೆ­ಯಲ್ಲಿ ರಾಷ್ಟ್ರೀಯ ಹೆದ್ದಾರಿ­ಯಲ್ಲಿ ಬೆಳಿಗ್ಗೆ ವಾಹನಗಳ ಓಡಾಟ ಕಡಿಮೆ ಇತ್ತು. ದೇವನಹಳ್ಳಿ, ಕೋಲಾರ, ಚಿಕ್ಕ­­ಬಳ್ಳಾ­ಪುರ ಸೇರಿದಂತೆ ಸುತ್ತ­ಮುತ್ತಲ ಗ್ರಾಮ­ಗಳಿಂದ ನಗರಕ್ಕೆ ಬರು­ವ­ವರು ಪರ್ಯಾಯ ಮಾರ್ಗ ಬಳಸಿದರು.ಪ್ರತಿಭಟನೆಯಿಂದ ವಿಮಾನ ನಿಲ್ದಾ­ಣಕ್ಕೆ ತೆರಳುವ ಪ್ರಯಾಣಿಕರಿಗೆ ತೊಂದ­ರೆ­ಯಾ­ಗಬಾರದು ಎಂಬ ಕಾರಣಕ್ಕೆ 2 ಪಥಗಳಲ್ಲಿ ಸಂಚಾರಕ್ಕೆ ಅವ­ಕಾಶ ನೀಡ­ಲಾ­­ಗಿತ್ತು. ಸಿಟಿ ಟ್ಯಾಕ್ಸಿ ಸೇರಿ­ದಂತೆ ಇತರೆ ವಾಹನಗಳ ಓಡಾಟ ಕಡಿಮೆ ಇದ್ದು­ದ­ರಿಂದ ಬಿಎಂಟಿಸಿ ವಾಯು­­ವಜ್ರ ಬಸ್‌­ಗಳಲ್ಲಿ ಪ್ರಯಾ­ಣಿಕರ ದಟ್ಟಣೆ ಹೆಚ್ಚಾ­ಗಿತ್ತು. ಮಧ್ಯಾಹ್ನ 12 ಗಂಟೆ ನಂತರ ಟ್ಯಾಕ್ಸಿ, ಕ್ಯಾಬ್‌ಗಳು ಸೇವೆ­ ಪುನ­ರಾ­ರಂಭಿಸಿದವು. ಸಂಯುಕ್ತ ಜನತಾ ದಳದ ರಾಜ್ಯ ಘಟಕದ ಅಧ್ಯಕ್ಷ ಎಂ.ಪಿ.­ನಾಡ­ಗೌಡ, ಪ್ರವಾಸಿ ಟ್ಯಾಕ್ಸಿ ಮಾಲೀ­ಕರ ಸಂಘದ ಅಧ್ಯಕ್ಷ ರಾಧಾ­ಕೃಷ್ಣ ಹೊಳ್ಳ  ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಟೋಲ್‌ ಶುಲ್ಕ ಪರಿಶೀಲನೆಗೆ ಜಂಟಿ ಸಮಿತಿ ರಚನೆ

ಬೆಂಗಳೂರು:
ಕೆಂಪೇಗೌಡ ಅಂತರ­ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾಗುವ ರಾಷ್ಟ್ರೀಯ ಹೆದ್ದಾರಿಯ ಟೋಲ್‌ ಶುಲ್ಕ ವಿವಾದ ಕುರಿತು ಪರಿಶೀ­ಲನೆ ನಡೆಸಲು ರಾಜ್ಯ ಸರ್ಕಾರ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌­ಎಐ) ಪ್ರತಿನಿಧಿ­ಗಳನ್ನು ಒಳ­ಗೊಂಡ ಜಂಟಿ ಸಮಿತಿ ರಚಿಸಲಾಗಿದೆ.

ಈ ಸಮಿತಿಯು ಕೇಂದ್ರ ಭೂಸಾರಿಗೆ ಸಚಿವ ಆಸ್ಕರ್‌ ಫರ್ನಾಂಡಿಸ್‌ ಅವರಿಗೆ ಇದೇ 12ರಂದು ವರದಿ ಸಲ್ಲಿಸಲಿದೆ.ಸಚಿವ ಫರ್ನಾಂಡಿಸ್‌, ಮುಖ್ಯಮಂತ್ರಿ ಸಿದ್ದ­ರಾಮಯ್ಯ ಅವರು ವಿಧಾನ­ಸೌಧ­ದಲ್ಲಿ ಎನ್‌ಎಚ್‌­ಎಐ, ರಾಜ್ಯ ಸರ್ಕಾರ, ನವಯುಗ ಎಂಜಿನಿ­ಯ­­­ರಿಂಗ್‌ ಕಂಪೆನಿ ಪ್ರತಿನಿಧಿಗಳ ಜೊತೆ ಶುಕ್ರವಾರ ಸಭೆ ನಡೆಸಿ­ದರು. ಶುಲ್ಕ ಹೆಚ್ಚಳ ವಿವಾ­ದಕ್ಕೆ ಸಂಬಂಧಿ­ಸಿ­­ದಂತೆ ಸಮಿತಿ ರಚನೆಯಾಗಿದ್ದನ್ನು ಹೊರತುಪಡಿಸಿ­ದರೆ, ಬೇರೆ ಯಾವುದೇ ಮಹತ್ವದ ನಿರ್ಧಾರ ಶುಕ್ರ­ವಾ­ರದ ಸಭೆ­ಯಲ್ಲಿ ಆಗಿಲ್ಲ ಎಂದು ಮೂಲಗಳು ತಿಳಿಸಿವೆ.ಟೋಲ್‌ ಶುಲ್ಕ ಕಡಿಮೆ ಮಾಡಬೇಕು ಎಂದಾ­ದರೆ ಅದ­ರಿಂದ ಆಗುವ ನಷ್ಟ­ವನ್ನು ರಾಜ್ಯ ಅಥವಾ ಕೇಂದ್ರ ಸರ್ಕಾರ ಭರ್ತಿ ಮಾಡಿಕೊಡಬೇಕು.ಇದು ಸಾಧ್ಯ­ವಾ­ಗದಿದ್ದರೆ ಟೋಲ್‌ ಶುಲ್ಕ ಕಡಿಮೆ ಮಾಡಲು ಆಗದು ಎಂದು ನವಯುಗ ಕಂಪೆನಿ ಪ್ರತಿ­­ನಿ­­ಧಿಗಳು ಸ್ಪಷ್ಟಪಡಿಸಿದರು.

