ಮಂಗಳವಾರ, ಜೂನ್ 22, 2021
29 °C

ಡಿವಿಎಸ್‌ಗೆ ಕೇಂದ್ರ ಸಚಿವ ವೀರಪ್ಪ ಮೊಯಿಲಿ ಪ್ರಶ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಂದಾಪುರ: `ಸಂಸದರ ನಿಧಿಯನ್ನು ಸಮರ್ಥವಾಗಿ ಬಳಸದೆ ಮತದಾರರ ನಿರೀಕ್ಷೆಯನ್ನು ಹುಸಿಗೊಳಿಸಿದ್ದ ಡಿ.ವಿ ಸದಾನಂದ ಗೌಡರು ಯಾವ ನೈತಿಕತೆಯ ಆಧಾರದಲ್ಲಿ ಮತವನ್ನು ಕೇಳುತ್ತಿದ್ದಾರೆ~ ಎಂದು ಕೇಂದ್ರ ಕಂಪೆನಿ ವ್ಯವಹಾರ ಸಚಿವ ಎಂ.ವೀರಪ್ಪ ಮೊಯಿಲಿ ಪ್ರಶ್ನಿಸಿದ್ದಾರೆ.ಕುಂದಾಪುರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ನಾಲ್ಕು ಬಾರಿ ಪ್ರತಿನಿಧಿಸಿದ್ದ ಬಿಜೆಪಿ ಸಂಸದರು ಕ್ಷೇತ್ರವನ್ನು ಕಡೆಗಣಿಸಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲ ಕಾಂಗ್ರೆಸ್ ಇಲ್ಲಿನ ಅಭಿವೃದ್ಧಿ ನಡೆಸಿದೆ.

 

ಕಳೆದ ರೈಲ್ವೆ ಬಜೆಟ್‌ನಲ್ಲಿ 125 ಕಿ.ಮೀ ದೂರದ ಪಡುಬಿದ್ರೆ-ಧರ್ಮಸ್ಥಳ ಹಾಗೂ 200 ಕಿ.ಮೀ ದೂರದ ಕೊಲ್ಲೂರು-ನೆಲ್ಯಾಡಿ ರೈಲ್ವೆ ಮಾರ್ಗಗಳ ಕುರಿತು ತಾಂತ್ರಿಕ ಸರ್ವೇ ಘೋಷಿಸಿದ್ದರೂ ಅದಕ್ಕೆ ರಾಜ್ಯ ಸರ್ಕಾರದಿಂದ ನಿರೀಕ್ಷಿತ ಸಹಕಾರ ನೀಡಲಿಲ್ಲ.

 

ಈ ಕುರಿತು ರಾಜ್ಯ ಸರ್ಕಾರಕ್ಕೆ 3-4 ಪತ್ರಗಳನ್ನು ಬರೆದರೂ ಪ್ರತಿಕ್ರಿಯೆ ದೊರಕಿಲ್ಲ. ಕುಂದಾಪುರದಿಂದ ಕೇರಳ ಗಡಿ ಭಾಗದವರೆಗೂ ಅಂದಾಜು 674 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಚತುಷ್ಫಥ ಕಾಮಗಾರಿ ಯೋಜನೆ ಕೇಂದ್ರ ಸರ್ಕಾರದ್ದು ಎನ್ನುವ ಸಾಮಾನ್ಯ ಅರಿವಿಲ್ಲದ ಬಿಜೆಪಿ ಅನಗತ್ಯವಾಗಿ ಜಿಲ್ಲೆಯ ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದೆ~ ಎಂದು ಮೊಯಿಲಿ ದೂರಿದರು.`ಕೇಂದ್ರ ಸರ್ಕಾರದಿಂದ ಪ್ರತಿವರ್ಷ ಅಂದಾಜು 27-30 ಸಾವಿರ ಕೋಟಿ ರೂ. ಅನುದಾನ ಬಿಡುಗಡೆಯಾಗುತ್ತಿದೆ. ಅದಕ್ಕೆ ಪೂರಕವಾದ ರಾಜ್ಯದ ಅನುದಾನವನ್ನು ಹೊಂದಾಣಿಕೆ ಮಾಡದೆ ಕೇಂದ್ರದ ಅನುದಾನದಲ್ಲಿ ದೊಡ್ಡ ಮೊತ್ತವನ್ನು ಬಳಕೆಯಾದ ಹಣ ಎನ್ನುವ ಶೀರ್ಷಿಕೆ ನೀಡಿ ರಾಜ್ಯದ ಜನತೆಯನ್ನು ಮೋಸ ಮಾಡಲಾಗುತ್ತಿದೆ.ಹಣ, ಜಾತಿ ಹಾಗೂ ಹೃದಯದ ಭಾವನೆಗಳನ್ನು ಒಡೆದು ಚುನಾವಣೆಗಳನ್ನು ಗೆಲ್ಲುತ್ತೇವೆ ಎನ್ನುವ ಭಾವನೆ ಇರುವ ಬಿಜೆಪಿಗೆ ಈ ಉಪ ಚುನಾವಣೆಯಲ್ಲಿ ಮತದಾರರು ಸರಿಯಾದ ಪಾಠವನ್ನು ಕಲಿಸಲಿದ್ದಾರೆ. ಭ್ರಷ್ಟಾಚಾರ ಹಾಗೂ ಅನೈತಿಕತೆಯ ಪ್ರವಾಹದಲ್ಲಿ ಬಿಜೆಪಿ ಕೊಚ್ಚಿ ಹೋಗಲಿದೆ~ ಎಂದು ಭರವಸೆ ವ್ಯಕ್ತಪಡಿಸಿದರು.`ಬಡಜನರ ಕಲ್ಯಾಣಕ್ಕಾಗಿ ಭೂ ಮಸೂದೆ, ಆಕ್ರಮ-ಸಕ್ರಮ, ಸಿಇಟಿ ಮೀಸಲಾತಿಯಂತಹ ಯೋಜನೆಗಳನ್ನು ಕಾಂಗ್ರೆಸ್ ಪಕ್ಷ ನೀಡಿದೆ. ಡೀಮ್ಡ ಫಾರೆಸ್ಟ್ ಇನ್ನಿತರ  ನೆಪ ಹೇಳಿ ಬಿಜೆಪಿ ಸರ್ಕಾರ ಬಡಜನರ ಭೂಮಿ ಕಸಿಯುತ್ತಿದೆ. ಕೇಂದ್ರ ಸರ್ಕಾರದ ಸಬ್ಸಿಡಿಗಳನ್ನು ಸರಿಯಾಗಿ ಬಸದೆ ಜನರಿಗೆ ನೀಡುವ ಪಡಿತರ ವ್ಯವಸ್ಥೆ ಯಲ್ಲೂ ಕಡಿತಗೊಳಿಸಲಾಗಿದೆ.

ರಾಜ್ಯದಲ್ಲಿ ವಾಮ ಮಾರ್ಗದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಬೇಕು ಎಂಬ ಕಾರಣಕ್ಕಾಗಿ ನಿರಂತರವಾಗಿ ಉಪ ಚುನಾವಣೆ ಹೆಸರಿನಲ್ಲಿ ಜನರ ಹಣವನ್ನು ಪೋಲು ಮಾಡುತ್ತಿರುವ ಬಿಜೆಪಿ ಗೆ ಈ ಚುನಾವಣೆಯಲ್ಲಿ ಜನ ಸರಿಯಾಗಿ ಪಾಠ ಕಲಿಸಬೇಕಾಗಿದೆ~ ಎಂದರು.`ನಿಷ್ಕಳಂಕ ವ್ಯಕ್ತಿತ್ವದ ಜಯಪ್ರಕಾಶ ಹೆಗ್ಡೆಯವರನ್ನು ಸಂಸದರನ್ನಾಗಿ ಆಯ್ಕೆ ಮಾಡಬೇಕು~ ಎಂದು ಮೊಯಿಲಿ ಮತದಾರರಲ್ಲಿ ಮನವಿ ಮಾಡಿದರು.ಕಾಂಗ್ರೆಸ್ ಮುಖಂಡರಾದ ಕೆ. ಗೋಪಾಲ ಪೂಜಾರಿ,  ಪ್ರಸನ್ನ ಬಲ್ಲಾಳ್, ವಾಸುದೇವ ಯಡಿಯಾಳ, ಹರಿ ಪ್ರಸಾದ ಎಸ್.ಆಚಾರ್, ರಾಜೂ ದೇವಾಡಿಗ, ಎಸ್.ಪ್ರಕಾಶ್ಚಂದ್ರ ಶೆಟ್ಟಿ, ರಂಜಿತಾ ಬೆಂಗಳೂರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.