ಟೋಲ್‌ ಶುಲ್ಕ ಹೆಚ್ಚಳ ಮಾಡಿದ ಕ್ರಮವನ್ನು ಒಪ್ಪಲಾ­ಗದು. ಏಕೆಂದರೆ ನವಯುಗ ಕಂಪೆ­ನಿ­ ಸರ್ವಿಸ್‌ ರಸ್ತೆ ನಿರ್ಮಿ­ಸಿಲ್ಲ ಎಂದು ಸರ್ಕಾರದ ಪ್ರತಿನಿಧಿಗಳು ಹೇಳಿದರು.‘ಟೋಲ್‌ ಶುಲ್ಕ ಹೆಚ್ಚಳದ ಲೆಕ್ಕಾಚಾರದಲ್ಲಿ ತಪ್ಪಿರಲು ಸಾಧ್ಯ­ವಿಲ್ಲ. ಏಕೆಂದರೆ ಶುಲ್ಕ ಹೆಚ್ಚಳ ನಿರ್ಧಾರವನ್ನು ಹಲವು ಹಂತ­ಗಳಲ್ಲಿ ಪರಿಶೀಲನೆಗೆ ಒಳಪಡಿಸ­ಲಾ­ಗು­ತ್ತದೆ. ಸರ್ವಿಸ್‌ ರಸ್ತೆ ನಿರ್ಮಾಣ ಪೂರ್ಣಗೊಳಿಸಲು ಜಮೀನು ನೀಡುವಂತೆ ಕೋರಿ ವಾಯುಪಡೆ, ರೈಲ್ವೆ ಇಲಾಖೆ ಮತ್ತು ರಾಜ್ಯ ಸರ್ಕಾರಕ್ಕೆ ಸಲ್ಲಿ­ಸಿದ್ದ ಮನವಿ ಪ್ರಯೋ­ಜನಕ್ಕೆ ಬಂದಿಲ್ಲ’ ಎಂದು ನವಯುಗ ಕಂಪೆನಿ ಪ್ರತಿನಿಧಿಗಳು ವಾದಿಸಿದರು.

ಜಕ್ಕೂರು ವಾಯುನೆಲೆ, ಯಲ­ಹಂಕದಲ್ಲಿರುವ ವಾಯುಪಡೆ ಕೇಂದ್ರದ ಬಳಿ ಮತ್ತು ವಿಮಾನ ನಿಲ್ದಾಣಕ್ಕೆ ಸಾಗುವ ಮಾರ್ಗದಲ್ಲಿ ಬರುವ ರೈಲ್ವೆ ಮೇಲ್ಸೇ­ತುವೆ ಸಮೀಪ ಜಮೀನು ಸ್ವಾಧೀನಕ್ಕೆ ಅಡಚಣೆ ಎದು­ರಾದ ಕಾರಣ ಸರ್ವಿಸ್‌ ರಸ್ತೆಯ ಕಾರ್ಯ ಪೂರ್ಣಗೊಂಡಿಲ್ಲ ಎನ್ನಲಾಗಿದೆ.‘ಜಂಟಿ ಸಮಿತಿ ವರದಿ ಸಲ್ಲಿಸಿದ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾ­ಗು­ವುದು. ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತನ್ನ ಕಳಕಳಿಯನ್ನು ವ್ಯಕ್ತಪ­ಡಿ­ಸಿದೆ’ ಎಂದು ಫರ್ನಾಂ­ಡಿಸ್‌ ಅವರು ಸಭೆಯ ನಂತರ ತಿಳಿಸಿದರು.ವಿವಾದ ಕುರಿತು ಅಂತಿಮ ತೀರ್ಮಾನ ಹೊರಬರುವವರೆಗೆ ಟೋಲ್‌ ಶುಲ್ಕ­ದಲ್ಲಿ ಕಡಿತ ಮಾಡ­ಲಾ­ಗುವುದೇ ಎಂಬ ಪ್ರಶ್ನೆಗೆ, ‘ಇಲ್ಲ’ ಎಂಬ ಉತ್ತರ ಎನ್‌ಎಚ್‌ಎಐ ಅಧಿಕಾರಿಗಳಿಂದ ಬಂತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.